Krishna Janmashtami: ಇಸ್ಕಾನ್‌ನಲ್ಲಿ ಸಡಗರ, ಸಂಭ್ರಮದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

By Govindaraj S  |  First Published Aug 19, 2022, 9:30 PM IST

ಶ್ರಾವಣ ಮಾಸದ ಅಷ್ಟಮಿಯಂದು ಬೆಂಗಳೂರಿನ ಇಸ್ಕಾನ್‌ನಲ್ಲಿ ಶ್ರೀ ಕೃಷ್ಣನ ಜನ್ಮದಿನದ ಪ್ರಯುಕ್ತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಹರೇ ಕೃಷ್ಣ ಗಿರಿ, ವೈಕುಂಠ ಗಿರಿ, ಮತ್ತು ವೈಟ್ ಫೀಲ್ಡ್‌ನಲ್ಲಿ ಆಚರಿಸಲಾಯಿತು.


ಬೆಂಗಳೂರು (ಆ.19): ಶ್ರಾವಣ ಮಾಸದ ಅಷ್ಟಮಿಯಂದು ಬೆಂಗಳೂರಿನ ಇಸ್ಕಾನ್‌ನಲ್ಲಿ ಶ್ರೀ ಕೃಷ್ಣನ ಜನ್ಮದಿನದ ಪ್ರಯುಕ್ತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಹರೇ ಕೃಷ್ಣ ಗಿರಿ, ವೈಕುಂಠ ಗಿರಿ, ಮತ್ತು ವೈಟ್ ಫೀಲ್ಡ್‌ನಲ್ಲಿ ಆಚರಿಸಲಾಯಿತು. ದೇವರಿಗೆ ಸುವಿಸ್ತಾರ ಅಭಿಷೇಕ, ಆರತಿ, 108 ಸಿಹಿ ತಿಂಡಿಗಳು, ಉಯ್ಯಾಲೆ ಸೇವೆ ಇತ್ಯಾದಿ ಸೇವೆಗಳನ್ನು ಅರ್ಪಿಸಲಾಯಿತು. ಬೆಣ್ಣೆ ಮತ್ತು ಸಕ್ಕರೆ ಸೇರಿದಂತೆ ಅನೇಕ ವಿಶೇಷ ತಿನಿಸುಗಳನ್ನು ಶ್ರೀ ಕೃಷ್ಣನಿಗೆ ಅರ್ಪಿಸಲಾಯಿತು. ಶ್ರೀ ಕೃಷ್ಣನ ಲೀಲೆಗಳನ್ನು ಆಧರಿಸಿದ ಸಂಗೀತ ನೃತ್ಯ ಸೇವೆಗಳನ್ನು ಭಕ್ತರು ಅರ್ಪಿಸಿದರು. ಪುಟ್ಟ ಮಕ್ಕಳಿಗೆ ರಾಧಾ-ಕೃಷ್ಣ ವೇಷಭೂಷಣಗಳನ್ನು ತೊಡಿಸಲಾಗಿತ್ತು. 

ವೈಕುಂಠ ಗಿರಿಯಲ್ಲಿ ನೂತನವಾಗಿ ಆರಂಭಗೊಂಡ ಇಸ್ಕಾನ್ ಶ್ರೀ ರಾಜಾಧಿರಾಜ ಗೋವಿಂದ ಮಂದಿರದಲ್ಲಿಯೂ ಜನ್ಮಾಷ್ಟಮಿಯನ್ನು ಅತ್ಯಂತ ವೈಭವದಿಂದ ಆಚರಿಸಲಾಯಿತು. ಇದು ಇಸ್ಕಾನ್‌ನ ಮೊದಲ ಶಿಲಾ ಮಂದಿರವಾಗಿದ್ದು ಇದರ ವಾಸ್ತು ಶಿಲ್ಪಕ್ಕೆ ತಿರುಮಲ ಮಂದಿರವೇ ಸ್ಫೂರ್ತಿ. ಇಸ್ಕಾನ್ ಬೆಂಗಳೂರು ಈ ವರ್ಷ ವೈಟ್‌ಫೀಲ್ಟ್‌ನ ಕೆಟಿಪಿಓ ಸಭಾಂಗಣದಲ್ಲಿ ಜನ್ಮಾಷ್ಟಮಿ ಉತ್ಸವ ಆಚರಣೆಯನ್ನು ಆಯೋಜಿಸಿತ್ತು. ಸಂಗೀತ, ನೃತ್ಯ, ನಾಟಕ ಪ್ರದರ್ಶನ, ಮಕ್ಕಳಿಗೆ ಮತ್ತು ಯವಕರಿಗೆ ಆಕರ್ಷಕ ಸಾಂಸ್ಕೃತಿಕ ಮೇಳ ನಡೆಯಿತು. ಶ್ರೀ ಶ್ರೀ ರಾಧಾಕೃಷ್ಣಚಂದ್ರರ ಮೂರ್ತಿಗಳನ್ನು ಕಣ್ಣು ಕೋರೈಸುವ ವಜ್ರಾಭರಣಗಳಿಂದ, ಚಿನ್ನದ ನೇಯ್ಗೆಯುಳ್ಳ ಚಿತ್ತಾಕರ್ಷಕ ವಸ್ತ್ರಗಳಿಂದ ಅಲಂಕರಿಸಲಾಗಿತ್ತು. 

