Asianet Suvarna News Asianet Suvarna News

ಭೀಮನ ಮೊಮ್ಮಗನನ್ನು ಶ್ರೀಕೃಷ್ಣ ಕೊಂದ ಕತೆ ನಿಮಗೆ ಗೊತ್ತೇ?

ಶ್ರೀಕೃಷ್ಣ ಪಾಂಡವರ ಹಿತ ಕಾಪಾಡುವವನಾಗಿದ್ದ. ಹಾಗಿದ್ದರೂ ಪಾಂಡವರಲ್ಲಿ ಒಬ್ಬನಾದ ಭೀಮನ ಮೊಮ್ಮಗನನ್ನು ಶ್ರೀಕೃಷ್ಣನನ್ನು ಕೊಂದ ಕತೆ ನಿಮಗೆ ಗೊತ್ತೆ?

 

Why did Srikrishna killed Bhimas grandson in Mahabharata Hindu epic
Author
Bengaluru, First Published Jun 14, 2021, 7:09 PM IST

ಭೀಮ ಹಾಗೂ ಹಿಡಿಂಬೆಯರ ಪುತ್ರ ಘಟೋತ್ಕಚ. ಇವನಿಗೆ ಅಹಿಲವತಿ ಎಂಬ ಪತ್ನಿಯಲ್ಲಿ ಹುಟ್ಟಿದ ಮಗನ ಹೆಸರು ಬರ್ಬರೀಕ. ಇವನು ಅಪ್ರತಿಮ ಬಿಲ್ಗಾರ. ತಪಸ್ಸು ನಡೆಸಿ ಮಹಾದೇವನಿಂದ ವರಗಳನ್ನು ಪಡೆದಿದ್ದ. ಬಿಲ್ಗಾರಿಕೆಯಲ್ಲಿ ಕರ್ಣಾರ್ಜುನರೂ ಇವನನ್ನು ಸರಿಗಟ್ಟಲಾರರು ಅನ್ನುವಷ್ಟು ಹಬ್ಬಿತ್ತು ಬರ್ಬರೀಕನ ಖ್ಯಾತಿ. ಇಂಥಾ ಬರ್ಬರೀಕ ಕುರುಕ್ಷೇತ್ರ ಯುದ್ಧ ಘೋಷಣೆಯಾದಾಗ ತಾನೂ ಯುದ್ಧದಲ್ಲಿ ಪಾಲ್ಗೊಳ್ಳುವೆನೆಂದು ರಣಾಂಗಣಕ್ಕೆ ಬಂದ. 

ಆಗ ಕೃಷ್ಣ 'ಕುರುಕ್ಷೇತ್ರ ಯುದ್ಧ ಮುಗಿಯಲು ಸುಮಾರು ಎಷ್ಟು ದಿನಗಳು ಬೇಕಾಗಬಹುದು?' ಎಂದು ಕೌರವ – ಪಾಂಡವ ಪ್ರಮುಖರನ್ನು ಕೇಳುತ್ತಾನೆ. ಇದಕ್ಕೆ ಮಹಾರಥಿಗಳು ತಮಗೆ ತೋಚಿದಷ್ಟು ದಿನಗಳನ್ನು ಹೇಳುತ್ತಾರೆ. ಆದರೆ ಬರ್ಬರೀಕ, ''ಕುರುಕ್ಷೇತ ಯುದ್ಧ ಮುಗಿಸಲು ಕೆಲವು ನಿಮಿಷಗಳು ಸಾಕು” ಅಂದುಬಿಡುತ್ತಾನೆ. ಕೃಷ್ಣ ಆಶ್ಚರ್ಯದಿಂದ, ಅದು ಹೇಗೆ ಎಂದು ಪ್ರಶ್ನಿಸಿದ.
 

