ಮಸ್ಕಿಯಲ್ಲಿ ಸಂಭ್ರಮದ‌ ನವರಾತ್ರಿ ಉತ್ಸವ ಆಚರಣೆ, ಭ್ರಮರಾಂಭ ದೇವಿಯ 52ನೇ ಅದ್ಧೂರಿ ಜಂಬೂ ಸವಾರಿ

By Suvarna NewsFirst Published Oct 9, 2022, 11:56 PM IST
Highlights

ರಾಯಚೂರು ಜಿಲ್ಲೆ ‌ಮಸ್ಕಿ ಪಟ್ಟಣದಲ್ಲಿ ಇಂದು ಆನೆ ಮೇಲೆ ಭ್ರಮರಾಂಭ ದೇವಿಯ ಅದ್ಧೂರಿ ಮೆರವಣಿಗೆ ‌ನಡೆಯಿತು.  ಈ ವರ್ಷ ನವರಾತ್ರಿ ಉತ್ಸವ ಹಾಗೂ 52ನೇ ವರ್ಷದ ದೇವಿಯ ಪುರಾಣ ಮುಗಿಸಿ ಅದ್ದೂರಿ ಜಂಜೂ ಸವಾರಿ ಮಾಡಲಾಯ್ತು‌.

ವರದಿ : ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್ 

ರಾಯಚೂರು (ಅ.9): ರಾಯಚೂರು ಜಿಲ್ಲೆ ‌ಮಸ್ಕಿ ಪಟ್ಟಣದಲ್ಲಿ ಇಂದು ಆನೆ ಮೇಲೆ ಭ್ರಮರಾಂಭ ದೇವಿಯ ಅದ್ಧೂರಿ ಮೆರವಣಿಗೆ ‌ನಡೆಯಿತು. ಕಳೆದ ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಯಾವುದೇ ಅದ್ಧೂರಿ ಮೆರವಣಿಗೆ ಮಾಡಿರಲಿಲ್ಲ. ಹೀಗಾಗಿ ಈ ವರ್ಷ ನವರಾತ್ರಿ ಉತ್ಸವ ಹಾಗೂ 52ನೇ ವರ್ಷದ ದೇವಿಯ ಪುರಾಣ ಮುಗಿಸಿ ಅದ್ದೂರಿ ಜಂಜೂ ಸವಾರಿ ಮಾಡಲಾಯ್ತು‌. ಮಸ್ಕಿ ಪಟ್ಟಣದ ಭ್ರಮರಾಂಭ ದೇವಸ್ಥಾನಕ್ಕೆ ತನ್ನದೇ ಆದ ಇತಿಹಾಸವಿದೆ. ಇಂತಹ ಭ್ರಮರಾಂಭ ದೇವಿಗೆ ಇಂದು ಬೆಳಗ್ಗೆ ಗಂಗಾಸ್ಥಳದಿಂದ ತಂಡ ಜಲದಿಂದ ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯ್ತು.  ಆ ಬಳಿಕ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು. ಮಸ್ಕಿ ಭಾಗದಲ್ಲಿ ಭ್ರಮರಾಂಭ ದೇವಿಯ ಸಾವಿರಾರು ಭಕ್ತರು ಇದ್ದಾರೆ. ಹೀಗಾಗಿ ಎರಡು ವರ್ಷಗಳಿಂದ ನಿಂತಿರುವ ಮೆರವಣಿಗೆ ಈ ವರ್ಷ ಅದ್ದೂರಿ ಆಗಿ ಮಾಡಲಾಯ್ತು. ಅದಕ್ಕೂ ಮುನ್ನ ಮಸ್ಕಿ ಪಟ್ಟಣದ ಅಶೋಕ ವೃತ್ತದಲ್ಲಿ ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ, ಶಾಸಕ ಆರ್. ಬಸನಗೌಡ ತುರ್ವಿಹಾಳ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ತಹಶೀಲ್ದಾರ್ ಕವಿತಾ ಆರ್, ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ,  ಸಿಪಿಐ ಸಂಜೀವ್ ಬಳಿಗಾರ ನೇತೃತ್ವದಲ್ಲಿ ಅಂಬಾರಿಗೆ ಹಾಗೂ ದೇವಿಯ ವಿಗ್ರಹಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಮೆರವಣಿಗೆ ಚಾಲನೆ ನೀಡಿದರು.

