ಹಬ್ಬ ಹಬ್ಬ: ದಾಖಲೆ ದರದಲ್ಲಿ ಉಡುಪಿ ಮಲ್ಲಿಗೆ ಮಾರಾಟ

By Govindaraj S  |  First Published Sep 3, 2022, 9:28 PM IST

ಜಿಲ್ಲೆಯ ಶಂಕರಪುರ ಮಲ್ಲಿಗೆಯ ಸುಗಂಧ ಅನುಭವಿಸಿದವರಿಗೆ ಗೊತ್ತು. ಅಪರೂಪದ ತಳಿಯ ಮಲ್ಲಿಗೆಯನ್ನು ಕಂಡರೆ ಪ್ರತಿಯೊಬ್ಬ ಮಹಿಳೆಯೂ ಮಾರು ಹೋಗುತ್ತಾರೆ, ದೇವರಿಗೆ ಈ ಮಲ್ಲಿಗೆ ಅರ್ಪಿಸುವುದೆಂದರೆ ಅದೊಂದು ಶ್ರೇಷ್ಠ ವಿಚಾರ, ಇಂತಹ ಅಪರೂಪದ ಉಡುಪಿ ಮಲ್ಲಿಗೆಯ ದರ ಮುಗಿಲು ಮುಟ್ಟಿದೆ. 


ವರದಿ: ಶಶಿಧರ ಮಾಸ್ತಿಬೈಲು, ಏಷಿಯಾನೆಟ್ ಸುವರ್ಣ ನ್ಯೂಸ್, ಉಡುಪಿ

ಉಡುಪಿ (ಸೆ.03): ಜಿಲ್ಲೆಯ ಶಂಕರಪುರ ಮಲ್ಲಿಗೆಯ ಸುಗಂಧ ಅನುಭವಿಸಿದವರಿಗೆ ಗೊತ್ತು. ಅಪರೂಪದ ತಳಿಯ ಮಲ್ಲಿಗೆಯನ್ನು ಕಂಡರೆ ಪ್ರತಿಯೊಬ್ಬ ಮಹಿಳೆಯೂ ಮಾರು ಹೋಗುತ್ತಾರೆ, ದೇವರಿಗೆ ಈ ಮಲ್ಲಿಗೆ ಅರ್ಪಿಸುವುದೆಂದರೆ ಅದೊಂದು ಶ್ರೇಷ್ಠ ವಿಚಾರ, ಇಂತಹ ಅಪರೂಪದ ಉಡುಪಿ ಮಲ್ಲಿಗೆಯ ದರ ಮುಗಿಲು ಮುಟ್ಟಿದೆ. ಅಪರೂಪದ ಹೂವನ್ನು ಆಘ್ರಾಣಿಸಬೇಕೆಂದರೆ, ಸಾವಿರಾರು ರೂಪಾಯಿ ತೆರಬೇಕಾದ ಪರಿಸ್ಥಿತಿ ಇದೆ. ಇದು ಹಬ್ಬದ ಸೀಸನ್. ಅದರಲ್ಲೂ ಬೀದಿಬೀದಿಗಳಲ್ಲಿ ಗಣೇಶ ವಿಗ್ರಹಗಳನ್ನು ಇಟ್ಟು ಜನ ಸಂಭ್ರಮಿಸುತ್ತಿದ್ದಾರೆ. ತಮ್ಮ ಇಷ್ಟ ದೇವರಿಗೆ ಉಡುಪಿ ಮಲ್ಲಿಗೆಯನ್ನು ಮುಡಿಗೇರಿಸಬೇಕೆನ್ನುವುದು ಪ್ರತಿಯೊಬ್ಬ ಕರಾವಳಿಗನ ಆಸೆಯಾಗಿರುತ್ತೆ.

