ವರ ಮಹಾಲಕ್ಷ್ಮಿ ವ್ರತ ಆಚರಣೆ; ಪೂಜಾ ವಿಧಿ ವಿಧಾನ ಹೀಗಿರುತ್ತೆ!

By Kannadaprabha NewsFirst Published Jul 31, 2020, 2:50 PM IST
Highlights

ವರ ನೀಡುವ ಮಹಾಲಕ್ಷ್ಮಿಯ ವ್ರತದ ದಿನವಿಂದು. ಈ ವ್ರತಾಚರಣೆಯ ವಿಧಾನಗಳನ್ನಿಲ್ಲಿ ವಿವರಿಸಲಾಗಿದೆ.

ಆರಂಭಿಕ ಹಂತ- ಸಿದ್ಧತೆ

ಇಡೀ ಮನೆಯನ್ನು ಸ್ವಚ್ಛಗೊಳಿಸಬೇಕು. ಶುದ್ಧಗೊಳಿಸಬೇಕು. ಶುದ್ಧಿ ಇರುವ ಕಡೆ ಮಹಾಲಕ್ಷ್ಮಿ ಬಲಗಾಲಿಟ್ಟು ಒಳಗೆ ಬರುತ್ತಾಳೆ ಎಂಬ ನಂಬಿಕೆ. ಕಳಶ, ಹೂವು, ಹಣ್ಣುಗಳು, ಒಣಹಣ್ಣು, ತೆಂಗಿನ ಕಾಯಿ, ಅರಿಶಿನ, ಕುಂಕುಮ, ಕರ್ಪೂರ, ಮಾವಿನ ಎಲೆ, ವೀಳ್ಯದೆಲೆ, ಪೂಜೆಗೆ ಬೇಕಾಗುವ, ದೇವಿಯನ್ನು ಸಿಂಗರಿಸಲು ಬೇಕಾಗುವ ಸಾಮಗ್ರಿಗಳನ್ನು ಮೊದಲೇ ಸಿದ್ಧಪಡಿಸಿಕೊಳ್ಳಿ. ದೇವಿಯನ್ನು ಇಡುವ ಮಂಟಪವನ್ನು ಹಿಂದಿನ ದಿನ ರೆಡಿ ಮಾಡಿಟ್ಟುಕೊಳ್ಳಿ.

ಬಳಿಕ ನೈವೇದ್ಯಕ್ಕೆ ಬೇಕಾಗುವ ಸಿಹಿಯ ಸಿದ್ಧತೆ ಮಾಡಿಕೊಳ್ಳಿ.

ವ್ರತದ ವಿಧಾನ

1. ಬೆಳಗ್ಗೆ ಬೇಗ ಅಂದರೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಶುಭ್ರಬಟ್ಟೆತೊಟ್ಟು ಮನೆಯನ್ನು ಸ್ವಚ್ಛಗೊಳಿಸಿ, ರಂಗೋಲೆ ಹಾಕಿ. ನೈವೇದ್ಯಕ್ಕೆ ರೆಡಿ ಮಾಡಿಡಿ.

2. ಪೂಜೆ ಮಾಡುವ ಜಾಗದಲ್ಲಿ ಪೂರ್ವಾಭಿಮುಖವಾಗಿ ಎಂಟು ದಳದ ಕಮಲದ ರಂಗವಲ್ಲಿ ಹಾಕಿ. ಮಂಟಪದ ಎರಡೂ ಕಡೆ ದೀಪ ಹಚ್ಚಿಡಿ. ದೀಪಕ್ಕೆ ಅರಿಶಿನ ಕುಂಕುಮ, ಹೂವು ಇಡಿ. ಈಗ ಒಂದು ಬಟ್ಟಲಿಗೆ 5 ಮುಷ್ಠಿ ಅಕ್ಕಿ ಹರಡಿ ರಂಗೋಲಿಯ ಮಧ್ಯಭಾಗಕ್ಕೆ ಬರುವಂತೆ ಇಡಿ. ಇದರ ಮೇಲೆ ಸ್ವಸ್ತಿಕವನ್ನು ಬರೆದು ಕಳಶ ಇಡಬೇಕು.

