Guru Poornima: ಅರಿವೇ ಗುರು, ಅರಿವು ನೀಡುವ ಗುರುವಿಗೆ ಕೋಟಿ ನಮನ

By Suvarna NewsFirst Published Jul 3, 2023, 3:21 PM IST
Highlights

ಜೀವನದಲ್ಲಿ ಗುರುವಿಗೆ ಗುಲಾಮನಾಗದೇ ಮುಕ್ತಿ ಸಿಗೋದು ಕಷ್ಟ ಎಂಬ ನಂಬಿಕೆ ಇದೆ. ಪ್ರತಿಯೊಂದೂ ಹೆಜ್ಜೆಯಲ್ಲಿ ಪಾಠ ಕಲಿಸುವ ಎಲ್ಲರೂ ಗುರುಗಳೇ. ಅವರಿಗೆ ಗುರು ಪೂರ್ಣಿಮೆಯ ವಿಶೇಷ ದಿನದಂದು ನಮನ

- ಸೌಮ್ಯಾ ಹೇಮಂತ್

ಇಂದು ಗುರುಪೂರ್ಣಿಮೆ. ಗು ಎಂದರೆ ಕತ್ತಲೆ ರು ಎಂದರೆ ಅರಿವು. ಕತ್ತಲೆಯಿಂದ ಬೆಳಕಿನೆಡೆಗೆ ಕರೆದುಕೊಂಡು ಹೋಗುವವನೆ ಗುರು. ಕತ್ತಲು ಅಂದ್ರೆ ಅಜ್ಞಾನ, ಅಂಧಕಾರ. ಬೆಳಕು ಆಂದ್ರೆ ಅರಿವು, ತಿಳುವಳಿಕೆ, ವಿವೇಕ ಮತ್ತು ಜ್ಞಾನ. ಇನ್ನು ಪೂರ್ಣಿಮೆ ಅಂದರೆ ಹುಣ್ಣಿಮೆ. ಚಂದ್ರ ಮನಸ್ಸಿನ ಪ್ರತೀಕ, ಮನಸ್ಸಿನ ಕತ್ತಲು ಕಳೆದು ಪೂರ್ಣ ಬೆಳಕು ನೀಡುವ ದಿನ ಹುಣ್ಣಿಮೆ. ಈ ದಿನ ಭಗವಾನ್ ಮಹರ್ಷಿ ವೇದವ್ಯಾಸರ ಜನ್ಮ ದಿನವೂ ಹೌದು. ಅಷಾಡ ಮಾಸದ ಹುಣ್ಣಿಮೆಯನ್ನು ಪ್ರಪಂಚಕ್ಕೆ ಜ್ಞಾನ ಕೊಟ್ಟ ಮಹಾನ್ ಗುರು ವೇದವ್ಯಾಸರ ಸ್ಮರಣಾರ್ಥ, ಕೃತಜ್ಞತ ಭಾವದಿಂದ ಆಚರಿಸಲಾಗುತ್ತದೆ. 

ಬೆಸ್ತರ ಕುಟುಂಬದ ಸತ್ಯವತಿ ಮತ್ತು ಪರಶರ ಮುನಿಯ ಮಗನಾಗಿ ವ್ಯಾಸರು ಜನ್ಮ ತಾಳಿದ್ರು. ಹುಟ್ಟಿದ ಮಗುವಿನ ಬಣ್ಣ ಕಪ್ಪು ಮತ್ತು ಯುಮುನಾ ನದಿಯ ಒಂದು ದ್ವೀಪದಲ್ಲಿ ಜನ್ಮ ತಾಳಿದ ಕಾರಣ ಅವರನ್ನು ಕೃಷ್ಣದ್ವೈಪಾಯಾನ ಎಂದೂ ಕರೆಯಲಾಗುತ್ತದೆ.  ಕ್ಷಿಷ್ಟಕರವಾಗಿದ್ದ ವೇದಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸುವ ಮೂಲಕ ವೇದವ್ಯಾಸರಾದ್ರು.  
ವ್ಯಾಸಯ ವಿಷ್ಣು ರೂಪಾಯ ವ್ಯಾಸ ರೂಪಾಯ ವಿಷ್ಣುವೇ
ನಮೋ ವೇ ಬ್ರಹ್ಮನಿಧಯೆ ವಸಿಷ್ಠಾಯ ನಮೋ ನಮ:

ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಒಂದಾದ ಮಹಾಭಾರತ, ಭಾಗವತದ ಕತೃರ್ರ್ ಭಗವಾನ್ ವೇದವ್ಯಾಸರನ್ನು ವಿಷ್ಣುವಿನ ಅವತಾರ ಎನ್ನಲಾಗಿದೆ. ಒಂದು ಲಕ್ಷ ಶ್ಲೋಕಗಳನ್ನು ಒಳಗೊಂಡಿರುವ ಬೃಹತ್ ಮಹಾಭಾರತವನ್ನು ಪ್ರಪಂಚಕ್ಕೆ ನೀಡಿದ ಮಹಾನ್ ಸಾಹಿತಿಗಳ ಸಾಹಿತಿ ಇವರು. ಅನಂತ ಸನಾತನ ಧರ್ಮಕ್ಕೆ ಕೊಡುಗೆ ನೀಡಿರುವ ವೇದವ್ಯಾಸರ ಹುಟ್ಟುಹಬ್ಬವನ್ನು ಗುರುಪೂರ್ಣಿಮೆಯಾಗಿ ಆಚರಿಸುವುದು ಅರ್ಥಪೂರ್ಣ.

ಗುರು ಪೂರ್ಣಿಮೆ: ಅಜ್ಞಾನ ಕಳೆದು ಜ್ಞಾನದ ಬೆಳಕು ಒದಗಿಸುವವನೇ ಗುರು

ಮುಂದೆ ಗುರಿ ಹಿಂದೆ ಗುರು ಇದ್ದರೆ ಜೀವನದಲ್ಲಿ ಎನೂ ಬೇಕಾದರೂ ಸಾಧಿಸಬಹುದು. ಅದ್ದರಿಂದ ನಮ್ಮ ಸನಾತನ ಧರ್ಮದಲ್ಲಿ ಗುರುವಿಗೆ ಬಹಳ ಮಹತ್ವವಿದೆ. ಗುರುವಿಗೆ ದೇವರನ್ನು ಮೀರಿದ ಸ್ಥಾನ ನೀಡಲಾಗಿದೆ. 
ಗುರು ಬ್ರಹ್ಮ , ಗುರುರ್ವಿಷ್ಣು, ಗುರುರ್ದೇವೊ ಮಹೇಶ್ವರ: 
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮ: 

ಎನ್ನುವ ಮೂಲಕ  ಋಷಿ ಮುನಿಗಳು ಗುರುವಿನ ಮಹತ್ವವನ್ನು ಸಾರಿ ಹೇಳಿದ್ದಾರೆ.  ಅದ್ದರಿಂದ ಈ ದಿನವನ್ನು ನಮ್ಮ ಜೀವನ ಪಾಠ ಕಲಿಸಿದ ಪ್ರತಿಯೊಬ್ಬರನ್ನು ನೆನೆಯುವ ಪುಣ್ಯ ದಿನ ಎನ್ನಬಹುದು. ಆ ಮೂಲಕ ಮನುಷ್ಯನ ಜೀವನದಲ್ಲಿ ಬರುವ ಪ್ರತಿಗುರುವನ್ನು ಕೃತಜ್ಞತೆಯಿಂದ ನೆನೆಯುವುದು ಪ್ರತಿಯೊಬ್ಬರ ಕರ್ತವ್ಯ. ಅದು ತಂದೆ ತಾಯಿ, ಸ್ನೇಹಿತರು, ಸುತ್ತಮುತ್ತ ಇರುವ ಪ್ರಕೃತಿ (Nature), ಹೀಗೆ ಜೀವನದಲ್ಲಿ ಬದಲಾವಣೆಗೆ ಕಾರಣವಾಗುವ ಪ್ರತಿಯೊಂದೂ ಸೂಕ್ಷ್ಮಜೀವಿಯು ಗುರುವಾಗುತ್ತದೆ. ಒಬ್ಬ ಅವಧೂತನಿಗೆ ಪಂಚಭೂತ ಸೇರಿದಂತೆ  ಜೇನು (Honey), ಹಾವು (Snake), ಜಿಂಕೆ (Deer), ಮೀನು (Fish) ಹೀಗೆ  24  ಗುರುಗಳಿದ್ದರು ಎಂದು ದತ್ತಾತ್ರೆಯ ಅವಧೂತ ಪುರಾಣ ತಿಳಿಸುತ್ತದೆ. ಸದ್ಗುರು ಸಿಗಬೇಕು ಎಂದರೆ ಅದಕ್ಕೆ ಪೂರ್ವಜನ್ಮದ ಪುಣ್ಯವಿರಬೇಕು. ಅರಿವು ನೀಡುವ ಗುರುವನ್ನು ನೆನೆಯುವ ಈ ಸುದಿನವನ್ನು ವ್ಯರ್ಥವಾಗಿಸದೆ ಗುರುಸ್ಮರಣೆ ಮಾಡಿ.
 

Latest Videos

ಗುರು ಕೃಪೆಗಾಗಿ ಗುರು ಪೂರ್ಣಿಮೆಯಂದು ಹೀಗೆ ಮಾಡಿ!

click me!