Hindu Wedding Ritual: ಪತಿ-ಪತ್ನಿ ಜೊತೆಯಾಗಿಡುವ ಏಳು ಹೆಜ್ಜೆಗಳ ಅರ್ಥವೇನು?

By Suvarna News  |  First Published Nov 15, 2021, 4:39 PM IST

ಹಿಂದೂ ವಿವಾಹ ಪದ್ಧತಿಯಲ್ಲಿ ನೂತನ ವಧುವರರು ಅಗ್ನಿಯ ಸಮ್ಮುಖದಲ್ಲಿ ಜೊತೆಯಾಗಿ ಏಳು ಹೆಜ್ಜೆಗಳನ್ನು ಇಡುವುದು ಸಂಪ್ರದಾಯ. ಇದಕ್ಕೆ ಅದ್ಭುತವಾದ ಅರ್ಥವಿದೆ. ಅದನ್ನು ಇಲ್ಲಿ ತಿಳಿಯೋಣ.


ಸಪ್ತಪದಿ (Sapthapadi) ಎಂಬುದು ಏಳೇಳು ಜನ್ಮಗಳ ಅನುಬಂಧ. ಮದುವೆಯಲ್ಲಿ (Marriage) ವಧು ಹಾಗೂ ವರ ಮದುವೆಯ ಸಂದರ್ಭ ಸಪ್ತಪದಿಯನ್ನು ತುಳಿಯುತ್ತಾರೆ. ಹಿಂದೂ (Hindu) ಧರ್ಮದಲ್ಲಿ ಸಪ್ತಪದಿಗೆ ವಿಶೇಷವಾದ ಮಹತ್ವವಿದೆ. ಹೌದು, ಹಿಂದೂ ಧರ್ಮದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುವ ಪ್ರತಿಯೊಂದು ಜೋಡಿ ಕೂಡ ಸಪ್ತಪದಿ ತುಳಿಯಬೇಕು. ಮದುವೆ ವೇಳೆ ವಧು ಹಾಗೂ ವರ ಅಗ್ನಿಯನ್ನು ಸಾಕ್ಷಿಯಾಗಿಸಿಕೊಂಡು ಸಪ್ತಪದಿ ತುಳಿಯುತ್ತಾರೆ. ಆದರೆ ಇದರ ಮಹತ್ವ ಹಾಗೂ ಸರಿಯಾದ ಅರ್ಥ ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಅಗ್ನಿ ದೇವರನ್ನು ಸಾಕ್ಷಿಯಾಗಿಸಿಕೊಂಡು ತೆಗೆದುಕೊಳ್ಳುವ ಪ್ರತಿಯೊಂದು ಸುತ್ತಿಗೂ ಮಹತ್ವವಿದೆ. ಸಂಬಂಧಗಳ ಮಹತ್ವ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಸಪ್ತಪದಿಯ ಮಹತ್ವ ಅರಿತುಕೊಳ್ಳುವುದು ಅತೀ ಅಗತ್ಯ.

ಮೊದಲ ಸುತ್ತು
ದಾಂಪತ್ಯ ಜೀವನದಲ್ಲಿ ಎದುರಿಸುವಂತಹ ಯಾವುದೇ ಸಮಸ್ಯೆಗಳನ್ನು ಪರಸ್ಪರರು ಹೊಂದಾಣಿಕೆ ಮಾಡಿಕೊಂಡು ನಿಭಾಯಿಸುತ್ತೇವೆ ಎಂದು ಶಪಥ ಮಾಡಿಕೊಳ್ಳುತ್ತಾರೆ. ವರನು ವಧುವಿನಿಂದ ಆಹಾರವನ್ನು ಪಡೆಯುವ ಬೇಡಿಕೆಯನ್ನು ಇಟ್ಟರೆ ವಧು ತನ್ನ ಹಾಗೂ ತಮ್ಮ ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿ ಪಡೆದುಕೊಳ್ಳಬೇಕೆಂಬ ಆಶ್ವಾಸನೆಯನ್ನು ಪಡೆಯುತ್ತಾಳೆ. ಇಲ್ಲಿ ವಧುವು ಅನ್ನಪೂರ್ಣೆ ಹಾಗೂ ವರನು ಯಜ್ಞೇಶ್ವರನು.

Tap to resize

Latest Videos

undefined

ಎರಡನೇ ಸುತ್ತು
ಸುಖ ಜೀವನ ಹಾಗೂ ಮಗುವನ್ನು ಪಡೆಯಬೇಕೆಂದು ವಧುವಿನಿಂದ ವರನು ಮಾತನ್ನು ಪಡೆದುಕೊಳ್ಳುತ್ತಾನೆ. ಈ ಮಾತನ್ನು ಸಂತೋಷದಿಂದ ಒಪ್ಪಿಕೊಳ್ಳುವ ವಧು, ವರನಿಂದ ಕೇವಲ ಪ್ರೀತಿಯನ್ನು ಬಯಸುತ್ತಾಳೆ. ಇಲ್ಲಿ ವಧುವರರು ರತಿಮನ್ಮಥರಾಗುತ್ತಾರೆ.

ಮೂರನೇ ಸುತ್ತು
ಜತೆಯಾಗಿರಲು ಮತ್ತು ಬೆಳೆಯಲು ಒಳ್ಳೆಯ ಸಂಪತ್ತು ಮತ್ತು ಶಕ್ತಿ ಕೊಡು ಎಂದು ದೇವರಲ್ಲಿ ಪ್ರಾರ್ಥಿಸಲಾಗುತ್ತದೆ. ಪರಪುರುಷನು ತನ್ನ ಗಂಡನಿಗೆ ದ್ವೀತಿಯನೆಂದು ವಧು ಪ್ರತಿಜ್ಞೆ ಮಾಡುತ್ತಾಳೆ. ಹಾಗೇ ಪರನಾರಿಯು ತನಗೆ ಸಹೋದರಿಯ ಸಮಾನ ಎಂದು ವರನು ಶಪಥ ಮಾಡುತ್ತಾನೆ. ಇಲ್ಲಿ ವಧುವರರು ಲಕ್ಷ್ಮಿನಾರಾಯಣರಾಗುತ್ತಾರೆ.

