ಈ ರಾಶಿಯವರು ಸ್ನೇಹಿತರ ಬಳಿ ಮಸಾಲೆ ಸುದ್ದಿ ಹೇಳೋದ್ರಲ್ಲಿ ನಿಸ್ಸೀಮರು!

By Suvarna NewsFirst Published Aug 8, 2022, 5:50 PM IST
Highlights

ಸ್ನೇಹಿತರು ಭೇಟಿಯಾದಾಗ ಏನೇನೆಲ್ಲ ಮಾತನಾಡುವುದು ಸಹಜ. ಆದರೆ, ಕೆಲವೇ ಜನ ಮಾತ್ರ ಮತ್ತೊಬ್ಬರ ಕುರಿತಾದ ಮಸಾಲೆ ಸುದ್ದಿಗಳನ್ನು ಹಂಚಿಕೊಂಡು ಥ್ರಿಲ್‌ ಆಗುತ್ತಾರೆ. ಕೆಲವು ರಾಶಿಗಳ ಜನ ಈ ಸಾಲಿಗೆ ಸೇರುತ್ತಾರೆ.
 

ಸ್ನೇಹಿತರನ್ನು ಭೇಟಿ ಮಾಡುವುದೆಂದರೆ ಎಲ್ಲರಿಗೂ ಖುಷಿಯ ವಿಚಾರ. ವಾರಕ್ಕೊಮ್ಮೆಯೋ, ತಿಂಗಳಿಗೊಮ್ಮೆಯೋ, ಕೊನೆಗೆ ನಾಲ್ಕಾರು ತಿಂಗಳಿಗೆ ಒಮ್ಮೆಯೋ ಸ್ನೇಹಿತರನ್ನು ಭೇಟಿ ಮಾಡಿದರೆ ಹೊಸದೊಂದು ಸಂತಸ ನಮ್ಮೊಳಗೆ ತುಂಬಿಕೊಳ್ಳುತ್ತದೆ. ಹಳೆಯ ಸ್ನೇಹಿತರಾದರಂತೂ ಅಪರೂಪಕ್ಕೊಮ್ಮೆ ಭೇಟಿ ಮಾಡದಿದ್ದರೆ ಬದುಕು ಹಗುರವೆನಿಸುವುದೇ ಇಲ್ಲ. ಅದೆಷ್ಟೋ ಸ್ನೇಹಿತರು ಚಾಟ್‌, ಮೆಸೇಜ್‌, ಫೋನ್‌ ಕಾಲ್‌ ಗಳಲ್ಲಿ ನಿರಂತರವಾಗಿ ಸಂಪರ್ಕದಲ್ಲಿದ್ದರೂ ಎಂದಾದರೊಮ್ಮೆ ಅವರನ್ನು ನೇರವಾಗಿ ಭೇಟಿ ಮಾಡಿದರೆ ಅದರ ಸುಖವೇ ಬೇರೆ. ಸುಖ-ದುಃಖಗಳನ್ನು ಹಂಚಿಕೊಳ್ಳುವುದು, ನಗುವುದು, ಖುಷಿಯಾಗಿ ಹಲವಾರು ಸಂಗತಿಗಳನ್ನು ಹಂಚಿಕೊಳ್ಳುವುದು ಈ ಸಮಯದಲ್ಲಿ ಸಾಮಾನ್ಯ. ಕೆಲವು ಸ್ನೇಹಿತರಿರುತ್ತಾರೆ, ಅವರಿಗೆ ತಮ್ಮ ಸ್ನೇಹಿತರು ಸಿಕ್ಕಾಗ ರೋಚಕ ಸುದ್ದಿಗಳನ್ನು ಹಂಚಿಕೊಳ್ಳದೆ ಹೋದರೆ ಸಮಾಧಾನ ಇರುವುದಿಲ್ಲ. ಸಾಮಾನ್ಯವಾಗಿ ಸ್ನೇಹಿತರು ಸಿಕ್ಕಾಗ ತಮಗೆ ತಿಳಿದಿರುವ ಸ್ನೇಹಿತರ ವಲಯದ ಸುದ್ದಿಗಳನ್ನೇ ಮಾತನಾಡಿಕೊಳ್ಳುತ್ತಾರೆ. ಅದರಲ್ಲಿ ಮಸಾಲಾ ಸುದ್ದಿಗಳೂ ಇರಬಹುದು. ಆದರೆ, ಮಸಾಲಾ ಸುದ್ದಿಗಳನ್ನು ಹೇಳಲು ಎಲ್ಲರಿಗೂ ಸಾಧ್ಯವಿಲ್ಲ. ಗಾಸಿಪ್ಪೇ ಇರಲಿ, ನಿಜವಾದ ಸುದ್ದಿಗಳೇ ಇರಲಿ, ಅದನ್ನು ರಸವತ್ತಾಗಿ ವರ್ಣನೆ ಮಾಡಲು ಎಲ್ಲರಿಗೂ ಬರುವುದಿಲ್ಲ. ಆದರೆ, ಕೆಲವರು ಹಾಗಲ್ಲ, ಅವರಿಗೆ ತಮ್ಮ ಸ್ನೇಹಿತರ ಬಳಿ ತಮಗೆ ಗೊತ್ತಿರುವ ಸುದ್ದಿಗಳನ್ನು ಹಂಚಿಕೊಳ್ಳಲೇಬೇಕು. ಮತ್ತೊಬ್ಬರಿಗೆ ಸಂಬಂಧಿಸಿದ ಗುಟ್ಟುಗಳನ್ನು ತಮ್ಮೊಳಗೆ ಇಟ್ಟುಕೊಳ್ಳಲು ಅವರಿಂದ ಸಾಧ್ಯವಾಗುವುದಿಲ್ಲ. ನಿಮಗೂ ಇಂತಹ ಸ್ನೇಹಿತರಿರಬಹುದು. ಅದು ಅವರ ರಾಶಿಗಳನ್ನು ಅವಲಂಬಿಸಿದೆ. ಕೆಲವು ರಾಶಿಗಳಿಗೆ ಸೇರಿದ ಜನರು ತಮ್ಮ ಸ್ನೇಹಿತರನ್ನು ಪ್ರತಿಬಾರಿ ಭೇಟಿಯಾದಾಗಲೂ ಏನಾದರೊಂದು ಹೊಸ ಸುದ್ದಿಗಳನ್ನು ಹಂಚಿಕೊಳ್ಳುತ್ತಾರೆ. ಆ ರಾಶಿಗಳು ಯಾವುವು ನೋಡಿ.

