ಈ ರಾಶಿ ನಿಮ್ಮದಾಗಿದ್ದರೆ ಸದಾ ಇರುತ್ತೆ ಸದಾಶಿವನ ಕೃಪೆ..!

By Suvarna News  |  First Published May 18, 2021, 12:02 PM IST

ಜ್ಯೋತಿಷ್ಯ ಶಾಸ್ತ್ರದಲ್ಲಿ 12 ರಾಶಿಗಳಿವೆ. ಒಂದೊಂದು ರಾಶಿಗೆ ಒಬ್ಬೊಬ್ಬ ದೇವರ ಕೃಪಾಶೀರ್ವಾದ ಇರುತ್ತದೆ. ಅದೇ ರೀತಿ ರಾಶಿಗಳ ಅನುಸಾರ ಆಯಾ ವ್ಯಕ್ತಿಗಳ ವ್ಯಕ್ತಿತ್ವ, ಸ್ವಭಾವಗಳನ್ನು ತಿಳಿದುಕೊಳ್ಳಬಹುದಾಗಿದೆ. ಜೊತೆಗೆ ಯಾವ ದೇವರ ಕೃಪೆ ಇದೆ ಎಂಬುದನ್ನೂ ಸಹ ಮನಗಾಣಬಹುದಾಗಿದೆ. ಈ ಮೂಲಕ ಜನ್ಮರಾಶಿಗನುಗುಣವಾಗಿ ಆಯಾ ದೇವರ ಕೃಪೆಗೆ ಪಾತ್ರರಾಗಬಹುದಾಗಿದ್ದು, ಶಿವ ದೇವನ ಕೃಪೆಗೆ ಈ ಮೂರು ರಾಶಿಯವರು ಪ್ರಾಪ್ತರಾಗಿದ್ದಾರೆ. ಹಾಗಾದರೆ ಆ ರಾಶಿಗಳು ಯಾವುವು ಎಂಬುದನ್ನು ನೋಡೋಣ ಬನ್ನಿ….


ಶಿವ ಶಿವನೆಂದರೆ ಭಯವಿಲ್ಲ, ಶಿವನಾಮಕೆ ಸಾಟಿ ಬೇರಿಲ್ಲ. ಶಿವನ ಕೃಪೆ ಸದಾ ನಮ್ಮ ಮೇಲೆ ಇರಬೇಕೆಂದು ನಾವು ಶಿವನಾಮವನ್ನು ಜಪಿಸಬೇಕು ಎಂದು ಈ ಸಾಲು ಹೇಳುತ್ತದೆ. ಶಿವನ ಕೃಪೆ ನಮ್ಮ ಮೇಲಿದ್ದರೆ ಬದುಕು ಬಂಗಾರವಾಗುತ್ತದೆ. ಯಾವುದಕ್ಕೂ ಅಂಜಬೇಕಿಲ್ಲ. ಶಿವ ಒಳ್ಳೇ ದಿಕ್ಕನ್ನು ತೋರುತ್ತಾನೆ ಎಂಬ ಧೈರ್ಯ ನಮ್ಮನ್ನು ಆವರಿಸುತ್ತದೆ. ಅದೇ ರೀತಿ ನಮ್ಮ ಜಾತಕದ ಅನುಸಾರ ಒಬ್ಬೊಬ್ಬ ದೇವರ ಕೃಪೆ ಒಬ್ಬರ ಮೇಲಿರುತ್ತದೆ. ಹಾಗೇ ಕೆಲವು ರಾಶಿಯವರ ಮೇಲೆ ಶಿವನ ಕೃಪೆ ಸದಾ ಇರುತ್ತದೆ. 

ಇದನ್ನು ಓದಿ: ನಿದ್ರಿಸುವ ದಿಕ್ಕು ಸರಿ ಇದ್ದರೆ, ಹಣ ಹರಿವಿನ ದಿಕ್ಕನ್ನು ಬೇಕಾದರೂ ಬದಲಾಯಿಸಬಹುದು! 

