ಬಲರಾಮ, ಸುಭದ್ರೆಯರ ಜೊತೆಗೂಡಿ ರಥಯಾತ್ರೆಗೆ ಹೋಗಿ ಹಿಂದಿರುಗಿ ಬರುವ ಜಗನ್ನಾಥನನ್ನು ಪತ್ನಿ ಲಕ್ಷ್ಮೀ ದೇವಿ ಬಾಗಲಲ್ಲೇ ತಡೆಯುತ್ತಾಳೆ. ರಥಯಾತ್ರೆಗೆ ತನ್ನನ್ನು ಬಿಟ್ಟು ಬಲರಾಮ, ಸುಭದ್ರೆಯರ ಜೊತೆ ಹೋದ ಜಗನ್ನಾಥನ ಕುರಿತು ಆಕೆಗೆ ಮುನಿಸು. ಲಕ್ಷ್ಮಿ ಕೋಪ ತಣ್ಣಗಾಗುವುದು ಹೇಗೆ?
- ರಜಿನಿ.ಎಂ.ಜಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಮಹಾವಿಷ್ಣು ಸ್ವಯಂ ನೆಲಸಿರುತ್ತಾನೆ ಎಂದೇ ಪ್ರಸಿದ್ಧವಾದ ಚಾರ್ಧಾಮ್ ಕ್ಷೇತ್ರಗಳಲ್ಲಿ ಪುರಿ ಸಹ ಒಂದು. ರಾಮೇಶ್ವರಂನಲ್ಲಿ ಸ್ನಾನ, ಪುರಿಯಲ್ಲಿ ಭೋಜನ, ಧ್ವಾರಕೆಯಲ್ಲಿ ಶಯನ, ಬದರಿನಾಥದಲ್ಲಿ ತಪಸ್ಸು ಮಾಡುತ್ತಾನೆ ಶ್ರೀ ವಿಷ್ಣು ಎಂದೇ ಭಕ್ತರು ನಂಬುತ್ತಾರೆ. ಆದರಿಂದಲೇ ಪುರಿಯಲ್ಲಿ ಭೋಜನಕ್ಕೆ ಅಷ್ಟು ಮಹತ್ವ.
undefined
ಪುರಿ ಜಗನ್ನಾಥನ ವಿಶೇಷವೆಂದರೆ ಅನ್ನ ನೈವೇದ್ಯ. ಅದೂ ಸಾಮಾನ್ಯ ಊಟವಲ್ಲ. ಛಪ್ಪನ್ಭೋಗ್. ಅಂದ್ರೆ 56 ಬಗೆಯ ವಿವಿಧ ಬಗೆಯ ಖಾದ್ಯಗಳ ನೈವೇದ್ಯ. ಹತ್ತಾರು ಬಗೆಯ ಸಿಹಿ ಖಾದ್ಯಗಳು, ಥರಾವರಿ ತಿಂಡಿ ತಿನಿಸುಗಳನ್ನು ನೋಡುವುದೇ ಒಂದು ರಸಾನುಭವ. ಜಗನ್ನಾಥನಿಗೆ ಊಟ ಅದೆಷ್ಟು ಇಷ್ಟವೆಂದರೆ ಎಲ್ಲಡೆ ವೈಷ್ಣವರು ಆಚರಿಸುವ ಏಕಾದಶಿಯನ್ನು ಪುರಿಯಲ್ಲಿ ಆಚರಿಸುವುದಿಲ್ಲ.
ನಾನು ಒಡಿಶಾದಲ್ಲಿ ನೈವೇದ್ಯೆ ಮಾಡುವ ಪರಿ ನೋಡಿಯೇ ದಂಗಾದೆ. ಏಕಂದರೆ ಅಲ್ಲಿ ಪೂರ್ಣ ನೈವೇದ್ಯದ ಪರಿಪಾಠವಿದೆ. ನಮ್ಮಲ್ಲಿ ಅಡುಗೆ ಮಾಡಿದ್ರೆ ಅದರಲ್ಲಿ ಸ್ವಲ್ಪ ತೆಗೆದು ದೇವರ ಮುಂದಿಟ್ಟು ನೈವೇದ್ಯ ಮಾಡುವುದು ಪದ್ಧತಿ. ಅದ್ರೆ ಒಡಿಶಾದಲ್ಲಿ ಹಾಗಲ್ಲ. ಮಾಡಿದ ಅಡುಗೆ ಸಂಪೂರ್ಣವಾಗಿ ದೇವರ ಮುಂದಿಡಬೇಕು. ದೇವರ ಮುಂದಿಡದದ್ದು ಪ್ರಸಾದವಲ್ಲ. ಅಂದ್ರೆ ಪುರಿಯಲ್ಲಿ ರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ತಿನ್ನುವ ಪ್ರತಿ ಊಟವೂ ದೇವರ ಮುಂದಿನಿಂದಲೇ ಬರುತ್ತದೆ. ಅದಕ್ಕಾಗಿಯೇ ಗರ್ಭಗುಡಿ ಎದುರು ದೊಡ್ಡದಾದ ಸಭಾಂಗಣ ಒಂದಿರುತ್ತದೆ. ಅದಕ್ಕಾಗೆ ಇಲ್ಲಿ ಪ್ರಸಾದ ಎಂದು ಕರೆಯುವುದಿಲ್ಲ, ಮಹಾಪ್ರಸಾದ ಎಂದೇ ಕರೆಯಲಾಗುತ್ತದೆ.
