Latest Videos

ಮಧ್ಯರಾತ್ರಿ ಕರೆ ಮಾಡಿ ಸೆಲೆಕ್ಟ್‌ ಆಗಿದ್ದೀನಿ ಅಂದ T20 World Cup USA Player ನೊಸ್ತುಶ್‌!

By Kannadaprabha NewsFirst Published Jun 17, 2024, 10:53 AM IST
Highlights

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಪ್ರದೀಪ್ ಕೆಂಜಗೆ  ಅವರ ಮಗ ನೊಸ್ತುಶ್ ಅಮೆರಿಕದ ಪರ ಟಿ20 ವಿಶ್ವ ಕಪ್ ಆಡುತ್ತಿದ್ದು, ತಮ್ಮದೇ ಆದ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ನೊಸ್ತುಶ್‌ ಕೆಂಜಿಗೆ!

ಕನ್ನಡ ಸಾಹಿತ್ಯಾಸಕ್ತರಿಗೆ ಪ್ರದೀಪ್‌ ಕೆಂಜಿಗೆ ಹೆಸರು ಚಿರಪರಿಚಿತ. ಆದರೆ ಒನ್‌ಫೈನ್‌ ಡೇ ಟಿ20 ವರ್ಲ್ಡ್ ಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಅಮೆರಿಕಾ ತಂಡ ರೋಚಕ ಗೆಲುವು ಸಾಧಿಸಿದಾಗ ‘ಕೆಂಜಿಗೆ’ ಎಂಬ ಹೆಸರು ವಿಶ್ವಮಟ್ಟದಲ್ಲಿ ಸದ್ದು ಮಾಡಿತು. ಚಿಕ್ಕಮಗಳೂರಿನ ಮೂಡಿಗೆರೆಯ ಪುಟ್ಟ ಊರು ‘ಕೆಂಜಿಗೆ’ ಹೆಸರನ್ನು ತನ್ನ ಹೆಸರಿನೊಂದಿಗೆ ಜೋಡಿಸಿಕೊಂಡ ನೊಸ್ತುಶ್‌ ಎಂಬ ಯುವಕ ಅಮೆರಿಕಾ ತಂಡವನ್ನು ಪ್ರತಿನಿಧಿಸಿ ಪಾಕಿಸ್ತಾನದ ವಿರುದ್ಧ ರೋಚಕ ವಿಜಯ ಸಾಧಿಸಲು ಕಾರಣಕರ್ತನಾಗಿದ್ದ.

ಆಗ ಈ ನೊಸ್ತುಶ್‌ ಯಾರು, ಅಮೆರಿಕಾದ ಆತನಿಗೂ ಮೂಡಿಗೆರೆಯ ಕೆಂಜಿಗೆಗೂ ಏನು ಸಂಬಂಧ ಎಂದು ಬೆನ್ನತ್ತಿ ಹೋದವರಿಗೆ ಸಿಕ್ಕಿದ್ದು ಮತ್ತದೇ ಪ್ರದೀಪ್‌ ಕೆಂಜಿಗೆ. ಈ ನೊಸ್ತುಶ್‌ ಅವರ ಪುತ್ರ.

ಪ್ರದೀಪ್‌ ಅವರಿಗೆ ಕರೆ ಮಾಡಿದರೆ ಅವರು ಟಿ20 ಪಂದ್ಯ ನೋಡುವ ಗಡಿಬಿಡಿಯಲ್ಲಿದ್ದರು. ಅದರ ನಡುವೆಯೇ ಮಗನ ಕ್ರಿಕೆಟ್‌ ಪ್ರೀತಿಯ ಕಥೆ ಹೇಳಿದರು.