ಶಿವ ಭಕ್ತರಿಗೆ ಬೇಗ ಪ್ರಸನ್ನವಾಗುತ್ತಾನೆ. ಅವರ ಭಕ್ತಿಯಲ್ಲಿ ಪರಿಶುದ್ಧತೆ ಇದ್ದರೆ ಸಾಕು, ಎಲ್ಲರ ಕಷ್ಟವನ್ನೂ ದೂರ ಮಾಡುತ್ತಾನೆ. ಜ್ಯೋತಿಷ್ಯ ಶಾಸ್ತ್ರದಲ್ಲಿ 12 ರಾಶಿಗಳಿದ್ದು, ಅದೇ ರಾಶಿಗಳ ಆಧಾರದ ಮೇಲೆ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಅದರಂತೆ ಜ್ಯೋತಿಷ್ಯ ಶಾಸ್ತ್ರದ ಅನುಸಾರ ಶಿವನ ಕೃಪೆ ಇರಲಿದ್ದು, ಆಶೀರ್ವಾದದಿಂದ ಭವಿಷ್ಯ ಉಜ್ವಲವಾಗಲಿದೆ. ಯಾವ್ಯಾವ ರಾಶಿಯವರ ಮೇಲೆ ಶಿವನ ಕೃಪೆ ಇದೆ ಎಂಬುದನ್ನು ನೋಡೋಣ ಬನ್ನಿ…

ಮೇಷ ರಾಶಿ
ಮೇಷ ರಾಶಿಯಲ್ಲಿ ಜನಿಸಿದವರ ಮೇಲೆ ಶಿವನ ವಿಶೇಷ ಕೃಪೆ ಇರಲಿದೆ. ಜ್ಯೋತಿಷ್ಯದ ನಂಬಿಕೆಗಳ ಪ್ರಕಾರ ಮೇಷ ರಾಶಿಯಲ್ಲಿ ಜನಿಸಿದವರು ಶಿವನನ್ನು ಆರಾಧನೆ ಮಾಡಬೇಕು. ಹೀಗೆ ಮಾಡಿದರೆ ಅವರ ಮೇಲೆ ಶಿವನ ಆಶೀರ್ವಾದ ಸದಾ ಇರುತ್ತದೆ. ಅಲ್ಲದೆ, ನಿಯಮಿತವಾಗಿ ಶಿವಲಿಂಗಕ್ಕೆ ಜಲಾಭಿಷೇಕ ಮಾಡಿದರೆ ಇನ್ನೂ ಉತ್ತಮ ಎಂದು ಹೇಳಲಾಗಿದೆ. ಹೀಗೆ ಮಾಡುವುದರಿಂದ ಶಿವನನ್ನು ಮತ್ತಷ್ಟು ಪ್ರಸನ್ನ ಪಡಿಸಬಹುದಾಗಿದೆ. ಇದರ ಜೊತೆ ಜೊತೆಗೆ ಶಿವಸ್ತೋಸ್ತ್ರಗಳನ್ನು ಪಠಿಸುವುದು, ಶಿವನ ದೇವಾಲಯಗಳಿಗೆ ಭೇಟಿ ನೀಡುವುದು, ಶಿವನಾಮವನ್ನು ಜಪಿಸುವುದು ಸೇರಿದಂತೆ ಶಿವನ ಧ್ಯಾನ ಮಾಡಿದರೆ ಇನ್ನೂ ಹೆಚ್ಚಿನ ಒಳಿತನ್ನು ಕಾಣಬಹುದಾಗಿದೆ. 

ಇದನ್ನು ಓದಿ: ವೃಷಭಕ್ಕೆ ಸೂರ್ಯನ ಪ್ರವೇಶ, ಈ 5 ರಾಶಿಯವರಿಗೆ ಸಂಕಷ್ಟದ ಪ್ರವೇಶ..! 

