ಭವಿಷ್ಯದ ವಿಷಯಗಳನ್ನು ಹಲವು ಶಾಸ್ತ್ರಗಳು ತಿಳಿಸುತ್ತವೆ. ಜ್ಯೋತಿಷ್ಯ ಶಾಸ್ತ್ರದ ಒಂದು ಭಾಗವಾದ ಸಾಮುದ್ರಿಕ ಶಾಸ್ತ್ರದಂತೆ ಮನುಷ್ಯನ ಶರೀರದ ಮೇಲಿನ ಚಿಹ್ನೆ ಮತ್ತು ಮಚ್ಚೆಗಳಿಂದಲೂ ಗುಣ, ಸ್ವಭಾವ ಮತ್ತು ಅದೃಷ್ಟದ ಬಗ್ಗೆ ಹಲವು ವಿಚಾರಗಳನ್ನು ತಿಳಿಯಬಹುದು. ಅದರಲ್ಲೂ ಆ ಚಿಹ್ನೆ ಮತ್ತು ಮಚ್ಚೆ ನೀಡುವ ಸಂಕೇತ ಪುರುಷ ಮತ್ತು ಮಹಿಳೆಯರಿಗೆ ವಿಭಿನ್ನವಾಗಿರುತ್ತದೆ. ಹಾಗಾಗಿ ಸ್ತ್ರೀಯರಿಗೆ ಈ ಕೆಲವು ಚಿಹ್ನೆ ಅಥವಾ ಮಚ್ಚೆಗಳಿದ್ದರೆ, ಅವರು ಹೆಚ್ಚು ಭಾಗ್ಯಶಾಲಿ ಮತ್ತು ಅದೃಷ್ಟವಂತರೆಂದು ಹೇಳುತ್ತಾರೆ. ಏನವು
ಲಕ್ಷ್ಮೀ ಸ್ವರೂಪ ಸ್ತ್ರೀ. ಹೆಣ್ಣು ಮಗು ಹುಟ್ಟಿದರೆ ಮನೆಗೆ ಲಕ್ಷ್ಮೀ ಬಂದಂತೆ. ಮನೆಗೆ ಮಂಗಳವನ್ನುಂಟು ಮಾಡುವವಳು ಎಂದೆಲ್ಲ ಹೇಳುತ್ತಾರೆ. ಪುರಾಣ ಕಾಲದಿಂದಲೂ ಹೆಣ್ಣಿಗೆ ವಿಶೇಷ ಸ್ಥಾನಮಾನವಿದೆ. ಅದರಲ್ಲೂ ರೂಪ, ಲಕ್ಷಣ, ಮಚ್ಚೆ, ಕೆಲವು ಚಿಹ್ನೆಗಳನ್ನು ಗಮನಿಸಿಯೇ ಹುಡುಗಿ ಭಾಗ್ಯಶಾಲಿ ಮತ್ತು ಅದೃಷ್ಟವಂತೆ ಎಂದೂ ಹೇಳಿ ಬಿಡುತ್ತಾರೆ.
ಈ ಹೆಣ್ಣು ಮಕ್ಕಳು ಹುಟ್ಟಿದ ಮನೆಗೆ ಅದೃಷ್ಟ ತಂದರೆ, ಮದುವೆಯಾದ ಮೇಲೆ ಗಂಡನ ಮನೆಗೂ ಕೀರ್ತಿ ತರುತ್ತಾರೆ. ಹುಡುಗೀಯರು ತಮ್ಮ ಶರೀರದ ಮೇಲೆ ಈ ಕೆಲವು ಚಿಹ್ನೆಗಳನ್ನು ಹೊಂದಿದ್ದರೆ ಹೆಚ್ಚು ಭಾಗ್ಯಶಾಲಿಗಳೆಂದು ಹೇಳುತ್ತಾರೆ. ಪತಿ ಸಂತೋಷ, ಸುಖಗಳಿಗೆ ಹೆಚ್ಚು ಗಮನ ಕೊಡುವುದಲ್ಲದೆ, ಮನೆಯವರ ನೆಮ್ಮದಿ ಮತ್ತು ಖುಷಿ ಬಗ್ಗೆಯೂ ಕಾಳಜಿ ಹೊಂದಿರುತ್ತಾರೆ ಎನ್ನುತ್ತದೆ ಸಾಮುದ್ರಿಕಾ ಶಾಸ್ತ್ರ. ಇಂತಹ ಚಿಹ್ನೆಗಳು ಯಾವುವು? ಅವು ಏನು ಹೇಳುತ್ತವೆ?
