ಮೂಲತಃ ಗುವಾಹಟಿಯ ಕಾಮಾಕ್ಷಿ ದೇವರು ಕುಮಟಾಕ್ಕೆ ಬಂದು ನೆಲೆಸಿದ ನಂತರ ಕಳೆದ ಹಲವಾರು ವರ್ಷಗಳಿಂದ ಅಶ್ವಿನಿ ಮಾಸದ ಹುಣ್ಣಿಮೆಯಂದು ಇಲ್ಲಿ ಜಾತ್ರೆ ನಡೆಯುತ್ತದೆ. ಬಾಣಲೆಯಲ್ಲಿ ಕುದಿಯುತ್ತಿರುವ ಎಣ್ಣೆಯಲ್ಲಿ ಕೈ ಹಾಕಿ ವಡೆಯನ್ನು ಭಕ್ತರು ತೆಗೆಯೋದು ಈ ಕಾಮಾಕ್ಷಿ ದೇವಿಯ ಜಾತ್ರೆಯ ವಿಶೇಷ.
ವರದಿ: ಭರತ್ ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣನ್ಯೂಸ್
ಉತ್ತರಕನ್ನಡ (ಅ.10): ಬಿಸಿ ಎಣ್ಣೆಯಲ್ಲಿ ಕೈ ಹಾಕೋದು ಅಂದ್ರೆ ಅಪಾಯ ಕಟ್ಟಿಟ್ಟ ಬುತ್ತಿ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದರೆ, ಇಲ್ಲೊಂದೆಡೆ ಬಿಸಿ ಎಣ್ಣೆ ಅನ್ನೋದನ್ನ ಲೆಕ್ಕಿಸಿದೇ ಕಾದಿರುವ ಎಣ್ಣೆಯಲ್ಲಿ ಬೇಯುತ್ತಿರುವ ವಡೆಗಳನ್ನು ಬರಿಗೈನಲ್ಲಿ ಭಕ್ತರು ತೆಗೆಯುವ ಸಂಪ್ರದಾಯ ನಡೆಸಿಕೊಂಡು ಬರುವ ಮೂಲಕ ಅಚ್ಚರಿ ಮೂಡಿಸಿದೆ. ಪ್ರತೀ ವರ್ಷ ಅಶ್ವಿನಿ ಮಾಸದ ಹುಣ್ಣಿಮೆ ದಿನದಂದು ನಡೆಯುವ ಉತ್ಸವದಲ್ಲಿ ಈ ಸಂಪ್ರದಾಯ ನಡೆಸಿಕೊಂಡು ಬರಲಾಗುತ್ತಿದ್ದು, ಇಲ್ಲಿ ನಡೆಯುವ ಚಮತ್ಕಾರವನ್ನು ನೋಡಿ ಭಕ್ತರು ಆ ಶಕ್ತಿಗೆ ಶರಣು ಶರಣೆನ್ನುತ್ತಾರೆ. ಒಂದೆಡೆ ಪುಷ್ಪಗಳು ಹಾಗೂ ಚಿನ್ನಾಭರಣಗಳಿಂದ ಶೃಂಗಾರಗೊಂಡಿರುವ ಆ ತಾಯಿ. ಇನ್ನೊಂದೆಡೆ ಆ ದೇವಿಯ ಮುಂದಿರುವ ಬಾಣಲೆಯಲ್ಲಿ ಸುಡುತ್ತಿರುವ ಎಣ್ಣೆಯಲ್ಲಿ ವಡೆಯನ್ನು ಕರೆಯುತ್ತಿರುವ ಅರ್ಚಕರು. ಮತ್ತೊಂದೆಡೆ ಕುದಿಯುತ್ತಿರುವ ಎಣ್ಣೆಯಲ್ಲಿ ಸುಡುತ್ತದೆ ಅನ್ನೋ ಭಯವಿಲ್ಲದೆ ಕೈ ಹಾಕಿ ಸರತಿ ಸಾಲಿನಲ್ಲಿ ವಡೆಯನ್ನು ತೆಗೆಯುತ್ತಿರುವ ಭಕ್ತಾಧಿಗಳು. ಇಂತಹದ್ದೊಂದು ಅದ್ಭುತ ಚಮತ್ಕಾರದ ಜಾತ್ರೆ ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಕಾಮಾಕ್ಷಿ ದೇವಾಲಯದಲ್ಲಿ ನಡೆಯಿತು. ಮೂಲತಃ ಗುವಾಹಟಿಯ ಕಾಮಾಕ್ಷಿ ದೇವರು ಕುಮಟಾಕ್ಕೆ ಬಂದು ನೆಲೆಸಿದ ನಂತರ ಕಳೆದ ಹಲವಾರು ವರ್ಷಗಳಿಂದ ಅಶ್ವಿನಿ ಮಾಸದ ಹುಣ್ಣಿಮೆಯಂದು ಇಲ್ಲಿ ಜಾತ್ರೆ ನಡೆಯುತ್ತದೆ. ದೇವಸ್ಥಾನದಲ್ಲಿ ಹದಿನೈದು ದಿನಗಳ ಕಾಲ ನವರಾತ್ರಿ ಉತ್ಸವ ಆಚರಿಸಿದ ಬಳಿಕ ಹುಣ್ಣಿಮೆಯಂದು ಈ ಉತ್ಸವ ಮುಕ್ತಾಯವಾಗುವ ಹಿನ್ನೆಲೆ ಜಾತ್ರೆ ಮಾಡಲಾಗುತ್ತದೆ. ಬಾಣಲೆಯಲ್ಲಿ ಕುದಿಯುತ್ತಿರುವ ಎಣ್ಣೆಯಲ್ಲಿ ಕೈ ಹಾಕಿ ವಡೆಯನ್ನು ಭಕ್ತರು ತೆಗೆಯೋದು ಈ ಕಾಮಾಕ್ಷಿ ದೇವಿಯ ಜಾತ್ರೆಯ ವಿಶೇಷ.
undefined
ಈ ಜಾತ್ರೆಯನ್ನು ಸಾಂಪ್ರದಾಯಿಕ ಭಾಷೆಯಲ್ಲಿ ವಡೆ ಹುಣ್ಣಿಮೆ ಜಾತ್ರೆ ಅಂತಲೂ ಕರೆಯುತ್ತಾರೆ. ಪ್ರತಿವರ್ಷದಂತೆ ಈ ಬಾರಿಯೂ ಅದ್ದೂರಿಯಾಗಿ ಕ್ಷೇತ್ರದಲ್ಲಿ ಜಾತ್ರೆ ನಡೆದಿದೆ. ಜಾತ್ರೆಗೆ ವಿವಿಧ ಭಾಗಗಳಿಂದ ಆಗಮಿಸಿದ ಸಾಕಷ್ಟು ಭಕ್ತರು ಕುದಿಯುವ ಎಣ್ಣೆಯಲ್ಲಿ ಕೈ ಹಾಕಿ ವಡೆಯನ್ನ ತೆಗೆಯುವ ಮೂಲಕ ತಮ್ಮ ಹರಕೆ ತೀರಿಸಿಕೊಂಡಿದ್ದಾರೆ.
ಇನ್ನು ಕುಮಟಾ ಪಟ್ಟಣದ ಗುಜರಗಲ್ಲಿಯಲ್ಲಿರುವ ಕಾಮಾಕ್ಷಿ ದೇವಿಯ ಜಾತ್ರೆಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಕೇವಲ ನಮ್ಮ ರಾಜ್ಯದಿಂದ ಮಾತ್ರವಲ್ಲದೇ ಗೋವಾ, ಮಹಾರಾಷ್ಟ್ರ, ಮುಂಬೈಗಳಿಂದಲೂ ಸಹ ಭಕ್ತರ ದಂಡು ಇಲ್ಲಿಗೆ ಆಗಮಿಸುತ್ತದೆ. ಇಲ್ಲಿ ಜಾತ್ರೆ ಸಮಯದಲ್ಲಿ ಯಾವುದೇ ಇಷ್ಟಾರ್ಥ ಸಿದ್ದಿಗಾಗಿ ಕುದಿಯುತ್ತಿರುವ ಎಣ್ಣೆಯಲ್ಲಿ ವಡೆ ತೆಗೆಯುತ್ತೇನೆ ಎಂದು ಹರಕೆ ಹೊತ್ತುಕೊಂಡ್ರೆ ಭಕ್ತರ ಇಷ್ಟಾರ್ಥ ಸಿದ್ದಿಯಾಗುತ್ತೆ ಎಂಬುದು ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಅಭಿಪ್ರಾಯ.