ವರಲಕ್ಷ್ಮೇ ಉದ್ಭವಿಸಿದ್ದು ಹೇಗೆ ಹಾಗೂ ಮಹಾಲಕ್ಷ್ಮೇಗೆ ಸೀರೆಯುಡಿಸುವ ವಿಧಾನ ಇಲ್ಲಿದೆ!

3. ಕಳಶಕ್ಕೆ ನೀರು ತುಂಬಿಸಿ. ಅದರೊಳಗೆ ಅಕ್ಕಿ, ನಾಣ್ಯಗಳನ್ನು ಹಾಕಿ. ಇದಕ್ಕೆ ಅಡಿಕೆ ಹಾಕುವ ಕ್ರಮವೂ ಇದೆ. ನಂತರ ಈ ಕಳಶಕ್ಕೆ ಶ್ರೀಗಂಧ ಹಚ್ಚಿ, ಅಕ್ಷತೆ ಇಡಿ. ಹೂವು ಹಾಕಿ. ಅದರ ಮೇಲೆ 5 ವೀಳ್ಯದೆಲೆ ಅಥವಾ ಮಾವಿನೆಲೆ ಇಡಿ. ಈಗ ತೆಂಗಿನ ಕಾಯಿಯ ಎರಡು ಕಣ್ಣುಗಳು (ಇದಕ್ಕೆ ಲಕ್ಷ್ಮಿ ಕಣ್ಣು ಅಂತಲೇ ಹೆಸರಿದೆ) ಮುಂಭಾಗ ಬರುವ ಹಾಗೆ ಕಳಶದ ಮೇಲೆ ಇಡಿ. ಇದಕ್ಕೆ ಮೊದಲೇ ಅರಶಿನ ಹಚ್ಚಿ ಅಲಂಕಾರ ಮಾಡಿದ್ದರೆ ಚೆನ್ನ.

4. ಇದರ ಮೇಲೆ ದೇವಿಯ ಮುಖವಾಡ ಇಡಬೇಕು. ಕೆಲವರು ದೇವಿಯ ವಿಗ್ರಹ ಇಡುತ್ತಾರೆ. ಈ ಮುಖವಾಡಕ್ಕೂ ಅರಿಶಿನ ಕುಂಕುಮ ಹಚ್ಚಿ ಕಾಡಿಗೆ ತೀಡಿ ಅಲಂಕಾರ ಮಾಡುತ್ತಾರೆ. ಅರಿಶಿನ, ಕುಂಕುಮ, ಬಳೆ ಇತ್ಯಾದಿಗಳನ್ನು ದೇವಿಯ ಪಕ್ಕ ಇಡಬಹುದು. ದೇವಿಯ ಎದುರು ಮೂವತ್ತೆರಡು ನಾಣ್ಯಗಳನ್ನು ಇಡಬಹುದು. ದೇವಿಗೆ ಅಂತ ಎತ್ತಿಟ್ಟಮಾಂಗಲ್ಯ ಅಥವಾ ಅರಿಶಿನ ತುಂಡನ್ನು ದಾರದಲ್ಲಿ ಕಟ್ಟಿದೇವಿಗೆ ಹಾಕಬೇಕು.

5. ಒಡವೆಗಳಿದ್ದರೆ ಹಾಕಿ, ಗೆಜ್ಜೆ ವಸ್ತ್ರಗಳನ್ನು ಹಾಕಿ. ತಾವರೆ ಹೂವನ್ನು ಮುಡಿಸಿ. ಎಲ್ಲ ಬಗೆಯ ಹೂಗಳನ್ನು ಹಾಕಿ. ಕಳಶದ ಹಿಂದೆ ದೇವಿಯ ಫೋಟೋ ಇಟ್ಟರೆ ಉತ್ತಮ. ಐದು ಅಥವಾ ಒಂಭತ್ತು ಬಗೆಯ ಹಣ್ಣುಗಳನ್ನು ಇಡಿ.