‘ನನ್ನ ಅಮ್ಮನಿಗೆ ಈಗ 87 ವರ್ಷ ವಯಸ್ಸು. ಅವರು ಬೆಳಗ್ಗೆ ಎದ್ದರೆ ಟಿವಿಯಲ್ಲಿ ಕ್ರಿಕೆಟ್‌ ಹಾಕಿಕೊಂಡು ನೋಡುತ್ತಾ ಕೂತಿರುತ್ತಾರೆ. ನನ್ನ ಹೆಂಡತಿ ಶ್ರುತಕೀರ್ತಿ ರಾಷ್ಟ್ರಮಟ್ಟದ ಬ್ಯಾಂಡ್ಮಿಂಟನ್‌ ಆಟಗಾರ್ತಿ. ಚಿಕ್ಕ ಮಗ ನಿರಂಕುಶ್‌ ಓದಿನ ಜೊತೆಗೆ ಬ್ಯಾಡ್ಮಿಂಟನ್‌ ಆಟಗಾರ ಕೂಡ. ನನ್ನ ವಿಚಾರಕ್ಕೆ ಬಂದರೆ ಹುಟ್ಟಿಂದಲೇ ಕ್ರಿಕೆಟ್‌ ಹುಚ್ಚು. ಮನೆಯಲ್ಲಿ ಎಲ್ಲರಿಗೂ ಕ್ರಿಕೆಟ್‌ ಪ್ರೀತಿ. ಈಟ್‌ ಕ್ರಿಕೆಟ್‌, ಡ್ರಿಂಕ್‌ ಕ್ರಿಕೆಟ್‌ ಅನ್ನುತ್ತಾರಲ್ಲಾ ಹಾಗೆ.

ಟಿ20 ವಿಶ್ವಕಪ್‌ ಇತಿಹಾಸದಲ್ಲೇ ಅತಿ ಕಡಿಮೆ ಮೊತ್ತ ರಕ್ಷಿಸಿಕೊಂಡ ಬಾಂಗ್ಲಾ ಸೂಪರ್‌-8 ಹಂತಕ್ಕೆ ಲಗ್ಗೆ..!

ಇಂಥಾ ಪರಿಸರದಲ್ಲಿ ಬೆಳೆದವನು ಮಗ ನೊಸ್ತುಶ್‌. ಮೂರು- ನಾಲ್ಕನೇ ಕ್ಲಾಸಿನಲ್ಲಿರುವಾಗಲೇ ನಮ್ಮ ತೋಟದ ಹುಡುಗರನ್ನೆಲ್ಲ ಸೇರಿಸಿ ಟೀಮ್‌ ಮಾಡಿಕೊಂಡು ಕ್ರಿಕೆಟ್‌ ಆಡುತ್ತಿದ್ದ. ಇಡೀ ದಿನ ಕ್ರಿಕೆಟ್‌. ನಾವು ಕ್ರಿಕೆಟ್‌ನಲ್ಲಿ ಅಂಥಾ ಎಕ್ಸ್‌ಪರ್ಟ್‌ ಆಗಿರದ ಕಾರಣ ಆತನ ಪ್ರತಿಭೆ ಎಂಥಾದ್ದು ಎಂದು ಗೊತ್ತಾಗುತ್ತಿರಲಿಲ್ಲ. ಆದರೆ ಆತನಿಗಿದ್ದ ಕ್ರಿಕೆಟ್‌ ಆಸಕ್ತಿ ನಮ್ಮ ಗಮನಕ್ಕೆ ಬಂದಿತ್ತು. ಹೀಗಾಗಿ ಬೆಂಗಳೂರಿನ ಬ್ರಿಜೇಶ್‌ ಪಟೇಲ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ ತರಬೇತುದಾರ ಇರ್ಫಾನ್‌ ಸೇಠ್‌ ಬಳಿ ಕೋಚಿಂಗ್‌ಗೆ ಸೇರಿಸಿದೆವು. ನೊಸ್ತುಶ್‌ ಪ್ರತಿಭೆ ಏನು ಅಂತ ಗುರುತಿಸಿದ ಮೊದಲಿಗರು ಇರ್ಫಾನ್‌ ಸೇಠ್‌. ಆಟದ ಜೊತೆಗೆ ಈತನ ಶಿಸ್ತು ಕೂಡ ಅವರಿಗೆ ಬಹಳ ಇಷ್ಟವಾಯಿತು.’

ಇಷ್ಟು ಹೇಳಿದ ಪ್ರದೀಪ್‌ ಕೆಂಜಿಗೆ ಮಗ ನೊಸ್ತುಶ್‌ ವ್ಯಕ್ತಿತ್ವ ಎಂಥಾದ್ದು ಎಂಬುದನ್ನು ಒಂದೆರಡು ಸಂಗತಿಗಳ ಮೂಲಕ ವಿವರಿಸುತ್ತಾ ಹೋದರು.

