ಶ್ರಾವಣ ಮಾಸದ ಎರಡನೇ ಭಾನುವಾರ ನಾಗರ ಹುತ್ತಕ್ಕೆ ಪೂಜೆ ಮಾಡಿ ರಕ್ತಾಭಿಷೇಕ ಮಾಡೋ ವಿಶೇಷ ಆಚರಣೆ ವಿಜಯನಗರದ ಕೂಡ್ಲಿಗಿ ತಾಲೂಕಿನ ಬತ್ತನ ಹಳ್ಳಿಯಲ್ಲಿಯಲ್ಲಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ವರದಿ: ನರಸಿಂಹ ಮೂರ್ತಿ ಕುಲಕರ್ಣಿ
ವಿಜಯನಗರ: ಸಾಮಾನ್ಯವಾಗಿ ನಾಗರ ಪಂಚಮಿಯಂದು ಹಾವಿಗೆ ಹಾಲನ್ನು ಎರೆಯೋದನ್ನು ಎಲ್ಲೆಡೆಯೂ ನೀವು ನೋಡಿರಬಹುದು. ಆದ್ರೇ, ಈ ಗ್ರಾಮದಲ್ಲಿ ಮಾತ್ರ ಹಾವಿಗೆ ರಕ್ತಾಭಿಷೇಕ ಮಾಡ್ತಾರೆ. ವಿಚಿತ್ರವಾದ್ರೂ ಇಂತಹದ್ದೊಂದು ಘಟನೆ ನಡೆದಿರೋದು ಮಾತ್ರ ಸತ್ಯ. ನೋಡಲು ಮೈಜುಮ್ಮೆನ್ನಿಸುವ ಘಟನೆ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯ ವ್ಯಾಖ್ಯಾನ ವನ್ನು ಮಾಡಿದ್ರು. ಇಲ್ಲಿಯ ಜನರು ಮಾತ್ರ ಇದನ್ನೊಂದು ದೈವ ಭಕ್ತಿಯ ಆಚರಣೆ ಎನ್ನುತ್ತಿದ್ದಾರೆ.. ಕೂಡ್ಲಿಗಿ ತಾಲೂಕಿನ ಬತ್ತನ ಹಳ್ಳಿಯಲ್ಲಿ ಇಂತಹದ್ದೊಂದು ವಿಶೇಷ ಆಚರಣೆ ಮಾಡಿದ್ದಾರೆ.
ಕೋಳಿ ಕೊಯ್ದ ರಕ್ತದಿಂದ ರಕ್ತಾಭಿಷೇಕ
ಶ್ರಾವಣ ಮಾಸದ ಎರಡನೇ ಭಾನುವಾರ ನಾಗರ ಹುತ್ತಕ್ಕೆ ಪೂಜೆ ಮಾಡಿ ರಕ್ತಾಭಿಷೇಕ ಮಾಡೋ ವಿಶೇಷ ಆಚರಣೆಯನ್ನು ಇಲ್ಲಿಯ ಒಂದು ಸಮುದಾಯ ಮಾಡಿ ಕೊಂಡು ಬಂದಿದೆ. ಕೊರಚ ಮತ್ತು ಕೊರಮ ಸಮುದಾಯದ ಜನರು ನಾಗರ ಪಂಚಮಿ ದಿನದಂದು ಸಾಮಾನ್ಯವಾಗಿ ಎಲ್ಲರಂತೆ ಪೂಜೆ ಮಾಡ್ತಾರೆ. ಆದ್ರೇ ಶ್ರಾವಣ ಮಾಸದ ಎರಡನೇ ಭಾನುವಾರ ಮಾತ್ರ ಈ ರೀತಿಯ ಕೋಳಿಯ ಕತ್ತನ್ನು ಕೊಯ್ದು ರಕ್ತವನ್ನು ಹುತ್ತದ ಮೇಲೆ ಹಾಕುವ ಪದ್ಧತಿಯನ್ನು ತಲತಲಾಂತರದಿಂದ ಮಾಡಿಕೊಂಡು ಬಂದಿದ್ದಾರೆ.
Koppal: ಮುಸ್ಲಿಂ ಕುಟುಂಬದಿಂದ ವರಮಹಾಲಕ್ಷ್ಮೀ ಹಬ್ಬ ಆಚರಣೆ
ಮನೆಯಲ್ಲಿ ವಿಶೇಷ ಖಾದ್ಯವನ್ನು ಮಾಡೋ ಮೂಲಕ ಮನೆಯಿಂದ ಸಿಹಿಯ ಜೊತೆಗೆ ಮಹಿಳೆಯರು ಮಕ್ಕಳು ಊರ ಹೊರವಲಯದ ಹುತ್ತದ ಬಳಿ ತೆರಳಿ ಪೂಜೆ ಮಾಡ್ತಾರೆ. ನಂತರ ಪುರುಷರು (Men) ಚಾಕುವಿನಿಂದ ಹುತ್ತದ ರಂಧ್ರದ ಬಳಿ ಕೋಳಿಯನ್ನು ತೆಗೆದುಕೊಂಡು ಹೋಗೋ ಮೂಲಕ ಕೋಳಿಯ ಕತ್ತನ್ನು ಕೊಯ್ದು ಅದರ ರಕ್ತವನ್ನು (Blood) ಅದರ ಮೇಲೆ ಹಾಕ್ತಾರೆ..