6. ಮಡಿಲಕ್ಕಿ ತಯಾರಿ ಮಾಡಿಡಬೇಕು. ಎರಡು ವೀಳ್ಯದೆಲೆ, ಅಡಿಕೆ, ಬಳೆ, ಬ್ಲೌಸ್‌ ಪೀಸ್‌, ಕಾಯಿ, ಅಕ್ಕಿ, ಹೂವು, ಹಣ್ಣುಗಳನ್ನು ಇಡಬಹುದು. ಕೊಬ್ಬರಿ ಬೆಲ್ಲವನ್ನೂ ಇಡಬಹುದು.

ಪೂಜೆಯ ವಿಧಾನ

ವರಮಹಾಲಕ್ಷ್ಮಿ ಪೂಜೆಯನ್ನು ಬೆಳಗ್ಗೆ 7.15 ರಿಂದ ಆರಂಭಿಸಿ. 9.15ರಷ್ಟುಹೊತ್ತಿಗೆ ಮುಗಿಸಿ. ಇದನ್ನು ಮಧ್ಯಾಹ್ನ, ಸಂಜೆ, ಮಧ್ಯರಾತ್ರಿ ಮಾಡುವವರೂ ಇದ್ದಾರೆ. ಅದರ ಸಮಯ ಭಿನ್ನವಾಗಿರುತ್ತದೆ. ಮಧ್ಯಾಹ್ನ 1. 30ರ ಸುಮಾರಿಗೆ ಆರಂಭಿಸಿ 3.30ಕ್ಕೆ ಮುಗಿಸಬಹುದು. ಗೋಧೂಳಿ ಲಗ್ನದಲ್ಲಿ ವರಮಹಾಲಕ್ಷ್ಮಿ ವ್ರತ ಮಾಡುವವರು ಕುಂಭ ಲಗ್ನದಲ್ಲಿ 7.39 ರಿಂದ ಪೂಜೆ ಆರಂಭಿಸಬಹುದು. ಮಧ್ಯರಾತ್ರಿಯಾದರೆ 12. 50ರಿಂದ ವೃಷಭ ಲಗ್ನ ಪೂಜಾ ಮುಹೂರ್ತವಿದೆ.

1. ಮೊದಲಿಗೆ ಗಣೇಶನನ್ನು ಪೂಜಿಸಿ. ಮನೆಯಲ್ಲಿರುವ ಗಣೇಶನಿಗೆ ಎರಡು ವೀಳ್ಯದೆಲೆ, ಅಡಿಕೆ, ನಾಣ್ಯ ಇಟ್ಟು ಮೊದಲ ಪೂಜೆ ಸಲ್ಲಿಸಿ. ನಿರ್ವಿಘ್ನವಾಗಿ ಪೂಜೆ ನಡೆಯಲಿ ಎಂದು ಪ್ರಾರ್ಥಿಸಿ.

2. ಪಂಚಪಾತ್ರೆಯಲ್ಲಿ ನೀರನ್ನು ತೆಗೆದುಕೊಳ್ಳಿ. ಒಂದು ಹೂವನ್ನು ಹಾಕಿ ದೇವಿಗೆ ಪ್ರೋಕ್ಷಣೆ ಮಾಡಿ.

ಮಹಾಲಕ್ಷ್ಮಿ ತೆರೆಯುತ್ತಾಳೆಯೇ ಬೆಳ್ಳಿ ತೆರೆಯ ಬಾಗಿಲು! 

3. ಒಂದು ಪ್ಲೇಟ್‌ನಲ್ಲಿ ಚಿಕ್ಕ ಲಕ್ಷ್ಮಿಯ ಮೂರ್ತಿ ಇಟ್ಟು, ಅದರಲ್ಲಿ ವೀಳ್ಯದೆಲೆ ಇಟ್ಟು ಅಭಿಷೇಕಕ್ಕೆ ರೆಡಿಯಾದ ಪಂಚಾಮೃತವನ್ನು ಇಡಿ. ಒಂದು ಹೂವನ್ನು ಈ ಪಂಚಾಮೃತದಲ್ಲಿ ಅದ್ದಿ ದೇವಿಗೆ ಸಮರ್ಪಿಸಿ. ಬಳಿಕ ದೇವಿಗೆ ಅರಿಶಿನ ಕುಂಕುಮ, ಕಾಡಿಗೆ ಹಚ್ಚಿ ಗಂಧಾಕ್ಷತೆ ಹಾಕಬೇಕು.

