Ramadan: ಉಪವಾಸ, ದಾನ-ಧರ್ಮ, ಪ್ರಾರ್ಥನೆ, ಸಹಭೋಜನ, ಭ್ರಾತೃತ್ವವನ್ನು ಸಾರುವ ಮುಸ್ಲಿಮರ ಪವಿತ್ರ ಹಬ್ಬ

By Suvarna News  |  First Published May 2, 2022, 4:43 PM IST

ರಂಜಾನ್‌ (Ramadan) ದಾನದ ಹಬ್ಬವೂ ಆಗಿದೆ. ಆಚರಣೆ ಮಾಡುವವರು ಸಾಕಷ್ಟುದಾನ-ಧರ್ಮ ಮಾಡುತ್ತಾರೆ. ಹಣವಂತರಾದ ಶ್ರೀಮಂತ ಮುಸ್ಲಿಮರು ಇಂತಿಷ್ಟುಮೊತ್ತದ ಹಣವನ್ನು ಬಡವರಿಗೆ ದಾನ ಕೊಡುವಂತೆ ಪ್ರವಾದಿ ಮಹಮ್ಮದರೇ ಆಜ್ಞಾಪಿಸಿದ್ದಾರೆ.


ಜಗತ್ತಿನೆಲ್ಲೆಡೆ ಮುಸಲ್ಮಾನರು ಅತ್ಯಂತ ಶ್ರದ್ಧಾಭಕ್ತಿಗಳಿಂದ ಆಚರಿಸುವ ಪವಿತ್ರ ಹಬ್ಬ ರಂಜಾನ್‌. ರಂಜಾನ್‌ ಎಂಬುದು ಇಸ್ಲಾಮಿ ಪಂಚಾಂಗದ 9ನೇ ತಿಂಗಳ ಹೆಸರೂ ಹೌದು. ಎಲ್ಲಾ ಧರ್ಮದವರೂ ಈ ಹಬ್ಬದಲ್ಲಿ ಭಾಗವಹಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವುದನ್ನು ಕಾಣುವುದೇ ಒಂದು ಸಂಭ್ರಮದ ಕ್ಷಣ. ಹಾಗಾಗಿ ಇದಕ್ಕೆ ಭಾವೈಕ್ಯತೆಯ ಬೆಳಕಿನ ಪ್ರಭಾವಳಿಯೂ ಇದೆ.

ರಂಜಾನ್‌ ಎಲ್ಲರಿಗೂ ಒಳಿತು ತರುವ, ಒಂದಾಗಿ ಬಾಳಿ ಎನ್ನುವ, ಸಮಬಾಳು-ಸಮಪಾಲಿನ ಅರ್ಥ ತಿಳಿಸುವ ಅಪೂರ್ವ ಹಬ್ಬ! ಇಮಾನ್‌, ನಮಾಜ್‌, ರೋಜಾ, ಜಕಾತ್‌ ಹಾಗೂ ಹಜ್‌ ಎಂಬ ಇಸ್ಲಾಂ ಧರ್ಮದ ಪ್ರಮುಖ ಪಂಚತತ್ವಗಳ ಮಹತ್ವ ಹಾಗೂ ಇವುಗಳ ಆಚರಣೆಯಿಂದಾಗುವ ಪ್ರಯೋಜನ ಕುರಿತು ಜನರಲ್ಲಿ ಅರಿವು ಮೂಡಿಸುವಂಥ ವಿಶೇಷ ಸಂದರ್ಭ ಪವಿತ್ರ ರಂಜಾನ್‌ ತಿಂಗಳದ್ದಾಗಿದೆ. ನಿರಾಕಾರ ಏಕದೇವೋಪಾಸನೆಯ ‘ಇಮಾನ್‌’, ಮಾನಸಿಕ ನೆಮ್ಮದಿ ನೀಡಿ ಶಾಂತಿ ಸಮೃದ್ಧಿ ತರುವ ಪ್ರಾರ್ಥನೆ ‘ನಮಾಜ್‌’, ದೈಹಿಕ ಸ್ವಾಸ್ಥ್ಯ, ಮನಶುದ್ಧಿ, ಕಷ್ಟಸಹಿಷ್ಣುತೆಗೆ ಸಹಕಾರಿಯಾಗುವ ‘ರೋಜಾ’, ಎಲ್ಲರಿಗೂ ಬದುಕುವ ಹಕ್ಕಿದೆ ಎಂದು ಹೇಳುವ ‘ಜಕಾತ್‌’ ಹಾಗೂ ಜೀವನದಲ್ಲಿ ಒಮ್ಮೆಯಾದರೂ ಪವಿತ್ರ ಸ್ಥಳ ಕಾಬಾ ದರ್ಶನ ಕಲ್ಪಿಸುವ ‘ಹಜ್‌’ ಯಾತ್ರೆ ಇವು ಮುಸಲ್ಮಾನರು ಆಚರಿಸಬೇಕಾದ ಪಂಚ ಮಹಾ ಪುಣ್ಯತತ್ವಗಳು.

