Hanuma Jayanthi: ರಾಗಿಗುಡ್ಡ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ

By Sathish Kumar KHFirst Published Dec 5, 2022, 11:56 AM IST
Highlights

ಜೆ.ಪಿ. ನಗರದ ರಾಗಿಗುಡ್ಡ ಆಂಜನೇಯ ದೇವಸ್ಥಾನದಲ್ಲಿ ಹನುಮ ಜಯಂತಿ ಹಿನ್ನಲೆಯಲ್ಲಿ ವಿಶೇಷ ಪೂಜೆಯನ್ನು ಆಯೋಜಿಸಲಾಗಿದೆ. ಈ ವೇಳೆ ಆಂಜನೇಯನಿಗೆ ಅಭಿಷೇಕ, ಆರತಿ, ಲಕ್ಷಾರ್ಚನೆ ಹಾಗೂ ವಿವಿಧ ಪೂಜಾ ಸೇವೆಗಳನ್ನು ಸಲ್ಲಿಸಲಾಗುತ್ತಿದೆ.

ಬೆಂಗಳೂರು (ಡಿ.5):  ಕೆಲವು ದಿನಗಳ ಹಿಂದೆ ಧರ್ಮದಂಗಲ್ ವಿಚಾರವಾಗಿ ಚರ್ಚೆಯಲ್ಲಿದ್ದ ದೇವಸ್ಥಾನವಾಗಿರುವ ಜೆಪಿ ನಗರದ ರಾಗಿಗುಡ್ಡ ಆಂಜನೇಯ ದೇವಸ್ಥಾನದಲ್ಲಿ ಹನುಮ ಜಯಂತಿ ಹಿನ್ನಲೆಯಲ್ಲಿ ವಿಶೇಷ ಪೂಜೆಯನ್ನು ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆಂಜನೇಯನಿಗೆ ಅಭಿಷೇಕ, ಆರತಿ ಹಾಗೂ ವಿವಿಧ ಪೂಜಾ ಸೇವೆಗಳನ್ನು ಸಲ್ಲಿಸಲಾಗುತ್ತಿದೆ.

ಈಗಾಗಲೇ ರಾಗಿಗುಡ್ಡ ಆಂಜನೇಯ ದೇವರ ಜಾತ್ರೆ ಸಂದರ್ಭದಲ್ಲಿ ಅನ್ಯಧರ್ಮದವರಿಗೆ ರಾಗಿ ಗುಡ್ಡ ಆಂಜನೇಯ ಸ್ವಾಮಿ ದೇವಸ್ಥಾನದ ಮುಂದೆ ವ್ಯಾಪಾರ ನಿಷೇಧಿಸುವಂತೆ ಕೆಲವು ಹಿಂದು ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು. ಆದರೆ ಈ ವಿವಾದ ತಣ್ಣಗಾಗಿದ್ದು, ಈಗ ಹನುಮ ಜಯಂತಿ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ರಾಗಿ ಗುಡ್ಡ ಆಂಜನೇಯನಿಗೆ ವಿಶೇಷ ಅಭಿಷೇಕ ನೆರವೇರಿಸಲಾಗುತ್ತಿದೆ. ಪವಮಾನ  ಸೂಕ್ತದಿಂದ ಮಧು ಅಭಿಷೇಕ ಮಾಡಲಾಗುತ್ತಿದೆ. ಜೊತೆಗೆ ದೇವಸ್ಥಾನದ ಮುಂಭಾಗದಲ್ಲಿ ವಿಶೇಷವಾದ ಚಪ್ಪರವನ್ನು ಸಿದ್ಧಪಡಿಸಿ ಅದರೊಳಗೆ ಅಂಜನೇಯ ಸ್ವಾಮಿ ಲಕ್ಷಾರ್ಚನೆ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ.

Panchang: ಇಂದು ಹನುಮದ್ವ್ರತ, ವ್ರತಕ್ಕೂ ಹನುಮ ಜಯಂತಿಗೂ ವ್ಯತ್ಯಾಸವೇನು?

ಅನ್ನ ಸಂತರ್ಪಣೆ ವ್ಯವಸ್ಥೆ: ಆಂಜನೇಯನ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಹನುಮ ಜಯಂತಿಯಂದು ಸೇವೆಯಲ್ಲಿ ಭಾಗಿಯಾಗಲು ದೇವಾಲಯಕ್ಕೆ ಆಗಮಿಸುವ ಅಂಜನೇಯ ಭಕ್ತರಿಗೆ  ಅನ್ನಸಂತರ್ಪಣೆ ಮಾಡಲು ಕೂಡ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಭಕ್ತರಿಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಎಲ್ಲ ಕಾರ್ಯಕ್ರಮಗಳು ನಿರ್ವಿಘ್ನವಾಗಿ ನಡೆಯುವಂತೆ ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ತೊಂದರೆ ಆಗದಂತೆ ಕ್ರಮವಹಿಸಲಾಗಿದೆ ಎಂದು ದೇವಸ್ಥಾನ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಂ.ಬಿ. ಗುರುರಾಜ್ ಮಾಹಿತಿ ನೀಡಿದ್ದಾರೆ.

