ಶನಿ ಸಿಂಗ್ನಾಪುರದ ದೇವಸ್ಥಾನದಲ್ಲಿ ಬೆಕ್ಕೊಂದು ಶನೀಶ್ವರನ ವಿಗ್ರಹಕ್ಕೆ ನಿರಂತರ ಪ್ರದಕ್ಷಿಣೆ ಹಾಕುತ್ತಿರುವ ವಿಡಿಯೋ ವೈರಲ್ ಆಗಿದೆ. ಬೆಕ್ಕಿನ ಈ ವಿಚಿತ್ರ ವರ್ತನೆ ಭಕ್ತರಲ್ಲಿ ಅಚ್ಚರಿ ಮೂಡಿಸಿದೆ.
ಸಾಮಾನ್ಯವಾಗಿ ಹಸುಗಳು ನಾಯಿಗಳು ದೇಗುಲದಲ್ಲಿ ಪ್ರದಕ್ಷಿಣೆ ಹಾಕುವುದನ್ನು ನೀವು ನೋಡಿರಬಹುದು. ಪೂಜೆಯ ಸಮಕ್ಕೆ ಸರಿಯಾಗಿ ಹಸುವೊಂದು ದೇಗುಲಕ್ಕೆ ಬಂದು ಪ್ರದಕ್ಷಿಣೆ ಹಾಕಿದಂತಹ ವೀಡಿಯೋ ಕೂಡ ಈ ಹಿಂದೆ ಸಾಕಷ್ಟು ವೈರಲ್ ಆಗಿತ್ತು. ಆದರೆ ಈಗ ಬೆಕ್ಕೊಂದು ದೇಗುಲದಲ್ಲಿ ನಿರಂತರ ಪ್ರದಕ್ಷಿಣೆ ಹಾಕುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಸ್ತಿಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಇಂತಹ ಘಟನೆ ನಡೆದಿರುವುದು ಮಹಾರಾಷ್ಟ್ರ ಶನಿಶ್ಚರ ದೇವರ ಪ್ರಖ್ಯಾತ ತೀರ್ಥಕ್ಷೇತ್ರವೆನಿಸಿದ ಶನಿ ಸಿಂಗ್ನಾಪುರದಲ್ಲಿ.
ವೀಡಿಯೋದಲ್ಲಿ ಕಾಣಿಸುವಂತೆ ಶನಿ ಸಿಂಗ್ನಾಪುರ ದೇಗುಲದಲ್ಲಿ ಪ್ರತಿಮೆಗೆ ಹೂವಿನ ಹಾರವನ್ನು ಹಾಕಿ ಮುಂದೆ ದೀಪಗಳನ್ನು ಹಚ್ಚಲಾಗಿದೆ. ಅಲ್ಲಿಗೆ ಬರುವ ಬೆಕ್ಕೊಂದು ಕೆಲ ಕಾಲ ಅತ್ತಿತ್ತ ನೋಡಿ ಈ ಪ್ರತಿಮೆಗೆ ಒಂದಾದ ಮೇಲೊಂದರಂತೆ ಸುತ್ತು ಬರುತ್ತಿದೆ. ಬೆಕ್ಕು ಐದು ಸುತ್ತ ಬರುತ್ತಿದ್ದಂತೆ ಅಲ್ಲಿಗೆ ಮಹಿಳೆಯೊಬ್ಬರು ಆಗಮಿಸಿದ್ದು, ಆ ಪ್ರತಿಮೆ ಮುಂದೆ ಕೈಮುಗಿದು ಕಣ್ಮುಚ್ಚಿ ಪ್ರಾರ್ಥಿಸುತ್ತಾ ಕುಳಿತಿದ್ದಾರೆ. ಆದರೂ ಬೆಕ್ಕು ಗಲಿಬಿಲಿಗೊಳಗಾಗದೇ 10ಕ್ಕೂ ಹೆಚ್ಚು ಸುತ್ತು ಪ್ರದಕ್ಷಿಣೆ ಹಾಕಿದೆ. ಈ ವೇಳೆ ಮತ್ತೊಬ್ಬ ಮಹಿಳೆ ಹಾಗೂ ಪುರುಷ ಕೂಡ ಅಲ್ಲಿಗೆ ಆಗಮಿಸಿ ದೇವರ ಮುಂದೆ ನಮಸ್ಕಾರ ಹಾಕುವುದನ್ನು ಕಾಣಬಹುದಾಗಿದೆ. ಆದರೆ ಈ ಬೆಕ್ಕಿನ ಈ ವಿಚಿತ್ರ ವರ್ತನೆ ಅಲ್ಲಿದ್ದವರನ್ನು ಅಚ್ಚರಿಗೀಡು ಮಾಡಿದೆ.
