ಮಕ್ಕಳಾಗದವರಿಗೆ ಮಕ್ಕಳನ್ನು ಅನುಗ್ರಹಿಸುವ ದೇವಾಲಯ. ಸುರ್ಯ ಸದಾಶಿವ ದೇವಾಲಯದಲ್ಲಿ ಮಣ್ಣಿನ ಹರಕೆ ನೀಡುತ್ತೇವೆ ಎಂದು ಹರಸಿಕೊಂಡರೆ ಹರಕೆ ಈಡೇರುತ್ತದೆ. ಇಲ್ಲಿ ಲಕ್ಷಾಂತರ ಹರಕೆ ರೂಪದ ಮಣ್ಣಿನ ಬೊಂಬೆಗಳಿವೆ.
ದಕ್ಷಿಣ ಕನ್ನಡದ ದೇವಸ್ಥಾನ ಅಂದ ಕೂಡಲೇ ನೆನಪಾಗೋದು ಧರ್ಮಸ್ಥಳ, ಕುಕ್ಕೆ. ಆದರೆ ಇಲ್ಲಿ ಹೆಚ್ಚು ಜನರ ಕಣ್ಣಿಗೆ ಬೀಳದ ಆದರೆ ಸಾಕಷ್ಟು ಕಾರಣಿಕತೆ ಹೊಂದಿರುವ, ಇನ್ನೂ ಕೆಲವಷ್ಟು ದೇವಾಲಯಗಳಿವೆ. ಅವುಗಳಲ್ಲಿ ಸುರ್ಯದ ಸದಾಶಿವ ದೇವಾಲಯವೂ ಒಂದು. ಧರ್ಮಸ್ಥಳಕ್ಕೆ ಹೋಗುವ ದಾರಿಯಲ್ಲಿ ಬೆಳ್ತಂಗಡಿ ಸಿಗುತ್ತದೆ. ಇಲ್ಲಿಂದ ನಡ ಎನ್ನುವ ಗ್ರಾಮಕ್ಕೆ ಹೋದರೆ ಅಲ್ಲಿ ಸುರ್ಯ ಸದಾಶಿವ ದೇವಾಲಯ ನಿಮ್ಮ ಕಣ್ಣಿಗೆ ಬೀಳುತ್ತದೆ. ಧರ್ಮಸ್ಥಳ ಸಮೀಪದ ಉಜಿರೆಯಿಂದ ಇಲ್ಲಿಗೆ ಕೇವಲ ನಾಲ್ಕು ಕಿಮೀಗಳ ಹಾದಿ. ಧರ್ಮಸ್ಥಳದಿಂದ ಸುಮಾರು ಹದಿಮೂರು ಕಿಮೀಗಳು. ನೀವು ಟಿಪ್ಪುವಿನ ಕಾಲದ ಜಮಾಲಾಬಾದ್ ಕೋಟೆಯ ಹೆಸರು ಕೇಳಿದ್ದರೆ ಆ ಬೆಟ್ಟದ ಬುಡದಲ್ಲೇ ಈ ದೇವಾಲಯವಿದೆ. ಸುತ್ತಲೂ ಹಚ್ಚ ಹಸುರಿನ ಸಮೃದ್ಧ ಪರಿಸರದಲ್ಲಿ ಈ ಸುಂದರ ದೇಗುಲವಿದೆ. ಶಿವನ ಆರಾಧನೆಯ ಜೊತೆಗೆ ಇಲ್ಲಿ ಪ್ರಕೃತಿಯ ಆರಾಧನೆಯನ್ನೂ ಮಾಡಬಹುದು. ಈ ದೇವಸ್ಥಾನಕ್ಕೆ ಸಾವಿರದ ಇನ್ನೂರು ವರ್ಷಗಳ ಹಿಂದಿನ ಇತಿಹಾಸವಿದೆ. ಐತಿಹ್ಯಗಳ ಪ್ರಕಾರ ಇದರ ಕಾಲ ಇನ್ನೂ ಹಿಂದಿನದು.
ದೇವಸ್ಥಾನದಲ್ಲಿ ಒಂದೇ ಬಾರಿ ಬೆತ್ತಲಾದ 10 ಸಾವಿರ ಮಂದಿ!...