Latest Videos

ಮೆರವಣಿಗೆ ಚಾಲನೆ ಸಿಕ್ಕ ಬಳಿಕ ಲ ಸಾವಿರಕ್ಕೂ ಹೆಚ್ಚು ಮಹಿಳೆಯರು ಪೂರ್ಣಕುಂಭ ಹಾಗೂ ಕಳಸದೊಂದಿಗೆ ದೇವಿಯ ವಿಗ್ರಹವನ್ನು ಹೊತ್ತ ಗಜರಾಜ ರಾಜಾ ಗಾಂಭೀರ್ಯದಲ್ಲಿ ಮೆರವಣಿಗೆಯಲ್ಲಿ ಭಾಗಿಯಾಗಿ ದೇವಿಗೆ ಹರಕೆ ಸಲ್ಲಿಸಿದರು. ಇನ್ನೂ ಭ್ರಮರಾಂಭ ದೇವಿಯ ಜಂಬೂ ಸವಾರಿ ಪಟ್ಟಣದ ಅಶೋಕ ವೃತ್ತದಿಂದ ಆರಂಭಗೊಂಡು, ಮುಖ್ಯ ಬಜಾರ, ದೈವದಕಟ್ಟೆ, ತೇರು ಬೀದಿ, ಕನಕವೃತ್ತದ ಮೂಲಕ ಸಾಗಿ ಭ್ರಮರಾಂಬಾ ದೇವಸ್ಥಾನಕ್ಕೆ ತಲುಪಿತು.

 ಜಂಬೂ ಸವಾರಿ ವೇಳೆ ಹತ್ತಾರು ಕಲೆಗಳು ಅನಾವರಣ: ಭ್ರಮರಾಂಭ ದೇವಿಯ ಮೆರವಣಿಗೆ ನೋಡುವುದೇ ಕಣ್ಣಿಗೆ ಒಂದು ಆನಂದ. ಅತ್ತ ಮೈಸೂರಿನಲ್ಲಿ ತಾಯಿ ಚಾಮುಂಡೇಶ್ವರಿ ದೇವಿಯ ಮೆರವಣಿಗೆ ನಡೆದಂತೆ ಬಿಸಿಲುನಾಡು ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದಲ್ಲಿ ಭ್ರಮರಾಂಭ ದೇವಿಯ ಮೂರ್ತಿ ಆನೆ ಮೇಲೆ ಜಂಬೂ ಸವಾರಿ ಮಾಡುವುದು ಕಾಣಬಹುದಾಗಿದೆ.

ನವರಾತ್ರಿಗೆ 8 ಕೋಟಿ ರೂಪಾಯಿ ನೋಟು ಹಾಗೂ ಚಿನ್ನಾಭರಣದಿಂದ ಕಂಗೊಳಿಸಿದ 135 ವರ್ಷ ಹಳೆ ದೇಗುಲ!

ಈ ವೇಳೆ ಕಲ್ಯಾಣ ಕರ್ನಾಟಕದ ಕಲಾವಿದರಾದ ಸಂಡೂರಿನ ಚಂದ್ರಶೇಖರಯ್ಯ ಸ್ವಾಮಿಗಳ ವೀರಗಾಸೆ ನೃತ್ಯ, ನೀರಮಾನ್ವಿಯ ಲಿಂಗರಾಜ ಅವರ ಡೊಳ್ಳು ಕಣಿತ, ಶಿವರಾಜ ಕೊಟ್ಟೂರು ತಂಡದ ನಂದಿಧ್ವಜ, ಬಸವರಾಜ ಸಿಂಧನೂರು ತಂಡದ ಮಹಿಳಾ ವೀರಗಾಸೆ, ಜೋಗತಿ ನೃತ್ಯ ಹಾಗೂ ಅಮರೇಶ ಹಸಮಕಲ್ ತಂಡದ ಚಿಲಿಪಿಲಿ ಗೊಂಬೆಗಳು ಸೇರಿದಂತೆ ಅನೇಕ ಜಾನಪದ ತಂಡಗಳು ಮೆರವಣಿಗೆಯಲ್ಲಿ ‌ನೋಡುಗರ ಗಮನ ಸೆಳೆದವು.

ರಿಯಾಲಿಟಿ ಶೋ ಮಾದರಿಯಲ್ಲಿ ದಸರಾ ಆಚರಣೆ!

ಒಟ್ಟಿನಲ್ಲಿ ಕೋವಿಡ್ ನಿಂದ ಎರಡು ವರ್ಷಗಳಿಂದ ಮಾಡಲು ಆಗದೇ ಇರುವ ತಾಯಿ ಭ್ರಮರಾಂಭ ದೇವಿಯ ಅದ್ದೂರಿ ಮೆರವಣಿಗೆ ನಡೆಯಿತು. ಸಾವಿರಾರು ಭಕ್ತರು ಮಸ್ಕಿಗೆ ಆಗಮಿಸಿ ದೇವಿಯ ದರ್ಶನ ಪಡೆದು ದೇಗುಲದ ಬಳಿ ಪ್ರಸಾದ ಸೇವಿಸಿ ತಾಯಿ ಕೃಪೆಗೆ ಪಾತ್ರರಾದರು.

click me!