ಭಯಾನಕ ಸ್ವಪ್ನಗಳು ಬಿದ್ದರೆ, ಬೀಳುತ್ತಿದ್ದರೆ ಹೀಗೆ ಮಾಡಿ!!

By Suvarna News  |  First Published Aug 2, 2021, 1:04 PM IST

ಕನಸು ಬೀಳುವುದು ಸಹಜ ಪ್ರಕ್ರಿಯೆ. ಕೆಟ್ಟ ಕನಸು ಮತ್ತು ಒಳ್ಳೆ ಕನಸು ಎರಡೂ ಬೀಳುತ್ತವೆ. ಒಮ್ಮೊಮ್ಮೆ ಭಯಾನಕ ಕನಸುಗಳು ಬಿದ್ದು ನಿದ್ದೆಯನ್ನು ಕೆಡಿಸಿಬಿಡುತ್ತವೆ. ಅಂಥ ಕನಸು ಬೀಳುತ್ತಿದ್ದರೆ ಸ್ವಪ್ನ ಶಾಸ್ತ್ರ ಅದಕ್ಕೆ ಕೆಲವು ಪರಿಹಾರಗಳನ್ನು  ಮತ್ತು ಮಂತ್ರಗಳನ್ನು ತಿಳಿಸುತ್ತದೆ. ಹಾಗಾಗಿ ಅವುಗಳ ಬಗ್ಗೆ ತಿಳಿದು ಅನುಸರಿಸುವುದರಿಂದ ದುಃಸ್ವಪ್ನಗಳಿಂದ ಮುಕ್ತಿ ಪಡೆಯಬಹುದಾಗಿದೆ. ನಿವಾರಣಾ ಉಪಾಯಗಳ ಬಗ್ಗೆ ತಿಳಿಯೋಣ...


ವ್ಯಕ್ತಿಯು ನಿದ್ರಾ ಸ್ಥಿತಿಯಲ್ಲಿ ಇದ್ದಾಗ ಕನಸುಗಳು ಬೀಳುತ್ತವೆ. ಅದೊಂದು ಸಹಜ ಪ್ರಕ್ರಿಯೆ. ಕೆಲವು ಕನಸುಗಳು ನೆನಪಿನಲ್ಲಿ ಉಳಿಯುತ್ತವೆ. ಮತ್ತೊಂದಷ್ಟು ಅಸ್ಪಷ್ಟವಾಗಿರುತ್ತವೆ. ಇನ್ನು ಕೆಲವಷ್ಟು ನೆನಪೇ ಇರುವುದಿಲ್ಲ.
ಸ್ವಪ್ನ ಶಾಸ್ತ್ರದಲ್ಲಿ ಕನಸಿಗೊಂದು ಅರ್ಥವಿದೆ ಎನ್ನುತ್ತಾರೆ. ಅಷ್ಟೇ ಅಲ್ಲದೆ ಕನಸುಗಳ ಆಧಾರದ ಮೇಲೆ ಜೀವನದ ಆಗು-ಹೋಗುಗಳನ್ನು ಮತ್ತು ಭವಿಷ್ಯದ ಕೆಲವು ವಿಚಾರಗಳನ್ನು ತಿಳಿಯಬಹುದಾಗಿರುತ್ತದೆ.

ಕನಸು ಒಳ್ಳೆಯದು ಇರಬಹುದು, ಕೆಟ್ಟದ್ದೂ ಇರಬಹುದು ಅದಕ್ಕೊಂದು ಅರ್ಥ ಇದ್ದೇ ಇರುತ್ತದೆ. ಶುಭ ಮತ್ತು ಅಶುಭ ಕನಸು ಜೀವನದಲ್ಲಿ ನಡೆಯುವ ಘಟನೆಯ ಮುನ್ಸೂಚನೆ ಎಂದು ಸಹ ಹೇಳಲಾಗುತ್ತದೆ. ಕೆಲವರಿಗೆ ಭಯಾನಕ ಕನಸುಗಳು ಅಂದರೆ ನಿದ್ದೆಯಿಂದ ಬಡಿದೆಬ್ಬಿಸುವಂಥ ಕೆಟ್ಟ ಕನಸುಗಳು ಬೀಳುತ್ತವೆ. ಕೆಲವರಿಗೆ ಕೆಲವೊಮ್ಮೆ ಇಂಥ ಕನಸುಗಳು ಬಿದ್ದರೆ, ಮತ್ತೆ ಕೆಲವರಿಗೆ ಸದಾ ಬೀಳುತ್ತಿರುತ್ತದೆ. ಇಂಥ ಭಯದ ಕನಸುಗಳಿಂದ ನಿದ್ದೆಗೆ ತಡೆಯಾಗಿದ್ದರೆ ಅದಕ್ಕೊಂದು ಉಪಾಯವಿದೆ. ಹಾಗಾದರೆ ಹೆದರಿಕೆಯಾಗುವಂಥ ಕನಸು ಬೀಳುತ್ತಲೇ ಇದ್ದರೆ ಏನು ಮಾಡಬೇಕೆಂದು ನೋಡೋಣ ಬನ್ನಿ....