ಮೂಗಿನ ಮೇಲಿನ ಮಚ್ಚೆ
ಹುಡುಗಿಯರ ಮೂಗಿನ ಸುತ್ತ ಮುತ್ತ ಮಚ್ಚೆ ಇದ್ದರೆ ಎಲ್ಲ ಸುಖಗಳನ್ನು ಹೊಂದುತ್ತಾರೆ. ಈ ಮಚ್ಚೆ ಧನ ಸಂಪತ್ತಿರುವ ಸಂಕೇತವೂ ಹೌದು.
ಅಂಗಾಲಿನಲ್ಲಿ ಚಕ್ರ ಅಂಥವಾ ಶಂಖದ ಚಿಹ್ನೆ
ಕೆಲವು ಮಹಿಳೆಯರ ಅಂಗಾಲಲ್ಲಿ ಕಮಲ, ಚಕ್ರ ಅಥವಾ ಶಂಖದ ಚಿಹ್ನೆ ಇರುತ್ತವೆ. ಇಂಥವರು ಹೆಚ್ಚು ಭಾಗ್ಯಶಾಲಿಗಳೆನ್ನುತ್ತಾರೆ. ಇಷ್ಟೇ ಅಲ್ಲದೆ, ಇವರು ಕುಟುಂಬಕ್ಕೆ ಹೆಚ್ಚು ಕೀರ್ತಿ, ಯಶಸ್ಸು ತರುತ್ತಾರೆ.
ನಾಭಿಯ ಕೆಳಗೆ ಮಚ್ಚೆ
ಹೊಕ್ಕಳಿನ ಕೆಳಗೆ ಮಚ್ಚೆಇರುವ ಸ್ತ್ರೀಯರು ಕುಟುಂಬಕ್ಕೆ ಹೆಚ್ಚು ಭಾಗ್ಯ ತರುತ್ತಾರೆನ್ನುತ್ತದೆ ಸಾಮುದ್ರಿಕಾ ಶಾಸ್ತ್ರ. ಈ ಮಚ್ಚೆ ಸುಖ ಮತ್ತು ಸಂಪನ್ನತೆಯ ಪ್ರತೀಕ.
ಹಣೆಯ ಮೇಲೆ ಮಚ್ಚೆ
ಸ್ತ್ರೀಯರ ಹಣೆ ಮಧ್ಯದಲ್ಲಿ ಮಚ್ಚೆ ಇದ್ದರೆ ಅಂಥವರು ಸೌಭಾಗ್ಯಶಾಲಿಯಾಗಿರುತ್ತಾರೆ. ಇವರನ್ನು ವಿವಾಹವಾಗುವವರು ಜೀವನಪೂರ್ತಿ ಸಂತೋಷದಿಂದಿರುತ್ತಾರೆ.
ತ್ರಿಕೋನದ ಚಿಹ್ನೆ
ಯಾವ ಹುಡುಗಿಯ ಅಂಗಾಲಲ್ಲಿ ತ್ರಿಕೋನದ ಚಿಹ್ನೆ ಇರುತ್ತದೆಯೋ ಅವರು ಹೆಚ್ಚು ಬುದ್ಧಿವಂತರೆನಿಸಿಕೊಳ್ಳುತ್ತಾರೆ. ಅವರಿಗೆ ಗ್ರಹಿಸುವ ಶಕ್ತಿಯೂ ಹೆಚ್ಚಿರುತ್ತದೆ. ಇಂಥವರು ಮನೆಯವರನ್ನು ಖುಷಿ ಬಗ್ಗೆ ಕಾಳಜಿ ವಹಿಸುವ ಜೊತೆ ಕಷ್ಟ ಬಂದಾಗ ಮನೆಯವರ ಸಹಾಯಕ್ಕೆ ನಿಲ್ಲುತ್ತಾರೆ. ಅದರಿಂದ ಹೊರಬರುವ ಚಾಣಾಕ್ಷತೆಯನ್ನು ತೋರಿಸುತ್ತಾರೆ. ಬುದ್ಧಿವಂತಿಕೆ ಮತ್ತು ಧೈರ್ಯ ಇವರ ಅದೃಷ್ಟದ ಜೊತೆಗಿರುತ್ತದೆ.
