ಇಂದು ಉತ್ಥಾನ ದ್ವಾದಶಿ; ದೂರ್ವಾಸರನ್ನೇ ಮೀರಿಸಿದ ಅಂಬರೀಶ ರಾಜನ ಭಕ್ತಿ

By Suvarna NewsFirst Published Nov 5, 2022, 10:02 AM IST
Highlights

ಇಂದು ಉತ್ಥಾನ ದ್ವಾದಶಿ. ಈ ದಿನ ತುಳಸಿ ಪೂಜೆ ಮಾಡುವುದು ಬಹಳ ಶ್ರೇಷ್ಠವೆನಿಸಿದೆ. ಈ ಸಂಬಂಧ ವ್ರತಕತೆಯೇನು ಎಂಬುದನ್ನು ಉಡುಪಿಯ ಜ್ಯೋತಿಷಿಗಳಾದ ಪ್ರಕಾಶ್ ಅಮಣ್ಣಾಯ ತಿಳಿಸಿದ್ದಾರೆ. 

ಪ್ರಕಾಶ್ ಅಮಣ್ಣಾಯ, ಜ್ಯೋತಿಷಿ, ಉಡುಪಿ

ಭಕ್ತಾಗ್ರಣಿ ಅಂಬರೀಷ ಮಹಾರಾಜನ ದ್ವಾದಶಿ ವ್ರತವನ್ನು ಭಂಗ ಮಾಡಬೇಕೆಂದು ದೂರ್ವಾಸ ಮಹರ್ಷಿಗಳಿಗೆ ಮನಸ್ಸಾಯ್ತು. ಒಳ ಅರ್ಥದಲ್ಲಿ ದ್ವಾದಶಿ ವ್ರತದ ಮಹಿಮೆಯನ್ನು ಜಗತ್ತಿಗೆ ತಿಳಿಸುವ ಧ್ಯೇಯವೇ ಮಹರ್ಷಿಗಳದ್ದಾಗಿತ್ತು.
ಬೆಳ್ಳಂಬೆಳಿಗ್ಗೆ ಋಷಿಗಳು ಶಿಷ್ಯರೊಡನೆ ಮಹಾರಾಜನ ದರ್ಶನಕ್ಕೆ ಬಂದರು. ರಾಜನು ದ್ವಾದಶಿ ವ್ರತದ ಸಮಾರೋಪದಲ್ಲಿ ತುಳಸೀ ಪೂಜೆಗೆ ತಯಾರಾಗುತ್ತಿದ್ದ. ಮುನಿಗಳಿಗೆ ವಂದಿಸಿ,' ಹೇ ವಿಪ್ರೋತ್ತಮರೇ ತಮ್ಮ ಆಗಮನವೇ ಮಹಾವಿಷ್ಣುವಿನ ಅನುಗ್ರಹ. ಆದಷ್ಟು ಬೇಗ ನಿಮ್ಮ ನಿತ್ಯಾನುಷ್ಟಾನ ಮುಗಿಸಿ ಬನ್ನಿ. ಇಂದು ದ್ವಾದಶಿ ತಿಥಿಯು ಬಹಳ ಕಡಿಮೆ ಇರುವುದು ನಿಮಗೆ ತಿಳಿದಿದೆ. ತಿಥಿ ಸಮಾಪ್ತಿಯೊಳಗೆ ಬಂದು ಬಿಡಿ. ನಿಮ್ಮ ಆತಿಥ್ಯದ ಬಳಿಕವೇ ನಾನು ವ್ರತ ಸಮಾಪ್ತಿ ಮಾಡಿ ಬಿಡುತ್ತೇನೆ' ಎಂದು ಋಷಿಗಳಿಗೆ ಪ್ರಣಾಮಗಳನ್ನು ಸಲ್ಲಿಸಿದ ಮಹಾರಾಜ. 