Puri Jagannath Ratha Yatra: ಚಿಕ್ಕಮ್ಮನ ಮನೆಗೆ ಅಣ್ಣ, ತಂಗಿಯೊಡನೆ ಹೊರಡೋ ಕೃಷ್ಣ!
ಲೋಹದ ಬಳಕೆ ಕಡಿಮೆ:
ಮೂಲ ಸಂಸ್ಕೃತಿಯನ್ನು ಇನ್ನೂ ಕಾಪಿಟ್ಟುಕೊಂಡಿರುವ ಪುರಿಯಲ್ಲಿ ಲೋಹದ ಬಳಕೆ ತುಂಬಾ ಕಡಿಮೆ. ಅಲ್ಲಿ ದೇವರ ವಿಗ್ರಹವೂ ಮರದ್ದು. ಜಗನ್ನಾಥನ ರಥ ನಿರ್ಮಾಣದಲ್ಲಿಯೂ ಒಂದೂ ಮೊಳೆ ಉಪಯೋಗಿಸುವುದಿಲ್ಲ. ಲಕ್ಷಾಂತರ ಜನರಿಗೆ ಮಾಡುವ ಅಡುಗೆ ನೈವೇದ್ಯವನ್ನು ಇಂದಿಗೂ ಮಡಕೆ-ಕುಡಿಕೆಗಳಲ್ಲೇ ಮಾಡುತ್ತಾರೆ. ಸೌದೆ ಒಲೆಯನ್ನೇ ಬಳಸಲಾಗುತ್ತದೆ. ಆದ್ದರಿಂದ ಅಲ್ಲಿಯ ಪ್ರಸಾದ ಒಂದು ವಿಶಿಷ್ಠ ಪರಿಮಳ, ವಿಭಿನ್ನ ರುಚಿ!
ಇಲ್ಲಿ ಪ್ರಸಾದ ಹಂಚುವಿಕೆಯೂ ವಿಭಿನ್ನ ರೀತಿ. ನಮ್ಮ ಹೊರನಾಡು, ಧರ್ಮಸ್ಥಳದಂತೆ ಇಲ್ಲಿ ಉಚಿತ ಊಟದ ವ್ಯವಸ್ಥೆ ಇಲ್ಲ. ಬದಲಾಗಿ ಪರಂಪರಾಗತವಾಗಿ ಬಂದ ನೂರಾರು ಕುಟುಂಬಗಳು ಅಡುಗೆಯನ್ನು ಸಿದ್ಧಪಡಿಸುತ್ತವೆ. ದೇವಸ್ಥಾನದ ಆವರಣದಲ್ಲೇ ಆನಂದ ಬಜಾರ್ ಎಂಬ ಊಟದ ಮಾರುಕಟ್ಟೆಯಿದೆ. ಅದರಲ್ಲಿ ಎಲ್ಲಾ ಬಗೆಯ ಸಾಂಪ್ರದಾಯಿಕ ತಿಂಡಿ ತಿನಿಸುಗಳನ್ನು ಮಾರಲಾಗುತ್ತದೆ. ಪ್ರತಿಯೊಬ್ಬ ಭಕ್ತನೂ ಈ ಅನ್ನ ಪ್ರಸಾದವನ್ನು ಕಣ್ಣಿಗೆ ಒತ್ತಿಕೊಂಡು ತಿನ್ನುತ್ತಾನೆ. ಕೆಲವರು ತಟ್ಟೆ ಲೆಕ್ಕದಲ್ಲಿ ತೆಗೆದುಕೊಂಡರೆ ಗುಂಪಿನಲ್ಲಿ ಬರುವರು ಮಡಕೆ ಲೆಕ್ಕದಲ್ಲಿ ತೆಗೆದುಕೊಳ್ಳುತ್ತಾರೆ. ಬಹುಶಃ ಇದು ಜಗತ್ತಿನಲ್ಲಿಯೇ ಅತಿ ದೊಡ್ಡ ಊಟದ ಮಾರುಕಟ್ಟೆ. ನಮ್ಮಲ್ಲಿ ಸಂತೆಗಳಲ್ಲಿ ತರಕಾರಿ ಮಾರುವಂತೆ ತಿಂಡಿ ತಿನಿಸುಗಳನ್ನು ಮಾರುವ ಈ ಆನಂದ ಬಜಾರ್ಗೆ ಪ್ರತಿ ನಿತ್ಯ 1 ಲಕ್ಷ ಜನರಿಗೆ ಊಟ ನೀಡುವ ಸಾಮರ್ಥ್ಯವಿದೆಯಂತೆ.
