ರಾಯಚೂರು ಜಿಲ್ಲೆಯಾದ್ಯಂತ ಮೊಹರಂ ‌ಸಂಭ್ರಮ, ಹಿಂದೂ-ಮುಸ್ಲಿಂ ಒಟ್ಟಾಗಿ ಆಚರಣೆ

By Gowthami KFirst Published Aug 7, 2022, 8:36 PM IST
Highlights

ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧವಾದ ರಾಯಚೂರು ಜಿಲ್ಲೆಯ ಮುದಗಲ್ ಇಡೀ ದಕ್ಷಿಣ ಭಾರತದಲ್ಲಿಯೇ ವಿಶೇಷತೆಯಿಂದ ಕೂಡಿದೆ. ಮುದಗಲ್ ಅಲ್ಲದೆ ರಾಯಚೂರು ಜಿಲ್ಲೆಯಾದ್ಯಂತ ಮೊಹರಂ ಹಬ್ಬ ಕಳೆಗಟ್ಟಿದೆ.

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್ 

ರಾಯಚೂರು (ಆ.7): ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧವಾದ ರಾಯಚೂರು ಜಿಲ್ಲೆಯ ಮುದಗಲ್ ಇಡೀ ದಕ್ಷಿಣ ಭಾರತದಲ್ಲಿಯೇ ವಿಶೇಷತೆಯಿಂದ ಕೂಡಿದೆ. ಮುದಗಲ್ ಅಲ್ಲದೆ ರಾಯಚೂರು ಜಿಲ್ಲೆಯಾದ್ಯಂತ ಮೊಹರಂ ಹಬ್ಬ ಕಳೆಗಟ್ಟಿದೆ. ಹಲವೆಡೆ ಆಲಮೇ ಪೀರ್ ದೇವರನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಹಿಜರಿ ಸಂವತ್ಸರದ ಮೊದಲನೇ ತಿಂಗಳು ಹತ್ತು ದಿನಗಳ ಕಾಲ ಮೊಹರಂ ಆಚರಿಸಲಾಗುತ್ತದೆ. 10 ದಿನಗಳ ಕಾಲ ನಡೆಯುವ ಈ ಮೊಹರಂನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯುತ್ತವೆ. 1ರಿಂದ 5ನೇ ದಿನ ಮೊಹರಂ ಎಂದು ಆಚರಿಸಿದರೆ, 5ನೇ ದಿನ ಜಿಹಾಲ್ ಎಂದು, 7ನೇ ದಿನ ಖಾಸಿಂ ಪೀರಾ ಸವಾರಿ, 5ನೇ ದಿನ ಮೌಲಾಲಿ ಪೀರಾ ಸವಾರಿ, 5ನೇ ದಿನ ಮೌಲಾಲಿ ಪೀರಾ ಸವಾರಿ, 9ನೇ ದಿನ ಹಸನ್-ಹುಸೇನ್ (ಖತಲ್ ರಾತ್ರಿ) ಸವಾರಿ ಎಂದು ಹಾಗೂ ಕೊನೆಯ 10ನೇ ದಿನ ದಫನ್ ಆಚರಿಸಲಾಗುತ್ತೆ. ಅದರಲ್ಲೂ 10ನೇ ದಿನದ ಆಲಂ(ದೇವರು)ಗಳ ಕೊನೆಯ ಭೇಟಿ ಅತ್ಯಂತ ರೊಮಾಂಚನಕಾರಿ ಆಗಿರುತ್ತೆ. ಈ ವೇಳೆ ಸಾವಿರಾರು ಜನರು ಸೇರುತ್ತಾರೆ. ಪೀರ್‌ಗಳನ್ನು ಪ್ರತಿಷ್ಠಾಪನೆ ಮಾಡಿರುವ ಕಡೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.
 
ಆಲಮ್ ಪೀರ್‌ಗಳನ್ನು ವಿವಿಧ ಹೂವಿನ ಹಾರ ಹಾಕಿ, ಬಣ್ಣ ಬಣ್ಣದ ಬಟ್ಟೆಯಿಂದ ಅಲಂಕರಿಸಿರುವುದು, ಹಬ್ಬದ ಸಂಭ್ರಮ ಮನೆ ಮಾಡಿದೆ. ಹಿಂದೂ ಮುಸ್ಲಿಂ ಬಾಂಧವರಲ್ಲಿ ಹಬ್ಬವು ಭಾವೈಕ್ಯತೆಯನ್ನು ಮೂಡಿಸುತ್ತಿದೆ. ನಗರ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಮನೆಗಳನ್ನು ಅಲಂಕರಿಸಿ ವಿವಿಧ ಉಡುಗೊರೆ ಹರಕೆ ಬೇಡಿಕೊಳ್ಳುವುದರ ಮೂಲಕ ಭಾವೈಕ್ಯತೆಯಿಂದ ಹಿಂದೂ ಮುಸ್ಲಿಂ ಎಲ್ಲರೂ ಸೇರಿಯೇ ಮೊಹರಂ ಆಚರಣೆ ಮಾಡುವುದು ಕಂಡು ಬರುತ್ತದೆ. ಜನರು ಆಲಂ ಪೀರ್‌ಗಳಿಗೆ ಬೇಡಿ ಕಂಡವರಲ್ಲಿ ವಿಶೇಷ ನೈವೇದ್ಯ ಜೊತೆಗೆ ಬಟ್ಟೆ ಸೇರಿದಂತೆ ಬಂಗಾರದ ಅರ್ಪಿಸಿ ದರುಶನ ಪಡೆಯುತ್ತಾರೆ. ಇನ್ನೂ ಜಿಟಿ ಜಿಟಿ ಮಳೆಯೂ ಲೆಕ್ಕಿಸದೇ ಜನರು ಜಾಗರಣೆ ಮಾಡಿ ಮೊಹರಂ ‌ಸಂಭ್ರಮದಲ್ಲಿ ಭಾಗವಹಿಸಿದರು.