ಇದನ್ನು ಓದಿ: ಈ ಮೂರು ಪಾದಾಂಕದವರು ಬುದ್ಧಿವಂತರು, ಹಣವಂತರು..!

ರಾತ್ರಿ ಬಿದ್ದ ಕನಸು ಭಯಾನಕವಾಗಿದ್ದು, ಮತ್ತೆ ನಿದ್ದೆ ಮಾಡಲು ಸಾಧ್ಯವಾಗದೆ ಒದ್ದಾಡುವಂಥ ಪರಿಸ್ಥಿತಿ ಎದುರಾಗಿದ್ದರೆ ಅದಕ್ಕೆ ಸ್ವಪ್ನ ಶಾಸ್ತ್ರದಲ್ಲಿ ಪರಿಹಾರವಿದೆ. 
ಹೌದು. ಕನಸು ಖುಷಿ ಕೊಡುವುದಾಗಿದ್ದರೆ ಮನಸ್ಸು ಪ್ರಫುಲ್ಲವಾಗಿರುತ್ತದೆ. ಮರುದಿನ ಪೂರ್ತಿ ಉತ್ಸಾಹದಿಂದ ಕಳೆದು ಹೋಗುತ್ತದೆ. ಅದೇ ಕನಸು ಅಶುಭವಾಗಿದ್ದರೆ ಮತ್ತೆ ನಿದ್ರಿಸುವುದು ಕಷ್ಟವಾಗುತ್ತದೆ. ಕನಸಿನ ಬಗ್ಗೆಯೇ ಚಿಂತಿಸುತ್ತಾ ದಿನವೆಲ್ಲಾ ಒತ್ತಡದಿಂದ ಕಳೆದು ಹೋಗುತ್ತದೆ. ಹಾಗಾಗಿ ಭಯಾನಕ ಕನಸು ಪದೇ ಪದೇ ಬೀಳುತ್ತಿದೆ ಎಂದಾದರೆ  ಅದಕ್ಕೆ ಸ್ವಪ್ನ ಶಾಸ್ತ್ರವು ಅನೇಕ ಪರಿಹಾರಗಳನ್ನು ತಿಳಿಸಿದೆ.

ಪ್ರತಿದಿನ ಬೀಳುವ ದುಃಸ್ವಪ್ನದಿಂದ ಬೇಸತ್ತು ಹೋಗಿದ್ದರೆ, ಅದಕ್ಕೆ ಪರಿಹಾರವಾಗಿ ಸ್ವಪ್ನ ಶಾಸ್ತ್ರದಲ್ಲಿ ದುಃಸ್ವಪ್ನ ನಾಶನ ಮಂತ್ರವನ್ನು ಮತ್ತು ಇತರ ನಿವಾರಣಾ ಉಪಾಯಗಳನ್ನು ಹೇಳಿದೆ.

ಶಿವನಿಗೆ ಬಿಲ್ವ ಪತ್ರೆ
ಕೆಟ್ಟ ಅಥವಾ ಭಯಾನಕ ಕನಸು ಬಿದ್ದರೆ, ಮರುದಿನ ಮುಂಜಾನೆ ಸ್ನಾನ ಮಾಡಿ ಶಿವನಿಗೆ ಹಾಲು ಮತ್ತು ಬಿಲ್ವ ಪತ್ರೆಯನ್ನು ಅರ್ಪಿಸಬೇಕು. ನಂತರ ಮಹಾದೇವನಲ್ಲಿ ರಾತ್ರಿ ಬಿದ್ದ ಅಶುಭ ಕನಸು ನಿಜವಾಗದಿರಲಿ, ಎಲ್ಲವೂ ಶುಭವಾಗಲಿ ಎಂದು ಪ್ರಾರ್ಥಿಸಿಕೊಳ್ಳಬೇಕು. 


ವಿಷ್ಣು ಜಪ
ಭಯ ಬೀಳಿಸುವ ಕನಸು ಬಿದ್ದ ಮರುದಿನ ಶುಚಿರ್ಭೂತರಾಗಿ ಶ್ರೀ ಮಹಾವಿಷ್ಣುವಿನ ಹತ್ತು ನಾಮಗಳನ್ನು ನೂರು ಬಾರಿ ಜಪಿಸಬೇಕು. ಇದರಿಂದ ಕನಸಿನ ದುಷ್ಪರಿಣಾಮಗಳು ವ್ಯಕ್ತಿಯ ಮೇಲೆ ಆಗುವುದಿಲ್ಲ, ಬದಲಾಗಿ ಶುಭವಾಗುತ್ತದೆ ಎಂದು ಸ್ವಪ್ನ ಶಾಸ್ತ್ರ ತಿಳಿಸುತ್ತದೆ.