‘ನೊಸ್ತುಶ್‌ ಕ್ರಿಕೆಟ್‌ ಪ್ರತಿಭೆ ಗುರುತಿಸಿದ ಕೋಚ್‌ ಇರ್ಫಾನ್‌ ಸೇಠ್‌ ಅವನಿಗೆ ಇಂಜಿನಿಯರಿಂಗ್‌ ಕಷ್ಟ ಆಗಬಹುದು, ಬೇರೆ ಕೋರ್ಸ್‌ ಮಾಡಿದರೆ ಉತ್ತಮ ಎಂದರು. ಆದರೆ ನನಗೆ ಈ ಬಗ್ಗೆ ಭಯ ಇತ್ತು. ಇಂಜಿನಿಯರಿಂಗ್‌ ಜೊತೆಗೇ ಕ್ರಿಕೆಟ್‌ ಎಂದು ಒತ್ತಿ ಹೇಳಿದೆ. ಪಾಪದ ಹುಡುಗ ನೊಸ್ತುಶ್‌ ನಮ್ಮ ಮಾತಿಗೆ ಎದುರಾಡಿದವನಲ್ಲ. ಇಲ್ಲೂ ಮರು ಮಾತಾಡದೇ ಒಪ್ಪಿಕೊಂಡ. ಅಷ್ಟೇ ಅಲ್ಲ, ಇಂಜಿನಿಯರಿಂಗ್‌ನಲ್ಲಿ ಕಷ್ಟದ ಸಬ್ಜೆಕ್ಟ್‌ ಅಂತಲೇ ಪರಿಗಣಿತವಾದ ಮೆಡಿಕಲ್‌ ಎಲೆಕ್ಟ್ರಾನಿಕ್ಸ್‌ ಓದಲು ಮುಂದಾದ. ಆಟದ ಜೊತೆಗೆ ಓದನ್ನೂ ಬ್ಯಾಲೆನ್ಸ್‌ ಮಾಡುತ್ತಾ ಹೋದ.

T20 World Cup 2024: ಇಂಗ್ಲೆಂಡ್‌ಗೆ ಡಬಲ್‌ ಲಕ್‌: ಸೂಪರ್‌-8ಗೆ ಲಗ್ಗೆ!

ಕಾಲ ಮುಂದೋಡುತ್ತಿತ್ತು. ಒಂದು ಹಂತದಲ್ಲಿ ಆತನ ನಡೆ ನಮಗೆಲ್ಲ ಅಚ್ಚರಿ ತಂದಿತು. ಮಗ ಕ್ರಿಕೆಟ್‌ ಅನ್ನು ಸಂಪೂರ್ಣ ನಿಲ್ಲಿಸಿಬಿಟ್ಟಿದ್ದ. ಯಾಕೆ ಎಂಬುದು ಗೊತ್ತಾಗಲಿಲ್ಲ. ಅದು ಆತನ ಕ್ರಿಕೆಟ್‌ ಬದುಕಿನ ಸಂಘರ್ಷದ ದಿನಗಳಾಗಿದ್ದವು ಎಂದು ಆಮೇಲೆ ತಿಳಿಯಿತು. ಇದಾಗಿ ಕೆಲವೇ ದಿನಗಳಲ್ಲಿ ಮನೆಗೆ ಸ್ಕ್ವಾಶ್‌ ಬ್ಯಾಟ್‌ ಬಂತು. ಆಗ ಗೊತ್ತಾಯಿತು, ಮಗ ಸ್ಕ್ವಾಶ್‌ ಆಟ ಶುರು ಹಚ್ಚಿಕೊಂಡಿದ್ದಾನೆ ಅಂತ. ಅದಕ್ಕೂ ಬೆಂಬಲ ನೀಡಿದೆವು. ಚೆನ್ನೈಯಲ್ಲಿ ಕೋಚಿಂಗ್‌ ಕೊಡಿಸಿದವು. ನೋಡ ನೋಡುತ್ತಿದ್ದಂತೆ ನೊಸ್ತುಶ್‌ ಸ್ಕ್ವಾಶ್‌ನಲ್ಲಿ ರಾಜ್ಯಕ್ಕೆ ನಂಬರ್‌ 1 ಸ್ಥಾನದಲ್ಲಿ ನಿಲ್ಲುವಷ್ಟು ಪರಿಣತಿ ಸಾಧಿಸಿದ.