Tap to resize

Latest Videos

ಕೃಷ್ಣ ಜನ್ಮಾಷ್ಟಮಿಗೆ ಲಂಡನ್‌ನಲ್ಲಿರುವ ದೇವಸ್ಥಾನಕ್ಕೆ ರಿಶಿ ಸುನಕ್ ಕುಟುಂಬ ಸಮೇತ ಭೇಟಿ!

ಭಗವಂತನ ಅವತಾರವನ್ನು ಸಂಭ್ರಮಿಸಲು ಮಂದಿರದ ಶ್ರೀ ರಾಧಾಕೃಷ್ಣ, ಕೃಷ್ಣ ಬಲರಾಮ ವಿಗ್ರಹಗಳನ್ನು ಅತ್ಯಂತ ಸುಂದರವಾಗಿ ಅಲಂಕರಿಸಲಾಗಿತ್ತು. ಈ ಎರಡೂ ದಿನ ಶ್ರೀ ರಾಧಾಕೃಷ್ಣ ಚಂದ್ರರಿಗೆ ಮುಂಜಾನೆ 4.30ಕ್ಕೆ ಮಹಾಮಂಗಳಾರತಿ ಮತ್ತು ಕೀರ್ತನೆಗಳಿಂದ ಪೂಜಾ ಕಾರ್ಯಕ್ರಮಗಳು ಪ್ರಾರಂಭವಾಗಿ ನಂತರ ಪಂಚಾಮೃತ, ಪಂಚಗವ್ಯ, ಪುಷ್ಪೋದಕ, ಫಲೋದಕ ಮತ್ತು ಔಷಧಿಗಳಿಂದ ಅಭಿಷೇಕ ಮಾಡಲಾಯಿತು. ದೇವಸ್ಥಾನದ ಗೋಶಾಲೆಯಲ್ಲಿ ಗೋಪೂಜೆ ಮಾಡಲಾಯಿತು ಮತ್ತು ಶ್ರೀ ರಾಧಾಕೃಷ್ಣಚಂದ್ರ ಉತ್ಸವ ಮೂರ್ತಿಗಳಿಗೆ ಉಯ್ಯಾಲೆ ಸೇವೆ, ತೆಪ್ಪೋತ್ಸವ ಮತ್ತು ಕೃಷ್ಣನಿಗೆ ಪ್ರಿಯವಾದ 108 ಭಕ್ಷ್ಯಗಳ ನೈವೇದ್ಯಗಳ ಸೇವೆ ಸಲ್ಲಿಸಲಾಯಿತು. 

ಇಡೀ ಮಂದಿರವನ್ನು ವಿಧವಿಧ ಸುಗಂಧಭರಿತವಾದ ಹೂವಿನ ಮಾಲೆಗಳಿಂದ ಅಲಂಕರಿಸಲಾಗಿತ್ತು ಲಡ್ಡು, ಭರ್ಫಿ, ಮೈಸೂರು ಪಾಕ್, ಹೋಳಿಗೆಯಂತಹ ಸಾಂಪ್ರದಾಯಿಕ ಸಿಹಿ ತಿನಿಸು ಮತ್ತು ಮುರುಕ್ಕು ಮತ್ತು ನಿಪ್ಪಟ್ಟುಗಳನ್ನು ಮಂದಿರಗಳ ಸುಪ್ರಸಿದ್ಧ ಪಾಕಶಾಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ತಯಾರಿಸಲಾಗಿತ್ತು. ಮೂರೂ ಸ್ಥಳಗಳಿಗೆ ಭೇಟಿ ನೀಡಿದ ಅಪಾರ ಸಂಖ್ಯೆಯ ಭಕ್ತಾದಿಗಳಿಗೆ ಎರಡೂ ದಿನ ಪ್ರಸಾದವನ್ನು ಹಂಚಲಾಯಿತು. ಭಕ್ತಾದಿಗಳಿಗೆ ನಿರಾತಂಕವಾದ ದರ್ಶನ ಲಭ್ಯವಾಗಲು ಸುವ್ಯವಸ್ಥೆಯನ್ನು ಮಾಡಲಾಗಿತ್ತು. 

