ಪರಶಿವನ ಕೃಪೆ ಪಡೆವ ಶ್ರಾವಣ ಮಾಸ ಮಹತ್ವ, ಆಚರಣೆ!

By Suvarna News  |  First Published Jul 24, 2020, 4:56 PM IST

ಶ್ರಾವಣವು ಪವಿತ್ರವಾದ ಮಾಸ, ಧಾರ್ಮಿಕ ಕಾರ್ಯಗಳಿಗೆ, ಭಗವಂತನ ಒಲುಮೆಯನ್ನು ಪಡೆಯಲು ಪ್ರಶಸ್ತವಾದ ಕಾಲವಾಗಿದೆ. ಶ್ರಾವಣ ಸೋಮವಾರ, ಮಂಗಳ ಗೌರಿ ವ್ರತ, ವರ ಮಹಾಲಕ್ಷ್ಮೀ ವ್ರತ ಹೀಗೆ ಅನೇಕ ಹಬ್ಬ ಮತ್ತು ವ್ರತಗಳನ್ನು ಆಚರಿಸುವ ಪುಣ್ಯಕಾಲ. ಈ ಮಾಸದಲ್ಲಿ ಶಿವನನ್ನು ಆರಾಧಿಸಿದರೆ ಪುಣ್ಯಫಲವನ್ನು ಹೊಂದಬಹುದಾಗಿದೆ. ಈ ಶ್ರಾವಣ ಮಾಸದ ಮಹತ್ವದ ಬಗ್ಗೆ ತಿಳಿಯೋಣ.


ಹಿಂದೂ ಪಂಚಾಂಗದ ಐದನೇ ಮಾಸವಾದ ಶ್ರಾವಣ ಮಾಸವು ತಿಂಗಳುಗಳಲ್ಲೇ ಹೆಚ್ಚು ಪವಿತ್ರವೆಂಬ ಮಾನ್ಯತೆ ಪಡೆದಿದೆ. ಪವಿತ್ರವಾದ ಈ ಮಾಸದಲ್ಲಿ ಶಿವನ ಆರಾಧನೆ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುವುದಲ್ಲದೆ, ಬೇಡಿದ್ದನ್ನು ಕೊಡುವ ಶಿವನ ಕೃಪೆ ಸಂಪೂರ್ಣ ಪ್ರಾಪ್ತವಾಗುತ್ತದೆ ಎಂಬುದು ನಂಬಿಕೆ.

ಧಾರ್ಮಿಕ ಕಾರ್ಯಗಳು, ಹಬ್ಬಗಳು ಸಾಲು ಸಾಲಾಗಿ ಬರುವ ಮಾಸ ಶ್ರಾವಣ. ಈ ಮಾಸದ ಎಲ್ಲ ದಿನಗಳೂ ಶುಭವೇ ಆಗಿದೆ. ಅಷ್ಟೇ ಅಲ್ಲದೆ, ಮೊದಲನೆಯ ಬಾರಿಗೆ ಯಾವುದಾದರೂ ಕೆಲಸವನ್ನು ಆರಂಭಿಸಲು ಇದು ಪ್ರಶಸ್ತವಾದ ತಿಂಗಳು ಎಂದೇ ಹೇಳಬಹುದು.

ಇದನ್ನು ಓದಿ: ಶಾಸ್ತ್ರ ಉಲ್ಲೇಖಿಸಿದ ಸ್ನಾನದ ವಿಧಗಳು ಮತ್ತು ವಿಧಾನ ! 


  
ಶ್ರಾವಣ ಸೋಮವಾರ
ಈ ಮಾಸದ ಪ್ರತಿ ಸೋಮವಾರವು ಶ್ರಾವಣ ಸೋಮವಾರವೆಂದೇ ಪ್ರಸಿದ್ಧಿ. ಶ್ರಾವಣ ಸೋಮವಾರ ವ್ರತದ ಹಿಂದೆಯೂ ಅನೇಕ ಪುರಾಣ ಕಥೆಗಳಿವೆ. ಅಂದು ಎಲ್ಲ ಶಿವ ದೇವಾಲಯಗಳಲ್ಲಿ ಹಾಲಿನ ಅಭಿಷೇಕ ಮತ್ತು ಬಿಲ್ವಾರ್ಚನೆಗೆ ಆದ್ಯತೆ ನೀಡಲಾಗುತ್ತದೆ. ಶ್ರಾವಣ ಸೋಮವಾರದ ವ್ರತವನ್ನು ಮಾಡುವವರು, ಆ ದಿನ ಶಿವನ ಪೂಜೆ, ಧ್ಯಾನಗಳನ್ನು ಮಾಡುತ್ತಾ ಸೂರ್ಯಾಸ್ತದವರೆಗೆ ಉಪವಾಸವನ್ನು ಆಚರಿಸುತ್ತಾರೆ.  

ಶ್ರಾವಣದಲ್ಲಿ ಶಿವನನ್ನೇ ಆರಾಧಿಸುವುದೇಕೆ?

