ರಾಜ ಶನೈಶ್ಚರನ ಅಧಿಪತ್ಯದಲ್ಲಿ ಶುಭಕೃತ್ ಸಂವತ್ಸರ ಹೀಗಿರಲಿದೆ..

Published : Apr 02, 2022, 10:48 AM ISTUpdated : Apr 02, 2022, 11:24 AM IST
ರಾಜ ಶನೈಶ್ಚರನ ಅಧಿಪತ್ಯದಲ್ಲಿ ಶುಭಕೃತ್ ಸಂವತ್ಸರ ಹೀಗಿರಲಿದೆ..

ಸಾರಾಂಶ

ಈ ವರ್ಷ ಶುಭಕೃತ್ ನಾಮ ಸಂವತ್ಸರ ಹೆಸರಿನಂತೆ ಶುಭವನ್ನೇ ಉಂಟು ಮಾಡಲಿದೆಯೇ? ಗ್ರಹಗಳ ರಾಜಾದಯ ಫಲ ಏನಿರಲಿದೆ?

ಶ್ರೀಕಂಠ ಶಾಸ್ತ್ರಿಗಳು, ಸುವರ್ಣ ನ್ಯೂಸ್

ಪ್ರಭವಾದಿ ಷಷ್ಠಿ ಸಂವತ್ಸರಗಳಲ್ಲಿ ಈ ಶುಭಕೃತ್ ಸಂವತ್ಸರ (Shubhakruth Nama Samvatsara) ಮುವತ್ತಾರನೇ ಸಂವತ್ಸರ. ನಾರದ ಮಹರ್ಷಿ ನಾರದಿಯಾದಾಗ ಅವರಿಗೆ ಸಂತಾನವಾಗಿ ಹುಟ್ಟಿದ್ದು ಈ ಸಂವತ್ಸರಗಳು ಎಂಬ ನಂಬಿಕೆ ಇದೆ. ಈ ಸಂವತ್ಸರಗಳೇ ನಮ್ಮ ಅಗಾಧ-ಅಪರಿಮಿತವಾದ ಕಾಲವನ್ನು ಹಿಡಿದಿಟ್ಟುಕೊಳ್ಳಲಿಕ್ಕೆ, ಗಣನೆ ಮಾಡಿಕೊಳ್ಳಲಿಕ್ಕೆ ಸಂವತ್ಸರ ರೂಪದಲ್ಲಿ ಬಳಸುವುದನ್ನು ಋಷಿಗಳು ತೋರಿಸಿಕೊಟ್ಟಿದ್ದಾರೆ. ಅದರಂತೆ ಕಾಲವನ್ನು ಯೋಜಿಸಿಕೊಂಡು ನಮ್ಮ ನಿತ್ಯಕರ್ಮಗಳನ್ನು ಮಾಡಲು ಈ ಸಂವತ್ಸರಗಳ ಮೊರೆ ಹೋಗುತ್ತೇವೆ.  

ಈ ಸಂವತ್ಸರಗಳ ಹೆಸರುಗಳೇ(names) ವಿಚಿತ್ರವಾಗಿದೆ. ಕೆಲವು ಸಂವತ್ಸರಗಳು ಶುಭದಾಯಕ ಅಂಶಗಳನ್ನು ಸೂಚಿಸಿದರೆ ಇನ್ನು ಕೆಲವು ವಿಕಾರ ಅಂಶವನ್ನು ಪ್ರತಿನಿಧಿಸುತ್ತವೆ. ಕಳೆದ ಮೂರು ಸಂವತ್ಸರಗಳಲ್ಲಿ ನಾವು ಕಂಡ ಹಾಗೆ ವಿಕಾರಿ, ಶಾರ್ವರೀ, ಪ್ಲವ ಸಂವತ್ಸರಗಳು ದೇಶ-ವಿದೇಶಗಳಿಗೆ ಮಹಾ ಆಪತ್ತನ್ನೇ ತಂದೊಡ್ಡಿದ್ದವು.