Tap to resize

Latest Videos

ಶುಭ ಕಾರ್ಯಗಳು ಹೆಚ್ಚಾಗಿರುವ ಕಾರಣ ಇದೀಗ ಉಡುಪಿ ಮಲ್ಲಿಗೆಯ ದರ ಮುಗಿಲು ಮುಟ್ಟಿದೆ. ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸತತ 5ನೇ ದಿನವೂ ಶಂಕರಪುರ ಮಲ್ಲಿಗೆಗೆ ಗರಿಷ್ಠ ದರ ಲಭಿಸಿದ್ದು, ಶುಕ್ರವಾರ ಕಟ್ಟೆಯಲ್ಲಿ ಅಟ್ಟೆ ಹೂವಿಗೆ  2100 ರೂ. ನಿಗದಿಯಾಗಿತ್ತು. ಮಾರುಕಟ್ಟೆಯಲ್ಲಿ ಈ ಹೂವು  2250 ರೂ ವರೆಗೂ ಮಾರಾಟವಾಗಿದೆ. ಉಡುಪಿಯಲ್ಲಿ ಮಲ್ಲಿಗೆಯನ್ನು ಚೆಂಡು ಮತ್ತು ಅಟ್ಟೆ ಲೆಕ್ಕಾಚಾರದಲ್ಲಿ ಮಾರಲಾಗುತ್ತೆ. ಒಂದು ಚೆಂಡು ಮಲ್ಲಿಗೆ ಹಾರದಲ್ಲಿ ಸುಮಾರು 800 ಮಲ್ಲಿಗೆ ಮೊಗ್ಗುಗಳು ಇರುತ್ತವೆ. ಇಂತಹ 800 ಮಲ್ಲಿಗೆ ಮೊಗ್ಗುಗಳ ನಾಲ್ಕು ಹಾರವನ್ನು ಒಂದು ಅಟ್ಟೆ ಎಂದು ಕರೆಯುತ್ತಾರೆ. ಅಂದರೆ 3200 ಮಲ್ಲಿಗೆ ಹೂವಿನ ದರ ಅಂದಾಜು ಎರಡುವರೆ ಸಾವಿರ ರೂಪಾಯಿ ವರೆಗೂ ಏರಿರುವುದು ಒಂದು ದಾಖಲೆಯಾಗಿದೆ. 

ಒಂದು ಕೋಟಿ ರೂಪಾಯಿ ದಾನ ಮಾಡಿದ ಕೂಲಿ ಕಾರ್ಮಿಕ, ಇದು ಹೃದಯ ಶ್ರೀಮಂತನ ಕಥೆ

ಈ ಬಾರಿ ವಿಪರೀತ ಮಳೆಯಿಂದ ಶಂಕರಪುರ ಮಲ್ಲಿಗೆಯ ಇಳುವರಿ ಇಳಿಮುಖವಾಗಿದೆ. ಹಬ್ಬಗಳು ಬಂದಾಗ ಸಹಜವಾಗಿಯೇ ಈ ಮಲ್ಲಿಗೆ ಬೇಡಿಕೆ ಹೆಚ್ಚಾಗಿರುತ್ತದೆ. ಬೇಡಿಕೆಗೆ ಅನುಸಾರವಾಗಿ ಮಲ್ಲಿಗೆಯ ಲಭ್ಯತೆ ಇಲ್ಲದೆ ಹೋದಾಗ ದರ ಏರಿಕೆಯಾಗುತ್ತದೆ. ಉಡುಪಿಯ ಶಂಕರಪುರ ಮಲ್ಲಿಗೆಗೆ ಸರಿಸಾಟಿಯಾಗುವ ಮತ್ತೊಂದು ಹೂವು ಇಲ್ಲ. ಇದೇ ಕಾರಣದಿಂದ ಸಾವಿರಾರು ರೂಪಾಯಿ ತೆತ್ತಾದರೂ ಶಂಕರಪುರ ಮಲ್ಲಿಗೆಯನ್ನು ಜನ ಖರೀದಿಸುತ್ತಾರೆ. ಉಡುಪಿಯ ಮಲ್ಲಿಗೆ ಸಿಗಲೇ ಇಲ್ಲವೆಂದರೆ ಭಟ್ಕಳ ಮಲ್ಲಿಗೆಯನ್ನು ತರಿಸುತ್ತಾರೆ. ಸದ್ಯ ಭಟ್ಕಳ ಮಲ್ಲಿಗೆಯ ದರ ಯಥಾ ಸ್ಥಿತಿಯಲ್ಲಿದ್ದು 1530 ರೂಪಾಯಿಗೆ ಲಭಿಸುತ್ತಿದೆ. 

