ಮಹಾಭಾರತದಲ್ಲಿ ಮಹಾಜಾಣ, ವಿವೇಕಿ, ಮುತ್ಸದ್ದಿ ಶ್ರೀಕೃಷ್ಣನೇ ಎಂಬುದರಲ್ಲಿ ಯಾರಿಗೂ ಅನುಮಾನ ಇರಲಿಕ್ಕಿಲ್ಲ. ಆದರೆ ಶ್ರೀಕೃಷ್ಣನ ನಂತರ ಇಲ್ಲಿರುವ ಅಪಾರ ಪಾತ್ರಗಳಲ್ಲಿ ಮಹಾಜಾಣರು ಯಾರು? ಉತ್ತರ ಇಲ್ಲಿದೆ.
ಮಹಾಭಾರತದಲ್ಲಿ ಪಾಂಡವರು ಕೌರವರು ಅಲ್ಲದೇ ಇನ್ನೂ ನೂರಾರು ಪಾತ್ರಗಳು ಇವೆ. ಎಲ್ಲರೂ ಅವರವರದೇ ಸ್ವಭಾವ, ಭಿನ್ನತೆ, ವಕ್ರತೆಗಳನ್ನೆಲ್ಲ ಹೊಂದಿದವರು. ಶ್ರೀಕೃಷ್ಣ ಇವರಲ್ಲೆಲ್ಲ ರಾರಾಜಿಸುವ ಮಹಾಪುರುಷ. ಇವನನ್ನು ನಮ್ಮ ಅಳತೆಯ ಮಾನದಂಡದಲ್ಲಿ ಹಿಡಿಯಲು ಅಸಾಧ್ಯವೇ ಸರಿ. ಆದರೆ ಅರ್ಜುನನ ರಥವನ್ನು ಓಡಿಸುವ ಸಾರಥಿಯಾಗಿಯೂ, ದ್ರೌಪದಿಯ ಕಷ್ಟಕ್ಕೆ ಮಿಡಿಯುವ ಸ್ಪಂದನಶೀಲ ಜೀವವಾಗಿಯೂ ಇವನು ಮಹಾಭಾರತದ ವಿವೇಕಿಗಳ ವಿವೇಕಿಯಾಗಿ ನಿಲ್ಲುತ್ತಾನೆ. ನಾನಾ ತಂತ್ರ ಉಪತಂತ್ರಗಳಿಂದ ಪಾಂಡವರು ಯುದ್ಧದಲ್ಲಿ ಗೆಲ್ಲುವಂತೆ ಮಾಡುತ್ತಾನೆ. ಹೀಗಾಗಿ ಮೊದಲ ಸ್ಥಾನ ಇವನಿಗೇ. ಇನ್ನು ಉಳಿದಂತೆ ಇಲ್ಲಿ ಕೆಲವು ಜಾಣರಾಗಿದ್ದರೂ ಕುಹಕಿಗಳೂ, ಪಾತಕಿಗಳೂ ಆಗಿದ್ದಾರೆ. ಅವರನ್ನು ನೋಡೋಣ.
1. ದುರ್ಯೋಧನ
ಇವನು ಪಾಂಡವರನ್ನು ನಾಶ ಮಾಡಲು, ಸಿಂಹಾಸನವನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡಿದ. ವಿಷಪ್ರಯೋಗ, ಬೆಂಕಿಪ್ರಯೋಗಗನ್ನೆಲ್ಲ ಮಾಡಿದ. ಅದರಲ್ಲಿ ಯಾವುದರಲ್ಲೂ ಗೆಲ್ಲಲಿಲ್ಲ. ಆದರೆ ದ್ಯೂತದಲ್ಲಿ ಪಾಂಡವರನ್ನು ಸೋಲಿಸಿ ಕಾಡಿಗೆ ಅಟ್ಟುವುದರಲ್ಲಿ ಯಶಸ್ವಿಯಾದ. ಯುದ್ಧದಲ್ಲಿ ಸೋತನಾದರೂ ಹದಿನಾಲ್ಕು ವರ್ಷ ಸುಖವಾಗಿ ರಾಜ್ಯವಾಳಿದ. ಧರ್ಮ ಯಾವುದೆಂದು ಗೊತ್ತಿದ್ದರೂ ಆಚರಿಸಲಿಲ್ಲ, ಅಧರ್ಮವೆಂದು ಗೊತ್ತಿದ್ದರೂ ಬಿಡಲಿಲ್ಲ.
ಭೀಮನ ಮೊಮ್ಮಗನನ್ನು ಶ್ರೀಕೃಷ್ಣ ಕೊಂದ ಕತೆ ನಿಮಗೆ ಗೊತ್ತೇ? ...
2. ಯುಯುತ್ಸು
ಇವನು ಧೃತರಾಷ್ಟ್ರನಿಗೆ ದಾಸಿಯಲ್ಲಿ ಜನಿಸಿ ಮಗ. ಇವನು ಕೌರವರಲ್ಲಿ ಒಬ್ಬನಾದರೂ, ಕೌರವರಂತೆ ದುಷ್ಟನಲ್ಲ. ಕುರುಕ್ಷೇತ್ರ ಯುದ್ಧ ಆರಂಭವಾಗುವಾಗ, ಅಧರ್ಮವನ್ನು ತೊರೆದು ಧರ್ಮದ ಕಡೆಗೆ, ಅಂದರೆ ಪಾಂಡವರ ಕಡೆಗೆ ಹೋಗಿ ಅವರ ಕಡೆಯಿಂದ ಕೌರವರನ್ನು ವಿರೋಧಿಸಿ ಕಾದಾಡಿದ. ಕೌರವರಲ್ಲಿ ಯುದ್ಧಾನಂತರ ಬದುಕುಳಿದ ಒಬ್ಬನೇ ಒಬ್ಬ ಈತ.
3. ಸಹದೇವ
ಇವನು ದಿವ್ಯಜ್ಞಾನಿಯಾಗಿದ್ದ. ಮುಂದೇನಾಗಲಿದೆ ಎಂಬುದೆಲ್ಲ ಇವನಿಗೆ ತಿಳಿಯುತ್ತಿತ್ತು. ಕೌರವನು ಸಂಧಿಗೆ ಒಪ್ಪಲಾರ ಎಂಬುದನ್ನು ಇವನು ಮೊದಲೇ ಹೇಳಿದ್ದ. ಆದರೆ ಮಹಾಭಾರತದಲ್ಲಿ ಇವನ ಉಲ್ಲೇಖಗಳೇ ಕಡಿಮೆ. ತನ್ನ ಹಿರಿಯ ಸಹೋದರರ ಪ್ರಭೆಯ ಮುಂದೆ ಇವನು ಮಂಕಾಗಿಹೋದುದೇ ಹೆಚ್ಚು. ತನ್ನ ರೂಪದ ಬಗ್ಗೆ ಇವನಿಗೆ ಹೆಮ್ಮೆಯಿತ್ತು.
4. ಯುಧಿಷ್ಠಿರ
ಶ್ರೀಕೃಷ್ಣನ ಕೃಪೆಯಿಂದ ಕೌರವರನ್ನು ಗೆದ್ದ. ಆದರೆ ಹೆಂಡತಿಯನ್ನೂ ಜೂಜಿನಲ್ಲಿ ಪಣವಿಟ್ಟ. ಆದರೆ ಧರ್ಮದ ಕುರಿತು ಇವನ ತಿಳುವಳಿಕೆ ಆಗಿನ ಕಾಲದ ಎಲ್ಲ ಪ್ರಾಜ್ಞರಿಗಿಂತ ಹಿರಿದಾಗಿತ್ತು ಎಂದೇ ಹೇಳುತ್ತಾರೆ. ಯಮನು ಯಕ್ಷನ ರೂಪದಲ್ಲಿ ಬಂದು ಕೇಳಿದ ಪ್ರಶ್ನೆಗಳಿಗೆಲ್ಲ ಸೂಕ್ತವಾಗಿ ಉತ್ತರಿಸಿದ. ಸ್ವರ್ಗಾರೋಹಣದ ಸಂದರ್ಭದಲ್ಲಿ ಉಳಿದವರೆಲ್ಲಾ ಬಿದ್ದು ಸತ್ತುಹೋದರೂ ತಾನೊಬ್ಬನೇ ಮುಕ್ತಿಯನ್ನು ತಲುಪಿದ.