ಈ ನಡುವೆ ಆತ ಉದ್ಯೋಗದ ನಿಮಿತ್ತ ಅಮೆರಿಕಾಕ್ಕೆ ಹೋದಾಗ ಮತ್ತೊಂದು ಅಧ್ಯಾಯ ಶುರುವಾಯಿತು. ಕ್ರಿಕೆಟ್‌ ಬದುಕು ಮತ್ತೆ ಚಿಗುರಿತು. ಉದ್ಯೋಗ ತೊರೆದ. ಬದುಕಿಗಾಗಿ ಸ್ಕ್ವಾಶ್‌ ಕೋಚಿಂಗ್‌ ನೀಡಿ ಉಳಿದ ಸಮಯ ಕ್ರಿಕೆಟ್‌ ಅಭ್ಯಾಸಕ್ಕೆ ಮೀಸಲಿಟ್ಟ. ಇದೆಲ್ಲ ನಮಗೆ ಗೊತ್ತಾದಾಗ ಬಹಳ ದಿನಗಳಾಗಿದ್ದವು.

ಕಳಪೆ ಆಟವಾಡಿ ಟಿ20 ವಿಶ್ವಕಪ್‌ನಿಂದ ಔಟ್‌: ಪಾಕ್‌ ಆಟಗಾರರ ಸಂಬಳ ಕಟ್‌?

ಆತ ಅಮೇರಿಕನ್‌ ರಾಷ್ಟ್ರೀಯ ಕ್ರಿಕೆಟ್‌ ತಂಡ ಸೇರಿದ್ದು, ಆ ನಂತರದ ಬೆಳವಣಿಗೆಗಳು, ಈ ವರ್ಷ ಟಿ20 ಟೀಮ್‌ಗೆ ಆಯ್ಕೆ ಆಗಿದ್ದು ಇತ್ಯಾದಿ ಕ್ರಿಕೆಟ್‌ ಆಸಕ್ತರಿಗೆ ತಿಳಿದ ವಿಚಾರಗಳೇ..’ ಎನ್ನುತ್ತಿರುವಾಗಲೇ ಐರ್ಲೆಂಡ್‌ ವಿರುದ್ಧ ಅಮೆರಿಕಾ ತಂಡದ ಆಟ ಶುರುವಾಗುವುದರಲ್ಲಿತ್ತು. ‘ಅಲ್ಲಿ ಮಳೆ ಬರುತ್ತಿದೆ ಅಂತೆ. ಇವತ್ತು ಮ್ಯಾಚ್‌ ನಡೆಯುತ್ತದೋ ಇಲ್ವೋ.. ’ ಎಂದ ಕೆಂಜಿಗೆ ಮರುಕ್ಷಣ, ‘ಯಾವ ಕಾರಣಕ್ಕೂ ವೈಭವೀಕರಿಸಿ ಬರೆಯಬೇಡಿ, ಹಾಗೇನಾದ್ರೂ ಬರೆದರೆ ಮತ್ತೆ ಕಾಲ್‌ ಮಾಡ್ತೇನೆ’ ಎನ್ನುತ್ತಾ ಮಾತು ಮುಗಿಸಿದರು.