ಮಹಾವಿಷ್ಣುವಿನ ಹತ್ತು ನಾಮಗಳು ಇಂತಿವೆ :
“ವಿಷ್ಣುಮ್ ನಾರಾಯಣಂ ಕೃಷ್ಣಮ್ ಮಾಧವಂ ಮಧುಸೂದನಮ್/
ಹರಿಂ ನರಹರಿಂ ರಾಮಂ ಗೋವಿದಂ ದಧಿವಾಮನಮ್//”

ಇದನ್ನು ಓದಿ: ಶನಿ ದೇವನ ಕೃಪೆ: ಈ ರಾಶಿ ಹುಡುಗಿಯರು ಸ್ವಾಭಿಮಾನಿಗಳು... ನಿಮ್ಮ ಹುಡುಗಿ ಹೇಗೆ?

ಅಷ್ಟೇ ಅಲ್ಲದೆ ಶ್ರೀ ವಿಷ್ಣು ನಾಮಾಷ್ಟಕವನ್ನು ಹತ್ತು ಬಾರಿ ಪಠಿಸುವುದರಿಂದ ದುಃಸ್ವಪ್ನದ ಅಶುಭ ಫಲಗಳು ನಾಶವಾಗುತ್ತವೆ.
“ಅಚ್ಯುತಂ ಕೇಶವಂ ವಿಷ್ಣುಮ್ ಹರಿಂ ಸತ್ಯಂ ಜನಾರ್ದನಮ್/
ಹಂಸಂ ನಾರಾಯಣಂ ಚೈವ ಹ್ಯೇತನ್ ನಾಮಾಷ್ಟಕಂ ಶುಭಮ್ //”

ಸಪ್ತದಶಾಕ್ಷರ ಮಂತ್ರವನ್ನು ನೂರು ಬಾರಿ ಜಪಿಸುವುದರಿಂದ ಕೆಟ್ಟ ಸ್ವಪ್ನಗಳ ಅಶುಭ ಫಲ ವ್ಯಕ್ತಿಗೆ ತಾಗುವುದಿಲ್ಲ. ಮಂತ್ರ ಪಠಣದ ಫಲವಾಗಿ ಶುಭಫಲಗಳು ಪ್ರಾಪ್ತವಾಗುತ್ತವೆ. ಇದು ಭಗವತಿ ದುರ್ಗೆಯ ಮಂತ್ರವಾಗಿದ್ದು, ಶಕ್ತಿಯುತ ಮಂತ್ರ ಇದಾಗಿದೆ. 
ಹ್ರೀಂ ಕ್ಲೀಂ ಪೂರ್ವದುರ್ಗತಿನಾಶಿನೈ ಮಹಾಮಾಯಾಯೈ ಸ್ವಾಹಾ//

ಇದನ್ನು ಓದಿ: ಮನೆ ವಾಸ್ತು ಮೇಲೆ ನವಗ್ರಹಗಳ ಪ್ರಭಾವ, ಹೀಗೆ ಇದ್ರೆ ಶುಭ – ಅಶುಭ..!

ಮಹಾಮೃತ್ಯುಂಜಯ ಮಂತ್ರವು ಸಹ ಪರಿಣಾಮಕಾರಿ ಮಂತ್ರವಾಗಿದ್ದು, ಭಯ ತರಿಸುವಂಥ ಕನಸುಗಳು, ಅಶುಭ ಸ್ವಪ್ನಗಳ ಪರಿಣಾಮ ಆಗದಿರುವಂತೆ ರಕ್ಷಿಸುತ್ತದೆ.
ಈ ಮಂತ್ರಗಳನ್ನು ಪಠಿಸುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಮಾನಸಿಕ ಸ್ಥಿತಿ ಉತ್ತಮವಾಗುತ್ತದೆ. ಇಷ್ಟ ದೇವರಿಗೆ ವಂದಿಸಿ, ಈ ಮಂತ್ರಗಳನ್ನು ಶ್ರದ್ಧೆಯಿಂದ ಪಠಿಸಿದಲ್ಲಿ ಉತ್ತಮ ಶಯನ ಸಾಧ್ಯವಾಗುತ್ತದೆ. ಇದರಿಂದ ಕೆಟ್ಟ ಕನಸುಗಳು ಬೀಳುವುದಿಲ್ಲ.

click me!