ಬೇಡಿಕೆ ಹೆಚ್ಚಾದಾಗ 1630 ರೂಪಾಯಿಗೂ ಮಾರಾಟವಾಗಿದೆ. ಉಡುಪಿಯ ಶಂಕರಪುರ ಮಲ್ಲಿಗೆ ಒಂದು ಅಪರೂಪದ ತಳಿ. ತನ್ನ ಸುಗಂಧ ಹಾಗೂ ತಾಜಾತನದಿಂದ ಈ ಹೂವು ಕರಾವಳಿಗರ ಪ್ರೀತಿಗೆ ಪಾತ್ರವಾಗಿದೆ. ಕೇವಲ ಉಡುಪಿ ಮಂಗಳೂರು ಮಾತ್ರವಲ್ಲ ಕರಾವಳಿಗಳು ಹೆಚ್ಚಾಗಿ ವಾಸಿಸುವ ಮುಂಬೈ ದುಬೈಗೂ ಈ ಹೂವು ರಫ್ತಾಗುತ್ತದೆ. ಉಡುಪಿಯ ಕಾಪು ತಾಲೂಕಿನ ಶಂಕರಪುರ ಎಂಬ ಒಂದು ಗ್ರಾಮದಲ್ಲಿ ಈ ಮಲ್ಲಿಗೆ ಬೆಳೆಯಲಾಗುತ್ತೆ. ಈ ಮಣ್ಣಿನ ಗುಣದಿಂದಾಗಿ ಮಲ್ಲಿಗೆ ವಿಶೇಷ ಸುಗಂಧ ಇರುತ್ತೆ. ಹಾಗಾಗಿ ಈ ಅಪರೂಪದ ತಳಿಗೆ ಜಿಯೋಗ್ರಾಫಿಕಲ್ ಐಡೆಂಟಿಫಿಕೇಶನ್ ಮಾನ್ಯತೆ ಕೂಡ ದೊರತಿದೆ. 

Ganesh Chaturthi: ಉಡುಪಿ ಗಣೇಶ ಉತ್ಸವದಲ್ಲಿ ಸಾವರ್ಕರ್ ಭಾವಚಿತ್ರ ಪುಸ್ತಕ ಮಾರಾಟ

ಮುಂದಿನ ದಿನಗಳಲ್ಲಿ ನವರಾತ್ರಿ ಹಬ್ಬ ಬರುವುದರಿಂದ, ಈ ಮಲ್ಲಿಗೆ ಹೂವಿನ ಬೇಡಿಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ. ಮತ್ತೆ ಮಳೆ ಆರಂಭವಾದರೆ ಮಲ್ಲಿಗೆ ಇಳುವರಿ ಕಡಿಮೆಯಾಗಲಿದ್ದು, ದರ ಹೆಚ್ಚಾಗುವ ಸಾಧ್ಯತೆ ಇದೆ. ಷೇರು ಮಾರುಕಟ್ಟೆಯ ಏರುಪೇರಿನಂತೆ ಪ್ರತಿದಿನ ಮಲ್ಲಿಗೆ ದರ ವ್ಯತ್ಯಾಸವಾಗುತ್ತದೆ. ಸಾಂಪ್ರದಾಯಿಕ ಪದ್ಧತಿಯಂತೆ ಶಂಕರಪುರದ ಕೆಲವು ಕಟ್ಟೆಗಳಲ್ಲಿ ಮಲ್ಲಿಗೆಯ ದರ ನಿಗದಿಯಾಗುತ್ತೆ. ಮುಂದೆ ಅಲ್ಲಿಂದ ಮಾರುಕಟ್ಟೆಗೆ ರವಾನೆಯಾಗುವ ಹೂವನ್ನು ಗ್ರಾಹಕರು ಖರೀದಿಸಬೇಕು. ದಶಕಗಳಿಂದ ಈ ಸಾಂಪ್ರದಾಯಿಕ ಮಾರುಕಟ್ಟೆ ವ್ಯವಸ್ಥೆ ನಡೆದು ಬಂದಿದೆ.

click me!