•    ಕನ್ಯಾ (Vigro)
ಮಾಹಿತಿ (Information) ಎನ್ನುವುದು ಒಂದು ರೀತಿಯ ಶಕ್ತಿ (Power) ಇದ್ದಂತೆ. ಕನ್ಯಾ ರಾಶಿಯವರು (Zodiac Sign) ತಾವು ಕೆಲಸ ಮಾಡುವ ಸ್ಥಳವಿರಲಿ, ನೆಂಟರಿಷ್ಟರ ನಡುವೆ ಇರಲಿ, ಎಲ್ಲ ಮಾಹಿತಿಯನ್ನೂ ಹೊಂದಿರುತ್ತಾರೆ. ಮಾಹಿತಿ ಕಲೆ ಹಾಕುವುದು ಅವರಿಗೆ ಭಾರೀ ಪ್ರಿಯವಾದ ಸಂಗತಿ. ಕೆಲವು ಸನ್ನಿವೇಶಗಳಲ್ಲಿ ಬೇರೆಯವರು ಇನ್ನೇನೋ ಮಾತುಕತೆಯಲ್ಲಿ ತೊಡಗಿದ್ದರೆ ಇವರು ಮಾತ್ರ ಮಾಹಿತಿ ಕಲೆ ಹಾಕುವುದರಲ್ಲಿ ನಿರತರಾಗಿರುತ್ತಾರೆ. ಬೇರೆ ಸ್ನೇಹಿತರು (Friends) ತಾವು ಪ್ರವಾಸ ಹೋದ ಸುದ್ದಿಯನ್ನು ಹಂಚಿಕೊಳ್ಳುತ್ತಿರಬಹುದು, ಮನೆಯ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿರಬಹುದು. ಇವರು ಅವೆಲ್ಲವನ್ನೂ ಸರಿಯಾಗಿ ಕೇಳಿಸಿಕೊಳ್ಳುವ ಜತೆಗೆ ಬೇರೆ ಯಾರಿಗೂ ಗೊತ್ತಿರದ ಮಾಹಿತಿ ಕಲೆ ಹಾಕಲು ನೋಡುತ್ತಾರೆ. ಬೇರೆಯವರು ಮಾತನಾಡುವಾಗ ಕದ್ದಾಲಿಕೆ ಮಾಡುವುದರಲ್ಲೂ ಇವರು ನಿಸ್ಸೀಮರು. ಸ್ನೇಹಿತರು ಸಿಕ್ಕಾಗ ತಮ್ಮದೇ ಮತ್ತೋರ್ವ ಸ್ನೇಹಿತರ ಬಗ್ಗೆ ಮಾತನಾಡುತ್ತಾರೆ.