4. ದೇವಿಗೆ ಹೂಗಳಿಂದ ಸಹಸ್ರಾಚನೆ ಶುರು ಮಾಡಿ. ನಂತರ ಕುಂಕುಮಾರ್ಚನೆ ಮಾಡಬೇಕು. ದೇವಿಯ ಮೂರ್ತಿಯನ್ನಿಟ್ಟು ಅದಕ್ಕೂ ಮಾಡಬಹುದು. ಅಥವಾ ಒಂದು ನಾಣ್ಯಕ್ಕೂ ಅಷ್ಟೋತ್ತರ ಹೇಳುತ್ತಾ ಕುಂಕುಮಾರ್ಚನೆ ಮಾಡಬಹುದು. ಬಳಿಕ ಧೂಪ, ದೀಪದಿಂದ ದೇವಿಗೆ ಆರತಿ ಮಾಡಿ. ನಂತರ ಜೋಡು ತೆಂಗಿನ ಕಾಯಿ ಒಡೆದು ನೈವೇದ್ಯ ಮಾಡಿ. ಬಾಳೆ ಹಣ್ಣು, ಹಾಲನ್ನು ನೈವೇದ್ಯ ಮಾಡಿ. ಪ್ರಸಾದವನ್ನೂ ನೈವೇದ್ಯ ಮಾಡಿ. ಕೊನೆಯಲ್ಲಿ ಮಂಗಳಾರತಿ ಮಾಡಿ.

5. ವರಮಹಾಲಕ್ಷ್ಮಿ ವ್ರತದ ಕತೆ ಪುಸ್ತಕಕ್ಕೆ ಅರಿಶಿನ ಕುಂಕುಮ ಹಚ್ಚಿ, ಹೂವು ಹಾಕಿ ನಮಸ್ಕಾರ ಮಾಡಿ. ವ್ರತದ ಕತೆಯನ್ನು ಓದಲು ಆರಂಭಿಸಿ.

6. ಆ ಬಳಿಕ ಪಾಯಸ, ಹೋಳಿಗೆ, ಸಜ್ಜಕ ಸೇರಿದಂತೆ ಸಿಹಿ ತಿಂಡಿಗಳನ್ನು ನೈವೇದ್ಯ ಮಾಡಿ. ಬಳಿಕ ಮಂಗಳಾರತಿ ಮಾಡಬೇಕು. ಆರತಿಗೆ ನಮಸ್ಕರಿಸಿ ಅಕ್ಷತೆ ಹಿಡಿದು ದೇವಿಯಲ್ಲಿ ನಿಮಗೇನು ಬೇಕೋ ಕೇಳಿಕೊಳ್ಳಿ. ಬಳಿಕ ಆ ಅಕ್ಷತೆಯನ್ನು ದೇವಿಗೆ ಹಾಕಿ, ಸುತ್ತು ಬಂದು ನಮಸ್ಕಾರ ಮಾಡಿ.

ಹೀಗೆ ಪೂಜೆ ಆದಮೇಲೆ ಒಂಭತ್ತೆಳೆ ದಾರವನ್ನು ಹೂವಿನೊಂದಿಗೆ ಕಟ್ಟಿಅದನ್ನು ಮನೆ ಹಿರಿಯರಿಂದ ಕೈಗೆ ಕಟ್ಟಿಸಿಕೊಳ್ಳಿ. ಸಂಜೆ ವಿವಾಹಿತ ಮಹಿಳೆಯರಿಗೆ ಅರಿಶಿನ ಕುಂಕುಮ ವೀಳ್ಯದೆಲೆ ಅಡಿಕೆ, ಎರಡು ಬಾಳೆಹಣ್ಣು, ಹೂವು, ಇದರ ಜೊತೆಗೆ ಯಥಾನುಶಕ್ತಿ ಕಾಣಿಕೆ ಇಟ್ಟು ಕೊಡಿ.

ಕೊನೆಯಲ್ಲಿ ಮಂಗಳಾರತಿ ಮಾಡಿ ಕಳಸದ ಬಲಭಾಗ ಸ್ವಲ್ಪ ಅಲುಗಿಸಿ ವಿಸರ್ಜನೆ ಮಾಡಬಹುದು.

click me!