ಮಕರ ರಾಶಿ
ಮಕರ ರಾಶಿಯ ಅಧಿಪತಿ ಶನಿ ದೇವನಾಗಿದ್ದಾನೆ. ಮಕರ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳಿಗೆ ಶಿವ ಹಾಗೂ ಶನಿ ದೇವರ ಕೃಪೆಗಳು ಲಭ್ಯವಾಗಲಿವೆ. ಈ ಇಬ್ಬರ ಕೃಪೆಯೂ ದೊರೆಯುವುದರಿಂದ ಜೀವನದಲ್ಲಿ ಮತ್ತಷ್ಟು ಯಶಸ್ಸು, ಶ್ರೇಯಸ್ಸನ್ನು ಪಡೆಯಬಹುದಾಗಿದೆ. ಈ ರಾಶಿಯವರು ಪ್ರತಿನಿತ್ಯ ಶಿವನ ಪೂಜೆ, ಆರಾಧನೆ, ಅರ್ಚನೆಗಳನ್ನು ಮಾಡುವುದು ಉತ್ತಮ. ಹೀಗೆ ಮಾಡುವುದರಿಂದ ಶಿವನ ವಿಶೇಷ ಆಶೀರ್ವಾದ ಪ್ರಾಪ್ತಿ ಆಗುತ್ತದೆ. ಮಕರ ರಾಶಿಯವರು ಓಂ ನಮಃ ಶಿವಾಯ ಜಪವನ್ನು ಪಠಿಸಬೇಕು. ಜೊತೆ ಜೊತೆಗೆ ಶನಿ ದೇವರನ್ನೂ ಆರಾಧನೆ ಮಾಡುವುದರಿಂದ ಈ ರಾಶಿಯಲ್ಲಿ ಜನಿಸಿದವರು ಹಂತ ಹಂತವಾಗಿ ಏಳ್ಗೆಯನ್ನು ಕಾಣಬಹುದಾಗಿದೆ. 

Tap to resize

Latest Videos


ಕುಂಭ ರಾಶಿ
ಕುಂಭ ರಾಶಿಯವರ ಅಧಿಪತಿ ದೇವರೂ ಸಹ ಶನಿ ಪರಮಾತ್ಮನಾಗಿದ್ದಾನೆ. ಈ ರಾಶಿಯ ವ್ಯಕ್ತಿಗಳ ಮೇಲೂ ಶಿವ ಮತ್ತು ಶನಿ ದೇವರುಗಳ ವಿಶೇಷವಾದ ಕೃಪೆ ಇರುತ್ತದೆ. ಕುಂಭ ರಾಶಿಯವರು ಶಿವಲಿಂಗಕ್ಕೆ ಜಲದ ಅಭಿಷೇಕ ಮಾಡುವ ಮೂಲಕ ಶಿವ ದೇವರನ್ನು ಆರಾಧನೆ ಮಾಡಬೇಕು. ಅಲ್ಲದೆ, ಸಾಮರ್ಥ್ಯಕ್ಕೆ ಅನುಸಾರ ದಾನ-ಧರ್ಮಾದಿಗಳನ್ನು ಮಾಡುವ ಮೂಲಕ ಶಿವನ ಕೃಪೆಗೆ ಪಾತ್ರರಾಗಬೇಕು. ಶಾಸ್ತ್ರಗಳ ಅನುಸಾರ ದಾನವನ್ನು ಮಾಡುವುದರಿಂದ ಹೆಚ್ಚಿನ ಫಲವು ಪ್ರಾಪ್ತಿಯಾಗುವುದಲ್ಲದೆ, ಗೊತ್ತಿಲ್ಲದೆ ಮಾಡಿದ ಪಾಪಗಳು ನಾಶವಾಗುತ್ತದೆ. ಅಲ್ಲದೆ, ಶಿವನ ವಿಶೇಷ ಆರಾಧನೆಯಿಂದ ಸದಾಶಿವನ ಆಶೀರ್ವಾದವು ಸದಾ ಇರುವಂತೆ ನೋಡಿಕೊಳ್ಳಬಹುದಾಗಿದೆ. 

ಇದನ್ನು ಓದಿ: ಈ ನಕ್ಷತ್ರದಲ್ಲಿ ಜನಿಸಿದವರು ಭಾಗ್ಯಶಾಲಿಗಳು, ಇವರಿಗಿದೆ ಶನಿ ಕೃಪೆ! 

ಈ ಮೂಲಕ ಮೇಷ, ಮಕರ ಹಾಗೂ ಕುಂಭ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳಿಗೆ ಶಿವ ದೇವನ ವಿಶೇಷ ಕೃಪೆಯು ಲಭ್ಯವಾಗಲಿದೆ. ಹಾಗಾಗಿ ಶಿವನ ಆರಾಧನೆಯಲ್ಲಿ ಈ ಮೂರು ರಾಶಿಗಳವರು ತೊಡಗಿಕೊಂಡರೆ ಭವಿಷ್ಯದಲ್ಲಿ ಉತ್ತಮ ಜೀವನ ಕಾಣಬಹುದಾಗಿದೆ.

click me!