ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 30 ಮಂದಿ ಸಾವನ್ನಪ್ಪಿದ್ದು, 60 ಮಂದಿ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ ಮತ್ತು ಮೃತಪಟ್ಟವರ ಕುಟುಂಬಗಳಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಲಕ್ನೋ (ಜ.29): ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಯ ಬಗ್ಗೆ ಭಾರೀ ಬೇಸರ ವ್ಯಕ್ತಪಡಿಸಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶ ನೀಡಿದ್ದಾರೆ. ಅದರೊಂದಿಗೆ ಪ್ರಯಾಗ್‌ರಾಜ್‌ನಲ್ಲಿ ನಡೆದ ಘಟನೆಯಲ್ಲಿ ಒಟ್ಟು 30 ಮಂದಿ ಸಾವು ಕಂಡಿದ್ದನ್ನು ಖಚಿತಪಡಿಸಿದ್ದು,60 ಮಂದಿ ಗಾಯಾಳುವಾಗಿದ್ದಾರೆ ಎಂದು ತಿಳಿಸಿದ್ದಾರೆ. ಕಾಲ್ತುಳಿತದಲ್ಲಿ ಮೃತಪಟ್ಟ ವ್ಯಕ್ತಿಗಳಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ ಎಂದು ಯುಪಿ ಸಿಎಂ ತಿಳಿಸಿದ್ದಾರೆ.
ಮಹಾ ಕುಂಭಮೇಳದಲ್ಲಿ ಬೆಳಗಿನ ಜಾವ ಸಂಭವಿಸಿದ ಕಾಲ್ತುಳಿತದ ಪರಿಣಾಮವಾಗಿ ಹಲವಾರು ಜನರು ಗಾಯಗೊಂಡಿದ್ದಾರೆ. ಆ ಬಳಿಕ ಬ್ಯಾರಿಕೇಡ್‌ಗಳನ್ನು ಮುರಿದು ಜನ ನುಗ್ಗಿದ್ದರಿಂದ ಅಲ್ಲಿ ನೆರೆದಿದ್ದವರನ್ನು ತುಳಿದು ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಮೌನಿ ಅಮಾವಾಸ್ಯೆಯಂದು ನಡೆಯುವ ಅಮೃತ ಸ್ನಾನವು ಮಹಾ ಕುಂಭದ ಅತ್ಯಂತ ಮಹತ್ವದ ಆಚರಣೆಯಾಗಿದ್ದು, ಸುಮಾರು 10 ಕೋಟಿ ಯಾತ್ರಿಕರನ್ನು ಆಕರ್ಷಿಸುವ ನಿರೀಕ್ಷೆಯಿತ್ತು.
ಇಂದು ಮುಂಜಾನೆ ಘಟನೆಯ ವಿವರಗಳನ್ನು ಒದಗಿಸಿದ್ದ ಉತ್ತರ ಪ್ರದೇಶ ಪೊಲೀಸರು, ಒಂದು ಸ್ಥಳದಲ್ಲಿ ಭಕ್ತರ ದೊಡ್ಡ ಗುಂಪು ಜಮಾಯಿಸಿ ವಿವಿಧ ಪ್ರದೇಶಗಳನ್ನು ಗುರುತಿಸಲು ಹಾಕಲಾಗಿದ್ದ ಬ್ಯಾರಿಕೇಡ್ ಅನ್ನು ಮುರಿದಾಗ ಅವ್ಯವಸ್ಥೆ ಪ್ರಾರಂಭವಾಯಿತು ಎಂದು ಹೇಳಿದರು. "ನಂತರದ ಅವ್ಯವಸ್ಥೆ ಬ್ಯಾರಿಕೇಡ್ ಮುರಿದು ನೂಕುನುಗ್ಗಲಿಗೆ ಕಾರಣವಾಯಿತು" ಎಂದು ಪೊಲೀಸ್ ತಿಳಿಸಿದ್ದಾರೆ.
"ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ರಾಜ್ಯ ಸರ್ಕಾರದ ಪರವಾಗಿ ತಲಾ 25 ಲಕ್ಷ ರೂಪಾಯಿಗಳ ಆರ್ಥಿಕ ಸಹಾಯವನ್ನು ನಾವು ಘೋಷಿಸುತ್ತಿದ್ದೇವೆ. ನ್ಯಾಯಾಂಗ ಆಯೋಗವು ಇಡೀ ವಿಷಯವನ್ನು ಪರಿಶೀಲಿಸುತ್ತದೆ ಮತ್ತು ಕಾಲಮಿತಿಯೊಳಗೆ ರಾಜ್ಯ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸುತ್ತದೆ. ಈ ನಿಟ್ಟಿನಲ್ಲಿ, ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ಸ್ವತಃ ಒಮ್ಮೆ ಪ್ರಯಾಗ್‌ರಾಜ್‌ಗೆ ಭೇಟಿ ನೀಡುತ್ತಾರೆ ಮತ್ತು ಅಗತ್ಯವಿದ್ದರೆ ಆ ಎಲ್ಲಾ ಸಮಸ್ಯೆಗಳನ್ನು ಪರಿಶೀಲಿಸುತ್ತಾರೆ..." ಎಂದು ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
"ಮೃತಪಟ್ಟ 30 ಜನರಲ್ಲಿ 25 ಶವಗಳನ್ನು ಗುರುತಿಸಲಾಗಿದೆ. ಹೆಚ್ಚುವರಿಯಾಗಿ, ವೈದ್ಯಕೀಯ ಆರೈಕೆ ಪಡೆಯುತ್ತಿರುವ 60 ಜನರಲ್ಲಿ 35 ಜನರಿಗೆ ಗಂಭೀರ ಗಾಯಗಳಾಗಿ ಚಿಕಿತ್ಸೆ ನೀಡಲಾಗುತ್ತಿದೆ" ಎಂದು ಪೊಲೀಸ್ ಪ್ರತಿನಿಧಿ ತಿಳಿಸಿದ್ದಾರೆ.
ಪ್ರಯಾಗ್‌ರಾಜ್ ಕುಂಭಮೇಳ ಕಾಲ್ತುಳಿತ: ಬೆಳಗಾವಿಯ ತಾಯಿ-ಮಗಳು ದುರ್ಮರಣ
ಇಂದು ಮುಂಜಾನೆ ಘಟನೆಗೆ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ, "ಪ್ರಯಾಗರಾಜ್ ಮಹಾ ಕುಂಭದಲ್ಲಿ ಸಂಭವಿಸಿದ ಅಪಘಾತವು ಅತ್ಯಂತ ದುಃಖಕರವಾಗಿದೆ. ಈ ಅಪಘಾತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಭಕ್ತರಿಗೆ ನನ್ನ ಆಳವಾದ ಸಂತಾಪಗಳು. ಇದರೊಂದಿಗೆ, ಎಲ್ಲಾ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ" ಎಂದು ಹೇಳಿದ್ದಾರೆ.