ದಸರಾ ಅಂದ್ರೇನೇ ಗೊಂಬೆ ಹಬ್ಬ. ಮನೆಗಳಲ್ಲಿ ಗೊಂಬೆಗಳನ್ನು ಕೂರಿಸಿ ಪ್ರದರ್ಶಿಸುವ ಸಂಪ್ರದಾಯವಿದೆ. ಉಡುಪಿಯ ಈ ಕುಟುಂಬ ಕಳೆದ 50 ವರ್ಷಗಳಿಂದ ದಸರಾ ಗೊಂಬೆ ಕೂರಿಸುತ್ತಿದೆ.
ವರದಿ- ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ದಸರಾ ಗೊಂಬೆಗಳು ಎಂದರೆ ತಕ್ಷಣ ನೆನಪಾಗುವುದು ಮೈಸೂರು. ಆದರೆ ಹಳೆ ಮೈಸೂರಿನ ಭಾಗವಾಗಿದ್ದ ಕರಾವಳಿಯ ನೆಲದಲ್ಲೂ ಕೂಡ ಕೆಲವರು ದಸರಾ ಗೊಂಬೆ ಕೂರಿಸುವ ಸಂಪ್ರದಾಯ ಬೆಳೆಸಿಕೊಂಡು ಬಂದಿದ್ದಾರೆ. ಸುಮಾರು ನಾಲ್ಕು ತಲೆಮಾರುಗಳಿಂದ ನವರಾತ್ರಿ ಸಂದರ್ಭದಲ್ಲಿ ದಸರಾ ಗೊಂಬೆಗಳನ್ನು ಇಡುವ ಆಚರಣೆಯನ್ನು ಉಡುಪಿಯಲ್ಲೊಂದು ಕುಟುಂಬ ಪಾಲಿಸಿಕೊಂಡು ಬಂದಿದೆ. ನಿವೃತ್ತ ಬ್ಯಾಂಕ್ ಉದ್ಯೋಗಿಯೋರ್ವರು ತಲೆತಲಾಂತರದ ಈ ಪದ್ದತಿಯನ್ನು ಮುಂದುವರಿಸಿದ್ದಾರೆ.ಈ ಬಾರಿ ಇವರ ದಸರಾ ಗೊಂಬೆಗಳಿಗೆ ಸುವರ್ಣ ಮಹೋತ್ಸವದ ಸಡಗರ!
ದಸರಾ ಕೇವಲ ಸರ್ಕಾರಿ ಆಚರಣೆಯ ನಾಡ ಹಬ್ಬ ಮಾತ್ರವಲ್ಲ , ಮನೆ ಮನೆಯಲ್ಲೂ ಜಾತ್ರೆಯ ಸೊಬಗು ಮೇಳೈಸುತ್ತದೆ. ಹೌದು ಉಡುಪಿ ಜಿಲ್ಲೆಯ ಉದ್ಯಾವರ ಆರೂರು ತೋಟದ ಯು. ಶ್ರೀನಿವಾಸ ಭಟ್, ದಸರಾ ಬೊಂಬೆಗಳ ಆರಾಧಕ. ನವರಾತ್ರಿಯ ಪರ್ವಕಾಲದಲ್ಲಿ ಗೊಂಬೆಯನ್ನು ಕೂರಿಸಿ ಆರಾಧಿಸುವ ಇವರ ಕುಟುಂಬ ಸುಮಾರು ನಾಲ್ಕು ತಲೆಮಾರುಗಳಿಂದಲೂ ಇದೇ ಆಚರಣೆ ಮುಂದುವರಿಸಿಕೊಂಡು ಬಂದಿದೆ.