Why did Srikrishna killed Bhimas grandson in Mahabharata Hindu epic


ಇದಕ್ಕೆ ಉತ್ತರವಾಗಿ, “ಕೃಷ್ಣ ಪರಮಾತ್ಮ, ನನಗೆ ಪರಶಿವನ ಅನುಗ್ರಹದಿಂದ ಅದ್ಭುತವಾದ ಮೂರು ಬಾಣಗಳು ದೊರಕಿವೆ. ಈ ಮೂರು ಬಾಣಗಳನ್ನು ಎಷ್ಟು ಬಾರಿಯಾದರೂ ಉಪಯೋಗಿಸಬಹುದು. ಒಮ್ಮೆ ಬಿಟ್ಟ ಬಾಣ, ತನ್ನ ಗುರಿಯನ್ನುತಲುಪಿ, ಕೆಲಸವನ್ನು ಮುಗಿಸಿ, ಪುನಃ ಅಗ್ನಿ ದೇವತೆಯಿಂದ ಕೊಡಲ್ಪಟ್ಟಿರುವ ನನ್ನ ಬತ್ತಳಿಕೆಗೆ ಬಂದು ಸೇರುತ್ತದೆ. ಈ ಬಾಣಗಳ ವಿಶೇಷತೆ ಹೇಳುತ್ತೇನೆ ಕೇಳು. ಮೊದಲನೆಯ ಬಾಣವು, ನಾನು ನನ್ನ ಸಂಕಲ್ಪಕ್ಕೆ ಅನುಗುಣವಾಗಿ ಯಾರ ಮೇಲೆ ಪ್ರಯೋಗವಾಗಬೇಕೆಂದು ಗುರುತಿಸುತ್ತದೆ. ಎರಡನೆಯ ಬಾಣವು, ಶತ್ರು ಪಾಳಯದಲ್ಲಿ ನಾನು ಯಾರನ್ನು ನಾಶ ಮಾಡಲು ಇಚ್ಛಿಸುವುದಿಲ್ಲವೋ ಅವುಗಳನ್ನು ಗುರುತು ಮಾಡುತ್ತದೆ. ಮತ್ತು ಮೂರನೆ ಬಾಣವು ಮೊದಲನೆಯ ಬಾಣ ಗುರುತು ಮಾಡಿದ ವಸ್ತು, ವ್ಯಕ್ತಿಗಳನ್ನು ಒಂದೇ ಏಟಿಗೆ ಕ್ಷಣಾರ್ಧದಲ್ಲಿ ನಾಶಮಾಡುತ್ತದೆ. ಜೊತೆಗೆ ಎರಡನೆಯ ಬಾಣ ಗುರುತು ಮಾಡಿದ ವಸ್ತು, ವ್ಯಕ್ತಿಗಳಿಗೆ ಯಾವುದೇ ತೊಂದರೆಯಾಗದಂತೆ ರಕ್ಷಿಸುತ್ತದೆ. ಈ ಎಲ್ಲ ಕ್ರಿಯೆಯಗಳು ಕೇವಲ ಹಲವು ನಿಮಿಷಗಳಲ್ಲಿ ನಡೆದುಹೋಗುವುದು. ಆದ್ದರಿಂದ ನನ್ನ ಉತ್ತರ ಸರಿಯಾಗಿದೆ” ಅನ್ನುತ್ತಾನೆ ಬರ್ಬರೀಕ.

ಶನಿವಾರ ಹುಟ್ಟಿದವರಿಗೆ ಬದುಕಿಡೀ ಕಷ್ಟ ಪಡೋದು ತಪ್ಪಿದ್ದಲ್ಲ! ...