ಸುರ್ಯದ ಸದಾಶಿವ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸ ಇದೆ. ಹಿಂದೆ ಇದು ಮಹರ್ಷಿಗಳ ತಪೋಭೂಮಿಯಾಗಿತ್ತು. ದೇವರೊಲಿದ ಪುಣ್ಯತಾಣವಾಗಿತ್ತು. ಹಿಂದೆ ಭೃಗು ಮಹರ್ಷಿಗಳ ಶಿಷ್ಯರೊಬ್ಬರು ಇಲ್ಲಿ ತಪಸ್ಸು ಮಾಡುತ್ತಿದ್ದರಂತೆ. ಅವರ ತಪಸ್ಸಿಗೆ ಶಿವ ಪಾರ್ವತಿಯರು ಒಲಿದು ಪ್ರತ್ಯಕ್ಷರಾದರಂತೆ. ಆ ಋಷಿಯ ಕೋರಿಕೆಯಂತೆ ಇಲ್ಲೇ ಲಿಂಗ ರೂಪದಲ್ಲಿ ನೆಲೆಯಾದರಂತೆ. ಇದರ ಕುರುಹುಗಳು ಈಗಲೂ ಇಲ್ಲಿದೆ. ಎರಡು ಲಿಂಗರೂಪದ ಕಲ್ಲುಗಳಿವೆ. ಜೊತೆಗೆ ಶಿಲಾಪಾದವೂ ಇದೆ.
ಇದಾಗಿ ಎಷ್ಟೋ ಕಾಲದ ಬಳಿಕ ಇಲ್ಲಿಗೆ ಕಾಡಿನಿಂದ ಸೊಪ್ಪು ಸಂಗ್ರಹಿಸುವ ಹೆಣ್ಮಗಳೊಬ್ಬಳು ಬಂದಳಂತೆ. ಸೊಪ್ಪು ಕಡಿಯುತ್ತಾ ಅವಳ ಕತ್ತಿ ಒಂದು ಕಲ್ಲಿಗೆ ತಾಗಿತು. ಅದು ಶಿವ ಲಿಂಗರೂಪಿಯಾಗಿ ನೆಲೆಸಿದ್ದ ಶಿಲೆ. ಕೂಡಲೇ ಅದರಿಂದ ರಕ್ತ ಚಿಮ್ಮಿತು. ಆ ಹೆಣ್ಮಗಳು ಗಾಬರಿಯಿಂದ ತಮ್ಮ ಮಗನನ್ನು ಸುರಿಯ ಎಂದು ಕೂಗಿದಳಂತೆ. ಆ ಬಳಿಕ ಈ ಊರು ಸುರ್ಯ ಎಂದು ಪ್ರಸಿದ್ಧವಾಯಿತು. ಆ ಲಿಂಗರೂಪಿ ಶಿಲೆಗೆ ದೇವಾಲಯ ನಿರ್ಮಿಸಿ ಪೂಜಿಸಲಾಯಿತು ಎಂಬ ಪ್ರತೀತಿ ಇದೆ. ಸುಮಾರು ಹದಿಮೂರನೆಯ ಶತಮಾನದಲ್ಲಿ ಬಂಗ ಅರಸರು ಚಿಕ್ಕದಾಗಿದ್ದ ಈ ಸದಾಶಿವನ ಗುಡಿಯನ್ನು ಮರು ನಿರ್ಮಾಣ ಮಾಡಿದರು ಎಂದು ಇತಿಹಾಸ ಹೇಳುತ್ತದೆ.
ಸುರ್ಯ ದೇವಾಲಯಕ್ಕೆ ನೀವು ಹೋದರೆ ಎಲ್ಲೆಲ್ಲೂ ನಾನಾ ನಮೂನೆಯ ಮಣ್ಣಿನ ಮೂರ್ತಿಗಳನ್ನು ನೋಡಬಹುದು. ಪರಿಸರಸ್ನೇಹಿಯಾದ ಈ ಮೂರ್ತಿಗಳು ಹರಕೆ ರೂಪದಲ್ಲಿ ಸಂದಾಯವಾದವು. ಅದರಲ್ಲೂ ಮಕ್ಕಳ ನೂರಾರು ಮೂರ್ತಿಗಳನ್ನು ಇಲ್ಲಿ ನೋಡಬಹುದು. ಅವೆಲ್ಲ ಮಕ್ಕಳಿಗಾಗಿ ಹರಕೆ ಹೊತ್ತವರು ಅದು ಈಡೇರಿದ ಬಳಿಕ ಸಮರ್ಪಿಸಿದ ಮೂರ್ತಿಗಳು.
