ಬುಡಕಟ್ಟು ಜನರ ಕುಂಡೆ ಹಬ್ಬ: ಶುಶ್ರೂಷಕಿ ವೇಷ ಧರಿಸಿ ನರ್ತಿಸಿದ ಯುವಕರು

By Ravi JanekalFirst Published May 25, 2023, 1:41 PM IST
Highlights

ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿರುವ ನಾಗರಹೊಳೆ ಹಾಡಿಗಳಲ್ಲಿ ವಾಸವಿರುವ ಬುಡಕಟ್ಟು ಜನಾಂಗ ವಿಶೇಷವಾಗಿ ಕುಂಡೆ ಹಬ್ಬ ಆಚರಿಸಲಾಗುತ್ತದೆ. ಆದಿವಾಸಿಗಳು ತಮ್ಮ ಆರಾಧ್ಯ ದೇವರಾದ ಭದ್ರಕಾಳಿ ಅಯ್ಯಪ್ಪ ಸ್ವಾಮಿಯ ಹೆಸರಿನಲ್ಲಿ ಹಬ್ಬ ಆಚರಿಸಸುತ್ತಾರೆ.

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಮೇ.25) : ಶುಶ್ರೂಷಕಿ ವೇಷಧರಿಸಿ ಕೊಡೆ ಹಿಡಿದು ನಡೆಯುವ ಆ ಟಾಕು ಟೀಕೇನು.!? ರಾಕ್ಷಸರ ವೇಷಧರಿಸಿ ನೆರೆದಿದ್ದವರ ಎದೆ ನಡುಗಿಸುವಂತ ಅವರ ನೋಟವೇನು. ಅರ್ಧ ವಯಸ್ಸಾದರೂ ಶಾಲಾ ಮಕ್ಕಳಾಗಿ ನಟಿಸಿದ ವ್ಯಕ್ತಿಗಳು. ಇಂತಹ ಎಲ್ಲಾ ಚಿತ್ರವಿಚಿತ್ರ ವೇಷಧಾರಿಗಳು ಒಟ್ಟೊಟ್ಟಿಗೆ ಕಾಣಿಸಿದ್ದು ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪಲು ಸಮೀಪದ ದೇವರಪುರದಲ್ಲಿ ಪ್ರತಿವರ್ಷ ನಡೆಯುವ ಆದಿವಾಸಿಗಳ ಬೇಡು ಹಬ್ಬ( ಕುಂಡೆ ಹಬ್ಬ ) ಬುಧವಾರದಿಂದಲೇ ಆರಂಭಗೊಂಡಿದೆ. 

ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿರುವ ನಾಗರಹೊಳೆ(Nagaraholi) ಹಾಡಿಗಳಲ್ಲಿ ವಾಸವಿರುವ ಬುಡಕಟ್ಟು ಜನಾಂಗದ ವಿಶೇಷ ಹಬ್ಬವೇ ಕುಂಡೆ ಹಬ್ಬ(Kunde habba). ಆದಿವಾಸಿಗಳು ತಮ್ಮ ಆರಾಧ್ಯ ದೇವರಾದ ಭದ್ರಕಾಳಿ ಅಯ್ಯಪ್ಪ ಸ್ವಾಮಿಯ ಹೆಸರಿನಲ್ಲಿ ನಡೆಯುವ ಈ ಹಬ್ಬಕ್ಕೆ ಪಿರಿಯಾಪಟ್ಟಣ ತಾಲೂಕಿನ ಕಾಡಂಚಿನ ವ್ಯಾಪ್ತಿಯಲ್ಲಿರುವ 34 ಕ್ಕೂ ಹೆಚ್ಚು ಹಾಡಿಯ ಗಿರಿಜನರು, ನಾಗರಹೊಳೆ ಉದ್ಯಾನವನದ ಅನೇಕ ಹಾಡಿಗಳ ಬುಡಕಟ್ಟು ಜನರು, ಅದರೊಂದಿಗೆ ಇತ್ತೀಚೆಗೆ ದೇವರಪುರ ಆಸುಪಾಸಿನಲ್ಲಿ ಇರುವ ವಿವಿಧ ಗ್ರಾಮಗಳ ಇತರ ಜನಾಂಗದವರು ಕೂಡ ಹರಕೆಯನ್ನು ಹೊತ್ತು, ಕಾಡಿನಲ್ಲಿ ಸಿಗುವ ಸೊಪ್ಪು, ಹರಿದ ಹಳೆ ಬಟ್ಟೆ, ಗೋಣಿಚೀಲಗಳು, ಹೀಗೆ ಕೈಗೆ ಸಿಕ್ಕುವ ವಿವಿಧ ವಸ್ತುಗಳಿಂದ ವಿವಿಧ ವೇಷಗಳನ್ನು ತೊಟ್ಟು, ಒಣಗಿದ ಸೋರೆಕಾಯಿ ಬುರುಡೆ ಪ್ಲಾಸ್ಟಿಕ್ ಡಬ್ಬ ಹಾಗೂ ಟಿನ್ನುಗಳನ್ನೇ ತಾಳಮೇಳ ಮಾಡಿಕೊಂಡು ಡೊಳ್ಳಿನ ರೀತಿಯಲ್ಲಿ ಬಡಿಯುತ್ತಾ ಆಕರ್ಷಕವಾಗಿ ಶಬ್ಧ ಹೊರಡಿಸುತ್ತಾ ಆ ಶಬ್ಧಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ, ಸಿಕ್ಕ ಸಿಕ್ಕಿದವರನ್ನು ಕೆಟ್ಟ ಪದಗಳಿಂದ ನಿಂದಿಸಿ ಭಿಕ್ಷಾಟನೆ ಮಾಡುತ್ತಾ ಹಣ ಹಾಗೂ ದವಸ ಧಾನ್ಯಗಳನ್ನು ಸಂಗ್ರಹಿಸಿದರು. 

