
ವರದಿ : ಆಲ್ದೂರು ಕಿರಣ್ ಏಷ್ಯಾ ನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಅ.25): ದೀಪಾವಳಿ ಅಮಾವಾಸ್ಯೆ ದಿನವೇ ವರ್ಷದ ಕೊನೆಯ ಸೂರ್ಯಗ್ರಹಣವೂ ಸಂಭವಿಸಿದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ದೇವಸ್ಥಾನಗಳಲ್ಲಿ ಗ್ರಹಣ ಶಾಂತಿ ಹೋಮ ನಡೆಯಿತು. ವಿಶೇಷವಾಗಿ ಮಸೀದಿಯಲ್ಲೂ ಪ್ರಾರ್ಥನೆ ಮಾಡಲಾಯಿತು. ಜಿಲ್ಲೆಯ ಹೊರನಾಡಿನ ಅನ್ನಪೂರ್ಣೇಶ್ವರಿ ಸನ್ನದಿ, ಶೃಂಗೇರಿಯ ಶಾರದಾ ದೇವಸ್ಥಾನ, ಕಿಗ್ಗಾದಲ್ಲಿ ಎಂದಿನಂತೆ ದೇವಸ್ಥಾನ ಓಪನ್ ಆಗಿತ್ತು. ಆದ್ರೆ ಗ್ರಹಣದ ಹಿನ್ನಲೆಯಲ್ಲಿ ಅನ್ನದಾನವನ್ನು ಸ್ಥಗಿತಗೊಳಸಲಾಗಿತ್ತು.ಇನ್ನು ಉಳಿದಂತೆ ಬಹುತೇಕ ದೇವಸ್ಥಾನಗಳಲ್ಲಿ ಗ್ರಹಣ ಸಮಯದಲ್ಲಿ ಬಾಗಿಲು ಮುಚ್ಚಿಲಾಗಿತ್ತು. ದೀಪಾವಳಿ ರಜೆ ಜೊತೆಗೆ ಗ್ರಹಣವೂ ಸಂಭವಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಜನ ಹಾಗೂ ವಾಹನ ಸಂಚಾರ ವಿರಳವಾಗಿತ್ತು. ಗ್ರಹಣದ ಕಾರಣಕ್ಕೆ ಕೆಲವರು ಇಡೀ ದಿನ ಉಪವಾಸವಿದ್ದು, ಸೂರ್ಯಾಸ್ಥದ ನಂತರ ಸ್ನಾನ, ಪೂಜೆ, ಉಪಾಹಾರ ಸೇವಿಸಿದರೆ ಇನ್ನೂ ಕೆಲವರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಗೊಂದಲಕ್ಕೆ ಸಿಕ್ಕಿದ್ದರು. ಪ್ರಮುಖ ಹಬ್ಬಗಳೊಂದಾದ ದೀಪಾವಳಿ ದಿನದಂದು ದೇವಾಲಯಗಳಲ್ಲಿ ಸಲ್ಲುತ್ತಿದ್ದ ಪೂಜಾ ಕೈಂಕರ್ಯಗಳಿಗೂ ಗ್ರಹಣ ಬಡಿದ ಪರಿಣಾಮ ಎಲ್ಲಾ ದೇವಸ್ಥಾನಗಳನ್ನು ಮುಚ್ಚಲಾಗಿತ್ತು. ಭಕ್ತರಿಂದ ತುಂಬಿ ತುಳುಕುತ್ತಿದ್ದ ದೇವಸ್ಥಾನದ ಆವರಣಗಳು ಜನರಿಲ್ಲದೆ ಭಣಗುಡುತ್ತಿದ್ದವು. ಮನೆಗಳಲ್ಲೂ ಹಬ್ಬದ ಸಡಗರಕ್ಕೆ ಮಂಕು ಕವಿದಿತ್ತು. ಹಬ್ಬದೂಟ, ಸಾಂಪ್ರದಾಯಿಕ ಆಚರಣೆಗಳು ಇಲ್ಲವಾಗಿತ್ತು.
ಸೂರ್ಯಗ್ರಹಣದ ವೇಳೆ ಆಹಾರ ಸೇವಿಸಿ ಮೌಡ್ಯಕ್ಕೆ ಸೆಡ್ಡು ಹೊಡೆದ ರಾಜ್ಯದ ಜನತೆ
ಶಾಂತಿ ಹೋಮ: ಕೇತುಗ್ರಸ್ಥ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದ ಬಸವನಹಳ್ಳಿ ಮುಖ್ಯ ರಸ್ತೆಯ ಶೃಂಗೇರಿ ಶ್ರೀ ಶಾರದಾಂಭೆ ದೇಗುಲದಲ್ಲಿ ವಿಶೇಷ ಶಾಂತಿ ಹೋಮ ಹಮ್ಮಿಕೊಳ್ಳಲಾಗಿತ್ತು. ಗ್ರಹಣ ಆರಂಭಗೊಂಡ ನಂತರ ಆರಂಭಗೊಂಡ ಶಾಂತಿ ಹೋಮಕ್ಕೆ ಸುಮಾರು 500ಕ್ಕೂ ಹೆಚ್ಚು ಜನರು ಹೆಸರು ನೊಂದಾಯಿಸಿಕೊಂಡಿದ್ದರು. ಕೆಲವು ರಾಶಿ ಹಾಗೂ ನಕ್ಷತ್ರದವರಿಗೆ ಗ್ರಹಣದಿಂದ ತೊಂದರೆ ಉಂಟಾಗುತ್ತದೆ ಎನ್ನುವ ಕಾರಣಕ್ಕೆ ಸಾಮೂಹಿಕ ಶಾಂತಿ ಹೋಮ ಹಮ್ಮಿಕೊಳ್ಳಲಾಗಿತ್ತು. ಸಂಜೆ 7 ಗಂಟೆ ವೇಳೆಗೆ ಹೋಮದ ಪೂರ್ಣಾಹುತಿ ನೆರವೇರಿಸಲಾಯಿತು.
ಬೆಂಗಳೂರಿನಲ್ಲಿ ಸೂರ್ಯಗ್ರಹಣ ವೀಕ್ಷಿಸಿ ಸಂಭ್ರಮಿಸಿದ ಜನ, ರಸ್ತೆಗಳು ಖಾಲಿ ಖಾಲಿ!
ಮಸೀದಿಯಲ್ಲೂ ಪ್ರಾರ್ಥನೆ: ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಕೊಪ್ಪ ತಾಲ್ಲೂಕಿನ ಜಯಪುರದ ಭದ್ರಿಯಾ ಜುಮ್ಮಾ ಮಸೀದಿಯಲ್ಲೂ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ.ಜಯಪುರದ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಕೆ ಮಾಡಲಾಗಿದ್ದು ಖತೀಬರಾದ ಅಬ್ದುಲ್ ರಶೀದ್ ಸಅದಿ ನೇತೃತ್ವದಲ್ಲಿ ನಮಾಝ್ ಮಾಡಲಾಯಿತು.