
ಬೆಂಗಳೂರು (ಫೆ.6): ಮೂರು ವರ್ಷಕ್ಕೊಮ್ಮೆ ನಡೆಯುವ ಟಿ.ನರಸೀಪುರ ಕುಂಭಮೇಳಕ್ಕೆ ಸಿದ್ಧತೆ ಶುರುವಾಗಿದೆ. ಒಂದೆಡೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮನುಕುಲದ ಅತಿದೊಡ್ಡ ಧಾರ್ಮುಕ ಕಾರ್ಯಕ್ರಮ, 144 ವರ್ಷಗಳಿಗೆ ಒಮ್ಮೆ ನಡೆಯುವ ಮಹಾಕುಂಭ ಮೇಳೆ 2025 ನಡೆಯುತ್ತದೆ. ಜನವರಿ 13 ರಿಂದ ಆರಂಭವಾಗಿರುವ ಈ ಮೇಳ ಫೆ.26ರವರೆಗೆ ನಡೆಯಲಿದೆ. ಇದೇ ಸಮಯದಲ್ಲಿ ಕಾವೇರಿ, ಕಬಿನಿ ನದಿಗಳ ಸಂಗಮ ಸ್ಥಳವಾದ ತಿರುಮಕೂಡಲು ನರಸೀಪುರದಲ್ಲಿ ಫೆ.10 ರಿಂದ 12ರವರೆಗೆ ಕುಂಭಮೇಳ ನಡೆಯಲಿದ್ದು ಮೈಸೂರು ಜಿಲ್ಲಾಡಳಿತ ಸಕಲ ರೀತಿಯಲ್ಲಿ ಇದರ ತಯಾರಿ ನಡೆಸಿದೆ. ಸರ್ಕಾರ ಕೂಡ ಈ ಕುಂಭಮೇಳಕ್ಕೆ 6 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದು, ಮುಜರಾಯಿ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಇದನ್ನು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
'ಕರುನಾಡಿನ ಐತಿಹಾಸಿಕ ಕುಂಭಮೇಳವನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸುವ ಸಲುವಾಗಿ ಮಹತ್ವದ ನಿರ್ಧಾರವೊಂದರಲ್ಲಿ ರಾಜ್ಯ ಸರ್ಕಾರವು ಟಿ.ನರಸೀಪುರದ ಕುಂಭಮೇಳಕ್ಕೆ 6 ಕೋಟಿ ಅನುದಾನ ಬಿಡುಗಡೆ ಮಾಡಿದೆ' ಎಂದು ಹೇಳಿದ್ದಾರೆ.ಟಿ.ನರಸೀಪುರದ ತ್ರಿವೇಣಿ ಸಂಗಮ ದಕ್ಷಿಣಕಾಶಿಯಲ್ಲಿ ನಡೆಯುವ ಕುಂಭಮೇಳ ಭಾರತೀಯರಿಗೆ ಸನಾತನ ಸಂಸ್ಕೃತಿ ಮತ್ತು ದಿವ್ಯ ಜೀವನ ಧರ್ಮವನ್ನು ಸಾರುವ ಧಾರ್ಮಿಕ ಕಾರ್ಯಕ್ರಮವಾಗಿದೆ' ಎಂದು ಬರೆದುಕೊಂಡಿದ್ದಾರೆ.
'ಮೂರು ದಿನಗಳ ಕಾಲ ನಡೆಯುವ ಕುಂಭಮೇಳಕ್ಕೆ ಕರ್ನಾಟಕ ಮಾತ್ರವಲ್ಲ ಹೊರ ರಾಜ್ಯಗಳಿಂದಲೂ ಭಕ್ತರು, ಪ್ರವಾಸಿಗರು ಆಗಮಿಸುವುದಿಂದ ನರಸೀಪುರ ಪಟ್ಟಣದಲ್ಲಿಯೇ ಸಕಲ ಸೌಲಭ್ಯಗಳನ್ನು ಕಲ್ಪಿಸಲು ತಯಾರಿ ಮಾಡಿಕೊಳ್ಳಲು ಈ ಅನುದಾನ ಬಳಸಿಕೊಳ್ಳಲಾಗುವುದು' ಎಂದು ಸಚಿವರು ಪೋಸ್ಟ್ ಹಾಕಿದ್ದಾರೆ.
ಇದು ಟಿ.ನರಸೀಪುರದಲ್ಲಿ ನಡೆಯುತ್ತಿರುವ 12ನೇ ಕುಂಭಮೇಳವಾಗಿದೆ. ಕುಂಭಮೇಳಕ್ಕೆ ಆಗಮಿಸುವ ಜನರು ದಾರ್ಶನಿಕರು, ಸ್ವಾಮೀಜಿಗಳ ನುಡಿಗಳನ್ನು ಕೇಳಬೇಕು. ಎಲ್ಲರೂ ಭಕ್ತಿ ಮಾರ್ಗದಲ್ಲಿ ಸಾಗಬೇಕು ಎಂದು ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.
ಟಿ.ನರಸೀಪುರ ಕುಂಭಮೇಳದಲ್ಲಿ ಧಾರ್ಮಿಕ ಕಾರ್ಯಕ್ರಮ
ಫೆ.10: ಕುಂಭಮೇಳದ ಆರಂಭದ ದಿನ ಸಂಕಲ್ಪ, ಗಣಪತಿ ಹೋಮ,ಅಗಸ್ತ್ರ್ಯ ದೇವಾಲಯದಲ್ಲಿ ರುದ್ರಾಭಿಷೇಕ ಸಂಜೆ ಧಾರ್ಮಿಕ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಫೆ.11: 2ನೇ ದಿನ ನವಗ್ರಹ ಹೋಮ, ಸುದರ್ಶನ ಹೋಮ ನಡೆಯಲಿದ್ದು, ಅದಾದ ಬಳಿಕ ಮಹಾ ಮಂಡಲೇಶ್ವರರ ಸಂಗಮ ಕ್ಷೇತ್ರ ಪ್ರವೇಶ ನಂತರ ಉತ್ತರ ಪ್ರದೇಶದ ವಾರಣಾಸಿ ರೀತಿಯಲ್ಲಿ ದೀಪಾರತಿ ನಡೆಯಲಿದೆ.
72 ಗಂಟೆಗಳಲ್ಲಿ ಅಯೋಧ್ಯೆ ತಲುಪಿದ 50 ಲಕ್ಷಕ್ಕೂ ಹೆಚ್ಚು ಭಕ್ತರು
ಫೆ.12: ಚಂಡಿಕಾ ಹೋಮ, ಪೂರ್ಣಾಹುತಿ, ತ್ರಿವೇಣಿ ಸಂಗಮದಲ್ಲಿ ಸಪ್ತ ಪವಿತ್ರ ನದಿಗಳಿಂದ ತಂದ ತೀರ್ಥವನ್ನು ಸಂಯೋಜನೆ ಮಾಡಲಾಗುತ್ತದೆ. ಪುಣಸ್ನಾನ, ಧರ್ಮಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಮಹಾಕುಂಭ ಮೇಳದಲ್ಲಿ ಭಾಗಿಯಾದ ಸಾಧುಸಂತರ ಬಗ್ಗೆ 'ಹೀಗೆ' ವೈರಲ್ ಆಗ್ತಿದೆ!