ಕೊಡಗು: ಬೈಗುಳದ ಹಬ್ಬ, ಕಾಡಿನ ಮಕ್ಕಳು ಆಚರಣೆ ಮಾಡುವ ವಿಶಿಷ್ಟ ಹಬ್ಬ

 

ನಂತರ ದೇವಾಲಯದಲ್ಲಿ ಇಂತಿಷ್ಟು ಸಂಗ್ರಹಿಸಿದ ಹಣವನ್ನು ಭಂಡಾರಕ್ಕೆ ಸಲ್ಲಿಸುವುದು ವಾಡಿಕೆ. ಗುರುವಾರ ಮಧ್ಯಾಹ್ನ 3 ಗಂಟೆಯ ನಂತರ ದೇವರಪುರದ ಕೀರಾತೇಶ್ವರ, ಭದ್ರಕಾಳಿ ದೇವಾಲಯದ ಮುಂಭಾಗಕ್ಕೆ  ಆಗಮಿಸುವ ವಿವಿಧ ವೇಷಧಾರಿಗಳು ಅಲ್ಲಿ ಕುಣಿಯುತ್ತ ನಂತರ ದೇವರಿಗೆ ಭಂಡಾರವನ್ನ ಹಾಕಿ ತೀರ್ಥ ಪ್ರಸಾದವನ್ನು ಸ್ವೀಕರಿಸಿ ತೆರಳುತ್ತಾರೆ. 

ಈ ಬೇಡು ಹಬ್ಬವು ವಿಶೇಷವಾದ ಆಚಾರ ವಿಚಾರ ವೇಷ ಭೂಷಣಗಳಿಂದ ಕೂಡಿದ್ದು ಇದನ್ನು ಬೈಗುಳದ ಹಬ್ಬವೆಂದೇ ಕರೆಯುತ್ತಾರೆ. ಜಿಲ್ಲೆಯ ವಿವಿಧಡಗಳಿಂದ ಮತ್ತು ರಾಜ್ಯದ ಹಲವು ಭಾಗಗಳಿಂದ ಇದನ್ನು ವೀಕ್ಷಿಸಲು ಅನೇಕರು ಬರುತ್ತಾರೆ. ಈ ಹಿಂದೆ ಮೈಸೂರು, ಕೇರಳ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳನ್ನು ಅಡ್ಡಗಟ್ಟಿ ಅವರಿಂದ ಬಲವಂತವಾಗಿ ಹಣವನ್ನು ವಸೂಲಿ ಮಾಡುತ್ತಾ ಕೆಲವರು ಹಣ ನೀಡದಿದ್ದಾಗ ದಾಂಧಲೇ ಮಾಡುತ್ತಿದ್ದನ್ನು ಮನ ಗಂಡು ಕಳೆದ ಮೂರು ವರ್ಷದಿಂದ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. 

 ಶಿಕ್ಷಣದಿಂದ ವಂಚಿತರಾಗುತ್ತಿರುವ ಆದಿವಾಸಿ ಮಕ್ಕಳು

ಹೀಗಾಗಿ ಇದೀಗ ಒಂದಿಷ್ಟು ಶಾಂತಿಯುತವಾಗಿ ಈ ಹಬ್ಬ ಜರುಗುತ್ತದೆ. ಇದಕ್ಕಾಗಿ ಜಿಲ್ಲಾಡಳಿತ ಗೋಣಿಕೊಪ್ಪಲಿನ 10 ಕಿ.ಮೀ ಸುತ್ತ ಮುತ್ತಿಲ್ಲಿನ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ಕೂಡ ನಿನ್ನೆ ರಾತ್ರಿಯಿಂದಲೇ ನಿಷೇಧಿಸಿದೆ. ಒಟ್ಟಿನಲ್ಲಿ ಕುಂಡೆ ಹಬ್ಬ ನೋಡುಗರಿಗೆ  ಮನೋರಂಜನೆಯಾದರೆ. ವೇಷಧರಿಸಿದವರಿಗೆ ಹರಕೆ ತೀರಿಸಿದ ತೃಪ್ತಿ ಇರುವುದಂತು ಸತ್ಯ.

click me!