ವಿಕಾರಿ ಸಂವತ್ಸರ ಹೆಸರಿಗೆ ತಕ್ಕಂತೆ ಪ್ರಪಂಚಕ್ಕೇ ಕೋವಿಡ್ (Covid) ಎಂಬ ಮಹಾ ಸಾಂಕ್ರಾಮಿಕವನ್ನು ತಂದಿಟ್ಟು ವಿಕಾರವಿಪತ್ತನ್ನು ಸೃಷ್ಟಿಸಿತ್ತು. ಇನ್ನು ಶಾರ್ವರೀ - ಪ್ಲವಗಳೂ ಕೂಡ ಹೆಸರಿಗೆ ತಕ್ಕಂತೆ ನಮ್ಮನ್ನು ನೀರಿನಲ್ಲಿ ಮುಳುಗಿಸಿ ಎಬ್ಬಿಸಿವೆ. ಅಂತೂ ಒಂದು ಅಪಾಯ ಕಾಲಸುಳಿಯಿಂದ ಹೊರಬಂದಿದ್ದೇವೆ ಎಂಬ ಸಂದೇಶವನ್ನ ಈ ಸಂವತ್ಸರದ ಹೆಸರೇ ಹೇಳುತ್ತಿದೆ.

ಶುಭಕೃತ್. ಮಂಗಳ (Good)ವಾದದ್ದು ಎಂಬ ಅರ್ಥದ ಈ ಸಂವತ್ಸರ ಈ ವರ್ಷ ಶುಭ (Good) ಫಲವನ್ನು ಕೊಡುತ್ತದೆ ಎಂಬುದನ್ನು ಸೂಚಿಸುತ್ತದೆ.  ಹೀಗಾಗಿ ಈ ಸಂವತ್ಸರದಲ್ಲಿ ನಾವು ಕೊಂಚ ನಿರಾಳರಾಗಿರಬಹುದು. ಅದಕ್ಕೆ ಪುಷ್ಟಿಯಾಗಿ ಗ್ರಹಗಳ ಸ್ಥಿತಿ-ಗತಿ ಈ ವರ್ಷ ಹೇಗಿರಲಿದೆ..? ಅವುಗಳ ಫಲವೇನು..? ನಾವು ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳೇನು ಇತ್ಯಾದಿ ವಿಷಯಗಳನ್ನು ಕೂಲಂಕಷವಾಗಿ ತಿಳಿಯೋಣ.

ಶುಭಕೃನ್ನಾಮ ಸಂವತ್ಸರ ಪ್ರಾರಂಭವಾಗುತ್ತಿರುವುದು ಶನಿವಾರ(Saturday). ಯಾವ ವಾರದಂದು ಸಂವತ್ಸರ ಪ್ರಾರಂಭವಾಗುತ್ತದೆಯೋ ಅದೇ ವಾರದ ಅಧಿಪತಿ ಆ ವರ್ಷದ ರಾಜನಾಗಿರುತ್ತಾನೆ. ಹೀಗಾಗಿ ಈ ವರ್ಷದ ರಾಜ ಶನೈಶ್ಚರ. ಸೌರ ಸಂಕ್ರಮಣವು ಯಾವ ವಾರವಿರುವುದೋ ಆ ವಾರದ ಅಧಿಪತಿ ಮಂತ್ರಿಯಾಗಿರುತ್ತಾನೆ ಹೀಗಾಗಿ ಈ ವರ್ಷದಲ್ಲಿ ಗುರುವಾರ(Thursday)ದಂದು ಸೌರ ಸಂಕ್ರಮಣವಾಗುವುದರಿಂದ ಈ ವರ್ಷದ ಮಂತ್ರಿ ಗುರುವಾಗಿದ್ದಾನೆ. ರಾಜ-ಮಂತ್ರಿಗಳೇ ಸಾಮಾನ್ಯವಾಗಿ ಆ ವರ್ಷದ ಫಲಾಫಲ ನಿರ್ಣಯಿಸಿಬಿಡುತ್ತಾರೆ. ಇವರ ಜೊತೆ ಸಹಕಾರ ಕೊಡುವವರು ಉಳಿದ ಗ್ರಹಗಳು. ಹೀಗೆ ಎಲ್ಲರ ಸಹಕಾರ ಸೂಚನೆಯಿಂದ ವರ್ಷ ಫಲ ನಿರ್ಮಾಣವಾಗುತ್ತದೆ. ಆ ಫಲಾಫಲಗಳೇನು..?

Ugadi 2022 Wishes: ಹಬ್ಬದ ಶುಭಾಶಯಗಳನ್ನು ಹೀಗೆ ಹೇಳಿ..
 
