ಉಚ್ಚಿಲ ದಸರಾ ವಿಶೇಷ: ಏಕಕಾಲದಲ್ಲಿ ನೂರು ವೀಣೆಗಳ‌ ಝೇಂಕಾರ

By Suvarna News  |  First Published Oct 1, 2022, 11:03 AM IST

ಲಲಿತಾ ಪಂಚಮಿಯ ದಿನ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಏಕಕಾಲದಲ್ಲಿ ನೂರಕ್ಕೂ ಅಧಿಕ ವೀಣಾ ವಾದಕರು ವೀಣೆ ನುಡಿಸಿ ಹೊಸತೊಂದು ಲೋಕವನ್ನೇ ಸೃಷ್ಟಿಸಿದ್ದರು. 


ವರದಿ- ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಕರಾವಳಿಯ ದಸರಾಕ್ಕೆ ಈ ಬಾರಿ ಉಡುಪಿಯ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನ ಹೊಸ ಮೆರಗು ನೀಡಿದೆ. ಕರ್ನಾಟಕದ ಕೊಲ್ಲಾಪುರ ಖ್ಯಾತಿಯ ಈ ದೇವಸ್ಥಾನದಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ವೈಭವಯುತವಾಗಿ ದಸರಾ ಮಹೋತ್ಸವ ಜರುಗುತ್ತಿದೆ. ನವರಾತ್ರಿಯ ಕಾಲದಲ್ಲಿ ಲಕ್ಷಾಂತರ ಜನರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದು, ಶತವೀಣಾವಲ್ಲರಿ ಎನ್ನುವ ವಿಶೇಷ ಕಾರ್ಯಕ್ರಮ ಭಕ್ತರ ಮನಸೂರೆಗೊಂಡಿದೆ.

Latest Videos

undefined

ಲಲಿತಾ ಪಂಚಮಿ(Lalita Panchami)ಯ ದಿನ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನ(Uchila Mahalakshmi Temple)ದಲ್ಲಿ ಏಕಕಾಲದಲ್ಲಿ ನೂರಕ್ಕೂ ಅಧಿಕ ವೀಣಾ ವಾದಕರು ಶತವೀಣಾವಲ್ಲರಿ ಕಾರ್ಯಕ್ರಮ ನಡೆಸಿಕೊಟ್ಟರು. ಏಕಕಾಲದಲ್ಲಿ 100 ವೀಣೆಗಳ ಝೇಂಕಾರ ಕೇಳುವುದೇ ಒಂದು ರೋಚಕ ಅನುಭವವಾಗಿತ್ತು. ದೇವಾಲಯದ ಆವರಣದ ವೇದಿಕೆಯಲ್ಲಿ ಒಂದೇ ಬಣ್ಣದ ಉಡುಗೆ ತೊಟ್ಟು, ಸಾಲಾಗಿ ಕುಳಿತ ಕಲಾವಿದರು ಹಲವು ನಿಮಿಷಗಳ ಕಾಲ ಅದ್ಭುತ ಸ್ವರಮಾಧುರ್ಯ  ಹೊರಡಿಸಿದರು.

ದಕ್ಷಿಣ ಭಾರತದಲ್ಲಿಯೇ ಇದೊಂದು ಅಪರೂಪದ ಕಾರ್ಯಕ್ರಮ ಎಂದು ಹೇಳಲಾಗುತ್ತಿದೆ. ವೀಣಾ ಸಮೂಹದ ಸ್ವರಸಾಂಗತ್ಯಕ್ಕೆ ಸಾವಿರಾರು ಜನರು ಸಾಕ್ಷಿಯಾದರು. ಮಣಿಪಾಲದ ಕಲಾಸ್ಪಂದನ ಸಂಸ್ಥೆಯ ನಿರ್ದೇಶಕಿ ಪವನ ಬಿ ಆಚಾರ್ ಅವರ ನೇತೃತ್ವದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಸುಮಾರು 101 ವೀಣಾ ವಾದಕರು ಭಾಗವಹಿಸಿದ್ದರು. ಜೊತೆಗೆ 14 ಜನ ಮಂದಿ ಸಹ ವೀಣಾ ವಾಧಕರು ಮತ್ತು 6 ಮಂದಿ ಅವನದ್ಧವಾದಕರು, ನಡೆಸಿಕೊಟ್ಟ ಕಾರ್ಯಕ್ರಮಕ್ಕೆ ಹತ್ತು ಸಾವಿರಕ್ಕೂ ಅಧಿಕ ಪ್ರೇಕ್ಷಕರು ಸಾಕ್ಷಿಯಾದರು.



ಇದೇ ವೇಳೆ ಹಿರಿಯ ಕಲಾವಿದೆ ವಿದುಷಿ ಪವನಾ ಬಿ ಆಚಾರ್ ಅವರಿಗೆ ವೀಣಾ ವಿನೋದನಿ ಎನ್ನುವ ಪ್ರಶಸ್ತಿಯನ್ನು ನೀಡಲಾಯಿತು. ಮೊಗವೀರ ಮಹಾಜನ ಸಂಘದ ವತಿಯಿಂದ ಈ ಪ್ರಶಸ್ತಿ ನೀಡಲಾಗಿತ್ತು.

ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಪ್ರತಿದಿನ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯುತ್ತಿವೆ. ನವರಾತ್ರಿ ಪ್ರಯುಕ್ತ ಲಲಿತ ಪಂಚಮಿ ಹಬ್ಬದಂದು ದೇವಳದ ವತಿಯಿಂದ ಸುಮಾರು 5000 ಮಂದಿ ಸಮಂಗಲಿಯರಿಗೆ ಸೀರೆ ವಿತರಿಸಲಾಯಿತು. ಈ ಎಲ್ಲಾ ಮಹಿಳೆಯರು ಸಾಮೂಹಿಕ ಕುಂಕುಮಾರ್ಚನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಶಾಸ್ತ್ರಬದ್ಧವಾಗಿ ಕುಂಕುಮರ್ಚನೆ ನಡೆಸಿಕೊಟ್ಟರು. ಬೆಳಿಗ್ಗೆ ಚಂಡಿಕಾ ಹೋಮ, ನವದುರ್ಗೆಯರಿಗೆ ಮಹಾಮಂಗಳಾರತಿ, ಮಹಾಪೂಜೆ ಹಾಗೂ ಸಾವಿರಾರು ಜನರಿಗೆ ಅನ್ನ ಸಂತರ್ಪಣೆಯೂ ನಡೆಯಿತು ಶ್ರೀ ಅಂಬಿಕಾ ಕಲ್ಪೋಕ್ತ ಪೂಜೆ ಮತ್ತು ಪ್ರಸಾದ ವಿತರಣೆಯೊಂದಿಗೆ ಲಲಿತಾ ಪಂಚಮಿಯ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು.

ಈ ಬಾರಿ ಬ್ರಹ್ಮಕಲಶೋತ್ಸವದೊಂದಿಗೆ ಮರು ನಿರ್ಮಾಣಗೊಂಡ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಅತ್ಯಂತ ಅದ್ದೂರಿಯಾಗಿ ದಸರಾ ಹಬ್ಬ ಆಚರಿಸಲಾಗುತ್ತಿದೆ. ಉಡುಪಿ ಜಿಲ್ಲೆಯ ಗಡಿಭಾಗದಿಂದ ಉಚ್ಚಿಲದ  ವರೆಗಿನ ಹತ್ತಾರು ಕಿಲೋಮೀಟರ್ ಮಾರ್ಗದ ಉದ್ದಕ್ಕೂ, ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.

click me!