ಬೆಂಗಳೂರಲ್ಲೂ ಶೋಭಾಯಾತ್ರೆ ಮೆರವಣಿಗೆ:
ಹನುಮ ಜಯಂತಿ ಪ್ರಯುಕ್ತ ಬೆಂಗಳೂರಿನ ಜೆ.ಜೆ. ನಗರ ವ್ಯಾಪ್ತಿಯಲ್ಲಿ ಶೋಭಾಯಾತ್ರೆ ಮೆರವಣಿಗೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ರಾಮೋತ್ಸವ ಸಮಿತಿಯಿಂದ ವತಿಯಿಂದ ಜೆ.ಜೆ. ನಗರ ಮುಖ್ಯರಸ್ತೆಯಿಂದ ಶೋಭಾಯಾತ್ರೆಗೆ ತಯಾರಿ ನಡೆಸಲಾಗಿದೆ. ಮಧ್ಯಾಹ್ನ 2 ಗಂಟೆಗೆ ಶೋಭಾ ಯಾತ್ರೆ ಮಾಡೋದಾಗಿ ತಿಳಿಸಿರುವ ರಾಮೋತ್ಸವ ಸಮಿತಿ ತಿಳಿಸಿದೆ. ಆದರೆ, ಶೋಭಾಯಾತ್ರೆಗೆ ಪೊಲೀಸರು ಅನುಮತಿ ನೀಡಿಲ್ಲ.

Hanumadvratha 2022: ಇಷ್ಟಾರ್ಥ ಸಿದ್ಧಿಗೆ ಆಂಜನೇಯನ ಜನ್ಮದಿನ ಈ ಕೆಲಸಗಳನ್ನು ಮಾಡಿ..

ಬಿಗಿ ಬಂದೋಬಸ್ತ್‌: ಜೆ.ಜೆ.ನಗರದಲ್ಲಿ ಮುಸ್ಲಿಂ ಬಾಹುಳ್ಯದ ಪ್ರದೇಶವಾಗಿದೆ. ಈ  ಪ್ರದೇಶವನ್ನು ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಿರುವ ಪೊಲೀಸರು ಇಲ್ಲಿ ಹಿಂದೂ ಸಂಘಟನೆಗಳು ಹಾಗೂ ಕಾರ್ಯಕರ್ತರು ಗಣೇಶ ಹಬ್ಬ, ಕರ್ನಾಟಕ ರಾಜ್ಯೋತ್ಸವ ಇತ್ಯಾದಿ ಆಚರಣೆಗಳು ಮಾಡಲು ಅನುಮತಿ ನೀಡುವುದಿಲ್ಲ. ಈಗ ಅನುಮತಿ ಇಲ್ಲದಿದ್ದರೂ ಶೋಭಾಯಾತ್ರೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಯಾತ್ರೆಯ ವೇಳೆ ಗಲಾಟೆಗಳು ಸಂಭವಿಸಬಹುದು ಎಂಬ ಮುನ್ನೆಚ್ಚರಿಕೆಯಿಂದಾಗಿ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರಗಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಇನ್ನು ಬಂದೋಬಸ್ತ್‌ಗಾಗಿ 5 ಎಸಿಪಿ, 27 ಇನ್ಸ್‌ಪೆಕ್ಟರ್, 67 ಪಿಎಸ್ಐ ಸೇರಿ 600 ಕ್ಕೂ ಹೆಚ್ಚು ಪೊಲೀಸರನ್ನು 11 ಸೆಕ್ಟರ್ ಗಳಲ್ಲಿ ನಿಯೋಜನೆ ಮಾಡಲಾಗಿದೆ. ಇದರ ಜೊತೆಗೆ 8 ಕೆಎಸ್ಆರ್ ಪಿ, 2 ಸಿಎಆರ್ ತುಕಡಿಗಳು ಹಾಗೂ 779 ಹೋಂಗಾರ್ಡ್ ಗಳ ನಿಯೋಜನೆ ಮಾಡಲಾಗಿದೆ. ಮುಂಜಾಗ್ರತಾ ಸಲುವಾಗಿ 8 ಬಿಎಂಟಿಸಿ ಬಸ್‌ಗಳನ್ನು ನಿಲ್ಲಿಸಲಾಗಿದೆ.

click me!