ಗ್ರಹಗಳ ರಾಜಾದಯಫಲ :

ರಾಜ  - ಶನೈಶ್ಚರ(Lord Shani)
ಶನೈಶ್ಚರ ರಾಜನಾಗಿರುವುದರಿಂದ ರಾಜರಲ್ಲಿ ಕೋಪ-ದ್ವೇಷ ಭಾವ ಬೆಳೆಯಲಿದೆ. ಪ್ರಜೆಗಳಲ್ಲಿ ದುಃಖ ಭಾವ ಉಂಟಾಗಲಿದೆ. ಸಸ್ಯಗಳು ಮಧ್ಯಮ ಫಲಗಳನ್ನು ಕೊಡುತ್ತವೆ.

ಮಂತ್ರಿ - ಗುರು(Jupiter)
ಗುರುವನ್ನು ಜ್ಯೇಷ್ಠಮತಿ:. ಶ್ರೇಷ್ಠಮತಿ: ಎಂದೆಲ್ಲಾ ಕರೆಯುವುದರಿಂದ ಆಡಳಿತಾತ್ಮಕ ಅಂಶಗಳೆಲ್ಲಾ ಬುದ್ಧಿವಂತರ ಹಿಡಿತದಲ್ಲಿರುತ್ತದೆ. ಹೀಗಾಗಿ ಖಡಕ್ಕಾದ ರಾಜ-ಬುದ್ಧಿವಂತ ಮಂತ್ರಿಗಳಿಂದ ದೇಶ ಸುಭಿಕ್ಷವಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಸಸ್ಯ-ಧಾನ್ಯ ಸಮೃದ್ಧಿಯ ಜೊತೆ ಯುದ್ಧ ಭಯವೂ ಉಂಟು.

ಸೇನಾಧಿಪತಿ - ಬುಧ(Mercury)
ಬುಧನನ್ನು ಜ್ಞಾನಿ, ವಿದ್ವಾಂಸ, ಪ.ಡಿತ ಎಂದೆಲ್ಲಾ ಕರೆಯುತ್ತಾರಾದ್ದರಿಂದ ಸೇನಾ ಬಲ ಶಕ್ತಿಗಿಂತ ಯುಕ್ತಿಯ ಮೇಲೆ ಕಾರ್ಯನಿರ್ವಹಿಸಲಿದೆ ಎಂಬುದು ಇದರ ತಾತ್ಪರ್ಯ. ಆತನ ಸೇನಾಧಿಪತಿತ್ವದಿಂದ ಸಸ್ಯ ಸಮೃದ್ಧಿಯೂ ಉಂಟಾಗಲಿದೆ.

ಸಸ್ಯಾಧಿಪತಿ - ರವಿ(Lord Sun)
ರವಿ ತೀಕ್ಷ್ಣ ಗ್ರಹವಾದ್ದರಿಂದ ಸಸ್ಯಗಳು ಒಣಗಿಯಾವು ಎಂಬುದನ್ನು ಸೂಚಿಸುತ್ತಿದೆ. ಈತಿ ಬಾಧೆ ಉಂಟಾಗಲಿದೆ. ಸಸ್ಯ ಸಮೃದ್ಧಿ ಸಾಧಾರಣವಾಗಿರುತ್ತದೆ.

ಧಾನ್ಯಾಧಿಪತಿ - ಶುಕ್ರ(Friday)
ಶುಕ್ರ ರಸ ಕಾರಕನಾದ್ದರಿಂದ ಸಸ್ಯಗಳು ಪುಷ್ಟವಾಗಿ ಬೆಳೆಯತ್ತವೆ.  ಸರ್ವ ಸಸ್ಯ ಸಮೃದ್ಧಿಯಾಗಲಿದೆ, ಹಾಲು-ಹೈನು, ಗೋರಕ್ಷಣೆಯಂಥ ಕೆಲಸಗಳು ನಡೆಯಲಿವೆ. ಸುಭಿಕ್ಷೆ ನೆಲೆಸುತ್ತದೆ.

ಕಹಿಯನ್ನು ಉಂಡು ಸಿಹಿಯನ್ನು ನೀಡಲು ಕಲಿಯಿರಿ : ಯುಗಾದಿ ಹಿನ್ನೆಲೆ ಏನು? ಹೇಗೆ ಆಚರಿಸಬೇಕು?