ಪುರಿ ಜನನ್ನಾಥ ಮಂದಿರದ ಮೇಲೆ ಹಕ್ಕಿಯೂ ಹಾರೋಲ್ಲ
ಬಲರಾಮ, ಸುಭದ್ರೆಯರ ಜೊತೆಗೂಡಿ ರಥಯಾತ್ರೆಗೆ ಹೋಗಿ ಹಿಂದಿರುಗಿ ಬರುವ ಜಗನ್ನಾಥನನ್ನು ಪತ್ನಿ ಲಕ್ಷ್ಮೀ ದೇವಿ ಬಾಗಲಲ್ಲೇ ತಡೆದು ನಿಲ್ಲಿಸುತ್ತಾಳೆ. ರಥಯಾತ್ರೆಗೆ ತನ್ನನ್ನು ಬಿಟ್ಟು ಬಲರಾಮ, ಸುಭದ್ರೆಯರ ಜೊತೆ ಹೋದ ಜಗನ್ನಾಥನ ಕುರಿತು ಆಕೆಗೆ ಮುನಿಸು. ಪತ್ನಿಯ ಮುನಿಸು ಅರಿತ ಜಗನ್ನಾಥ ಆಕೆಯನ್ನು ಒಲಿಸಿಕೊಳ್ಳಲು ಚಿನ್ನದ ಆಭರಣವನ್ನು ತೊಡುತ್ತಾನೆ. ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಆತ ತೊಡುವ ಆಭರಣದ ತೂಕ ಎಷ್ಟು ಗೊತ್ತೇ? ಬರೋಬ್ಬರಿ 208 ಕೆಜಿ ಚಿನ್ನ. ಅಲ್ಲದೆ ಆಕೆಯ ಮನ ಗೆಲ್ಲಲು ರಸಗುಲ್ಲ ಮಾಡಿ ಲಕ್ಷ್ಮೀ ದೇವಿಗೆ ತಿನ್ನಿಸುತ್ತಾನೆ. ಜಗನ್ನಾಥನ ಪ್ರೀತಿಗೆ ಕರಗುವ ಲಕ್ಷ್ಮೀ ಆತನನ್ನು ದೇಗುಲದ ಒಳಗೆ ಬರಮಾಡಿಕೊಳ್ಳುತ್ತಾಳೆ. ಇಂದಿಗೂ ರಥದ ಮೇಲಿಂದ ಜಗನ್ನಾಥನನ್ನು ಇಳಿಸುವ ಮುನ್ನ 208 ಕೆಜಿ ತೂಕದ ಚಿನ್ನದ ಧಿರಿಸು ತೊಡಿಸಲಾಗುತ್ತದೆ. ದೇವಿಗೆ ರಸಗುಲ್ಲ ನೇವೇದ್ಯ ಮಾಡಲಾಗುತ್ತದೆ. ಸೋನಾವೇಷ್ ಎಂದು ಕರೆಯಲ್ಪಡುವ ಈ ಆಚರಣೆಯನ್ನು ನೋಡಲು ರಥಯಾತ್ರೆಗಿಂತ ಹೆಚ್ಚು ಜನ ಜಗನ್ನಾಥ ದೇಗುಲದ ಮುಂದೆ ನೆರೆಯುತ್ತಾರೆ. ದೇವದಂಪತಿಗಳ ಈ ರಸಸಮಯವನ್ನು ಕಣ್ತುಂಬಿಕೊಂಡು ಲಕ್ಷಾಂತರ ಜನ ಪುಳಕಿತರಾಗುತ್ತಾರೆ. ಪುರಿಯಲ್ಲಿ ಊಟದ ವಿಶೇಷತೆ ನೋಡಿದಾಗ 208 ಕೆಜಿ ಚಿನ್ನಕ್ಕಿಂತ ರಸಗುಲ್ಲದ ಸಿಹಿಗೇ ಸೋತ ಲಕ್ಷ್ಮಿಯ ಕತೆ ನಿಜವೆನ್ನಿಸುತ್ತದೆ.