ಸರ್ಕಾರಿ ಕಾಲೇಜು, ಬಿಎಂಟಿಸಿ ಬಸ್ಸು
ನೊಸ್ತುಶ್‌ಗೆ ಪಿಯುಸಿಯಲ್ಲಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಸೀಟು ಸಿಕ್ಕಿತ್ತು. ಆದರೆ ಇವರು ಅದನ್ನು ಬಿಟ್ಟು ಶೇಷಾದ್ರಿಪುರಂ ಸರ್ಕಾರಿ ಕಾಲೇಜು ಸೇರುತ್ತಾರೆ. ಬಿಎಂಟಿಸಿ ಬಸ್‌ನಲ್ಲಿ ಓಡಾಡುತ್ತಾ ಸರ್ಕಾರಿ ಮಾರ್ನಿಂಗ್‌ ಕಾಲೇಜಿನಲ್ಲಿ ಓದುತ್ತಾ, ಆಮೇಲಿನ ಸಮಯವನ್ನು ಕ್ರಿಕೆಟ್‌ಗೆ ಮೀಸಲಿಡುತ್ತಾರೆ. ‘ಈ ದಿನಗಳಲ್ಲಿ ನೊಸ್ತುಶ್‌ಗೆ ಸಾಮಾನ್ಯ ಬದುಕಿನ ಕಷ್ಟ ಸುಖಗಳ ಅರಿವು ದಕ್ಕುತ್ತಾ ಹೋಯಿತು’ಎನ್ನುತ್ತಾರೆ ಪ್ರದೀಪ್‌ ಕೆಂಜಿಗೆ.

ಮಧ್ಯರಾತ್ರಿ ಬಂದ ಕರೆ
ಮಧ್ಯರಾತ್ರಿ ಒಂದೂವರೆಯ ಸುಮಾರು. ಕೆಂಜಿಗೆ ಮನೆಯಲ್ಲಿ ನಾವೆಲ್ಲ ಗಾಢ ನಿದ್ದೆಯಲ್ಲಿದ್ದೆವು. ಮೊಬೈಲ್‌ ರಿಂಗಾಯ್ತು. ಅದು ಮಗ ನೊಸ್ತುಶ್‌ ಕರೆ. ಅಷ್ಟು ಹೊತ್ತಲ್ಲಿ ಕಾಲ್‌ ಬಂದರೆ ಎಂಥವರಿಗಾದರೂ ಎದೆ ಹೊಡೆದುಕೊಳ್ಳದೇ ಇರುತ್ತಾ.. ನಾನು ದಿಗಿಲಿನಲ್ಲೇ, ಹೆಲೋ ಅಂದೆ. ಆ ಕಡೆಯಿಂದ ಮಗ ಬಹಳ ಎಗ್ಸೈಟೆಡ್‌ ಆಗಿ ಹೇಳಿದ, ಅಪ್ಪಾ ಐ ಯ್ಯಾಮ್‌ ಸೆಲೆಕ್ಟೆಡ್‌.. ಏನಾಯ್ತೋ, ಎಂಥದ್ದಕ್ಕೋ ಸೆಲೆಕ್ಟ್‌ ಆಗಿದ್ದು ನೀನು? ತಲೆಬುಡ ಅರ್ಥ ಆಗದೇ ನಾನು ಕೇಳಿದರೆ, ಮಗ ತಾನು ಅಮೆರಿಕಾ ತಂಡದಿಂದ ಟಿ20 ವಿಶ್ವಕಪ್‌ಗೆ ಆಯ್ಕೆ ಆಗಿರುವ ಸಂಗತಿ ಹೇಳಿದ.

- ಪ್ರದೀಪ್‌ ಕೆಂಜಿಗೆ

ಮನೆಯಲ್ಲೇ ಕ್ರಿಕೆಟ್‌ ಆಟ
‘ನೊಸ್ತುಶ್‌ ಚಿಕ್ಕವನಿದ್ದಾಗ ಇಡೀ ದಿನ ಅವನ ಜೊತೆಗೆ ಕ್ರಿಕೆಟ್‌ ಆಡ್ತಿದ್ದೆ. ಅದು ಬಿಟ್ಟರೆ ಮನೆಯವರೆಲ್ಲ ಬಾಲ್‌ ಕ್ಯಾಚಿಂಗ್‌ ಆಡುತ್ತಿದ್ದೆವು. ಗೊತ್ತಿಲ್ಲದಿರುವ ದಿಕ್ಕಿನತ್ತ ಬಾಲ್‌ ಎಸೆಯಬೇಕು. ಯಾರು ಹಿಡೀತಾರೆ ಅಂತ ಸ್ಪರ್ಧೆ. ನೊಸ್ತುಶ್‌ ಯಾವಾಗಲೂ ಫಸ್ಟ್ ಬರುತ್ತಿದ್ದ’ ಎಂದು ಆ ದಿನಗಳನ್ನು ನೆನೆಯುತ್ತಾರೆ ಪ್ರದೀಪ್‌.

click me!