ನಾಲ್ಕನೇ ಸುತ್ತು
ತಮ್ಮ ಪ್ರೀತಿ ಹೆಚ್ಚಾಗುತ್ತಾ ಇರಲಿ ಮತ್ತು ಗೌರವವು ಸ್ಥಿರವಾಗಿರಲಿ ಎಂದು ನಾಲ್ಕನೇ ಸುತ್ತಿನಲ್ಲಿ ವಧು ಹಾಗೂ ವರ ಬೇಡಿಕೊಳ್ಳುವರು. ದಂಪತಿ ತಮ್ಮ ಸಾಮಾಜಿಕ ಜವಾಬ್ದಾರಿ ಮತ್ತು ಪ್ರತಿಯೊಬ್ಬರ ಕುಟುಂಬದ ಜವಾಬ್ದಾರಿ ತೆಗೆದುಕೊಳ್ಳುವ ಬಗ್ಗೆ ತಿಳಿದುಕೊಳ್ಳುವರು. ಇಲ್ಲಿ ವಧುವರರು ಸರಸ್ವತೀ- ಬ್ರಹ್ಮರಾಗುವರು.

Story of Ahalya: ದೇವೇಂದ್ರನಿಗೆ ಮೈಯೆಲ್ಲಾ ಯೋನಿ! ಯಾಕೆ ಗೊತ್ತೆ?

ಐದನೇ ಸುತ್ತು
ಸದ್ಗುಣ ಹಾಗು ವಿಧೇಯಕವಾಗಿರುವ ಮಕ್ಕಳು ತಮಗೆ ಹುಟ್ಟಲಿ ಎಂದು ಐದನೇ ಸುತ್ತಿನಲ್ಲಿ ಬೇಡಿಕೊಳ್ಳಲಾಗುತ್ತದೆ. ಮಕ್ಕಳಿಂದ ಜೀವನವು ಯಾವಾಗಲೂ ಸಂತೋಷಮಯವಾಗಿರಲಿ ಹಾಗೂ ತಾವು ಏಕಾಂಗಿಗಳು ಎನ್ನುವ ಭಾವನೆ ತಮಗೆ ಮೂಡದಿರಲಿ ಎನ್ನುವುದು ಇದರರ್ಥ. ಇಲ್ಲಿ ವಧೂವರರು ಶಚಿ ಹಾಗೂ ಇಂದ್ರರಾಗುವರು.

ಆರನೇ ಸುತ್ತು
ಈ ಸುತ್ತಿನಲ್ಲಿ ವಧು ಹಾಗೂ ವರ ಆರೋಗ್ಯಕರ ಮತ್ತು ಕಾಯಿಲೆಮುಕ್ತ ಜೀವನ ಸಿಗಲಿ ಎಂದು ಬೇಡುತ್ತಾರೆ. ಜೀವನ ಸುಖಮಯವಾಗಲು ಪರಸ್ಪರರ ನೋವು ಹಾಗೂ ನಲಿವನ್ನು ಹಂಚಿಕೊಳ್ಳುವುದಾಗಿ ಮಾತು ಕೊಡುತ್ತಾರೆ.

Haircut dream: ನಿಮ್ಮ ಕನಸಿನಲ್ಲಿ ತಲೆಗೂದಲು ಕತ್ತರಿಸೋ ದೃಶ್ಯ ಪದೇಪದೇ ಬರ್ತಿದೆಯಾ?

ಏಳನೇ ಸುತ್ತು
ಏಳನೇ ಸುತ್ತು ಅವರಿಬ್ಬರು ಪವಿತ್ರ ಬಂಧನದಲ್ಲಿರುವುದನ್ನು ತಿಳಿಸುವುದು. ಜೀವನದ ಅಂತ್ಯದ ತನಕ ಅವರಿಬ್ಬರು ಜತೆಯಾಗಿರುವರು ಎಂದು ಈ ಸುತ್ತು ಹೇಳುತ್ತದೆ. ದಂಪತಿ ಪರಸ್ಪರರನ್ನು ಗೌರವಿಸುವರು ಮತ್ತು ಪೋಷಿಸುವರು. ತಮ್ಮ ಪ್ರೀತಿಯು ಸಮಯಕ್ಕೆ ತಕ್ಕಂತೆ ಪ್ರೌಢವಾಗಲಿ ಎಂದು ಬೇಡಿಕೊಳ್ಳುವರು.

ಸಖಾ ಸಪ್ತಪದೀಭವ ಎಂಬುದು ಈ ಶಪಥದ ಅಂತಿಮ ಚರಣ. ಹಾಗೆಂದರೆ ಜೀವನದುದ್ದಕ್ಕೂ ತನಗೆ ಸಖನಾಗಿರು ಎಂದು ವಧು, ಸಖಿಯಾಗಿರು ಎಂದು ವರ ಕೇಳಿಕೊಳ್ಳುತ್ತಾರೆ. ಹಾಗಿರುತ್ತೇವೆ ಎಂದು ವಚನ ನೀಡುತ್ತಾರೆ. ಇದೇ ಸಪ್ತಪದಿಯ ಅಂತರಾರ್ಥ.

click me!