ದೇವಾಲಯದ ಬಾಗಿಲಲ್ಲಿ ಹಾಕಿದ ಪರದೆ ತಾನಾಗಿಯೇ ತೆರೆಯಿತು!
ಇದು ಚಿಕ್ಕಮಗಳೂರಿನ ದೇವೀರಮ್ಮನ ದೇವಸ್ಥಾನದ ಪವಾಡ
ಅನಾದಿ ಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಆಚರಣೆ
ಗಾಳಿ ರೂಪದಲ್ಲಿ ಗರ್ಭಗುಡಿ ಸೇರಿದ ದೇವೀರಮ್ಮ
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಬೆಳಕಿನ ಹಬ್ಬ ದೀಪಾವಳಿಯ ಮಹಾ ಅಮಾವಾಸ್ಯೆಯಂದು ದೇವಿರಮ್ಮ ದೇವಾಲಯದ ಬಾಗಿಲಲ್ಲಿ ಕಟ್ಟಿದ ಪರದೆ ತಾನಾಗಿಯೇ ತೆರೆಯುತ್ತೆ, ಇದನ್ನ ನೋಡಲು ಭಕ್ತರ ದಂಡೇ ಹರಿದು ಬಂದಿತ್ತು. ಅನಾದಿ ಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಆಚರಣೆಯಂತೆ ಈ ಬಾರಿಯೂ ಗರ್ಭಗುಡಿಯ ಬಾಗಿಲಲ್ಲಿ ಹಾಕಿದ ಪರದೆ ತಾನಾಗಿಯೇ ತೆರದುಕೊಳ್ಳುವ ಮೂಲಕ ಭಕ್ತರ ನಂಬಿಕೆ ಗಟ್ಟಿಯಾಯಿತು. ಬೆಟ್ಟದಲ್ಲಿ ನೆಲೆಸಿರುವ ದೇವಿರಮ್ಮ ದೇವಿ ಇಂದು ಗಾಳಿರೂಪದಲ್ಲಿ ಗರ್ಭಗುಡಿ ಸೇರುತ್ತಾಳೆ ಅನ್ನೋದು ಭಕ್ತರ ನಂಬಿಕೆ.
ಕೌತುಕಕ್ಕೆ ಸಾಕ್ಷಿಯಾದ ಭಕ್ತಗಣ
ನಾಡಿನೆಲ್ಲೆಡೆ ಬೆಳಕಿನ ಹಬ್ಬದ ಸಂಭ್ರಮ ಮನೆ ಮಾಡಿದ್ರೆ ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಜನತೆಗೆ ತಾಲೂಕಿನ ಮಲ್ಲೇನಹಳ್ಳಿ ಬಿಂಡಿಗ ದೇವಿರಮ್ಮಳ ಪವಾಡ ನೋಡುವ ಕೌತುಕ. ಹೌದು, ದೀಪಾವಳಿಯ ಮೂರು ದಿನಗಳ ಕಾಲ ಬಿಂಡಿಗದಲ್ಲಿ ದೇವಿರಮ್ಮಳ ಜಾತ್ರಾ ಮಹೋತ್ಸವ ನಡೆಯುತ್ತೆ, ನಿನ್ನೆಯಿಂದಲೇ ಜಾತ್ರೆ ಆರಂಭವಾಗಿದ್ದು, ಸೂರ್ಯಗ್ರಹಣವಿದ್ದರೂ ದೇವಸ್ಥಾನದಲ್ಲಿ ಎಂದಿನಂತೆ ಪೂಜೆ ಪುನಸ್ಕಾರಗಳು ನಡೆಯಿತು. ಬೆಳಿಗ್ಗೆ ಆರಂಭವಾದ ಧಾರ್ಮಿಕ ಪೂಜಾವಿಧಿವಿಧಾನಗಳು ಎಂದಿನಂತೆ ನಡೆಯಿತು. ಗ್ರಹಣ ಕಾಲದಲ್ಲಿ ಅಭಿಷೇಕವನ್ನು ಮಾಡಲಾಯಿತು. ಇಂದು ನಡೆವ ಕೌತುಕವನ್ನು ನೋಡಲು ಮುಂಜಾನೆಯೇ ದೇವಾಲಯಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ರು. ಮೊದಲನೇ ದಿನ ಬೆಟ್ಟದಲ್ಲಿ ದರ್ಶನ ನೀಡುವ ದೇವಿ, ಅಮಾವಾಸ್ಯೆಯ ದಿನವಾದ ಇಂದು ಗಾಳಿರೂಪದಲ್ಲಿ ಗ್ರಾಮದ ಗುಡಿಗೆ ಪ್ರವೇಶಿಸುತ್ತಾಳೆ ಅನ್ನೋದು ಗ್ರಾಮಸ್ಥರ ಮಾತು. ಈ ಶುಭ ಮುಹೂರ್ತದಲ್ಲಿ ಸಂಭವಿಸುವ ಪವಾಡವನ್ನು ನೋಡಲು ಭಕ್ತರ ದಂಡೇ ಹರಿದು ಬಂದಿತ್ತು. ಅರ್ಚಕರು ಅಷ್ಟ ದಿಕ್ಕುಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ದೇವಾಲಯ ಸುತ್ತಾ ಪ್ರದಕ್ಷಿಣಿ ಹಾಕಿ ಮುಗಿಸುತ್ತಿದ್ದಂತೆ ಗಂಟೆ, ವಾದ್ಯಗೋಷ್ಠಿಗಳು ಮೊಳಗಲಾರಂಭಿಸುತ್ತಿದಂತೆ ದೇವಾಲಯದ ಬಾಗಿಲಲ್ಲಿ ಹಾಕಿದ ಪರದೆ ತಾನಾಗಿಯೇ ತೆರೆದುಕೊಳ್ಳುತ್ತೆ. ಈ ರೀತಿ ಗಾಳಿರೂಪದಲ್ಲಿ ದೇವಿರಮ್ಮ ಗರ್ಭಗುಡಿ ಸೇರುತ್ತಾಳೆ ಅನ್ನೋದು ಗ್ರಾಮಸ್ಥರ ನಂಬಿಕೆ ಆಗಿದೆ.
ಪ್ರತಿ ರಾಶಿಚಕ್ರದಿಂದ ನಾವು ಕಲಿಯಬೇಕಾದ ವಿಷಯ ಏನಂದ್ರೆ..
ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆಯೂ ಏರಿಕೆ
ದೇವಿರಮ್ಮಳ ದೇವಾಲಯದ ಬಾಗಿಲು ತನ್ನಿಂದ ತಾನೇ ತೆರೆದುಕೊಳ್ಳವುದು ಇಂದಿಗೂ ಕುತೂಹಲ ಮೂಡಿಸಿದೆ. ಜೊತೆಗೆ ಈ ವಿಸ್ಮಯ ಪ್ರಜ್ಞಾವಂತರಲ್ಲಿ ಹಲವು ಸಂಶಯಗಳನ್ನೂ ಹುಟ್ಟು ಹಾಕಿದೆ. ಇಲ್ಲಿನ ದೇವಿರಮ್ಮ ದೇವಿ ಪವಾಡ ಸೃಷ್ಠಿಸೋದ್ರ ಜೊತೆ ಭಕ್ತರ ಹರಕೆಯನ್ನು ತೀರಿಸುತ್ತಾಳೆ ಅನ್ನೋದು ಇಲ್ಲಿನ ಭಕ್ತರ ನಂಬಿಕೆ. ಆದ್ರಿಂದ ಇಲ್ಲಿಗೆ ಭಕ್ತರ ದಂಡೆ ಹರಿದು ಬರೋದು ವಿಶೇಷ. ವರ್ಷದಿಂದ ವರ್ಷಕ್ಕೆ ಇಲ್ಲಿಗೆ ಆಗಮಿಸುವ ಭಕ್ತರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗ್ತಿದೆ. ವರ್ಷಕ್ಕೊಮ್ಮೆ ದರ್ಶನ ನೀಡೋ ದೇವರ ಸಾಲಿಗೆ ಈ ದೇವಿರಮ್ಮ ಕೂಡ ಸೇರಲಿದ್ದಾಳೆ. ಒಟ್ಟಾರೆ, ದೀಪಾವಳಿಯ ಎರಡನೇ ದಿನವಾದ ಇಂದು ದೇವಿರಮ್ಮ ಪವಾಡ ನೋಡಲು ಜನ ಸಾಗರವೇ ಹರಿದು ಬಂದಿತ್ತು. ಜನ ಮರುಳೋ, ಜಾತ್ರೆ ಮರುಳೋ ಗೊತ್ತಿಲ್ಲ.ನಾಳೆ ಕೆಂಡಾರ್ಚನೆ ನಡೆಯುವ ಮೂಲಕ ಮೂರು ದಿನಗಳ ದೇವಿರಮ್ಮ ಜಾತ್ರಾ ಮಹೋತ್ಸವಕ್ಕೆ ಅಂತಿಮ ತೆರೆ ಬೀಳಲಿದೆ.