5. ಭೀಮ
ಪಾಂಡವರಲ್ಲೆಲ್ಲ ಹೆಚ್ಚು ವಿವೇಕಿಯೂ, ಅದೇ ಕಾಲಕ್ಕೆ ವ್ಯಗ್ರನೂ ಆದ ವ್ಯಕ್ತಿತ್ವದವನು ಎಂದರೆ ಭೀಮ. ಇವನು ಆಗಾಗ ರೊಚ್ಚಿಗೇಳುತ್ತಿದ್ದ ನಿಜ. ಆದರೆ ದ್ರೌಪದಿಯ ಸಂಕಷ್ಟಗಳಿಗೆಲ್ಲ ಸ್ಪಂದಿಸುತ್ತಿದ್ದವನು ಇವನೇ. ಉಳಿದ ಪಾಂಡವರು ನಿಶ್ಚೇಷ್ಟಿತರಂತಿದ್ದರೆ ಇವನು ಸಕ್ರಿಯನಾಗಿ ಹೋರಾಡುತ್ತಿದ್ದ. ದ್ರೌಪದಿಯನ್ನು ಕೆಣಕಿದ ಜಯದ್ರಥನಿಗೆ ಪ್ರಾಣದಂಡನೆ ನೀಡುವಂತೆ ಸೂಚಿಸಿದವನು ಇವನೇ.
6. ಕುಂತಿ
ಇವಳು ಇಲ್ಲಿನ ಹೆಣ್ಣು ಪಾತ್ರಗಳಲ್ಲೆಲ್ಲ ತುಂಬ ಜಾಣೆ. ತನಗೆ ದೊರೆತಿದ್ದ ದೂರ್ವಾಸರ ವರಗಳನ್ನು ಸಕಾಲದಲ್ಲಿ ಉಪಯೋಗಿಸಿದವಳು, ಕರ್ಣನನ್ನು ಮಣಿಸಿ ಪಾಂಡವರನ್ನು ಗೆಲ್ಲಿಸಲು ಶ್ರೀಕೃಷ್ಣ ಹೆಣೆದ ತಂತ್ರಕ್ಕೆ ಸೂಕ್ತವಾಗಿ ಸ್ಪಂದಿಸಿದವಳು, ಏಕಚಕ್ರನಗರದಲ್ಲಿ ಬಕಾಸುರನ ಕಾಟದಿಂದ ಊರವರನ್ನು ಕಾಪಾಡಲು ಮಗ ಭೀಮನನ್ನೇ ಮುಂದೆ ಬಿಡುವ ನಿರ್ಧಾರ ತೆಗೆದುಕೊಂಡವಳು ಇವಳೇ.
7. ದ್ರೌಪದಿ
ಈಕೆ ಛಲವಂತೆ. ಪಾಂಡವರೆಲ್ಲಾ ಜೂಜಿನಲ್ಲಿ ಸೋತು ನಿರ್ವಿಣ್ಣರಾದರೂ ತುಂಬಿದ ಸಭೆಯಲ್ಲಿ ನಿಂತು ತನ್ನ ದಿಟ್ಟ ನಿಲುವನ್ನು ಆಕೆ ಪ್ರಕಟಪಡಿಸಿದಳು. ಸ್ವವ್ಯಕ್ತಿತ್ವ ಹೊಂದಿದ ಧೀರ ನಿಲುವಿನ ಹೆಣ್ಣು. ಧರ್ಮರಾಯ ಸಂಧಾನಕ್ಕೆ ಕೃಷ್ಣನನ್ನು ಮುಂದೆ ಬಿಟ್ಟಾಗಲೂ, ಆತ ಸಮರವನ್ನೇ ಸಾಧಿಸಿ ಬರುವಂತೆ ಮಾಡಿದ ತಂತ್ರಗಾರಿಣಿಯೂ ಹೌದು. ಭೀಮನ ಪ್ರತಿಜ್ಞೆ ಪೂರೈಸುವ ವರೆಗೂ ಮುಡಿ ಕಟ್ಟದವಳೂ ಈಕೆಯೇ.
