ಜಾನಪದ ಇಲ್ಲಿ ಭಕ್ತಿಯ ಆವೇಶದೊಂದಿಗೆ ಚಲಿಸುತ್ತಲೇ ಇದೆ. ನಾಡಿನ ಅತಿ ದೊಡ್ಡ ಮೌಖಿಕ ಮಹಾಕಾವ್ಯವಾದ ಮಾದೇಶ್ವರನ ಕುರಿತ ನೂರಾರು ಕತೆಗಳು ಹಾಡುಗಳ ರೂಪ ಪಡೆದು ಜನ ಸಾಮಾನ್ಯರ ಬಾಯಿಯಲ್ಲಿ ನಲಿದಾಡುತ್ತಲೇ ಇವೆ. ಕಾಲ ಪ್ರವಾಹ ವೇಗವಾಗ ಹರಿಯುತ್ತಿದ್ದರೂ ಇಲ್ಲಿನ ಜನಪದಕ್ಕೆ, ಜನಮನದ ಭಕ್ತಿಗೆ ಮುಕ್ಕಾಗಿಲ್ಲ. ಸದ್ಯಕ್ಕೆ ಅದು ಮುಕ್ಕಾಗುವುದೂ ಇಲ್ಲ.
ಕೆಂಡಪ್ರದಿ
ಯಾಕೆಂದರೆ ಅಂತಹುದೊಂದು ಭಕ್ತಿಯ ಆವೇಶ ಇಲ್ಲಿನ ಜನಪದದೊಂದಿಗೆ ಬೆಸೆದುಕೊಂಡಿದೆ. ಆ ಬೆಸುಗೆಯೇ ಭವ್ಯ ಸಂಸ್ಕೃತಿಯೊಂದನ್ನು ಪೊರೆಯುತ್ತಾ ಬಂದಿದೆ. ಇದೆಲ್ಲಾ ಸಾಧ್ಯವಾಗಿರುವುದು ಮಲೆಯ ಮಹದೇಶ್ವರ ಬೆಟ್ಟದಲ್ಲಿ. ಬೆಟ್ಟದ ಸುತ್ತಮುತ್ತಲಿನಲ್ಲಿ. ಬೆಟ್ಟದ ಮಾದೇವನ ಪ್ರಭಾವವಿರುವ ಎಲ್ಲಾ ಕಡೆಗಳಲ್ಲಿ.
ಅಲ್ಲಿ ಭಕ್ತರ ಮನದಲ್ಲೆಲ್ಲಾ ಮಾದಪ್ಪ, ಕಿವಿ ತಿರುಗಿದ ಕಡೆಯೆಲ್ಲಾ ಉಘೇ ಉಘೇ, ಕಣ್ಣು ಹಾಯಿಸಿದಲ್ಲೆಲ್ಲಾ ಬೆಟ್ಟ, ಗುಡ್ಡ, ಧೂಪ, ದೀಪಗಳ ಮಾಲೆ. ಕಂಸಾಳೆ, ಕುಣಿತ, ಹಾಡು ಪಾಡು, ಎಲ್ಲೆಲ್ಲೂ ಮಾದಪ್ಪ. ಅವನೊಬ್ಬನೇ ಸತ್ಯ. ಅವನು ಕಣ್ಣು ಬಿಟ್ಟು ನೋಡಿದರೆ ಕೊರಡು ಕೊನರುವುದು, ಮನೆ ಬೆಳಗುವುದು, ಮನ ತಣಿಯುವುದು. ಏಳು ಬೆಟ್ಟಹತ್ತಿ, ಏಳು ಬೆಟ್ಟಇಳಿದು ಬಂದ ದಣಿವೆಲ್ಲಾ ಮರೆಯುವುದು ಎನ್ನುವ ನಂಬಿಕೆ. ಆನುಮಲೆ, ಜೇನು ಮಲೆ, ಕಾನುಮಲೆ, ಪೊನ್ನಾಚಿ ಮಲೆ, ಪಚ್ಚೆ ಮಲೆ, ಪವಳ ಮಲೆ, ಕೊಂಗು ಮಲೆಗಳು ಸೇರಿ 77 ಮಲೆಗಳ ಮಧ್ಯೆ ನೆಲೆಯಾಗಿರುವ ಧಾರ್ಮಿಕ ಗುರು, ಸಾಂಸ್ಕೃತಿಕ ನಾಯಕ ಮಾದಪ್ಪ ಹೆಚ್ಚಾಗಿ ಬಡವರ ಮನೆ ಕಾಯುವ ದೇವ. ಗ್ರಾಮೀಣ ಜನರ ಬಂಧು. ಗುಡ್ಡರ, ನೀಲಗಾರರ ಬಾಯಲ್ಲಿ ನಲಿದಾಡುವ ಪವಾಡ ಪುರುಷ. ಉತ್ತರ ದೇಶದ ಕತ್ತಲ ರಾಜ್ಯದ ಉತ್ತರಾಜಮ್ಮನ ಮಗ 7 ವರ್ಷದವನಾಗಿದ್ದಾಗಲೇ ದಕ್ಷಿಣಕ್ಕೆ ಬಂದು ಬಂಕಾಪುರದ ರಕ್ಕಸ ಶ್ರವಣನ ಕೊಂದು, ಸುತ್ತೂರು ಮಠದಲ್ಲಿ ರಾಗಿಯ ಬೀಸಿ, ಕುಂತೂರು ಮಠದಲ್ಲಿ ದನ ಮೇಯಿಸಿ ಎಲ್ಲಾ ಕಡೆ ಪವಾಡ ಮಾಡುತ್ತಾ ಪೂರ್ವ ಘಟ್ಟದ ನಡುವಲ್ಲಿ ನೆಲೆಯಾಗಿ ನಿಂತವನು.
ಕಲ್ಪನೆಯ ಕಣ್ಣಲ್ಲಿ ಮಾಯ್ಕಾರ
ಹೀಗೆ ನಿಂತವನಿಗೆ ಭಕ್ತರು ತಮ್ಮ ಹೃದಯದಲ್ಲಿ ಸ್ಥಾನ ಕೊಟ್ಟಿದ್ದಾರೆ. ಹಾಡು ಕಟ್ಟಿಆ ಹೃದಯದಲ್ಲಿ ಅವನು ಗಟ್ಟಿಯಾಗಿ ನಿಲ್ಲುವಂತೆ ಮಾಡಿಕೊಂಡಿದ್ದಾರೆ. ಅಚ್ಚರಿ ಎನ್ನಿಸುವಂತಹ ಕಲ್ಪನೆಗಳನ್ನು ಕಟ್ಟಿಅದರ ಒಳಗೆ ಮಾದೇವನನ್ನು ಬೆಚ್ಚಗೆ ಇರಿಸಿದ್ದಾರೆ.
‘ಆನು ಮಲೆ ಹಾಸುಕೊಂಡು ಜೇನುಮಲೆ ಹೊದ್ದುಕೊಂಡು ಎಪ್ಪತ್ತೇಳು ಮಲೆಯನ್ನು ಸುರುಳಿ ಸುತ್ತಿ ತಲೆದಿಂಬನ್ನಾಗಿ ಮಾಡಿಕೊಂಡು ಒರಗಿರುವಂತಹ ನಮ್ಮ ಅಪ್ಪಾಜಿ ಮುದ್ದು ಮಾದೇವನ ಪಾದುಕ್ಕೊಂದು ಸಲ ಉಘೇ ಅನ್ರಪ್ಪ!’
‘ಆನುಮಲೆ, ಜೇನುಮಲೆ, ಗುಂಜುಮಲೆ, ಗುಲಗಂಜಿಮಲೆ, ಕಾಡುಮಲೆ, ಕಂಬತ್ತಿಮಲೆ, ಹತ್ತುಮಲೆ, ಸುತ್ತುಮಲೆ, ಮಹಂತುಮಲೆ, ವಿಭೂತಿಮಲೆ, ರುದ್ರಾಕ್ಷಿಮಲೆ, ಸಂಕುಮಲೆ, ಎಪ್ಪತ್ತೇಳು ಮಲೆಗಳ ಮಧ್ಯದಲ್ಲಿ ತಪ್ಪದೇ ನಾಟ್ಯವನ್ನಾಡುವಂತ ನಮ್ಮಪ್ಪಾಜಿ ಮುದ್ದು ಮಾದೇವ್ನ ಪಾದಕ್ಕೊಂದ್ ಸಲ ಉಘೇ ಅನ್ರಪ್ಪ!’
