ಕೊರೋನಾ ನಡುವೆ ವರಮಹಾಲಕ್ಷ್ಮೀ ಸಂಭ್ರಮ!

Kannadaprabha News   | Asianet News
Published : Jul 31, 2020, 01:12 PM IST
ಕೊರೋನಾ ನಡುವೆ ವರಮಹಾಲಕ್ಷ್ಮೀ ಸಂಭ್ರಮ!

ಸಾರಾಂಶ

ಜೀವನೋತ್ಸಾಹ ಹೆಚ್ಚಿಸಲು ಹಬ್ಬಗಳು ಬೇಕು. ಒಟ್ಟಿಗೆ ಕುಳಿತು ಪೂಜೆ ಪುನಸ್ಕಾರ ಮಾಡಿ, ಎಲ್ಲರೂ ಪ್ರೀತಿಯಿಂದ ಅಡುಗೆ ಮಾಡಿ, ಒಟ್ಟಿಗೆ ಕುಳಿತು ಊಟ ಮಾಡಿ ಏಳುವಷ್ಟರಲ್ಲಿ ತಿಂಗಳಿಗಾಗುವಷ್ಟುಸಂಭ್ರಮವನ್ನು ಜೀವ ಅನುಭವಿಸಿರುತ್ತದೆ. ಆ ಸಂಭ್ರಮ ನಮ್ಮ ಮುಂದಿನ ದಾರಿಯನ್ನು ಸುಗಮವಾಗಿಡುತ್ತದೆ. ಕೊರೋನಾದಿಂದ ಇಡೀ ಜಗತ್ತೇ ಕಂಗೆಟ್ಟಿರುವ ಈ ಸಂದರ್ಭದಲ್ಲಿ ವರಮಹಾಲಕ್ಷ್ಮೀ ಸಂಭ್ರಮ ಎದುರಾಗಿದೆ. 

ವರ ಮಹಾಲಕ್ಷ್ಮೀ ಅಭಯ ನೀಡುವವಳು. ನಮ್ಮನ್ನು ಪೊರೆಯುವವಳು. ಈಗ ಕೊರೋನಾ ಆತಂಕದಿಂದ ನಮ್ಮನ್ನು ಪಾರು ಮಾಡಲು ಮಹಾಲಕ್ಷ್ಮಿಯೇ ಎದ್ದು ಬಂದಂತೆ ಭಾಸವಾಗುವ ಹಾಗೆ ವರ ಮಹಾಲಕ್ಷ್ಮೀ ಹಬ್ಬ ಬಂದಿದೆ. ಈ ವರ ಮಹಾಲಕ್ಷ್ಮಿ ಯಾಕೆ ತುಂಬಾ ಮುಖ್ಯ ಎಂದರೆ...

1. ಯಾರೇ ಆಗಲಿ ಕುಸಿದು ಕುಳಿತ ಹೊತ್ತಿಗೆ ಎದ್ದು ನಿಲ್ಲಲು ಯಾರದಾದರೂ ಪ್ರೋತ್ಸಾಹ ಬೇಕು. ಇಡೀ ಜಗತ್ತು ಕುಸಿದು ಕುಳಿತಿರುವ ಸಂದರ್ಭ ಇದು. ಈ ಹಂತದಲ್ಲಿ ಎದುರಾಗುವ ಒಂದು ಸಂಭ್ರಮ ನಮ್ಮ ಮನದ ಕತ್ತಲೆಯನ್ನು ಹೊಡೆದೋಡಿಸುವ ಶಕ್ತಿ ಹೊಂದಿರುತ್ತದೆ. ಆ ಕಾರಣಕ್ಕೆ ಈ ಸಲದ ಹಬ್ಬದ ಸಂಭ್ರಮ ಹೆಚ್ಚು.

2. ವರ್ಕ್ ಫ್ರಮ್‌ ಹೋಮ್‌ ಎಂದು ಮನೆಯಲ್ಲೇ ಎರಡು ತೀರವಾಗಿರುವ ಕಾಲಘಟ್ಟಇದು. ಒಬ್ಬರದೊಂದು ಶಿಫ್ಟು, ಇನ್ನೊಬ್ಬರದು ಮತ್ತೊಂದು. ಒಟ್ಟಿಗೆ ಕುಳಿತು ಒಂದೊಳ್ಳೆ ಊಟ ಮಾಡಿ ಕಾಲ ಎಷ್ಟಾಯಿತು. ಈ ಹಬ್ಬದಲ್ಲಾದರೂ ಒಟ್ಟಿಗೆ ಕುಳಿತು ಒಂದೊಳ್ಳೆ ಊಟ ಸವಿಯಬೇಕಾಗಿದೆ. ಈ ಥರ ಸಮಯ ಕಳೆಯುವುದು ಜೀವಕ್ಕೆ ಶಕ್ತಿಮದ್ದು ಇದ್ದ ಹಾಗೆ.