ಅರ್ಘಾಧಿಪತಿ - ಬುಧ(Mercury)
ಅರ್ಘಾಧಿಪತ್ಯವೆಂದರೆ ಪದಾರ್ಥಗಳಿಗೆ ಉಂಟಾಗುವ ಬೆಲೆ. ಬುಧನ ಸಾರಥ್ಯದಲ್ಲಿ ಈ ಬಾರಿ ಪದಾರ್ಥಗಳ ಬೆಲೆ ಕಡಿಮೆಯಾಗುತ್ತದೆ. ಹಸಿರು ವರ್ಣದ ಪದಾರ್ಥಗಳ ಬೆಲೆ ಕಡಿಮೆಯಾಗಲಿದೆ.

ಮೇಘಾಧಿಪತಿ - ಬುಧ
ಈ ವರ್ಷ ಬುಧನ ಅನುಗ್ರಹದಿಂದ ಸಮೃದ್ಧಿಯ ಮಳೆ ಉಂಟಾಗಲಿದೆ, ರೈತಾಪಿ ವರ್ಗ ಸಮೃದ್ಧತೆಯನ್ನು ಕಾಣುವ ವರ್ಷವಾಗಿರುತ್ತದೆ. ಮಧ್ಯ ದೇಶದಲ್ಲಿ ಅತಿವೃಷ್ಟಿ ಸಾಧ್ಯತೆ ಇದೆ.

ರಸಾಧಿಪತಿ - ಕುಜ(mars)
ಕುಜ ಗ್ರಹಗಳಲ್ಲೇ ಕ್ರೂರ ಗ್ರಹ ಅಂತ ಕರೆಸಿಕೊಳ್ಳುವಾತ. ಇಂಥವನು ರಸಾಧಿಪತಿಯಾದರೆ ಸಪ್ಪೆ ಪದಾರ್ಥಗಳು ಹೇರಳವಾಗಿ ಸಿಗುತ್ತವೆ. ಉಪ್ಪು-ತುಪ್ಪ-ಎಣ್ಣೆ ಪದಾರ್ಥಗಳು ಹೇರಳವಾಗಿ ಸಿಗಲಿವೆ. ಚಂದನ-ಕುಂಕುಮ-ಕರ್ಪೂರದಂತ ವಸ್ತುಗಳು ದುರ್ಲಭವಾಗುತ್ತವೆ.

ಯುಗಾದಿಯಂದು ಪಂಚಾಂಗ ಶ್ರವಣ ಮಾಡುವುದೇಕೆ?

ನಿರಸಾಧಿಪತಿ - ಶನಿ
ಶನೈಶ್ಚರ ಆತನ ಗುಣಕ್ಕೆ ತಕ್ಕಂತೆ ನಿರಸಾಧಿಪತಿತ್ವವನ್ನು ತಾನೇ ಇಟ್ಟುಕೊಂಡಿದ್ದಾನೆ. ಹಾಗಾಗಿ ಕಬ್ಬಿಣ, ಸೀನ, ಮಣ್ಣು, ಇಟ್ಟಿಗೆ, ಮರಳು ಇತ್ಯಾದಿಗಳು ಸಮೃದ್ಧವಾಗಿ ದೊರೆಯುತ್ತವೆ. ಮನೆ ಕಟ್ಟುವವರಿಗೆ ಶನಿಯು ಕಾಡದೆ ಸಂತೈಸುತ್ತಾನೆ.

ಪಶುನಾಯಕ - ಬಲರಾಮ
ಬಲರಾಮನ ಪಶುನಾಯಕತ್ವದಲ್ಲಿ ಸುವೃಷ್ಟಿ, ಪಶುಗಳ ಸಮೃದ್ಧಿ, ರೋಗರಹಿತ ಗೋವುಗಳು ಸುಭಿಕ್ಷವಾಗಿರುತ್ತವೆ. ಹಾಲು-ಹೈನುಗಾರರು ಸಂತೋಷದಿಂದಿರುತ್ತಾರೆ.

 

PREV
Read more Articles on
click me!

Recommended Stories

ನಿಮ್ಮ ಆತ್ಮಕ್ಕೆ ಹಿಂದೊಂದು ಜನ್ಮ ಇತ್ತಾ? ತಿಳಿಯೋದು ಹೇಗೆ?
ನಿಷೇಧದ ನಡುವೆಯೂ ದುಗ್ಗಮ್ಮನ ಜಾತ್ರೆಲಿ ಕೋಣ ಬಲಿ! ದೌಡಾಯಿಸಿ ಬಂದ ಪೊಲೀಸರಿಗೆ ಸಿಕ್ಕಿದ್ದು ಕೇವಲ ರಕ್ತದ ಕಲೆ ಅಷ್ಟೇ