 ಕಲ್ಯಾಣ ಕರ್ನಾಟಕದ ಎಲ್ಲೆಡೆಯೂ ಮೊಹರಂ ‌ಸಂಭ್ರಮ:
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಯಲ್ಲಿ ಈಗ ಮೊಹರಂ ಸಂಭ್ರಮ ಮನೆಮಾಡಿದೆ. ಹಿಂದೂ- ಮುಸ್ಲಿಂ ಬೇಧವಿಲ್ಲದೆ 10 ದಿನಗಳ ಕಾಲ ನಡೆಯುವ ಮೊಹರಂನಲ್ಲಿ ಭಾಗವಹಿಸಿ ಎಲ್ಲರೂ ಸಂಭ್ರಮಿಸುತ್ತಾರೆ.  ರಾಯಚೂರು ಜಿಲ್ಲೆ ‌ಲಿಂಗಸೂಗೂರು ತಾಲೂಕಿನ ‌ಗುರುಗುಂಟಾ ಗ್ರಾಮದಲ್ಲಿ ಮೊಹರಂ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯ್ತು. ಮೊಹರಂ ‌ಹಬ್ಬದ ನಿಮಿತ್ಯ ಗುರುಗುಂಟಾ ಗ್ರಾಮದ ಸೈಯದ್ ಖಾಸಿಂ ಪೀರ್ ಹೆಸರಿನಲ್ಲಿ ‌ಹರಕೆ ಹೊತ್ತ ಭಕ್ತರು ‌ಎರಡು ಎತ್ತುಗಳು ತೆಗೆದುಕೊಂಡು ಬಂದು ದೇವರಿಗೆ ಹರಕೆ ತೀರಿಸಲು ಮುಂದಾಗಿದ್ರು. ವರ್ಷದಂತೆ ‌ಈ ವರ್ಷವೂ ಸಹ ಸಾಲಾಗಿ 31ಬಂಡಿ( ಚಕ್ಕಂಡಿ) ಗಳಿಗೆ ಒಂದೇ ಎತ್ತು ಕಟ್ಟಿ ಬಂಡಿ ( ಚಕ್ಕಂಡಿ) ಯಲ್ಲಿ ಸುಮಾರು 3 ಸಾವಿರ ಕ್ವಿಂಟಾಲ್ ಗೂ ಅಧಿಕ ಕಟ್ಟಿಗೆ ಹಾಕಿ ಅಲೈಯ್ ಕುಣಿವರೆಗೂ ಸಾಗಿಸಲಾಯ್ತು. ಈ ವೇಳೆ ಹರಕೆ ಕಟ್ಟಿಕೊಂಡ ಗುರುಗುಂಟಾ ಸಂಸ್ಥಾನದ ಕಕ್ಕೇರಿ ಅಗಸಿಯ ಕುಪ್ಪಣ್ಣ  ಮಲ್ಲಯ್ಯ ಗುಮೇದಾರವರ ಒಂದೇ ಎತ್ತು 31 ಕಟ್ಟಿಗೆ ಬಂಡಿ (ಚಕ್ಕಂಡಿ) ಯನ್ನು ಎಳೆಯುವ ಮನಮೋಹಕ ದೃಶ್ಯ ನೋಡಿ ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದರು. ಆ ಬಳಿಕ ಎಲ್ಲಾ ಕಟ್ಟಿಗೆಯೂ ಅಲೈಯ್ ಕುಣಿಗೆ ಸುರಿದು ಬೆಂಕಿ ಹಾಕಲಾಯಿತು.