ಶ್ರೀಕೃಷ್ಣನಿಗೆ ಅವನನ್ನು ಪರೀಕ್ಷಿಸುವ ಮನಸ್ಸಾಗುತ್ತದೆ. 'ಹಾಗಾದರೆ, ಈ ಆಲದ ಮರದಲ್ಲಿರುವ ಎಲ್ಲ ಎಲೆಗಳನ್ನು ನಿನ್ನ ಬಾಣದಿಂದ ಗುರುತಿಸಿ, ನಂತರ ನಾಶ ಮಾಡು ನೋಡೋಣ?' ಎಂದು ಸವಾಲು ಹಾಕುತ್ತಾನೆ. ಅದರಂತೆ ಬರ್ಬರೀಕ ಮರದ ಎಲೆಗಳನ್ನು ಗುರುತು ಮಾಡಿ ಬಾಣ ಹೂಡುತ್ತಾನೆ. ಕೃಷ್ಣ ಒಂದು ಎಲೆಯನ್ನು ತನ್ನ ಪಾದದಡಿ ಮುಚ್ಚಿಟ್ಟುಕೊಂಡು ಬಿಡುತ್ತಾನೆ. ಬರ್ಬರೀಕ ಬಿಟ್ಟ ಬಾಣ ಮರದ ಎಲೆಗಳನ್ನೆಲ್ಲ ಸುಟ್ಟು, ಅನಂತರ ಕೃಷ್ಣನ ಪಾದದಡಿ ಬರುತ್ತದೆ. ಕೃಷ್ಣ ಬೆರಗಿನಿಂದ ಪಾದವೆತ್ತಿ ಎಲೆಯನ್ನು ತಲುಪಲು ಅವಕಾಶ ನೀಡುತ್ತಾನೆ. ಬಾಣ ಅದನ್ನೂ ಸುಟ್ಟು ಹಾಕುತ್ತದೆ. ಕೃಷ್ಣನಿಗೆ ಬರ್ಬರಿಕನ ಸಾಮರ್ಥ್ಯ ಅರಿವಾಗುತ್ತದೆ. 

ಆದರೆ ಇಂಥಾ ಪರಾಕ್ರಮಿ ಯಾರ ಬಣದಲ್ಲಿ ಯುದ್ಧ ಮಾಡಬಹುದು ಎಂದು ಯೋಚಿಸಿ ಬರ್ಬರೀಕನನ್ನೇ ಕೇಳುತ್ತಾನೆ. ಅದಕ್ಕೆ ಉತ್ತರವಾಗಿ ಬರ್ಬರೀಕ, “ನಾನು ನನ್ನ ತಾಯಿ, ಹಾಗೂ ನನ್ನ ಗುರುಗಳಿಗೆ ನೀಡಿದ ವಾಗ್ದಾನದಂತೆ, ಯುದ್ಧದಲ್ಲಿ ಯಾವ ಸೈನ್ಯವು ದುರ್ಬಲವೋ ಅವರ ಜೊತೆಗೂಡಿ ಯುದ್ಧ ಮಾಡುತ್ತೇನೆ. ಬಲಿಷ್ಠ ಸೈನ್ಯದ ಪರವಹಿಸುವುದಿಲ್ಲ” ಅನ್ನುತ್ತಾನೆ. ಸಂಖ್ಯೆಯಲ್ಲಿ ದೊಡ್ಡದಿದ್ದರೂ ಕೌರವರ ಸೇನೆಯೇ ದುರ್ಬಲ ಸೇನೆ. ಬರ್ಬರೀಕ ಕೌರವರ ಪಾಳಯಕ್ಕೆ ಹೋದರೆ ಪಾಂಡವರ ನಾಶ ಖಚಿತ ಎಂದು ಯೋಚಿಸಿದ ಕೃಷ್ಣ ಇದಕ್ಕೇನಾದರೂ ಮಾಡಬೇಕು ಎಂದು ಯೋಚಿಸಿದ. “ಬರ್ಬರಿಕನೇ, ನಿನ್ನ ಮಾತೃಭಕ್ತಿ, ಗುರ ಭಕ್ತಿ, ಪರಾಕ್ರಮಗಳನ್ನು ಮೆಚ್ಚಿದ್ದೇನೆ. ಯಾವುದಾದರೂ ವರವನ್ನು ಕೇಳು ಅನುಗ್ರಹಿಸುತ್ತೇನೆ'' ಎಂದು ಹೇಳುತ್ತಾನೆ.

ಮನೆ ಸುತ್ತಮುತ್ತ ಈ ಮರಗಳಿದ್ದರೆ ದುರದೃಷ್ಟ! ...

