Vidur Niti: ಈ ಮೂವರಿಗೆ ಹಣ ನೀಡಿದ್ರೆ ಅದೆಂದೂ ಹಿಂದೆ ಬರೋಲ್ಲ!

By Suvarna NewsFirst Published Sep 14, 2022, 5:24 PM IST
Highlights

ಯಾರಿಗೆ ಎಂದಿಗೂ ಹಣ ನೀಡಬಾರದು ಎಂಬುದನ್ನು ಮಹಾತ್ಮ ವಿದುರರು ತಮ್ಮ ವಿದುರ ನೀತಿಯಲ್ಲಿ ತಿಳಿಸಿದ್ದಾರೆ. ಹಾಗೊಂದು ವೇಳೆ ಇವರಿಗೆ ಹಣ ನೀಡಿದರೆ ಅದೆಂದೂ ಹಿಂದೆ ಬರುವುದಿಲ್ಲ. 

ಮಹಾತ್ಮಾ ವಿದುರ ಮಹಾಭಾರತ ಕಾಲದ ಪ್ರಸಿದ್ಧ ವಿದ್ವಾಂಸ. ಅವರು ತಮ್ಮ ವಿವೇಕಯುತ ಮತ್ತು ತೀಕ್ಷ್ಣವಾದ ಬುದ್ಧಿವಂತಿಕೆ ಮತ್ತು ದೂರದೃಷ್ಟಿಗೆ ಹೆಸರುವಾಸಿಯಾಗಿದ್ದರು. ಧೃತರಾಷ್ಟ್ರ ಮತ್ತು ಪಾಂಡುವಿನಂತೆಯೇ, ಮಹಾತ್ಮ ವಿದುರನು ಸಹ ಋಷಿ ವೇದವ್ಯಾಸನ ಮಗ. ಧೃತರಾಷ್ಟ್ರ ಮತ್ತು ಪಾಂಡು ರಾಜಕುಮಾರಿಯ ಗರ್ಭದಿಂದ ಜನಿಸಿದರೆ ವಿದುರನು ದಾಸಿಯ ಗರ್ಭದಿಂದ ಜನಿಸಿದನು. ವಿದುರನು ರಾಜತ್ವದ ಎಲ್ಲಾ ಗುಣಗಳನ್ನು ಹೊಂದಿದ್ದರೂ, ಸೇವಕಿಯ ಮಗನಾದ ಕಾರಣ ಅವನನ್ನು ರಾಜನನ್ನಾಗಿ ಮಾಡಲಿಲ್ಲ. ಅವರು ಹಸ್ತಿನಾಪುರದ ಪ್ರಧಾನ ಕಾರ್ಯದರ್ಶಿಯಾದರು.  ಮಹಾರಾಜ ಧೃತರಾಷ್ಟ್ರನ ಕಿರಿಯ ಸಹೋದರನಾದ ವಿದುರನು ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಬ್ಬನಾಗಿದ್ದರು. ಮಹಾರಾಜ ಧೃತರಾಷ್ಟ್ರನ ಬಳಿ ಹಣ, ಮನೆ, ರಾಜಕೀಯ ಹೀಗೆ ಎಲ್ಲ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಏಕೆಂದರೆ, ಮಹಾರಾಜ ಧೃತರಾಷ್ಟ್ರನು ತನ್ನ ಕಾಲದಲ್ಲಿ ಎಲ್ಲಾ ವಿಷಯಗಳ ಬಗ್ಗೆ ಮಹಾತ್ಮ ವಿದುರನ ಅಭಿಪ್ರಾಯವನ್ನು ತೆಗೆದುಕೊಳ್ಳುತ್ತಿದ್ದನು., ಈ ವಿಷಯಗಳ ಸಂಕಲನವನ್ನು ವಿದುರ ನೀತಿ ಎಂದು ಕರೆಯಲಾಗುತ್ತದೆ. ಅವರ ಈ ಚಿಂತನೆಗಳು ಆ ಕಾಲದಲ್ಲೆಷ್ಟು ಹೊಂದುತ್ತಿದ್ದವೋ ಈಗಿನ ಕಾಲದಲ್ಲೂ ಅಷ್ಟೇ ಹೊಂದುತ್ತವೆ. ಅಂಥ ದೂರದೃಷ್ಟಿಯ ಹಲವಾರು ಜೀವನ ಪಾಠಗಳನ್ನು ವಿದುರ ಹೇಳಿದ್ದಾರೆ. 

ಸಧ್ಯ ವಿದುರ ಹಣದ ವಿಷಯವಾಗಿ ಹೇಳಿರುವ ಮುತ್ತಿನಂತ ಮಾತುಗಳ ಬಗ್ಗೆ ತಿಳಿಯೋಣ. ವಿದುರರು ಹೇಳಿರುವಂತೆ ಮೂರು ರೀತಿಯ ಜನರಿಗೆ ಎಂದಿಗೂ ಹಣವನ್ನು ಸಾಲವೆಂದಾಗಲೀ, ದಾನವೆಂದಾಗಲೀ ನೀಡಬಾರದು. ಏಕೆಂದರೆ ಅವರಿಗೆ ಕೊಟ್ಟ ಹಣ ಒಳ್ಳೆಯ ರೀತಿಯಲ್ಲಿ ಉಪಯೋಗವೂ ಆಗುವುದಿಲ್ಲ, ಹಿಂತಿರುಗಿ ಬರುವುದೂ ಇಲ್ಲ. 

