Karthika 2022: ತುಳಸಿ ಕಟ್ಟೆ ಎದುರು ಕುಣಿಯುತ್ತಾ ಗಾನ ಪ್ರಿಯ ಕೃಷ್ಣನನ್ನು ಭಜಿಸೋ ಭಕ್ತರು

By Suvarna NewsFirst Published Oct 30, 2022, 1:39 PM IST
Highlights

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಹಾಗೂ ಇಲ್ಲಿನ ಮನೆಮನೆಗಳಲ್ಲೂ ಕಾರ್ತೀಕ ಮಾಸದುದ್ದಕ್ಕೂ ನಡೆಯುತ್ತದೆ ತುಳಸಿ ಸಂಕೀರ್ತನೆ. ಕೃಷ್ಣನಿಗಾಗಿ ತುಳಸಿಯ ಮುಂದೆ ಹಾಡುತ್ತಾ ಕುಣಿಯುತ್ತಾ ಜನರು ಸೇವೆ ಸಲ್ಲಿಸುತ್ತಾರೆ. 

ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್, ಉಡುಪಿ

ಪೊಡವಿಗೊಡೆಯ ಉಡುಪಿ ಕೃಷ್ಣ ಗಾನಪ್ರಿಯನೂ ಹೌದು. ಈ ಕಾರಣದಿಂದಲೇ ಉಡುಪಿಯ ಕೃಷ್ಣ ಮಠದಲ್ಲಿ ವಿಶೇಷವಾಗಿ ಕಾರ್ತಿಕ ಮಾಸದಲ್ಲಿ ತುಳಸಿ ಸಂಕೀರ್ತನಾ ಕಾರ್ಯಕ್ರಮ ನಡೆಯುತ್ತೆ. ದೀಪಾವಳಿಯಿಂದ ಆರಂಭವಾಗುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ನೂರಾರು ಕೀರ್ತನಕಾರರು ಹಾಡಿದ ಹರಿ ಕೀರ್ತನೆಗಳು ಕೃಷ್ಣ ಮಠದ ತುಂಬಾ ಅನುರಣಿಸುತ್ತವೆ.

ಕೇವಲ ಕೃಷ್ಣ ಮಠದಲ್ಲಿ ಮಾತ್ರವಲ್ಲ, ತಿಂಗಳಿಡೀ ಕೃಷ್ಣಭಕ್ತರ ಮನೆಮನೆಯಲ್ಲೂ ತುಳಸಿ ಸಂಕೀರ್ತನೆ ನಡೆಯುತ್ತದೆ. ಕುಟುಂಬದವರೇ ಕೂಡಿಕೊಂಡು ತುಳಸಿ ಕಟ್ಟೆಯ ಮುಂಭಾಗದಲ್ಲಿ ಸಂಕೀರ್ತನೆ ಮಾಡುತ್ತಾರೆ, ಅಥವಾ ಆಹ್ವಾನಿತ ತಂಡಗಳನ್ನು ಕರೆಸಿ ವಿಶೇಷ ಕಾರ್ಯಕ್ರಮ ಏರ್ಪಡಿಸುತ್ತಾರೆ.

ಶ್ರೀ ಕೃಷ್ಣ ಪರಮಾತ್ಮನು ಆಷಾಢ ಮಾಸದ ದ್ವಾದಶಿ ಯಿಂದ ಕಾರ್ತಿಕ ಮಾಸದ ದ್ವಾದಶಿಯವರೆಗೂ ಯೋಗ ನಿದ್ರೆಯಲ್ಲಿ ಇರುತ್ತಾನೆ. ಯೋಗ ನಿದ್ರೆಯಿಂದ ಮತ್ತೆ ಭಗವಂತನ್ನು ಎಚ್ಚರ ಗೊಳ್ಳಿಸಲು ಅನೇಕ ಆಚರಣೆಗಳು ಚಾಲ್ತಿಯಲ್ಲಿದೆ. ಕ್ಷೀರಸಾಗರದಲ್ಲಿ ಯೋಗ ನಿದ್ರೆಯಲ್ಲಿ ಇರುವ ಭಗವಂತ ತುಳಸಿಯ ಸಾನಿಧ್ಯದಲ್ಲಿ ಎದ್ದು ಬರುತ್ತಾನೆ ಅನ್ನೊದು ಹರಿಭಕ್ತರ ನಂಬಿಕೆ.

ದೇವರನ್ನು ಪೂಜಿಸುವಾಗ ಅನುಸರಿಸಲೇಬೇಕಾದ 15 ನಿಯಮಗಳು..

ಭಗಂವತನಿಗೆ ಪೂಜೆ ಮಂಗಳ ವಾದ್ಯಗಳು ಇಲ್ಲದೇ ಹೋದರೂ ತೊಂದರೆಯಿಲ್ಲ, ದಿನದ ಪೂಜೆಗೆ ತುಳಸಿಯಂತೂ ಬೇಕೇ ಬೇಕು. ತುಳಸಿ ಇಲ್ಲದ ಪೂಜೆಯನ್ನು ಹರಿಯು ಒಲ್ಲನು ಎಂಬ ಮಾತಿದೆ. ದಾಸರು ಕೂಡಾ ಈ ಕುರಿತು ಕೀರ್ತನೆಗಳನ್ನು ಬರೆದಿದ್ದಾರೆ. ಹಾಗಾಗಿ ಕಾರ್ತಿಕ ದ್ವಾದಶಿಗೆ ಮುನ್ನ ತುಳಸಿ ಸಂಕಿರ್ತನೆ ನಡೆಸುವುದು ಕರಾವಳಿಯ ಸಂಪ್ರದಾಯ.