8. ಅಭಿಮನ್ಯು
ಅಭಿಮನ್ಯುವಿನಲ್ಲಿ ತಂಧೆ ಅರ್ಜುನನ ಪರಾಕ್ರಮವೂ ಮಾವ ಶ್ರೀಕೃಷ್ಣನ ಜಾಣ್ಮೆಯೂ ಹದವಾಗಿ ಬೆರೆತಿದ್ದವು. ತಾನು ಸುಭದ್ರೆಯ ಗರ್ಭದಲ್ಲಿರುವಾಗಲೇ, ಮಾವ ಆಕೆಗೆ ಹೇಳುತ್ತಿದ್ದ ಚಕ್ರವ್ಯೂಹದ ಕತೆಗಳನ್ನು ಕೇಳಿಸಿಕೊಂಡು, ಚಕ್ರವ್ಯೂಹ ಭೇದನವನ್ನೂ ಆತ ಕಲಿತನೆಂದರೆ ಎಷ್ಟು ಏಕಗ್ರಾಹಿಯಾಗಿರಬಹುದು ಎಂಬುದನ್ನು ಲೆಕ್ಕಹಾಕಿ. ಆದರೆ ಅದರಿಂದ ಹೊರಗೆ ಬರುವುದನ್ನು ತಿಳಿದಿರದಿದ್ದರಿಂದ ಆತ ಅಲ್ಲೇ ಬಲಿಯಾದ.
9. ಶಕುನಿ
ಇವನು ಮಹಾ ತಂತ್ರಗಾರ, ಕಪಟಿ, ಮೋಸಗಾರ. ಧರ್ಮರಾಯನನ್ನು ದ್ಯೂತಕ್ಕೆ ಆಹ್ವಾನಿಸಿ ಸೋಲಿಸುವ ಯೋಜನೆ ಇವನದೇ. ಇವನು ಹೇಳಿದಂತೆ ಜೂಜಿನ ದಾಳಗಳು ಬೀಳುತ್ತಿದ್ದವು. ಪಾಡವರನ್ನು ಅರಗಿನ ಮನೆಗೆ ಅಟ್ಟಲು, ಭೀಮನಿಗೆ ವಿಷ ಹಾಕಲು ಹೇಳಿಕೊಟ್ಟವನು ಇವನೇ. ಇದೆಲ್ಲದರಿಂದ ಕುರುಕುಲದಲ್ಲಿ ದ್ವೇಷ ಹೆಚ್ಚಿಸಿ, ಕುರುಕುಲವನ್ನು ನಾಶ ಮಾಡುವ ತನ್ನ ಹುನ್ನಾರವನ್ನು ಈತ ಕೊನೆಗೂ ಸಾಧಿಸಿದ.
ಸಂಭೋಗ ಸುಖ ಪುರುಷನಿಗಿಂತೂ ಮಹಿಳೆಗೇ ಹೆಚ್ಚಂತೆ! ಈ ಕತೆ ಕೇಳಿ. ...
10. ವಿದುರ
ಇವನು ಜಾಣನಾಗಿರುವುದರ ಜೊತೆಗೆ ಮಹಾಭಾರತದಲ್ಲಿ ಕಂಡುಬರುವ ಮಹಾ ವಿವೇಕಿಯೂ ಹೌದು. ಇವನು ಧೃತರಾಷ್ಟ್ರನ ಮಂತ್ರಿಯಾಗಿದ್ದರೂ, ಕೌರವನ ಹೀನ ಕೃತ್ಯಗಳನ್ನು ಸದಾ ಟೀಕಿಸಿ, ಅವನನ್ನು ಸರಿದಾರಿಗೆ ತರಲು ಯತ್ನಿಸುತ್ತಲೇ ಇದ್ದ. ಕೌರವರು ನಡೆಸಿದ ಅರಗಿನ ಮನೆಯ ಸಂಚನ್ನು ಧರ್ಮರಾಯನಿಗೆ ಸೂಕ್ಷ್ಮವಾಗಿ ತಿಳಿಸಿದವನು ವಿದುರನೇ. ದ್ರೌಪದಿಯ ವಸ್ತ್ರಾಪಹರಣವನ್ನೂ ಇವನು ವಿರೋಧಿಸಿದ್ದ.