
ಮಕ್ಕಳು ಎಷ್ಟೇ ಘನಘೋರವಾದ ಶಿಕ್ಷೆ ಮಾಡಿದರೂ ಅವರನ್ನು ನಮ್ಮ ಕಾನೂನು ವ್ಯವಸ್ಥೆ ಕನಿಷ್ಠ ಶಿಕ್ಷೆಗೆ ಒಳಪಡಿಸುತ್ತದೆ. ಅವರನ್ನು ರಿಮ್ಯಾಂಡ್ ಹೋಮ್‌ನಲ್ಲಿ ಇಟ್ಟು ಶಿಕ್ಷಣ ಕೊಡಿಸುತ್ತದೆ. ಕೊಲೆಯೇ ಮಾಡಿದರೂ ಅವರಿಗೆ ಗಲ್ಲು ಶಿಕ್ಷೆಯಿಲ್ಲ. ಅದಕ್ಕೆ ಕಾನೂನಿನಲ್ಲಿ ಆಸ್ಪದವಿಲ್ಲ. ಇದ್ಯಾಕೆ ಹೀಗೆ ಎಂದು ತಿಳಿಯೋಕೆ ನೀವು ಪುರಾಣದ ಕತೆಗೇ ಹೋಗಬೇಕು. ಅದು ಹೀಗಿದೆ.
ಹಿಂದೆ ಮಾಂಡವ್ಯ ಎಂಬ ಋಷಿ ಇದ್ದರು. ಅವರು ತಮ್ಮ ಮನಸ್ಸಿನ ಶಕ್ತಿ ಮತ್ತು ಜ್ಞಾನಕ್ಕೆ ಹೆಸರುವಾಸಿಯಾಗಿದ್ದರು. ಕಾಡಿನಲ್ಲಿರುವ ಶಾಂತಿಯುತ ಆಶ್ರಮದಲ್ಲಿ ವಾಸಿಸುತ್ತಿದ್ದರು. ಆಳವಾದ ತಪಸ್ಸಿನಲ್ಲಿ ತಮ್ಮ ದಿನಗಳನ್ನು ಕಳೆಯುತ್ತಿದ್ದರು. ಒಂದು ದಿನ, ಅವರು ತಮ್ಮ ಗುಡಿಸಲಿನ ಹೊರಗೆ ಮರದ ಕೆಳಗೆ ಧ್ಯಾನ ಮಾಡುತ್ತಿದ್ದಾಗ, ದರೋಡೆಕೋರರ ಗುಂಪೊಂದು ಅತ್ತ ಓಡಿಬಂತು. ಅವರು ಯಾವುದೋ ರಾಜಕುಮಾರನ ಆಭರಣವನ್ನು ಕದ್ದುಕೊಂಡು ಓಡಿಬಂದಿದ್ದರು. ಅವರನ್ನು ರಾಜನ ಸೈನಿಕರು ಅಟ್ಟಿಕೊಂಡು ಬಂದಿದ್ದರು.
ಕಳ್ಳರು ತಾವು ಕದ್ದ ವಸ್ತುಗಳನ್ನು ಆಶ್ರಮದ ಒಂದು ಮೂಲೆಯಲ್ಲಿ ಮರೆಮಾಡಿದರು ಮತ್ತು ಕಾಣದಂತೆ ಅಡಗಿಕೊಂಡರು. ರಾಜನ ಸೈನಿಕರು ಅಲ್ಲಿಗೆ ಬಂದರು. ಸೈನಿಕರ ಅಧಿಪತಿ, ದರೋಡೆಕೋರರನ್ನು ನೋಡಿದ್ದೀರಾ ಎಂದು ಋಷಿ ಮಾಂಡವ್ಯನನ್ನು ಕೇಳಿದರು. ಮೌನ ವ್ರತ ಧರಿಸಿದ್ದ ಮಾಂಡವ್ಯ ಮಾತಾಡಲಿಲ್ಲ. ಸೇನಾಧಿಪತಿಗೆ ಸಿಟ್ಟು ಬಂತು. ಪುನಃ ಪ್ರಶ್ನೆ ಕೇಳಿದ. ಋಷಿ ಉತ್ತರಿಸಲಿಲ್ಲ. ಸೈನಿಕರು ಅಲ್ಲೆಲ್ಲ ಹುಡುಕಾಡಿದಾಗ ಕಳ್ಳರು ಅಡಗಿಸಿಟ್ಟ ಆಭರಣ ಅಲ್ಲಿ ಸಿಕ್ಕಿತು. ಆಶ್ರಮವನ್ನು ಸರಿಯಾಗಿ ಹುಡುಕಿದಾಗ ಕದ್ದ ವಸ್ತುಗಳು ಮತ್ತು ದರೋಡೆಕೋರರು ಅಲ್ಲಿ ಅಡಗಿಕೊಂಡಿರುವುದನ್ನು ಕಂಡರು. ಋಷಿಯೇ ಇವರಿಗೆ ಆಶ್ರಯ ಕೊಟ್ಟಿದ್ದಾನೆ, ಇವನೇ ಇವರ ಸೂತ್ರಧಾರನಾಗಿದ್ದಾನೆ ಎಂದು ಸೇನಾಧಿಕಾರಿ ತಳಿದುಕೊಂಡ.