•    ಸಿಂಹ (Leo)
ಅಗ್ನಿ ತತ್ವದ (Fire Sign) ಸಿಂಹ ರಾಶಿಯವರು ತುಂಬ ಸ್ನೇಹಪರರು (Friendly). ಹಾಗೆಯೇ ತಮಗೆ ಬೇಕಾದಾಗ ಯಾರ ಬಗ್ಗಾದರೂ ಮಾತನಾಡಬಲ್ಲರು. ಯಾರಿಗೂ ಹೇಳಬಾರದು, ಎಲ್ಲರಿಗೂ ಗೊತ್ತು ಮಾಡಬಾರದು ಎಂದುಕೊಂಡಿದ್ದ ವಿಚಾರಗಳನ್ನೂ ಅಚಾತುರ್ಯದಿಂದ ನುಡಿದು ಬಿಡುತ್ತಾರೆ. ಜತೆಗೆ, ಉದ್ಯೋಗದ ಸ್ಥಳ (Work Place) ಹಾಗೂ ತಮ್ಮ ಸ್ನೇಹಿತರ ವಲಯದಲ್ಲಿ ಆಗುತ್ತಿರುವ ಹೊಸ ಬೆಳವಣಿಗೆಗಳ ಬಗ್ಗೆಯೂ ಕಣ್ಣಿಡುತ್ತಾರೆ. ಎಲ್ಲರ ವಿಚಾರಗಳನ್ನು ಅರಿತುಕೊಂಡು ಸ್ನೇಹಿತರಲ್ಲಿ ಚರ್ಚೆ ಮಾಡುವುದು ಇವರಿಗೆ ಇಷ್ಟವಾದ ಕೆಲಸ. ತಮಗೆ ಗೊತ್ತಿರುವ ಮಾಹಿತಿ ಆಧರಿಸಿ ಸಹೋದ್ಯೋಗಿಗಳ ಬಗ್ಗೆ ದೋಷಾರೋಪಣೆ ಮಾಡಬಹುದು, ಅವರ ಪ್ರೊಮೋಷನ್‌ ಅನ್ನು ತಾವು ದಕ್ಕಿಸಿಕೊಳ್ಳಲು ಯತ್ನಿಸಬಹುದು. ತನ್ನ ಸ್ನೇಹ ವಲಯದಲ್ಲಿ ಇನ್ನೊಬ್ಬರ ಕುರಿತಾದ ಸುದ್ದಿಗಳನ್ನು ಸದಾ ಹೇಳುತ್ತಿರುತ್ತಾರೆ.

•    ಮೀನ (Pisces)
ಜಲ (Water) ತತ್ವದ ಮೀನ ರಾಶಿಯವರು ಸೀಮಿತ ವಲಯವನ್ನು ನಂಬುತ್ತಾರೆ. ಆಪ್ತ ಸ್ನೇಹಿತರನ್ನು ಭೇಟಿ ಮಾಡಿದಾಗ ತಾವೇ ಕೇಂದ್ರಬಿಂದು (Centre) ಆಗಲು ಯತ್ನಿಸುತ್ತಾರೆ. ಆಕರ್ಷಣೆಯ ಮೂಲವಾಗಲು ಬಯಸುತ್ತಾರೆ. ಬೇರೆ ಕಡೆಗಳಲ್ಲಿ ಸುಮ್ಮನಿರುತ್ತಾರಾದರೂ ತಮ್ಮ ಸ್ನೇಹಿತರ ವಲಯದಲ್ಲಿ ಎಲ್ಲ ಸನ್ನಿವೇಶಗಳಲ್ಲೂ ಒಂದಾಗಲು ಇಚ್ಛಿಸುತ್ತಾರೆ. ತಮಗೆ ಗೊತ್ತಿರುವ ಗಾಸಿಪ್ಪುಗಳನ್ನು (Gossip) ಹಂಚಿಕೊಳ್ಳಲು ಇಷ್ಟಪಡುತ್ತಾರೆ. ಸ್ನೇಹಿತರ ಬಗ್ಗೆ ತಮಗೆ ಗೊತ್ತಿರುವ ಗುಟ್ಟುಗಳನ್ನು ಮತ್ತೋರ್ವ ಸ್ನೇಹಿತರ ಬಗ್ಗೆ ರಸವತ್ತಾಗಿ ವರ್ಣಿಸುತ್ತಾರೆ.
  
 

click me!