Latest Videos

undefined

ಪುರಾಣ ಕಾಲದಲ್ಲಿ ಸಮುದ್ರ ಮಂಥನವಾದ ಸಂದರ್ಭದಲ್ಲಿ ಅಮೃತಕ್ಕಾಗಿ ದೇವತೆಗಳು ಮತ್ತು ದಾನವರು ಕಾದಾಡುತ್ತಿದ್ದರು. ಆಗ 14 ಬೇರೆ ಬೇರೆ ರತ್ನಗಳು ಮೇಲೆದ್ದು ಬರುತ್ತವೆ. ಹದಿಮೂರು ರತ್ನಗಳನ್ನು ದೇವತೆಗಳು ದಾನವರು ಹಂಚಿಕೊಳ್ಳುತ್ತಾರೆ, ಉಳಿದ ಒಂದು ರತ್ನವೇ ಹಾಲಾಹಲ. 
ಇಡೀ ಪೃಥ್ವಿಯನ್ನೇ ನಾಶಮಾಡುವ ಶಕ್ತಿಯಿರುವ ಹಾಲಾಹಲವನ್ನು ಶಿವ ಕುಡಿಯುತ್ತಾನೆ, ಪಾರ್ವತಿ ಗಂಟಲನ್ನು ಒತ್ತಿ ಹಿಡಿದ ಕಾರಣ ಹಾಲಾಹಲವು ಗಂಟಲಲ್ಲೇ ಉಳಿದುಕೊಳ್ಳುತ್ತದೆ. ಶಿವನ ಗಂಟಲು ನೀಲಿ ಬಣ್ಣಕ್ಕೆ ತಿರುಗುತ್ತದೆ. ಹಾಗಾಗಿ ಶಿವನಿಗೆ ನೀಲಕಂಠನೆಂಬ ಹೆಸರು ಬರುತ್ತದೆ. ಜಗತ್ತಿನ ಉಳಿವಿಗಾಗಿ ಶಿವ ಹಾಲಾಹಲವನ್ನು ಕುಡಿದದ್ದು ಶ್ರಾವಣ ಮಾಸದಲ್ಲಿ ಆದ ಕಾರಣ ಈ ಮಾಸದಲ್ಲಿ ಶಿವನನ್ನು ಆರಾಧಿಸುವುದು.  

ಇದನ್ನು ಓದಿ: ಶನಿದೇವರ ಫೋಟೋವನ್ನು ಮನೆ ದೇವರ ಕೋಣೆಯಲ್ಲಿ ಏಕೆ ಇಡಬಾರದು?



ಶ್ರಾವಣ ಮಾಸದಲ್ಲಿ ರುದ್ರಾಕ್ಷಿ ಧಾರಣೆ
ರುದ್ರಾಕ್ಷಿಯನ್ನು ಧರಿಸುವುದರಿಂದ ಶಿವನ ಕೃಪೆಯನ್ನು ಪಡೆಯಬಹುದು. ರುದ್ರಾಕ್ಷಿಯಿಂದ ಅನೇಕ ಲಾಭಗಳಿದ್ದು, ಅದನ್ನು ಧರಿಸುವುದರಿಂದ ಅನೇಕ ರೋಗಗಳು ವಾಸಿಯಾಗುತ್ತವೆ. ನೆಮ್ಮದಿ, ಸ್ವಾಸ್ಥ್ಯ ಮತ್ತು ಶಿವನ ಒಲುಮೆಗಾಗಿ ರುದ್ರಾಕ್ಷಿಯನ್ನು ಧರಿಸುವುದಾಗಿದೆ. ಅದರಲ್ಲೂ ಶಿವನ ಆರಾಧನೆಗೆ ಪ್ರಶಸ್ತವಾದ ಶ್ರಾವಣ ಮಾಸದಲ್ಲಿ ರುದ್ರಾಕ್ಷಿಯನ್ನು ಧರಿಸಿದರೆ ಉತ್ತಮ. ಶ್ರಾವಣ ಸೋಮವಾರವು ಶಿವನ ಪೂಜೆ ಮತ್ತು ಆರಾಧನೆಗೆ ಅತಿ ಪುಣ್ಯದಿನ. ಹಾಗಾಗಿ ಅಂದು ರುದ್ರಾಕ್ಷಿಯನ್ನು ಧರಿಸಿದರೆ ಪುಣ್ಯಫಲ ಪಡೆಯುವುದಲ್ಲದೇ, ಶಿವನನ್ನು ಪ್ರಸನ್ನಗೊಳಿಸಿಕೊಳ್ಳಬಹುದಾಗಿದೆ.

ಶ್ರಾವಣ ಮಾಸದಲ್ಲಿ ಮಾಡುವ ಆಚರಣೆಗಳು
- ಪುಣ್ಯ ಸಂಪಾದನೆಗೆ ಶ್ರಾವಣ ಮಾಸವು ತುಂಬ ಉತ್ತಮವಾದ ಸಮಯ. ಈ ಮಾಸದಲ್ಲಿ ಭಕ್ತಿಯಿಂದ ಶಿವನನ್ನು ಆರಾಧಿಸಿದರೆ ಪುಣ್ಯ ಲಭಿಸುತ್ತದೆ.