ನಂತರ ಸೇನಾಧಿಪತಿ ಕಳ್ಳರ ಜೊತೆಗೆ ಋಷಿಯನ್ನೂ ಬಲವಂತವಾಗಿ ಕೈಕಾಲು ಕಟ್ಟಿ ರಾಜನ ಆಸ್ಥಾನಕ್ಕೆ ಎಳೆದುಕೊಂಡು ಹೋದ. ರಾಜನ ಮುಂದೆ ವಿಚಾರಣೆ ನಡೆಯತು. ಮೌನವ್ರತದಲ್ಲಿದ್ದ ಮಾಂಡವ್ಯ ಆಗಲೂ ಮಾತಾಡಲಿಲ್ಲ. ಕೋಪಗೊಂಡ ರಾಜನು, ಅಪರಾಧಿಯನ್ನು ಈಟಿಯಲ್ಲಿ ಶೂಲಕ್ಕೇರಿಸಲು ಆದೇಶಿಸಿದ. ಸೇನಾಧಿಪತಿ ರಾಜನ ಆದೇಶವನ್ನು ಪಾಲಿಸಿದ. ಮಾಂಡವ್ಯನನ್ನು ಶೂಲಕ್ಕೇರಿಸಲಾಯಿತು. ಆದರೆ ಆಳವಾದ ಯೋಗಾಭ್ಯಾಸ ಹಾಗೂ ತಪೋಬಲ ಹೊಂದಿದ್ದ ಋಷಿ ಇದರಿಂದ ಸಾಯಲಿಲ್ಲ. ಆದರೆ ಶೂಲದ ಬಾಧೆಯನ್ನು ಮಾತ್ರ ಅವನು ಅನುಭವಿಸಬೇಕಾಯಿತು. ಆಗ ಕಾಡಿನ ಇತರ ಋಷಿಗಳು ಈ ಘಟನೆಯ ಬಗ್ಗೆ ಕೇಳಿ ಪಕ್ಷಿಗಳ ರೂಪದಲ್ಲಿ ಮಾಂಡವ್ಯನ ಬಳಿಗೆ ಬಂದರು. ತಿಳಿಯದೆ ಶಿಕ್ಷೆಯನ್ನು ವಿಧಿಸಿದ್ದು ಗೊತ್ತಾಯಿತು. ಋಷಿಗಳೆಲ್ಲ ಸೇರಿ ಘಟನೆಯನ್ನು ರಾಜನಿಗೆ ಅರ್ಥ ಮಾಡಿಸಿ, ಮಾಂಡವ್ಯನನ್ನು ಶೂಲದಿಂದ ಕೆಳಗಿಳಿಸಿ ಕಾಡಿಗೆ ಕರೆದೊಯ್ದರು. ಭಯಭೀತನಾದ ರಾಜ ಮಾಂಡವ್ಯನಿಗೆ ತಾನು ಮಾಡಿದ ಅಪರಾಧಕ್ಕಾಗಿ ಕ್ಷಮೆ ಕೇಳಿದ. ಆದರೆ ರಾಜನ ಮೇಲೆ ಯಾವುದೇ ಕೋಪವನ್ನು ಇಟ್ಟುಕೊಳ್ಳದ ಮಾಂಡವ್ಯ, ಅವನಿಗೆ ಶಪಿಸಲಿಲ್ಲ.