Latest Videos

ದಾನಗಳಲ್ಲೇ ಮಹಾದಾನ ಗೋದಾನ, 7 ತಲೆಮಾರಿಗೆ ಪುಣ್ಯ ತರುವ ದಾನ

ಇದೇ ಸಕಾಲ. ವ್ರತ ಸಮಾಪ್ತಿಯ ನಂತರವೇ ತಡವಾಗಿ ಬರೋಣ. ರಾಜ ಏನು ಮಾಡುತ್ತಾನೆ ನೋಡೇ ಬಿಡೋಣ ಎಂದು ದೂರ್ವಾಸರು ಶಿಷ್ಯರೊಡನೆ ನದೀ ಸ್ನಾನಕ್ಕೆ ಹೋದವರು ತಡವಾಗಿಯೇ ಬರುತ್ತಾರೆ. ಮಹಾರಾಜನು ದ್ವಾದಶಿ ಪೂಜೆ ಮುಗಿಸಿ ಋಷಿಗಳಿಗಾಗಿ ಕಾಯುತ್ತಿದ್ದ. ಇನ್ನೇನು ಕೇವಲ ಕೆಲ ಕ್ಷಣಗಳು ಮಾತ್ರ ದ್ವಾದಶಿ ತಿಥಿ ಇರೋದು. ಋಷಿಗಳು ಕಾಣುತ್ತಿಲ್ಲ. ಏನು ಮಾಡಲಿ? ತಡವಾದರೆ ದ್ವಾದಶಿ ತಿಥಿಭಂಗ. ವಿಷ್ಣುವಿನ ಅನುಗ್ರಹ ಇಲ್ಲ. ದ್ವಾದಶಿ ತಿಥಿ ಸಮಾಪ್ತಿಯೊಳಗೆ ಋಷಿಗಳನ್ನು ಬಿಟ್ಟು ತೀರ್ಥ ತೆಗೆದುಕೊಂಡರೆ ಋಷಿಗಳು ಶಾಪ ನೀಡಿದರೆ? ಏನು ಮಾಡಲಿ ಎಂದು ರಾಜಗುರುಗಳಲ್ಲಿ ಕೇಳಿದ. ಆಗ ಗುರುಗಳು ದ್ವಾದಶಿ ತಿಥಿ ಭಂಗವಾಗುವ ಹಾಗಿಲ್ಲ. ಶಾಪಕ್ಕೆ ಹೆದರದಿರು. ದೇವಕೋಪಕ್ಕಿಂತ ದೊಡ್ಡ ಕೋಪ ಬೇರೊಂದಿಲ್ಲ. ಎಲ್ಲವೂ ನಾರಾಯಣನ ಇಚ್ಛೆ' ಎಂದರು. ರಾಜನು ಗುರುವಾಜ್ಞೆ ಎಂದು ಅದೇ ರೀತಿ ನಡೆದುಕೊಂಡ. ಅಷ್ಟರಲ್ಲಿ ತಡವಾಗಿ ಬಂದ ದೂರ್ವಾಸರು ಕ್ರುದ್ರರಾದರು. 'ಎಲೈ ದೂರ್ತಾ, ಅತಿಥಿಗಳನ್ನು ಬಿಟ್ಟು ತೀರ್ಥ ಪ್ರಾಶನ ಮಾಡಿಕೊಂಡೆಯಾ? ಇದು ನಮಗೆಸಗಿದ ಅಪಮಾನ. ನಿನ್ನ ಉಚ್ಚಿಷ್ಟ ಭಕ್ಷಣೆಗೆ ಬಂದವರೇ ನಾವೂ? ಹಿಡಿ ಶಾಪ. ನಿನ್ನ ವಂಶ ನಿರ್ವಂಶವಾಗಲಿ' ಎಂದು ಕಮಂಡಲದ  ಜಲವನ್ನು ಕೈಗೆ ಹಾಕಿಕೊಂಡರು.
ಆಗ ರಾಜನು ಎಷ್ಟು ಬೇಡಿಕೊಂಡರೂ ಋಷಿಗಳ ಕೋಪ, ನಿರ್ಧಾರ ಬದಲಾಗದೆ, ಇಳಿಯದೆ ಇದ್ದಾಗ ರಾಜನು, 'ಹೇ ಅವಿನಾಶ, ಅನಾಥ ರಕ್ಷಕಾ, ಕರುಣಾ ನಿಧಿಯೇ, ನಾರಾಯಣನೇ, ಋಷಿಗಳು ನೀಡುವ ಶಾಪವನ್ನೂ ಕೃಷ್ಣಾರ್ಪಣಮಸ್ತು ಎಂದು ನಿನ್ನ ಚರಣಕ್ಕೇ ಸಮರ್ಪಿಸುತ್ತೇನೆ' ಎಂದು ಭಗವಂತನ ಸ್ವರಣೆ ಮಾಡಿದ. ವಿಷ್ಣು ನಗುತ್ತಿದ್ದ. ಅಷ್ಟರಲ್ಲಿ ಸುದರ್ಶನನ ತಾಳ್ಮೆ ಕೆಟ್ಟಿತು. ದೂರ್ವಾಸರನ್ನೇ ಬೆನ್ನಟ್ಟಿದ. ದೂರ್ವಾಸರು ವಿಷ್ಣುವಿನ ಮೊರೆ ಹೋದರು. ಆಗ , 'ಹೇ ಮುನಿಪುಂಗವಾ, ನನ್ನ ಭಕ್ತ ಅಂಬರೀಷ ಬೇರೆಯಲ್ಲ. ನಾನು ಬೇರೆಯಲ್ಲ. ನೀನು ಅವನನ್ನೇ ಮೊರೆ ಹೋಗು. ಅಲ್ಲೇ ನಿನಗೆ ಪರಿಹಾರವಿದೆ' ಎಂದರು. ಕೊನೆಗೆ ರಾಜನಿಗೇ ದೂರ್ವಾಸರು ಮೊರೆ ಹೋಗಿ,'ಹೇ ಮಹರಾಜಾ. ನೀನೊಬ್ಬನೇ ಸುದರ್ಶನನ್ನು ತಡೆಯಲು ಸಾಧ್ಯ. ಲೋಕಕ್ಕೆ ದ್ವಾದಶಿ ವ್ರತ ಮಹಿಮೆ ತಿಳಿಸಲೆಂದೇ ಈ ಕೆಲಸ ಮಾಡಿದೆ' ಎಂದು ಕೈ ಮುಗಿದರು.