ಹೀಗೆ ತಮ್ಮದೇ ಕಲ್ಪನೆಯಲ್ಲಿ ಮಾದೇಶ್ವರನನ್ನು ಕಂಡಿದ್ದಾರೆ. ಇದೇ ರೀತಿ ಹೇಳುತ್ತಾ ಹೋದರೆ ಕಲ್ಪನೆಯ ಕಣ್ಣುಗಳು ವಿಸ್ತಾರವಾಗುತ್ತಾ ಹೋಗುತ್ತವೆ. ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು, ಕೊಯಮತ್ತೂರು, ಸೇಲಂ ಹೀಗೆ ನಾಡಿನಾದ್ಯಂತ, ನಾಡಿನಾಚೆಗೆ ಭಕ್ತರನ್ನು ಹೊಂದಿರುವ ಮಾದಪ್ಪ ನಂಬಿದವರ ಮನೆಯ ಒಳಗೆ ತುಂಬಿ ತುಳುಕಾಡುವ ದೇವ. ಎಲ್ಲರ ಬಾಯಿಯಲ್ಲೂ ಏಕವಚನದಲ್ಲಿ ಕರೆಸಿಕೊಳ್ಳುವಷ್ಟುಆಪ್ತ. ಸಂಶೋಧನೆಗೆ ಇಳಿದವ ಪಾಲಿಗೆ ಇತಿಹಾಸ ಪುರುಷ. ಜನಪದ ಮತ್ತು ಸಾಹಿತ್ಯ ಲೋಕದ ಕಥಾನಾಯಕ. ಹೀಗೆ ನಾನಾ ಅವತಾರಗಳಲ್ಲಿ ಅವನಿಂದಿಗೂ ಜೀವಂತ.
ಮಲೆ ಮಹದೇಶ್ವರ ಹುಂಡಿಯಲ್ಲಿ ದಾಖಲೆ ಸಂಗ್ರಹ; ಹರಿದು ಬಂತು ಕೋಟಿ ಕೋಟಿ ಹಣ!
ಪ್ರಪಂಚದ ಮಹಾ ಮೌಖಿಕ ಮಹಾಕಾವ್ಯ
ಮಾದೇಶ್ವರನ ಗುಡ್ಡರು, ನೀಲಗಾರರ ಬಾಯಲ್ಲಿ ಮಹಾಕಾವ್ಯವಾಗಿ ಮದೇಶ್ವರ ಜೀವಂತವಾಗಿ ಇರುವ ರೀತಿಯೇ ಹೆಂಗಸರ ಬಾಯಿಯಲ್ಲಿ ಹಾಡುಗಳಾಗಿ ಉಳಿದಿದ್ದಾನೆ. ಗುಡ್ಡರು, ನೀಲಗಾರರು ಮಹಾಕಾವ್ಯವನ್ನು ಇರುಳಿಡೀ ಹಾಡಿದರೆ, ಹೆಂಗಸರು ಆ ಮಹಾಕಾವ್ಯದ ಹಿನ್ನೆಲೆಯಲ್ಲಿ ಹಾಡುಗಳನ್ನು ಕಟ್ಟಿಹಾಡಿದ್ದಾರೆ. ಆ ಹಾಡುಗಳೇ ಇಂದು ಜನಪದವಾಗಿ ಬೆಳೆದು ನಿಂತಿದೆ. ಏಳು ಹಗಲು, ಏಳು ರಾತ್ರಿಗಳ ಕಾಲ ನಿರಂತರವಾಗಿ ಹಾಡುವಷ್ಟುದೊಡ್ಡದಾಗಿರುವ ಮದೇಶ್ವರ ಮಹಾಕಾವ್ಯ ಇದೇ ಕಾರಣಕ್ಕೆ ಜಗತ್ತಿನ ಅತಿ ದೊಡ್ಡ ಮೌಖಿಕ ಮಹಾಕಾವ್ಯ ಆಗಿರುವುದು. ಬೇವಿನಹಟ್ಟಿಕಾಳಮ್ಮನ ಕತೆ, ಬಾಣಸೂರನ ಕತೆ, ನೀಲವೇಣಿ ಕತೆ, ಸರಗೂರಯ್ಯನ ಕತೆ, ಶರಣೆ ಶಂಕವ್ವನ ಕತೆ ಹೀಗೆ ಹಲವು ಕತೆಗಳಿವೆ. ಈ ಮಹಾಕಾವ್ಯದಲ್ಲಿವೆ. ಒಂದೊಂದು ಕತೆಗೂ ಪವಾಡಗಳ ಸ್ಪರ್ಶವಿದೆ. ಭಕ್ತಿಯ ಲೇಪನವಿದೆ. ಈ ಮಹಾಕಾವ್ಯವನ್ನು ಕೇಳಬೇಕು, ಕಣ್ತುಂಬಿಕೊಳ್ಳಬೇಕು, ಗುಡ್ಡರ ಹಾಡು, ನೀಲಗಾರರ ಪದ, ಜನಪದರ ರಾಗವನ್ನು ಸವಿಯಬೇಕು ಎಂದರೆ ಮಾದಪ್ಪನ ಪರಿಷೆಗೆ ಹೋಗಬೇಕು. ಅಕ್ಷರ ಗೊತ್ತಿಲ್ಲದವರ ಮಹಾಕಾವ್ಯವನ್ನು ಅಲ್ಲಿ ಕೇಳಬೇಕು. ಅಲ್ಲಿ ಸಂಗೀತ ಇದೆ, ಸಾಹಿತ್ಯ ಇದೆ, ಭಕ್ತಿ ಇದೆ, ಕುಣಿತ ಇದೆ, ಸಂಸ್ಕೃತಿ ಇದೆ, ಶ್ರೀಮಂತ ಜನಪದವಿದೆ. ಒಂದು ಲೆಕ್ಕಕ್ಕೆ ಇದು ಬಡವರ, ಹಿಂದುಳಿದವರ, ಗ್ರಾಮೀಣರ, ಮಹಿಳೆಯರ ಸಾಂಸ್ಕೃತಿಕ ಅಭಿವ್ಯಕ್ತಿ.
ಜಾತ್ರೆಯಲ್ಲಿ ಕಂಡ ಮುಖ
ಬೆಟ್ಟಕ್ಕೆ ಬಂದುಹೋಗುವ ಭಕ್ತರಲ್ಲಿ ಹೆಂಗಸರದ್ದೇ ಮೈಲುಗೈ. ಮಾದೇವ ಮಾಯ್ಕಾರ ಮಾದೇವ ಆಗಲು, ಮುದ್ದು ಮಾದೇವ ಆಗಲು, ದುಂಡು ಮುಖದ ಮಾದೇವ ಆಗಲು ಅವರೇ ಕಾರಣ. ವಿವಿಧ ರೀತಿಯ ಹರಕೆಗಳನ್ನು ಹೊತ್ತು, ನನ್ನ ಕಷ್ಟಕಳೆಯೋ ಮಾದೇವ, ನನ್ನ ಮನೆಯ ಉಳಿಸೋ ಮಾದೇವ ಎಂದು ಏಕವಚನದಲ್ಲಿಯೇ ಅತ್ಯಂತ ಪ್ರೀತಿಯಿಂದ ಬೇಡುತ್ತಾರೆ. ಬೈಯುತ್ತಾರೆ, ಅವನೊಂದಿಗೆ ಮುನಿಸಿಕೊಳ್ಳುತ್ತಾರೆ. ಪಂಜು ಸೇವೆ, ಉರುಳು ಸೇವೆ, ಹುಲಿವಾಹನ ಸೇವೆ, ನಂದಿವಾಹನ ಸೇವೆ, ಧೂಪಸೇವೆ ಹೀಗೆ ದೇಹವನ್ನು ದಂಡಿಸುತ್ತಾ, ಪದ ಕಟ್ಟಿಹಾಡುತ್ತಾ ಮಾದೇವನ ಬಳಿ ತಮ್ಮ ಕಷ್ಟಹೇಳಿಕೊಂಡು ವರ ಬೇಡುತ್ತಾರೆ. ಉತ್ತರಾಜಮ್ಮನಿಗೆ, ಶರಣೆ ಸಂಕವ್ವನಿಗೆ, ಕಾರಯ್ಯ, ಬಿಲ್ಲಯ್ಯರಿಗೆಲ್ಲಾ ಉಘೇ ಉಘೇ ಎನ್ನುತ್ತಾ ಭಕ್ತಿಯ ಆವೇಶದಲ್ಲಿ ಜಗದ ಜಂಜಾಟಗಳ ಮರೆಯುತ್ತಾರೆ. ಹಣೆ ತುಂಬಾ ವಿಭೂತಿ ಹಚ್ಚಿಕೊಂಡು ನಮ್ಮನ್ನು ಕಾಯುವವನೊಬ್ಬನಿದ್ದಾನೆ, ಕಷ್ಟಗಳಿಗೆÜಲ್ಲಾ ಮುಕ್ತಿ ಕೊಡುತ್ತಾನೆ ಎಂದುಕೊಳ್ಳುತ್ತಾ ಅದೇ ನಂಬಿಕೆಯಲ್ಲಿ ನಲಿವು ಕಾಣುತ್ತಾರೆ. ಹಾಡುತ್ತಾ, ಕುಣಿಯುತ್ತಾ ಸಾಗುತ್ತಾರೆ.