ಆದರೆ ಮಾಂಡವ್ಯನ ಮನದಲ್ಲಿ ಒಂದು ಪ್ರಶ್ನೆ ಮೂಡಿತ್ತು ಅವನು ನೇರವಾಗಿ ಯಮಧರ್ಮ ರಾಜನ ಬಳಿಗೆ ಹೋದ. ನಾನು ಯಾವುದೇ ಪಾಪ ಮಾಡಿಲ್ಲವಲ್ಲ, ಹಾಗಿದ್ದರೂ ನನಗೆ ಯಾಕೆ ಈ ಶೂಲದ ಯಾತನೆಯ ಶಿಕ್ಷೆ ಒದಗಿತು ಎಂದು ನ್ಯಾಯಾನ್ಯಾಯದ ಅಧಿಕಾರಿಯಾದ ಯಮನನ್ನೇ ಪ್ರಶ್ನಿಸಿದ. ಅದಕ್ಕೆ ಯಮ ಉತ್ತರಿಸಿದ- ಮಾಂಡವ್ಯ ಐದು ವರ್ಷದ ಮಗುವಾಗಿದ್ದಾಗ ಚಿಟ್ಟೆಗಳ ರೆಕ್ಕೆಗಳನ್ನು ಹಿಡಿದು ಅದಕ್ಕೆ ಮುಳ್ಳು ಚುಚ್ಚುವುದು, ಕಪ್ಪೆಗಳನ್ನು ಸೂಜಿಯಿಂದ ಚುಚ್ಚುವುದು ಮಾಡುತ್ತಿದ್ದ. ಈ ಹಿಂಸಾಕರ್ಮ ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ, ಪರಿಣಾಮ ಬೀರುತ್ತದೆ ಎಂದು ಯಮ ವಿವರಿಸಿದನು.
ತಿರುಪತಿ ತಿಮ್ಮಪ್ಪನ ದರ್ಶನ ಪಡೆಯೋರಿಗೆ ಇಲ್ಲಿದೆ ಒಂದು ಎಚ್ಚರಿಕೆ! ಏನದು?
ಇದರಿಂದ ಆಶ್ಚರ್ಯಚಕಿತನಾದ ಮಾಂಡವ್ಯ, ಇದಕ್ಕಾಗಿ ತಾನು ಪಡೆದ ಶಿಕ್ಷೆಯು ತಾನು ಮಾಡಿದ್ದ ಅಪರಾಧಕ್ಕಿಂತ ದೊಡ್ಡದಾಗಿದೆ. ಬಾಲ್ಯ ಎಂಬುದು ಏನನ್ನೂ ಅರಿಯದ ಪ್ರಾಯ. ಅದೊಂದು ಮುಗ್ಧತೆಯ, ಅಜ್ಞಾನದ ಸ್ಥಿತಿ. ಆಗ ಮಾಡಿದ ಕೃತ್ಯಗಳಿಗೆ ನೀನು ನನಗೆ ಹೇಗೆ ಹೀಗೆ ಮಾಡಲು ಸಾಧ್ಯ? ಎಂದು ಸಿಟ್ಟುಗೊಂಡ. ನಂತರ ಅದೇ ಸಿಟ್ಟಿನಲ್ಲಿ ಯಮನನ್ನು ಮೇಲೆ ಶಪಿಸಿದ. ನೀನು ಭೂಮಿಯಲ್ಲಿ ಮನುಷ್ಯನಾಗಿ ಕೆಳವರ್ಗದಲ್ಲಿ ಹುಟ್ಟು ಎಂದು ಶಪಿಸಿದ. ನಂತರ, 12 ವರ್ಷದೊಳಗಿನ ಮಕ್ಕಳು ಮಾಡುವ ಯಾವುದೇ ತಪ್ಪು ಕೆಲಸ ಶಿಕ್ಷೆಗೆ ಅರ್ಹವಲ್ಲ. ಹಾಗಾಗಿ ಅಂಥ ಮಕ್ಕಳಿಗೆ ಶಿಕ್ಷೆಯಾಗದೆ ಹೋಗಲಿ ಎಂದು ನುಡಿದ.
ಪರಿಣಾಮವಾಗಿ, ಯಮನು ವಿದುರನಾಗಿ ಹುಟ್ಟಿದ. ಯಾವುದೇ ಅಧಿಕಾರವಿಲ್ಲದೆ ಬದುಕಿದ. ಇನ್ನೊಂದು ಶಾಪದಂತೆ, 12 ವರ್ಷದೊಳಗಿನ ಮಕ್ಕಳು ಎಸಗಿದ ಅಪರಾಧಗಳಿಗೆ ಶಿಕ್ಷೆಯಿಲ್ಲದೆ ಹೋಯಿತು.
ವಾಸ್ತು: ಬಾಗಿಲು ಯಾವ ದಿಕ್ಕಲ್ಲಿದ್ದರೆ ಯಾವ ರಾಶಿಗೆ ಶುಭ?