ಕೆನ್ನೆ ಎಡಭಾಗದಲ್ಲಿ ಮಚ್ಚೆ
ಸ್ತ್ರೀಯರ ಕೆನ್ನೆಯ ಎಡಭಾಗದಲ್ಲಿ ಮಚ್ಚೆ ಇದ್ದರೆ ರುಚಿ ಪ್ರಿಯರಾಗಿರುತ್ತಾರೆ. ಎಲ್ಲ ತರಹದ ಅಡುಗೆಯನ್ನೂ ಮಾಡಬಲ್ಲವರಾಗಿರುತ್ತಾರೆ. ರುಚಿಯಾದ ಅಡುಗೆ ಮಾಡಿ ಕುಟುಂಬದವರ ಮನಸ್ಸು ಗೆಲ್ಲುವ ಇವರು ಅದೃಷ್ಟವಂತರೂ ಹೌದು.
ಶರೀರದ ಮೇಲಿನ ಮಚ್ಚೆ
ಸ್ತ್ರೀಯರಿಗೆ ಎಡ ಭಾಗದಲ್ಲಿ ಹೆಚ್ಚು ಮಚ್ಚೆ ಇದ್ದರೆ ಅವರು ತುಂಬಾ ಭಾಗ್ಯಶಾಲಿಗಳೂ ಹೌದು. ಇವರು ಕುಟುಂಬಕ್ಕೆ ಅದೃಷ್ಟ ತರುತ್ತಾರೆ, ಅಷ್ಟೇ ಅಲ್ಲದೆ ಈ ಹುಡುಗಿಯರು ವೈವಾಹಿಕ ಜೀವನದ ಪ್ರತಿ ಹಂತದಲ್ಲೂ ಪತಿಯನ್ನು ಸಂತೋಷವಾಗಿಡುವಲ್ಲೂ ಯಶಸ್ಸು ಸಾಧಿಸುತ್ತಾರೆ.
ಹುಬ್ಬುಗಳ ಮಧ್ಯೆ, ತಲೆಯಲ್ಲಿ ಮಚ್ಚೆ
ಹುಬ್ಬುಗಳ ಮಧ್ಯದಲ್ಲಿ ಮಚ್ಚೆ ಇರುವ ಹುಡುಗಿಯರು ಸೌಭಾಗ್ಯಶಾಲಿಗಳು ಮತ್ತು ಇದು ಬುದ್ಧಿವಂತಿಕೆಯ ಸಂಕೇತವೂ ಹೌದು. ಇನ್ನು ತಲೆಯಲ್ಲಿ ಮಚ್ಚೆ ಇರುವ ಸ್ತ್ರೀಯರು ಇತರರಿಗೆ ರೋಲ್ ಮಾಡೆಲ್ ಎನಿಸಿಕೊಳ್ಳುತ್ತಾರಲ್ಲದೇ, ಲಕ್ಕಿಯೂ ಹೌದು.
ಕಿವಿ ಮೇಲೆ ಮಚ್ಚೆ
ಸ್ತ್ರೀಯರಿಗೆ ಕಿವಿ ಮೇಲೆ ಮಚ್ಚೆ ಇದ್ದರೆ ಹೆಚ್ಚು ಅದೃಷ್ಟಶಾಲಿಗಳು, ಬುದ್ಧಿವಂತರು ಮತ್ತು ಬೇಗ ನಿರ್ಧಾರವನ್ನು ತೆಗೆದುಕೊಳ್ಳಬಲ್ಲವರಾಗಿರುತ್ತಾರೆ. ಎಡಗಿವಿ ಮೇಲಿರುವ ಮಚ್ಚೆ ಉತ್ತಮ ವೈವಾಹಿಕ ಜೀವನದ ಸಂಕೇತ.