ಬೆಕ್ಕು ಶನೀಶ್ವರನಿಗೆ ಪ್ರದಕ್ಷಿಣೆ ಹಾಕುತ್ತಿರುವ ಈ ದೃಶ್ಯ ಅಲ್ಲಿನ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ ಆದಂತಿದೆ. ವೀಡಿಯೋ ನೋಡಿದ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬೆಕ್ಕುಗಳು ದೇವತೆಗಳು ಎಂದು ವೀಡಿಯೋ ನೋಡಿದ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಬೆಕ್ಕಿಗೆ ತೊಂದರೆ ನೀಡಬೇಡಿ ಎಂದು ಮತ್ತೆ ಕೆಲವರು ಪ್ರತಿಕ್ರಿಯಿಸಿದ್ದಾರೆ. mewsinsta ಎಂಬ ಇನ್ಸ್ಟಾ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ಇನ್ನು ಈ ದೇಗುಲದ ಬಗ್ಗೆ ಹೇಳುವುದಾದರೆ ಶನಿ ಸಿಗ್ನಾಪುರ ದೇಗುಲವೂ ದೇಶದಲ್ಲಿಯೇ ಫೇಮಸ್ ಆಗಿರುವ ಶನಿಶ್ಚರನ ಕ್ಷೇತ್ರವಾಗಿದೆ. ಇಲ್ಲಿಗೆ ಭೇಟಿ ನೀಡಿದರೆ ಶನಿ ದೋಷ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಮಹಾರಾಷ್ಟ್ರದ ಶಿರ್ಡಿಗೆ ಸಮೀಪದಲ್ಲೇ ಇರುವ ಈ ತೀರ್ಥಕ್ಷೇತ್ರಕ್ಕೆ ಪ್ರತಿದಿನವೂ ಸಾವಿರಾರು ಜನ ಭೇಟಿ ನೀಡುತ್ತಾರೆ.
ಹಾಗೆಯೇ ಈ ದೇವಸ್ಥಾನ ಇರುವ ಕ್ಷೇತ್ರವೂ ಅನೇಕ ಪವಾಡಗಳಿಗೆ ಹೆಸರಾಗಿದೆ. ಇಲ್ಲಿನ ಮನೆಗಳಿಗೆ ಬಾಗಿಲುಗಳೇ ಇಲ್ಲ, ಆದರೂ ಇಲ್ಲಿ ಯಾವುದೇ ಕಳ್ಳತನವಾಗುವುದಿಲ್ಲ, ಒಂದು ವೇಳೆ ಕಳ್ಳತನಕ್ಕೆ ಯತ್ನಿಸಿದರೆ ಅಂತಹವರ ಪ್ರಯತ್ನವೂ ವಿಫಲವಾಗುತ್ತದೆ. ಹಾಗೂ ಯಾವುದೇ ಯತ್ನಿಸಿದವರಿಗೆ ಶಿಕ್ಷೆಯಾಗುತ್ತದೆ. ಹಾಗೆಯೇ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಕಳ್ಳತನ ಅಥವಾ ಹಿಂಸಾಚಾರದ ಪ್ರಕರಣಗಳು ದಾಖಲಾದ ಬಗ್ಗೆ ವರದಿ ಆಗಿಲ್ಲ, ಇಷ್ಟೊಂದು ಧಾರ್ಮಿಕ ಹಿನ್ನೆಲೆ ಇರುವ ಶನಿ ಸಿಂಗ್ನಾಪುರ ದೇಗುದಲ್ಲಿ ಈಗ ಈ ರೀತಿ ವಿಶೇಷ ನಡೆದಿದ್ದು, ಭಕ್ತರನ್ನು ಅಚ್ಚರಿಗೊಳ್ಳುವಂತೆ ಮಾಡಿದೆ. ಹಿಂದೂ ಧರ್ಮಗ್ರಂಥಗಳಲ್ಲಿ ಪ್ರತಿ ಪ್ರಾಣಿಗೂ ಪೂಜನೀಯ ಸ್ಥಾನವಿದೆ. ಚರಾಚರಗಳಲ್ಲಿ ಭಗವಂತನಿದ್ದಾನೆ ಎಂಬ ನಂಬಿಕೆಯಂತೆ ಪ್ರಾಣಿಗಳು ಕೂಡ ಭಗವಂತನ ಸ್ಮರಣೆ ಮಾಡುತ್ತವೆ ಎಂಬುದಕ್ಕೆ ಇಂತಹ ಕೆಲವೊಂದು ಘಟನೆಗಳು ಸಾಕ್ಷಿಯಾಗಿವೆ.
ಬೆಕ್ಕು ಪ್ರದಕ್ಷಿಣೆ ಹಾಕುತ್ತಿರುವ ವೀಡಿಯೋವನ್ನು ನೀವು ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