ಈ ಹಿನ್ನೆಲೆ ಹರಕೆ ಈಡೇರಿದ ಭಕ್ತರು ಇಂದು ಕುದಿಯುವ ಎಣ್ಣೆಯಲ್ಲಿ ವಡೆಯನ್ನ ತೆಗೆದರು. ಹರಕೆ ತೀರಿಸುವ ಮುನ್ನ ಭಕ್ತರು 15 ದಿನಗಳ ಕಾಲ ದೇವರಿಗೆ ಸೇವೆಯನ್ನು ಮಾಡುತ್ತಾರೆ. ಅಲ್ಲದೇ ವಡೆ ತೆಗೆಯುವ ಮೂರು ದಿನ ಮುಂಚಿತ ಮಾಂಸಹಾರ ಸೇವನೆಯನ್ನು ಬಿಡುತ್ತಾರೆ. ಜಾತ್ರೆ ನಡೆಯುವ ದಿನ ಬೆಳಿಗ್ಗೆಯೇ ದೇವಸ್ಥಾನ ಆವರಣದಲ್ಲಿಯೇ ತೀರ್ಥಸ್ನಾನ ಮಾಡಿ ನಂತರ ದೇವಾಲಯದ ಅರ್ಚಕರಿಂದ ತೀರ್ಥವನ್ನ ಪಡೆದು ಎಣ್ಣೆಯಲ್ಲಿ ವಡೆಯನ್ನ ತೆಗೆಯುತ್ತಾರೆ.
ಅಪರೂಪದ ಕಾಷ್ಟ ಶಿಲ್ಪದ ಕಾಣಿಯೂರು ಮಠವನ್ನೊಮ್ಮೆ ಕಾಣ ಬನ್ನಿ
ಭಕ್ತಿಯಿಂದ ಕಾದಿರುವ ಎಣ್ಣೆಯಲ್ಲಿ ವಡೆ ತೆಗೆಯುವುದರಿಂದ ಯಾವ ಸುಟ್ಟಗಾಯಗಳು ಆಗುವುದಿಲ್ಲ. ಇದು ದೇವರ ಮೇಲಿರುವ ನಂಬಿಕೆ ಅಂತಾರೇ ಇಲ್ಲಿನ ಭಕ್ತರು. ಇದೇ ದಿನ ಪಟ್ಟಣದ ಶಾಂತೇರಿ ಕಾಮಾಕ್ಷಿ, ರಾಮನಾಥ ಲಕ್ಷ್ಮೀನಾರಾಯಣ ದೇವಾಲಯದಲ್ಲೂ ಸಹ ಭಕ್ತರು ಎಣ್ಣೆಯಲ್ಲಿ ವಡೆಯನ್ನು ತೆಗೆಯುವ ಮೂಲಕ ದೇವರ ಹರಕೆಯನ್ನು ತೀರಿಸುತ್ತಾರೆ.
ಮಸ್ಕಿಯಲ್ಲಿ ಸಂಭ್ರಮದ ನವರಾತ್ರಿ ಉತ್ಸವ ಆಚರಣೆ, ಭ್ರಮರಾಂಭ ದೇವಿಯ 52ನೇ ಅದ್ಧೂರಿ ಜಂಬೂ ಸವಾರಿ
ಒಟ್ಟಿನಲ್ಲಿ ಕುದಿಯುತ್ತಿರುವ ಎಣ್ಣೆಯಲ್ಲಿ ಭಕ್ತರು ವಡೆಯನ್ನು ತೆಗೆಯುವ ಮೂಲಕ ತಾಯಿ ಕಾಮಾಕ್ಷಿ ದೇವಿಯ ಮುಂದೆ ಹರಕೆಯನ್ನ ತೀರಿಸಿದ್ದಾರೆ. ಕುದಿಯುತ್ತಿರುವ ಎಣ್ಣೆಗೆ ಕೈ ಹಾಕಿದರೂ ಏನೂ ಗಾಯಗಳಾಗದೆ ಭಕ್ತರು ಸರಾಗವಾಗಿ ವಡೆ ತೆಗೆಯುವುದು ವಿಜ್ಞಾನ ಲೋಕಕ್ಕೆ ಒಂದು ಸವಾಲು ಅಂದರೆ ತಪ್ಪಾಗಲಾರದು.