Vaastu tips: ಗಡಿಯಾರ ಈ ದಿಕ್ಕಿನಲ್ಲಿದ್ದರೆ ಒಳ್ಳೆಯದು!

ಈ ಮೂವರಿಗೆ ಸಾಲ ನೀಡಬೇಡಿ

ಸೋಮಾರಿ ವ್ಯಕ್ತಿ(lazy person): ವಿದುರ ನೀತಿ ಪ್ರಕಾರ, ಸೋಮಾರಿಯಾದ ವ್ಯಕ್ತಿಯು ಯಾವುದೇ ಕೆಲಸವನ್ನು ಮಾಡಲು ಬಯಸುವುದಿಲ್ಲ. ಅಂಥವರಿಗೆ ಎಂದಿಗೂ ಸಾಲದ ಹಣವನ್ನು ನೀಡಬಾರದು. ಸೋಮಾರಿಯಾದವನು ಸಿಕ್ಕ ಹಣವನ್ನು ಮಜವಾಗಿ ಉಡಾಯಿಸಿ ಮತ್ತೆ ತನ್ನ ಸೋಮಾರಿತನ ಮುಂದುವರಿಸುತ್ತಾನೆ. ಅವನಿಗೆ ಹಣ ನೀಡುವುದು ಮತ್ತಷ್ಟು ಸೋಮಾರಿಯಾಗಿರಲು ಪ್ರೇರೇಪಿಸಿದಂತಾಗುತ್ತದಷ್ಟೇ. ಹಾಗಾಗಿ ಇವರಿಗೆ ಮರೆತೂ ಸಾಲದ ರೂಪದಲ್ಲಿ ಹಣವನ್ನು ನೀಡಬಾರದು. ಅಂತಹ ಸೋಮಾರಿಗಳು ಯಾವುದೇ ಕೆಲಸ ಮಾಡುವುದಿಲ್ಲ ಮತ್ತು ಬದುಕಿಗಾಗಿ ಇತರರನ್ನು ಅವಲಂಬಿಸಿರುತ್ತಾರೆ. ಅಂದ ಮೇಲೆ ಅವರಿಗೆ ಕೊಟ್ಟ ಸಾಲ ಹಿಂದೆ ಬರುವುದು ದೂರದ ಮಾತೇ. 

ತಪ್ಪು ಕೆಲಸಗಳಲ್ಲಿ ತೊಡಗುವ ಜನರು(People who indulge in wrong deeds): ವಿದುರ ನೀತಿಯ ಪ್ರಕಾರ, ಹಣವನ್ನು ತಪ್ಪು ಕೆಲಸಗಳಿಗೆ ಬಳಸುವ ಅಂತಹ ಜನರಿಗೆ ಎಂದಿಗೂ ಸಾಲ ನೀಡಬಾರದು. ಅಂತಹ ಜನರಿಗೆ ಹಣವನ್ನು ನೀಡುವ ವಿಷಯ ಹೋಗಲಿ, ಅವರಿಂದ ಅಂತರ ಕಾಯ್ದುಕೊಳ್ಳಬೇಕು. ಅವರೊಂದಿಗೆ ಸಂಪರ್ಕದಲ್ಲಿರಬಾರದು. ಏಕೆಂದರೆ ಅವರೊಂದಿಗಿನ ಸಂಬಂಧವು ನಿಮ್ಮನ್ನು ಕೂಡಾ ತಪ್ಪು ದಾರಿಗೆ ಕರೆದೊಯ್ಯುತ್ತದೆ. ಅಂತಹವರಿಗೆ ಸಾಲ ನೀಡುವುದರಿಂದ ಪಾಪದಲ್ಲಿ ಪಾಲುದಾರರಾಗುವುದಲ್ಲದೆ ನಿಮ್ಮ ಪ್ರಾಣಕ್ಕೂ ಅಪಾಯ ಎದುರಾಗಬಹುದು. ನೈತಿಕತೆ ಇಲ್ಲದವರಿಗೆ ಹಣ ಕೊಟ್ಟರೆ ಅದು ಖಂಡಿತಾ ಸದ್ವಿನಿಯೋಗವಾಗುವುದಿಲ್ಲ. ಅಲ್ಲದೆ, ಹಿಂತಿರುಗಿ ಬರುವುದೂ ಇಲ್ಲ. 

ನಂಬಿಕೆಗೆ ಅರ್ಹರಲ್ಲದವರು(those who are not trustworthy): ವಿದುರ ನೀತಿ ಪ್ರಕಾರ ನಂಬಲು ಅರ್ಹರಲ್ಲದವರಿಗೆ ಸಾಲ ನೀಡಬಾರದು. ನಂಬಿಕೆಯಿಲ್ಲದವರಿಗೆ ಸಾಲ ಕೊಟ್ಟು ತೊಂದರೆ ಅನುಭವಿಸಬೇಕಾಗಬಹುದು. ನಂಬಿಕೆಯನ್ನೇ ಉಳಿಸಿಕೊಳ್ಳದವರು ಹಣವನ್ನು ಹಿಂತಿರುಗಿ ಕೊಡುವುದಾದರೂ ಹೇಗೆ? 

ನಿಮಗೆ ಎಷ್ಟು ಮದುವೆಯಾಗೋ ಯೋಗವಿದೆ? ನಿಮ್ಮ ಜಾತಕ ಏನನ್ನುತ್ತೆ?

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!