ಬರ್ಬರೀಕ, 'ಭಗವಂತ! ನನಗೆ ಯಾವುದೇ ಅಪೇಕ್ಷೆಗಳಿಲ್ಲ. ನನ್ನಿಂದ ಸಮಾಜಕ್ಕೆ ಉಪಕಾರವಾಗುವ ಯಾವ ಕೆಲಸವಾದರೂ ನೀಡು, ನಡೆಸುತ್ತೇನೆ' ಅನ್ನುತ್ತಾನೆ. ತಡಮಾಡದೆ ಶ್ರೀಕೃಷ್ಣ, 'ಹಾಗಾದರೆ ನೀನು ನಿನ್ನ ಶಿರಸ್ಸನ್ನು ಕತ್ತರಿಸಿ ಕೊಡಬಲ್ಲೆಯಾ?' ಎಂದು ಕೇಳಿಬಿಡುತ್ತಾನೆ. ಬರ್ಬರಿಕ ಯಾವುದೇ ಆತಂಕವಿಲ್ಲದೆ “ನನ್ನ ಶಿರಚ್ಛೇದನದಿಂದ ಧರ್ಮಕ್ಕೆ ಜಯ ಸಿಗುವುದೇ ಆದಲ್ಲಿ ನಾನು ಸಿದ್ಧ. ಆದರೆ ನನ್ನದೊಂದು ಮನವಿ. ನಾನು, ಈ ಕುರುಕ್ಷೇತ್ರ ಯುದ್ಧವನ್ನು ಸಂಪೂರ್ಣವಾಗಿ ನೋಡಲು ಅವಕಾಶ ಕಲ್ಪಿಸು' ಅನ್ನುತ್ತಾನೆ. 'ತಥಾಸ್ತು' ಎಂದು ಹರಸಿದ ಶ್ರೀಕೃಷ್ಣ, ತನ್ನ ಸುದರ್ಶನ ಚಕ್ರದಿಂದ ಬರ್ಬರೀಕನ ಶಿರಚ್ಛೇದ ಮಾಡುತ್ತಾನೆ. ಆ ಶಿರವು ಕುರುಕ್ಷೇತ್ರ ರಣಾಂಗಣದ ಬಳಿ ಎತ್ತರದ ಗುಡ್ಡೆಯ ಮೇಲಿದ್ದು, 18 ದಿನಗಳ ಕಾಲ ಅಲ್ಲಿಂದಲೇ ಯುದ್ಧವನ್ನು ವೀಕ್ಷಿಸುತ್ತದೆ. 

ಯುದ್ಧ ಮುಗಿದ ನಂತರ ಶ್ರೀಕೃಷ್ಣನ ಸಹಿತ ಪಾಂಡವರು ಬಂದು, ಯುದ್ಧವನ್ನು ಗೆದ್ದವರು ಯಾರು ಎಂದು ಬರ್ಬರಿಕನಲ್ಲಿ ಕೇಳುತ್ತಾರೆ. ಆಗ ಆ ತಲೆ, ಯುದ್ಧವನ್ನು ಗೆದ್ದವನು ಬೀಮನೂ ಅಲ್ಲ, ಅರ್ಜುನನೂ ಅಲ್ಲ, ಸುದರ್ಶನ ಚಕ್ರ ಗರಗರನೆ ತಿರುಗುತ್ತಾ ಎಲ್ಲರನ್ನೂ ನಾಶ ಮಾಡುವುದು ಕಂಡಿತು ಎನ್ನುತ್ತಾನೆ. ನಂತರ ಶ್ರೀಕೃಷ್ಣನ ಅನುಗ್ರಹದಿಂದ ಆತನಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ. 

ಉತ್ತರ ಭಾರತದಲ್ಲಿ ಘಟೋತ್ಕಚನಂತೆ ಬರ್ಬರೀಕನೂ ಪೂಜೆಗೊಳ್ಳುತ್ತಾನೆ. ಇವನನ್ನು ‘ಬರ್ಬರಿ' ಎಂದೂ ಕರೆಯಲಾಗುತ್ತದೆ. ಹಿಮಾಚಲ ಪ್ರದೇಶದಲ್ಲಿ ಬರ್ಬರೀಕನನ್ನು 'ಕಮ್ರುನಾಗ್‌' ಮತ್ತು 'ರತನ್‌ ಯಕ್ಷ' ಎಂದು ಪೂಜಿಸಲಾಗುತ್ತದೆ.

ಈ ಜನ್ಮರಾಶಿಯ ಹೆಣ್ಣುಮಕ್ಕಳು ಪ್ರಾಯಕ್ಕೆ ಬರುವಾಗ ಎಚ್ಚರವಾಗಿರಿ ...
 

Follow Us:
Download App:
  • android
  • ios