ಬರುವವರು ಮಾದೇಶ್ವನ ಬೆಟ್ಟದ ಬುಡ (ತಾಳುಬೆಟ್ಟ)ದಿಂದಲೇ ನಡೆದುಕೊಂಡು ಬರುತ್ತಾರೆ. ಈಗ ಒಳ್ಳೆಯ ರಸ್ತೆ ಇರುವ ಕಾರಣ, ಸಾರಿಗೆ ವ್ಯವಸ್ಥೆಯೂ ಚೆನ್ನಾಗಿಯೇ ಇದ್ದು, ಬಸ್, ಕಾರು, ಆಟೋ, ಬೈಕ್‌ಗಳಲ್ಲಿ ಬಂದು ಬೆಟ್ಟಸೇರುತ್ತಾರೆ. ಆಲಂಬಾಡಿ ಜುಂಚೇಗೌಡ ಕಟ್ಟಿಸಿದ ದೇವಸ್ಥಾನದಲ್ಲಿ ನೆಲೆಯಾಗಿರುವ ಮಾದೇವನನ್ನು ಕಾಣುತ್ತಾರೆ. ಅವನ ಬಗ್ಗೆ ಹಾಡುತ್ತಾರೆ, ಕುಣಿಯುತ್ತಾರೆ. ಈಗ ಉಳಿದುಕೊಳ್ಳಲೂ ಇಲ್ಲಿ ಸಾಕಷ್ಟುಅನುಕೂಲಗಳಿವೆ. ಸರಕಾರ ಮಲೆ ಮಹದೇಶ್ವರ ಬೆಟ್ಟಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ಸಾಕಷ್ಟುಅಭಿವೃದ್ಧಿ ಕಾರ್ಯ ಮಾಡಿದೆ. ಸುತ್ತೂರು ಮಠ, ಕುಂತೂರು ಮಠ ಸೇರಿ ನಾಡಿನ ಹಲವು ಮಠಗಳು ಇಲ್ಲಿ ಭಕ್ತರು ಉಳಿದುಕೊಳ್ಳಲು ವ್ಯವಸ್ಥೆ ಮಾಡಿವೆ. ನಿತ್ಯ ಅನ್ನದಾಸೋಹವಿದೆ.