ನಾಲ್ಕು ಶತಮಾನಗಳ ಮುಂಚೆ ವಾದಿರಾಜ ಸ್ವಾಮಿಗಳು ಹಾಕಿಕೊಟ್ಟ ಪರಂಪರೆ ಇನ್ನೂ ಕೂಡ ನಡೆದುಕೊಂಡು ಬಂದಿದೆ. ಬದುಕಿನ ಪಾಠವನ್ನು ಭಗವದ್ಗೀತೆಯ ಮೂಲಕ ಸಾರಿದ ಶ್ರೀ ಕೃಷ್ಣ ದೇವರು, ಬಾಲ್ಯದ ಆಟಗಳ ಮೂಲಕ ಅದೆಷ್ಟೋ ನೀತಿ ಪಾಠಗಳನ್ನು ಈ ಜಗತ್ತಿಗೆ ತೋರಿಸಿದ್ದಾನೆ. ಬಾಲ್ಯದಿಂದಲೇ ಗೋಪಿಕೆಯರೊಂದಿಗೆ ಹಾಡು ನೃತ್ಯಗಳಲ್ಲಿ ಸಂಭ್ರಮಿಸಿದ ಅದೆಷ್ಟೋ ಕತೆಗಳಿವೆ. ಈ ಕಾರಣದಿಂದ ಉಡುಪಿಯ ಕೃಷ್ಣನಿಗೆ ಗಾನ-ನೃತ್ಯ ಸೇವೆ ನಿರಂತರವಾಗಿ ನಡೆಯುತ್ತೆ. 

ಭಕ್ತ ಜನ ಮೈಮರೆತು ಭಜನೆ ಹಾಡುತ್ತಾರೆ. ಇಂತಹುದೇ ಒಂದು ವಿಶಿಷ್ಟ ಕಾರ್ಯಕ್ರಮ ತುಳಸಿ ಸಂಕೀರ್ತನೆ. ದೇಹದ ಮೇಲಿನ ಅಭಿಮಾನವನ್ನು ಬಿಟ್ಟು ಕುಣಿದಾಗ ಭಗವಂತನು ಒಲಿದೇ ಒಲಿಯುತ್ತಾನೆ ಅನ್ನೋದು ತುಳಸಿ ಸಂಕೀರ್ತನೆಯ ಆಶಯ. ನರ್ತಿಸಿ, ಅರ್ಚಿಸಿ ಕೃಷ್ಣನನ್ನು ಒಲಿಸುವ ಈ ಸಂಪ್ರದಾಯಕ್ಕೆ ಜಾತಿ, ಮೇಲು ಕೀಳು ಬೇಧಭಾವ ಇರೋದಿಲ್ಲ. 

Blowing a Conch: ಶಂಖ ಊದೋದ್ರಿಂದ ಸಿಗೋ 6 ಆರೋಗ್ಯ ಲಾಭಗಳು

ಪರಂದರದಾಸರು, ಕನಕ ದಾಸರು, ವಿಜಯ ವಿಠಲದಾಸರು, ವ್ಯಾಸ ತೀರ್ಥ ಹೀಗೆ ದಾಸ ವರೇಣ್ಯರ ಕೀರ್ತನೆಗಳು ಭಕ್ತಿಯ ಪಾರಾಕಾಷ್ಠೆಯನ್ನು ತೋರಬಲ್ಲುದು. ಇಂತಹ ಸಂಕೀರ್ತನೆಗಳನ್ನು ನೂರಾರು ಭಕ್ತರು ಏಕಕಾಲದಲ್ಲಿ ಹಾಡಿದಾಗ ಅದೆಂತಹಾ ಆದ್ಯಾತ್ಮಿಕ ವಾತಾವರಣ ಸೃಷ್ಟಿಸಬಲ್ಲದು ಎಂಬುದಕ್ಕೆ ತುಳಸಿ ಸಂಕೀರ್ತನೆಯೇ ಸಾಕ್ಷಿ . 

ದೀಪಾವಳಿಯಿಂದ ಉತ್ಥಾನ ದ್ವಾದಶಿಯವರೆಗೂ ಉಡುಪಿಯ ಅನ್ನ ವಿಠಲನ ಸನ್ನಿಧಿಯಲ್ಲಿ ಭಕ್ತಜನರು ಕೀರ್ತನೆಗಳನ್ನು ಕೇಳುತ್ತಾ ಹಾಡುತ್ತಾ ಆಧ್ಯಾತ್ಮದ ಹಸಿವನ್ನು ತೀರಿಸಿಕೊಳ್ಳುತ್ತಾರೆ.ಸದಾ ಸಂಗೀತ ನೃತ್ಯ ವೇದ ಪಠಣ ಪ್ರವಚನಗಳಿಂದ ಕೂಡಿದ್ದ ಕೃಷ್ಣ ಮಠದ ಪರಿಸರದಲ್ಲಿ ಈ ಸಂಕೀರ್ತನಾ ಕಾರ್ಯಕ್ರಮದಿಂದ ಇನ್ನಷ್ಟು ಸಂಭ್ರಮ ಮೇಳೈಸುತ್ತೆ. .ಕುಳಿತು ಪಾಡಲು ನಲಿವ, ನಲಿದರೆ ಒಲಿವ ಕೃಷ್ಣ ದೇವರ ಈ ಬಗೆಯ ಆರಾಧನೆಯಲ್ಲಿ ಜಿಲ್ಲೆಯಾದ್ಯಂತ ನೂರಾರು ಭಕ್ತರು ಭಾಗಿಯಾಗುತ್ತಾರೆ.

click me!