ಹುತ್ತದ ಮೇಲೆ ರಕ್ತಹರಿಸಲು ಕಾರಣವೂ ಇದೆ
ಇನ್ನು ಈ ಅಚರಣೆ ಮಾಡೋದಕ್ಕೂ ಒಂದು ವಿಶೇಷ ಕಾರಣವಿದೆ. ಬುಡಕಟ್ಟು ಸಮುದಾಯಕ್ಕೆ (Tribal Community) ಸೇರಿದ ಈ ಜನರು ಹಿಂದೆ ಅಡವಿಯಲ್ಲಿ ವಾಸ ಮಾಡ್ತಿದ್ರು. ಈಚಲು ಗಿಡ, ಹುಲ್ಲುಗಳಿಂದ ಹಗ್ಗ ಸೇರಿದಂತೆ ಮತ್ತಿತರ ವಸ್ತುಗಳನ್ನು ತಯಾರು ಮಾಡಿ ಅದನ್ನು ಊರುಗಳಿಗೆ ತಂದು ಮಾರಾಟ ಮಾಡ್ತಿದ್ರು. ಅಡವಿಯಲ್ಲಿ ಇರೋವಾಗ ಈ ಬುಡಕಟ್ಟು ಜನರಿಗೆ ಹಾವುಗಳು (Snake) ಹೆಚ್ಚಾಗಿ ಕಚ್ಚಿ ಜನರು ಸಾವನ್ನಪ್ಪುತ್ತಿದ್ರಂತೆ.
ಈ ಬಗ್ಗೆ ಸಮುದಾಯದ ಹಿರಿಯರ ಜೊತೆಗೆ ಚರ್ಚಿಸಿದಾಗ ನಾಗರ ಪಂಚಮಿ ಮುಗಿದ ಬಳಿಕ ಶ್ರಾವಣ ಮಾಸದ ಎರಡನೇ ಭಾನುವಾರ ನಾಗರ ಹುತ್ತಕ್ಕೆ ಕೋಳಿಯ ರಕ್ತದಿಂದ ಅಭಿಷೇಕ ಮಾಡಿ ಆಗ ತೃಪ್ತನಾಗೋ ನಾಗದೇವರು ನಿಮ್ಮ ಸಮುದಾಯಕ್ಕೆ ಯಾವುದೇ ತೊಂದರೆ ಮಾಡೋದಿಲ್ಲ ಎಂದು ಹೇಳಿದ್ರಂತೆ. ಹಿರಿಯರ ಸಲಹೆ ಮೇರೆಗೆ ಅ ಆಚರಣೆ ಚಾಲ್ತಿಯಲ್ಲಿ ಬಂತಂತೆ ವಿಶೇವೆಂದ್ರೇ, ಈ ರೀತಿ ಆಚರಣೆ ಮಾಡಲು ಪ್ರಾರಂಭಿಸಿದಾಗಿನಿಂದ ಹಾವು ಕಚ್ಚೋದು ಕಡಿಯಾಯ್ತಂತೆ. ಹೀಗಾಗಿ ಅಂದಿನಿಂದ ಇಂದಿನವರೆಗೂ ಈ ಪದ್ಧತಿ ನಡೆದುಕೊಂಡು ಬಂದಿದೆ.
Uttara Kannada: ಮಳೆಗಾಗಿ ಹೆಣ್ಣು - ಹೆಣ್ಣಿನ ನಡುವೆ ದಾದುಮ್ಮನ ಮದುವೆ
ಹಿಂದಿನಿಂದಲೂ ನಡೆದುಕೊಂಡು ಪದ್ಧತಿ
ಈ ಹಿಂದೆ ಅಡವಿಯಲ್ಲಿ ಇದ್ದ ಜನಾಂಗದವರು ಈ ಅಚರಣೆ ಮಾಡ್ತಿದ್ರು. ಆಗ ಅವರು ಅಡವಿಯಲ್ಲಿ ವಾಸ ಮಾಡ್ತಿರೋ ಹಿನ್ನೆಲೆ ಹಾವಿನ ಕಾಟವಿತ್ತು. ಆದ್ರೆ ಈಗ ಈ ಜನರ್ಯಾರು ಅಡವಿಯಲ್ಲಿ ವಾಸವಿಲ್ಲ ಕೆಲವರು ಮಾತ್ರ ಈ ಹಿಂದಿನಿಂದ ಬಂದ ಹಗ್ಗ ಸೇರಿದಂತೆ ಇತರೆ ವಸ್ತುಗಳ ಮಾರಾಟ ಮಾಡೋ ವೃತ್ತಿ ಹೊಂದಿದ್ದಾರೆ. ಬೇರೆ ಬೇರೆ ವೃತ್ತಿಯಲ್ಲಿ ಇದ್ರೂ ಪಾರಂಪರಿಕವಾಗಿ ಬಂದ ಹಬ್ಬವನ್ನು ಮಾತ್ರ ಇಲ್ಲಿಯ ಜನರು ಕೈಬಿಟ್ಟಿಲ್ಲ..
ವೈಜ್ಞಾನಿಕವಾಗಿ ಇದನ್ನು ಒಪ್ಪಲ್ಲ
ವೈಜ್ಞಾನಿಕವಾಗಿ ನೇರವಾಗಿ ಹುತ್ತಕ್ಕೆ ಹಾಲನ್ನು ಹಾಕಿದ್ರೇ ಹಾವಿಗೆ ಹಾನಿಯಾಗ್ತದೆ ಎಂದು ಉರಗ ತಜ್ಞರು ಹೇಳ್ತಾರೆ. ಅಂತದ್ರಲ್ಲಿ ಹುತ್ತದ ರಂಧ್ರದಲ್ಲಿ ನೇರವಾಗಿ ಈ ರೀತಿ ರಕ್ತ ಹಾಕೋದ್ರಿಂದ ಹುತ್ತದಲ್ಲಿ ಹಾವುಗಳಿದ್ರೇ ಅವುಗಳಿಗೆ ತೊಂದರೆಯಾಗ್ತದೆ ಎನ್ನುತ್ತಿದ್ದಾರೆ.