ನಿಮ್ಮವರು ನವೆಂಬರ್ ನಲ್ಲಿ ಹುಟ್ಟಿರೋದಾ? ಹಾಗಿದ್ರೆ ಅವರ ಗುಣ ಹೇಗಿದೆ ತಿಳಿಯಿರಿ….

ದೇವಾದಿ ದೇವತೆಗಳು ಜಯ ಜಯಾ ಎಂದು ಪುಷ್ಪ ವೃಷ್ಠಿಗೈದರು. ಸುದರ್ಶನ ಯಥಾಸ್ಥಾನಕ್ಕೆ ತೆರಳಿದ. ವಿಷ್ಣುವು ವೃತದ ಮಹಿಮೆ ತಿಳಿಸಿದ ದೂರ್ವಾಸರನ್ನೂ, ವೃತದ ಮಹತ್ವ ಹೆಚ್ಚಿಸಿದ ಅಂಬರೀಷನನ್ನೂ ಅನುಗ್ರಹಿಸಿದಾಗ ಮತ್ತೊಮ್ಮೆ ಪುಷ್ಪ ವೃಷ್ಟಿಯಾಯ್ತು.
ಅಮಲಕ(ನೆಲ್ಲಿಕಾಯಿ)ಯುಕ್ತ ತುಪ್ಪದ ದೀಪ ಹಚ್ಚಿ ತುಳಸೀ ದಾಮೋದರನ ಪೂಜೆಯು ನಿರಂತರವಾಗಿ ನಡೆಯುತ್ತಾ ಬಂದದ್ದೇ ಈ ಉತ್ಥಾನ ದ್ವಾದಶಿ ಮಹಿಮೆ.

click me!