ಯು. ಶ್ರೀನಿವಾಸ ಭಟ್ ಅವರು ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿಯಾಗಿದ್ದ ಸಂದರ್ಭ 1972ರಲ್ಲಿ ಹೈದರಾಬಾದ್ ನಲ್ಲಿದ್ದಾಗ ಈ ದಸರಾ ಬೊಂಬೆ ಆರಾಧನೆ ಪ್ರಾರಂಭಿಸಿದ್ದರು. ಬಳಿಕ ವರ್ಗಾವಣೆ ಪಡೆದು ತೆರಳಿದ ಊರುಗಳಲ್ಲಿಯೂ ಪೂಜೆಯನ್ನು ಮುಂದುವರೆಸುತ್ತಾ ಬಂದಿದ್ದು, ತೆರಳಿದ ಊರುಗಳಲ್ಲಿ ಮನೆಯವರೆಲ್ಲರಿಗೂ ಗೊಂಬೆಯನ್ನು ಖರೀದಿಸುತ್ತಾ ಅದನ್ನು ಸಂಗ್ರಹಿಸುತ್ತಾ ಬಂದಿದ್ದಾರೆ.
ರಾಮನಗರ: ಮನೆ ಮನೆಗಳಲ್ಲಿ ರಾರಾಜಿಸುತ್ತಿರುವ ದಸರಾ ಬೊಂಬೆಗಳು..!
ಇವರ ಸಂಗ್ರಹದಲ್ಲಿ ಮರ, ಮಣ್ಣು, ಪಿಂಗಾಣಿ ಸಹಿತ ಇತರೇ ವಸ್ತುಗಳಿಂದ ಸಿದ್ಧಪಡಿಸಿದ ಗೊಂಬೆಗಳಿವೆ. ಪೂಜಿಸಲ್ಪಟ್ಟ ದುರ್ಗೆಯ ಗೊಂಬೆಯನ್ನು ಅಡ್ಡಲಾಗಿ ಮಲಗಿಸಿ ವಿಸರ್ಜನೆಯ ಕ್ರಮವನ್ನು ಪಾಲಿಸುತ್ತಾರೆ. ಈ ಬಾರಿಯೂ ಇದೇ ಪದ್ದತಿಯಂತೆ ದಸರಾ ಗೊಂಬೆಯ ಆರಾಧನೆಯು ಸಂಪನ್ನಗೊಳ್ಳಲಿದೆ.
ನವರಾತ್ರಿಯ ಸಂದರ್ಭ ಎಲ್ಲರೂ ಬ್ಯುಸಿ ಇರುವುದರಿಂದ 15 ದಿನಗಳ ಕಾಲ ಈ ಗೊಂಬೆಯ ಪೂಜೆ, ಪ್ರದರ್ಶನ ನಡೆಸುತ್ತಾರೆ, ಹೆಚ್ಚಿನ ಸಂಖ್ಯೆಯಲ್ಲಿ ಜನರು ವೀಕ್ಷಣೆಗೆ ಬರುತ್ತಿದ್ದರೆ ಮನೆ ಮಂದಿಗೆ ಖುಷಿಯೋ ಖುಷಿ.
ಈ ಬಾರಿ ಈ ಆರಾಧನಾ ಪದ್ಧತಿ ಆರಂಭಿಸಿ 50 ವರ್ಷಗಳು ತುಂಬುತ್ತಿದ್ದು, ಅದಕ್ಕಾಗಿಯೇ ವಿಶೇಷವಾಗಿ ಕಲಾವಿದ ವಿಶ್ವೇಶ್ವರ ಪರ್ಕಳ ಅವರ ಮೂಲಕ ಕನಕ ಗೋಪುರ, ಕನಕನ ಕಿಂಡಿ, ಶ್ರೀ ಕೃಷ್ಣ ಮಠ, ರಥವನ್ನು ನಿರ್ಮಿಸಿದ್ದಾರೆ. ಕನಕನ ಕಿಂಡಿಯ ಮೂಲಕ ಶ್ರೀ ಕೃಷ್ಣ ಮುಖ್ಯಪ್ರಾಣನ ದರ್ಶನ ಭಾಗ್ಯ ದ ಚಿತ್ರಣ ವಿಶೇಷ ಆಕರ್ಷಣೆಯಾಗಿದೆ. ಅದರ ಮುಂಭಾಗದಲ್ಲಿ ರಂಗವಲ್ಲಿ ಕಲೆಯ ಮೂಲಕ ಆಕರ್ಷಣೀಯವಾಗಿ ಸಂತ ಶ್ರೇಷ್ಠ ಆಚಾರ್ಯ ಮಧ್ವರು ಮತ್ತು ಶ್ರೀ ಕೃಷ್ಣನ ವಿಗ್ರಹವನ್ನು ಹಿಡಿದ ಮಾದರಿಯು ನೋಡುಗರನ್ನು ಮತ್ತಷ್ಟು ಭಾವುಕರನ್ನಾಗಿಸುತ್ತಿದೆ.
ಇವರು ತಮ್ಮ ಮನೆಯಲ್ಲಿ ಸಾವಿರಕ್ಕೂ ಅಧಿಕ ಗೊಂಬೆಗಳನ್ನು ಆರಾಧಿಸುತ್ತಿದ್ದು, ನವರಾತ್ರಿಯ ಆರಂಭದಲ್ಲಿ ಕಲಶವನ್ನು ಏರಿಸಿ ದುರ್ಗೆಯ ಗೊಂಬೆಯನ್ನು ಇರಿಸಿ ಪೂಜಿಸುತ್ತಾರೆ. ಸಂಜೆ ಮಹಿಳೆಯರೆಲ್ಲಾ ಸೇರಿ ಸಂಗೀತ, ಭಜನೆಯೊಂದಿಗೆ ಆರತಿ ಬೆಳಗಿಸುವುದು ಪೂಜಾ ಸಂಪ್ರದಾಯವಾಗಿದೆ. ಇನ್ನು ಶಾಲಾ ವಿದ್ಯಾರ್ಥಿಗಳ ದಂಡು ವೀಕ್ಷಣೆಗಾಗಿಯೇ ಬರುತ್ತಾರೆ.
ನೂರಾರು ಸಾರ್ವಜನಿಕರು ಈ ಪ್ರದರ್ಶನ ಕಂಡು ಭಕ್ತಿಭಾವ ಪ್ರಕಟಿಸುತುತ್ತಾರೆ. ಗಣಪತಿ, ರಾಮ, ಸೀತೆ, ಲಕ್ಷ್ಮಣ, ಅಷ್ಟ ಲಕ್ಷ್ಮಿಯರ ಸಹಿತ ವಿಶೇಷವಾಗಿ ಧರ್ಮ ಸಂದೇಶವನ್ನು ಸಾರುವಂತಹ ವಿಶ್ವ ರೂಪ ದರ್ಶನ, ರಾವಣ ದರ್ಬಾರು, ಅರಗಿನ ಅರಮನೆ, ದಶಾವತಾರ, ಗಜೇಂದ್ರ ಮೋಕ್ಷ, ಶ್ರೀ ರಾಮನ ಪಟ್ಟಾಭಿಷೇಕ, ಆಚಾರ್ಯ ಭೀಷ್ಮರ ಶರಶಯ್ಯೆ ವಿಶೇಷವಾಗಿ ಗಮನ ಸೆಳೆಯುತ್ತಿದೆ.
ನವರಾತ್ರಿ ಹಬ್ಬಕ್ಕೆ ಇಲ್ಲಿ ಪುರುಷರೂ ಸೀರೆಯುಟ್ಟು ಡ್ಯಾನ್ಸ್ ಮಾಡ್ತಾರೆ !
ರಷ್ಯಾ, ಕೌಲಾಲಂಪುರ, ಮಲೇಷ್ಯಾ, ದುಬೈ ಸಹಿತ ವಿದೇಶದಲ್ಲಿಯೂ ಖರೀದಿಸಿದ ಗೊಂಬೆಗಳು ಆಕರ್ಷಿಸುತ್ತಿದೆ. ಒಟ್ಟಾರೆಯಾಗಿ ಹಳೆ ಮೈಸೂರು, ಕೇರಳ, ತಮಿಳ್ನಾಡು, ಆಂದ್ರ ರಾಜ್ಯಗಳಲ್ಲಿ ಕಂಡು ಬರುವ ಗೊಂಬೆ ಆರಾಧನೆಯು ಉಡುಪಿಯ ಉದ್ಯಾವರದಲ್ಲಿ 50 ರ ಸಂಭ್ರಮ ಕಾಣುತ್ತಿರುವುದು ಜಿಲ್ಲೆಯ ವಿಶೇಷ ಆಕರ್ಷಣೆಯಾಗಿದೆ.