ಕೃಷ್ಣ, ಬಲರಾಮ ಮತ್ತು ಅವರ ಗೋಪಾಲಕ ಮಿತ್ರರು ವೃಂದಾವನದಲ್ಲಿ ಬೆಣ್ಣೆಯನ್ನು ಕದಿಯುವ ಸುಮಧುರ ಲೀಲೆಯ ಸ್ಮರಣಾರ್ಥ ಭಾರತದಲ್ಲಿ ಈ ದಹಿ ಹಂಡಿ ಎನ್ನುವ ಸಾಂಪ್ರದಾಯಿಕ ಕ್ರೀಡೆಯನ್ನು ಆಡಲಾಗುತ್ತದೆ. ಶ್ರೀ ಕೃಷ್ಣನ ದಿವ್ಯ ಅವತಾರದ ಸುಸ್ಮರಣೆಗಾಗಿ ಬೆಂಗಳೂರು ಇಸ್ಕಾನ್ ಮಂದಿರದ ಆವರಣದಲ್ಲಿ ನೃತ್ಯ ಕಲಾವಿದರು ದಹಿ ಹಂಡಿ ರೂಪಕವನ್ನು ಪ್ರದರ್ಶಿಸಿದರು. ಇಸ್ಕಾನ್ ಬೆಂಗಳೂರು ಅಧ್ಯಕ್ಷರಾದ ಶ್ರೀ ಮಧು ಪಂಡಿತ ದಾಸ, 'ಶ್ರೀ ಕೃಷ್ಣ ಜನ್ಮಾಷ್ಟಮಿಯು ಭಾರತದಲ್ಲಿ ಅತ್ಯಂತ ಸಡಗರ, ಸಂಭ್ರಮ ಮತ್ತು ಭಕ್ತಿಭಾವದಿಂದ ಆಚರಿಸುವ ಪ್ರಮುಖ ಉತ್ಸವವಾಗಿದೆ. 

Krishna Janmashtami: ಕಳ್ಳ ಕೃಷ್ಣ ವೇಷದಲ್ಲಿ ಮಿಂದೆದ್ದ ಯಾದಗಿರಿಯ ಪುಟಾಣಿಗಳು

ಲಕ್ಷಾಂತರ ಜನರು ನಮ್ಮ ಮಂದಿರಗಳಿಗೆ ಭೇಟಿ ನೀಡುತ್ತಿರುವುದು, ಕಾತರದಿಂದ ಭಗವಂತನ ದರ್ಶನ ಮಾಡುತ್ತಿರುವುದು ಮತ್ತು ವಿವಿಧ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುವುದನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ. ನಾವು ಎಲ್ಲ ವಯೋಮಾನದವರಿಗಾಗಿ ಅನೇಕ ಕಾರ್ಯಕ್ರಮಗಳನ್ನು ಕ್ರಮಬದ್ಧವಾಗಿ ನಡೆಸುತ್ತೇವೆ. ಆಧ್ಯಾತ್ಮಿಕವಾದ ಮತ್ತು ಭಾವನಾತ್ಮಕವಾದ ಈ ಅನುಭವಗಳಲ್ಲಿ ಪಾಲ್ಗೊಳ್ಳಬೇಕೆಂದು ನಾನು ಎಲ್ಲರಿಗೂ ಆಹ್ವಾನ ನೀಡುತ್ತೇನೆ. ನಮಗೆಲ್ಲರಿಗೂ ಆರೋಗ್ಯ, ಸುಖ ಸಂತೋಷ ಮತ್ತು ಭಕ್ತಿಯನ್ನು ನೀಡಲೆಂದು ಶ್ರೀ ಕೃಷ್ಣನಲ್ಲಿ ಪ್ರಾರ್ಥಿಸುತ್ತೇನೆ' ಎಂದರು. ಶಯನ ಆರತಿ ಮತ್ತು ಶಯನ ಪಲ್ಲಕ್ಕಿಯೊಂದಿಗೆ ಸಂಭ್ರಮಾಚರಣೆ ಮುಕ್ತಾಯಗೊಂಡಿತು.

click me!