 ಎಲ್ಲರ ಗಮನ‌ ಸೆಳೆಯುತ್ತಿದೆ ಮುದಗಲ್ ‌ಮೊಹರಂ:
ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಮುದಗಲ್ ನಲ್ಲಿ ನಡೆಯುವ ಮೊಹರಂ ‌ಇಡೀ ದಕ್ಷಿಣ ಭಾರತದಲ್ಲಿ ತುಂಬ ವಿಶೇಷತೆಯಿಂದ ಕೂಡಿದೆ‌.ಈ ಮೊಹರಂ ಸಂಭ್ರಮವನ್ನು ನೋಡಲು ದೇಶದ ವಿವಿಧ ರಾಜ್ಯಗಳಿಂದ ಜನರು ಮುದಗಲ್ ಗೆ ಬಂದು ಹರಕೆ ‌ತೀರಿಸಿ ಹೋಗುತ್ತಾರೆ. ಮುದಗಲ್ ‌ನಲ್ಲಿ‌ ‌ನಡೆದ ಮೊಹರಂನ ಅಲೈ ಕುಣಿಯಲ್ಲಿ ಬೆಂಕಿ ಹಾಕಲಾಗಿತ್ತು. ಈ ವೇಳೆ ಹರಕೆ ಕಟ್ಟಿಕೊಂಡ ಹತ್ತಾರು ಭಕ್ತರು ಕೆಂಡಕಾರುತ್ತಿರುವ ಬೆಂಕಿ ತುಳಿದು ತಮ್ಮ ಹರಕೆ ತೀರಿಸಿದರು. 

Koppal: ಮುಸ್ಲಿಂ ಕುಟುಂಬದಿಂದ ವರಮಹಾಲಕ್ಷ್ಮೀ ಹಬ್ಬ ಆಚರಣೆ

 ಮನೆಯಲ್ಲಿ ರುಚಿ ರುಚಿ ಅಡುಗೆ ತಯಾರಿ: 
ಮೊಹರಂ ಹಬ್ಬ ಅಂದ್ರೆ ಅದು ಹಿಂದೂ- ಮುಸ್ಲಿಂರ ಭಾವೈಕ್ಯತೆ ಸಾರುವ ವಿಶೇಷ ಹಬ್ಬವಾಗಿದೆ. ಮೊಹರಂ ಮುಸ್ಲಿಂ ಹಬ್ಬವಾಗಿದ್ರೂ ಬಹುತೇಕ ಎಲ್ಲಾ ಜವಾಬ್ದಾರಿಯೂ ಹಿಂದೂಗಳೇ ವಹಿಸಿಕೊಂಡು ಆಚರಿಸುತ್ತಾರೆ. ಹಿಂದೂ- ಮುಸ್ಲಿಂ ಎಂಬ ಭೇದವಿಲ್ಲದೆ ವಿವಿಧ ತಿಂಡಿಗಳಾದ ಮಾಲಾದಿ, ಚೋಗ್ಯಾ, ಹಿಟ್ಟಿನ ಗೋಡಾ, ಬೀರಾಜಿ( ಚಿತ್ರಾನ್ನ ಮಾದರಿ ಅನ್ನ) ಸೇರಿದಂತೆ ವಿವಿಧ ತಿಂಡಿಗಳು ‌ಮಾಡಿ ದೇವರಿಗೆ ಅರ್ಪಣೆ ‌ಮಾಡುತ್ತಾರೆ.

ರಾಯಚೂರು: ಎರಡು ವರ್ಷಗಳ ಬಳಿಕ ಮುದಗಲ್‌ನಲ್ಲಿ ಮೊಹರಂ ಸಂಭ್ರಮ..!

 ಮೊಹರಂನಲ್ಲಿ ಅಳಿವಿನ ಅಂಚಿನಲ್ಲಿರುವ ಕಲೆಗಳ ಪ್ರದರ್ಶನ: 
ಕಲ್ಯಾಣ ಕರ್ನಾಟಕದಲ್ಲಿ ಅಳಿವಿನ ‌ಅಂಚಿನಲ್ಲಿ ಇರುವ ಹತ್ತಾರು ಕಲೆಗಳು ‌ಮೊಹರಂನಲ್ಲಿ ಮತ್ತೆ ಮರುಜೀವ ಪಡೆದುಕೊಂಡವು. 10 ದಿನಗಳ ಕಾಲ ನಡೆಯುವ ಮೊಹರಂನಲ್ಲಿ ವಿವಿಧ ಪ್ರಾಣಿಗಳ ವೇಷಭೂಷಣ ಧರಿಸಿ ಸಂಭ್ರಮಿಸುತ್ತಾರೆ. ಅದರಲ್ಲೂ ಹೊಸಬಟ್ಟೆ ತೊಟ್ಟು ಗೆಜ್ಜೆ ‌ಕುಣಿತ, ಹುಲಿ ಕುಣಿತ, ವೇಷಭೂಷಣ ಕುಣಿತ, ಕುದುರೆ ಕುಣಿತ, ಅಲೈ ಕುಣಿತ, ಕರಡಿ ಕುಣಿತ ಹೀಗೆ ಹತ್ತಾರು ಕುಣಿತಗಳು ಮೊಹರಂನಲ್ಲಿ ಕಾಣಬಹುದಾಗಿದೆ. ಒಟ್ಟಿನಲ್ಲಿ ಎರಡು ವರ್ಷಗಳಿಂದ ಸಂಭ್ರಮದಿಂದ ಆಚರಿಸಲು ಆಗದೇ ಇರುವ ಮೊಹರಂ ‌ಹಬ್ಬವನ್ನು ಈ ವರ್ಷ ಜನರು ಸಂಭ್ರಮದಿಂದ ಆಚರಣೆ ಮಾಡಲು ಮುಂದಾಗಿದ್ದಾರೆ.

click me!