ನಾಗಮಲೆಯ ದಾರಿಯಲ್ಲಿ
ಬೆಟ್ಟಕ್ಕೆ ಬರುವವರ ಮತ್ತೊಂದು ಆಕರ್ಷಣೆ ನಾಗಮಲೆ. ಏಳು ಬೆಟ್ಟದಾಚೆಗೆ ನಾಗಮಲೆಯಲ್ಲಿ ನಾಗನ ನೆರಳಿನಲ್ಲಿ ಮಾದಪ್ಪ ನೆಲೆಯಾಗಿದ್ದಾನೆ ಎನ್ನುವ ನಂಬಿಕೆ ಭಕ್ತರದ್ದು. ಅದಕ್ಕಾಗಿಯೇ ಬೆಟ್ಟಕ್ಕೆ ಬಂದವರಲ್ಲಿ ಅರ್ಧದಷ್ಟಾದರೂ ಭಕ್ತರು ನಾಗಮಲೆಗೆ ನಡೆದು ಹೋಗುತ್ತಾರೆ. ಸುತ್ತಲೂ ಕಾಡು, ಕಲ್ಲು, ಮುಳ್ಳಿನ ಹಾದಿಯಲ್ಲಿ ಏಳು ಬೆಟ್ಟಗಳನ್ನತ್ತಿಳಿದು ನಾಗಮಲೆ ತಲುಪುತ್ತಾರೆ. ಈಗ ನಾಗಮಲೆಗೆ ಸಾಗುವ ಅರ್ಧ ದಾರಿಯತನಕ ಜೀಪ್‌ಗಳು ಓಡಾಡುವ ವ್ಯವಸ್ಥೆಯಾಗಿದೆ. ಬೆಳಿಗ್ಗೆ 6 ಗಂಟೆಯಿಂದ ಇವುಗಳ ಓಟಾಟ ಶುರು. ಅಲ್ಲಿಗೆ ಅರ್ಧದ ತನಕ ಜೀಪ್‌ನಲ್ಲಿ ಹೋಗಿ ಇನ್ನರ್ಧವನ್ನು ಕಾಲು ನಡಿಗೆಯಲ್ಲಿ ಸಾಗಿದರೆ ನಾಗಮಲೆ ತಲುಪಿಕೊಂಡುಬಿಡಬಹುದು. ದಾರಿ ಮಧ್ಯದಲ್ಲಿ ಎರಡು ಊರು. ಅಲ್ಲಿ ಸೋಲಿಗರು, ಬೇಡಗಂಪಣರು, ಕಾಡು ಜನರ ವಾಸ. ಕೃಷಿ, ಬೇಟೆಯೇ ಅವರ ಮೂಲ ಕಸುಬಾದರೂ ಈಗೀಗ ನಾಗಮಲೆಗೆ ಹೋಗಿ ಬರುವ ಭಕ್ತರ ಅವಶ್ಯಗಳನ್ನು ಪೂರೈಸಲು ಸಣ್ಣ ಪುಟ್ಟಅಂಗಡಿಗಳನ್ನು ಮಾಡಿಕೊಂಡಿದ್ದಾರೆ. ಇವರ ದಯೆಯಿಂದ ನಾಗಮಲೆಯ ಹಾದಿ ಸಲೀಸು. ಜಾತ್ರೆಯ ವೇಳೆ ಇಲ್ಲಿಗೆ ಹೋದರಂತೂ ದಾರಿ ಸಾಗುವ ಉದ್ದಕ್ಕೂ ಮಾದೇವನ ಪದಗಳು, ಉಘೇ, ಉಘೇ ಘೋಷಣೆ, ಕಾಡುಜನರ ಉಪಚಾರ ಎಲ್ಲವೂ ಲಭ್ಯ. ಇದಿಷ್ಟೇ ಅಲ್ಲ, ಭಕ್ತಿಯೊಂದಿಗೆ ಮೈಮನ ಮುಟ್ಟುವ ಬೆಟ್ಟದ ಸಾಲು, ಅಷ್ಟೇನೂ ದಟ್ಟವಲ್ಲದ ಕುರುಚಲು ಕಾಡು, ನಾಗಮಲೆ ಏರಿ ನಿಂತರೆ ಆ ಬದಿಗೆ ಕಾವೇರಿ, ಪಾಲಾರ್ ನದಿಗಳ ದರ್ಶನ. ನದಿಯಾಚೆಗೆ ತಮಿಳುನಾಡು. ನಾಗಮಲೆ ದಾಟಿ ಅದೇ ಹಾದಿಯಲ್ಲಿ ಕಾಡು ಹಾದಿಯಲ್ಲಿಯೇ ಮುಂದೆ ಸಾಗಿದರೆ ಕರ್ನಾಟಕ ಗಡಿ ಗೋಪಿನಾಥಂ. ಅಲ್ಲಿಂದ ಹೊಗೆನಕಲ್ ಫಾಲ್ಸ್‌ಗೆ ಹಾದಿ. ಹೀಗೆ ಭಕ್ತಿಯ ನೆರಳಲ್ಲಿ ಮಿಂದು, ಪ್ರಕೃತಿಯ ಮಡಿಲಲ್ಲಿ ವಿರಮಿಸಿ ಹೊರಡುವವರ ಸಂಖ್ಯೆಯೂ ಇಲ್ಲಿದೆ.