ಗೋಮಾತೆಗೆ ಪೂಜಿಸಿ ವರಮಹಾಲಕ್ಷ್ಮೀ ಪೂಜೆ ಆರಂಭಿಸಿದ ಆನಂದ ಗುರೂಜಿ: ಇಲ್ಲಿದೆ ವಿಡಿಯೋ 

3. ಹಬ್ಬಕ್ಕೆ ಸಾಮಾನು ತರುವ ಸಂಭ್ರಮ ಮತ್ತೊಂದು ರೀತಿಯದು. ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಹೂವೋ, ಬಾಳೆ ಎಲೆಯನ್ನೋ ತರಬೇಕು. ಅದರಿಂದ ನಮ್ಮನೆಯ ಖುಷಿಯೂ ಹೆಚ್ಚಾಗುತ್ತದೆ. ಬೀದಿ ಬದಿಯ ಹೂವಿನ ವ್ಯಾಪಾರಿಯ ಮೊಗದಲ್ಲೂ ನಗು ಮೂಡುತ್ತದೆ.

4. ಒಂದಲ್ಲ ಒಂದು ಗಳಿಗೆಯಲ್ಲಿ ಎಲ್ಲವೂ ಸರಿ ಹೋಗುತ್ತದೆ ಎಂಬ ನಂಬಿಕೆ ಪ್ರತಿಯೊಬ್ಬರಿಗೂ ಇರುತ್ತದೆ. ಆ ಒಳ್ಳೆಯದಾಗಲು ಒಂದು ಆರಂಭದ ಬಿಂದು ಬೇಕು. ಬಹುಶಃ ಈ ವರಮಹಾಲಕ್ಷ್ಮಿ ಹಬ್ಬ ಎಲ್ಲಾ ಒಳ್ಳೆಯದಕ್ಕೂ ನಾಂದಿ ಹಾಡಿದರೆ ಅದಕ್ಕಿಂತ ದೊಡ್ಡ ಸಂಭ್ರಮ ಮತ್ತೇನಿದೆ..

5. ನಾವು ಒಂದೇ ಥರ ಯೋಚನೆ ಮಾಡುತ್ತಿರುತ್ತೇವೆ, ಒಂದೇ ಥರದ ಕೆಲಸ ನಡೆಯುತ್ತಿರುತ್ತದೆ. ಆದರೆ ಈಗ ಹಬ್ಬದ ಹೊತ್ತು. ನಮ್ಮ ದಿನಚರಿ ಇವತ್ತು ಬದಲಾಗಲೇಬೇಕು. ಬೀದಿಯಲ್ಲಿ ಕವಿದಿರುವ ಮೌನ ದೂರ ಸರಿಯಲೇ ಬೇಕು. ಮನದಲ್ಲಿ ಅಡ್ಡಡ್ಡ ಮಲಗಿ ಕುಳಿತ ಬೇಸರ ಆಚೆ ಹೋಗಬೇಕು. ಹಾಗಾಗಿ ವರಮಹಾಲಕ್ಷ್ಮಿ ಮನೆಯೊಳಗೆ ಬರಬೇಕು. ಆ ಮಹಾಲಕ್ಷ್ಮಿ ಮನೆಯ ಮತ್ತು ಮನದ ಜೀವನೋತ್ಸಾಹ ಹೆಚ್ಚಿಸಲಿ ಎಂಬುದು ಆಶಯ ಮತ್ತು ಪ್ರಾರ್ಥನೆ.

PREV
click me!

Recommended Stories

ಪೂಜೆಗೆ ಬಳಸುವ ಗಂಟೆಯಲ್ಲಿದೆ ಮಹಾನ್ ಶಕ್ತಿ, ತಪ್ಪಾಗಿ ಬಳಸಿದ್ರೆ ಕಷ್ಟ ಗ್ಯಾರಂಟಿ
ಜನಕನ ಅಳಿಯ ಶ್ರೀರಾಮನಲ್ಲವಂತೆ.. ಹಾಗಾದ್ರೆ ನಿಜವಾದ ಅಳಿಯ ಯಾರು? ಇಲ್ಲಿದೆ ರಾಮಾಯಣದ ರಹಸ್ಯ!