- ಶ್ರಾವಣ ಮಾಸದಲ್ಲಿ ಶಿವನಿಗೆ ಹಾಲಿನಿಂದ ಅಭಿಷೇಕ ಮಾಡುವುದರಿಂದ ಪುಣ್ಯ ಲಭಿಸುವುದಾಗಿ ಪುರಾಣ ಹೇಳುತ್ತದೆ.

- ರುದ್ರಾಕ್ಷಿ  ಜಪಮಾಲೆಯಿಂದ ಶಿವನ ಜಪ ಮಾಡುವುದರಿಂದ ಉತ್ತಮ ಫಲಪ್ರಾಪ್ತಿಯಾಗುತ್ತದೆ.

- ವಿಭೂತಿಯಿಂದ ಶಿವನನ್ನು ಆರಾಧಿಸಿದರೆ ಶುಭ ಉಂಟಾಗುತ್ತದೆ.

- ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆಯ ಮಿಶ್ರಣದಿಂದ ಪಂಚಾಮೃತವಾಗುತ್ತದೆ. ಈ ಪಂಚಾಮೃತದಿಂದ ಹರನಿಗೆ ಅಭಿಷೇಕ ಮಾಡುವುದರ ಜೊತೆಗೆ ಬಿಲ್ವಪತ್ರೆಗಳಿಂದ ಅರ್ಚನೆ ಮಾಡಿದರೆ, ಶಿವ ಸಂತುಷ್ಟನಾಗಿ ಬೇಡಿದ್ದನ್ನು ನೀಡುತ್ತಾನೆ.

- ಶಿವ ಚಾಲೀಸವನ್ನು ಪಠಿಸಿ, ಶಿವನಿಗೆ ಆರತಿ ಮಾಡಿದರೆ ಒಳ್ಳೆಯದು.

- ಶ್ರಾವಣ ಮಾಸದಲ್ಲಿ ರುದ್ರಾಭಿಷೇಕವನ್ನು ಮಾಡಿಸುವುದರಿಂದ ಮನೆಗೆ ಒಳಿತಾಗುತ್ತದೆ. ಈ ಮಾಸದಲ್ಲಿ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದು ಹೆಚ್ಚು ಶ್ರೇಯಸ್ಕರವಾಗಿದೆ.

- ವಿವಾಹಾಪೇಕ್ಷಿತ ಕನ್ಯೆಯರು ಉತ್ತಮ ವರನನ್ನು ಪಡೆಯಲು ಶ್ರದ್ಧಾ-ಭಕ್ತಿಯಿಂದ ಶ್ರಾವಣ ಸೋಮವಾರ ವ್ರತವನ್ನು ಪಾಲಿಸಿ, ನಿಯಮದಂತೆ ಉಪವಾಸವನ್ನು ಆಚರಿಸಿದರೆ ಶುಭಫಲ ದೊರೆಯುವುದರಲ್ಲಿ ಸಂಶಯವಿಲ್ಲ.

ಇದನ್ನು ಓದಿ: ರಾಹುವಿಗೆ ಪ್ರಿಯವಾದ ಉದ್ದಿನಕಾಳಿನ ಮಹಿಮೆ ಬಲ್ಲಿರೇನು? 

ಮಂಗಳ ಗೌರಿ ಮತ್ತು ವರ ಮಹಾಲಕ್ಷ್ಮೀ
ಮಂಗಳ ಗೌರಿ ಮತ್ತು ವರ ಮಹಾಲಕ್ಷ್ಮೀ ವ್ರತಗಳು ಸಹ ಶ್ರಾವಣ ಮಾಸದಲ್ಲಿ ಶುಭಫಲ ನೀಡುವ ವ್ರತಗಳಾಗಿವೆ. ಈ ವ್ರತಗಳನ್ನು ಮಾಡುವುದರಿಂದ ಇಷ್ಟಾರ್ಥಗಳು ಸಿದ್ಧಿಸುವುದಾಗಿ ಪುರಾಣದಲ್ಲಿ ಹೇಳಲಾಗಿದೆ. ಸಂತಾನ ಪ್ರಾಪ್ತಿ, ಸುಖ- ಸಂಪತ್ತು, ಧನ-ಧಾನ್ಯ ಸಮೃದ್ಧಿ, ಸೌಭಾಗ್ಯ ಸ್ಥಿರವಾಗಿರಲು ಈ ವ್ರತಗಳನ್ನು ಆಚರಿಸಲಾಗುತ್ತದೆ. ನಾಗರ ಪಂಚಮಿ ಮತ್ತು ಉಪಾಕರ್ಮವು ಇದೇ ಮಾಸದಲ್ಲಿ ಬರುವ ಹಬ್ಬವಾಗಿದೆ.

click me!