ಮಕ್ಕಳಾಗಬೇಕೆಂದು ಮನೆಯಲ್ಲಿ ಸಂಕಲ್ಪ ಮಾಡಿ ದೇವರಿಗೆ ಅಕ್ಕಿನಾಣ್ಯ ಕಟ್ಟಿಟ್ಟರೆ, ಹರಸಿಕೊಂಡದ್ದು ಈಡೇರಿದ ಬಳಿಕ ಈ ದೇವಾಲಯಕ್ಕೆ ಭೇಟಿ ನೀಡಬಹುದು. ಆವೆಮಣ್ಣಿನ ಈ ಬೊಂಬೆಗಳನ್ನು ನೀವೇ ತಯಾರಿಸಬಹುದು. ಆದರೆ ಅದರಲ್ಲಿ ಬಿರುಕು ಇರಬಾರದು. ಈ ಸ್ಥಳದಲ್ಲೂ ನಾನಾ ನಮೂನೆಯ ಮಣ್ಣಿನ ಬೊಂಬೆಗಳು ಸಿಗುತ್ತವೆ. ಯಾವುದೋ ಲೋಪವಿಲ್ಲದ ಬೊಂಬೆಯನ್ನು ಖರೀದಿಸಿ ಅಕ್ಕಿ, ತೆಂಗಿನಕಾಯಿ ಜೊತೆಗೆ ಈ ಮಣ್ಣಿನ ಬೊಂಬೆಯನ್ನು ಹರಿವಾಣದಲ್ಲಿಟ್ಟು ಹರಕೆ ಸಮರ್ಪಿಸಬಹುದು.
ಕಳ್ಳ ಕಾಕರನ್ನು ಶಿಕ್ಷಿಸುವ ಸಿಗಂದೂರೇಶ್ವರಿ ದೇವಿ...
ತುಸು ದೂರದ ಜಾಗದಲ್ಲಿರುವ ಜನ ಗಂಭೀರ ಕಾಯಿಲೆಗಳಿಗೆ ಇಲ್ಲಿ ಮಣ್ಣಿನ ಮೂರ್ತಿಯ ಹರಕೆ ಹೊತ್ತರೆ ಸ್ಥಳೀಯರು ತಮ್ಮ ಕೋಳಿಗೆ ಬಂದ ರೋಗ ಗುಣವಾಗುವುದಕ್ಕೆ, ಬೀಡಿ ಕಟ್ಟುವ ಕೆಲಸ ಮಾಡುವವರು ಅಲ್ಲೇನೋ ಸಮಸ್ಯೆ ಬಂದದ್ದಕ್ಕೆ ಹರಕೆ ಕಟ್ಟುತ್ತಾರೆ. ನೀವಿಲ್ಲಿ ಗಮನಿಸಿದರೆ ಕೋಳಿಯ ಮಣ್ಣಿನ ಮೂರ್ತಿಗಳು, ಅನೇಕ ಬೀಡಿಯ ಕಟ್ಟುಗಳನ್ನ ಕಾಣಬಹುದು. ಈ ದೇವಾಲಯದಲ್ಲಿ ಹೃದಯ, ಮೂತ್ರಪಿಂಡದಿಂದ ಹಿಡಿದು ಮೊಬೈಲ್, ಕಂಪ್ಯೂಟರ್, ಕೋಳಿಯಂಥಾ ಮಣ್ಣಿನ ಗೊಂಬೆಗಳಿರುವುದು ಕಾಣುತ್ತವೆ. ಲಕ್ಷಾಂತರ ಸಂಖ್ಯೆಯಲ್ಲಿರುವ ಈ ಬೊಂಬೆಗಳು ಮನುಷ್ಯನ ಸಂಕಟಕ್ಕೆ ಮತ್ತು ಅದು ಪರಿಹಾರಗೊಂಡದ್ದಕ್ಕೆ ಸಾಕ್ಷಿಯಂತಿದೆ. ಈ ದೇವಾಲಯಕ್ಕೆ ಧರ್ಮಸ್ಥಳದಿಂದ ಹದಿಮೂರು ಕಿಮೀಗಳ ಉಜಿರೆ ಹಾದಿಯಾಗಿಯೂ ಹೋಗಬಹುದು. ಅಥವಾ ಬೆಳ್ತಂಗಡಿಯಿಂದ ಕಿಲ್ಲೂರು ರೋಡ್ ಆಗಿ ಆ ಮೂಲಕವೂ ಹೋಗಬಹುದು.