Latest Videos

undefined

Eid Mubarak 2022: ಈದ್‌ಗೆ ವಾಟ್ಸಾಪ್, ಫೇಸ್‌ಬುಕ್, ಸ್ಟೇಟಸ್‌ಗಳಲ್ಲಿ ಈ ರೀತಿ ಶುಭಾಶಯ ಹೇಳಿ

ಉಪವಾಸ ರಂಜಾನ್‌ ಹಬ್ಬದ ವಿಶೇಷತೆ

ವಿಶೇಷವೆಂದರೆ ರಂಜಾನ್‌ ಆರಂಭವಾಗುವುದೇ ಉಪವಾಸ ವ್ರತದಿಂದ. ಉಪವಾಸವೇ ಇಲ್ಲಿ ಪ್ರಧಾನ, ಅದೂ ಇಡೀ ಒಂದು ತಿಂಗಳು. ವರ್ಷದ ಹನ್ನೊಂದು ತಿಂಗಳು ನಮ್ಮ ದೇಹ ಮತ್ತು ಮನಸ್ಸಿನಲ್ಲಿ ತುಂಬಿದ ಮಾಲಿನ್ಯವನ್ನು ಒಂದು ತಿಂಗಳು ಉಪವಾಸ ಮಾಡಿ ಶುದ್ಧೀಕರಿಸುವ ಧಾರ್ಮಿಕ ಕ್ರಿಯೆಯಿದು. ಈ ಉಪವಾಸದಲ್ಲಿ ಉಗುಳನ್ನೂ ನುಂಗಬಾರದು ಎನ್ನುವಂತಹ ಕಟ್ಟುನಿಟ್ಟಿನ ವ್ರತವಿದು. ಪುರುಷರು ಮತ್ತು ಮಹಿಳೆಯರೆಲ್ಲರೂ ಎಷ್ಟೇ ಕಷ್ಟವೆನಿಸಿದರೂ ಸಂತಸದಿಂದಲೇ ಇದನ್ನು ಆಚರಿಸುವುದೇ ಒಂದು ವಿಶೇಷ. ಇಸ್ಲಾಂ ಧರ್ಮದಲ್ಲಿ ನಂಬಿಕೆಯುಳ್ಳವರೆಲ್ಲರೂ ಸರ್ವಶಕ್ತನಾದ ಅಲ್ಲಾಹನನ್ನು ಈ ಉಪವಾಸ ವ್ರತದ ಮೂಲಕ ಪ್ರಾರ್ಥಿಸುತ್ತಾರೆ. ತನ್ಮೂಲಕ ಅಲ್ಲಾಹನ ಕರುಣೆಗೆ ಪಾತ್ರರಾಗುತ್ತಾರೆ.

ಸೂರ್ಯೋದಯಕ್ಕೆ ಮುನ್ನ ಲಘು ಆಹಾರ ಸೇವನೆ (ಸಹರಿ)ಯನ್ನಷ್ಟೇ ಮಾಡಿ ಉಪವಾಸ ವ್ರತ ಆರಂಭಿಸುವ ಮುಸಲ್ಮಾನರು ಮತ್ತೆ ಏನಾದರೂ ಬಾಯಿಗಿಡಬೇಕೆಂದರೆ ಸೂರ್ಯಾಸ್ತದ ನಂತರವಷ್ಟೆ. ಅಲ್ಲಿಯತನಕ ಇಡೀ ದಿನ ಒಂದು ತೊಟ್ಟು ನೀರು ಸಹ ಅವರಿಗೆ ನಿಷಿದ್ಧ. ಸಾಯಂಕಾಲ ಪ್ರತಿಯೊಬ್ಬರು ಮಸೀದಿಯಿಂದÜ ಹೊರಡುವ ಕರೆಗಾಗಿ ಕಾಯುತ್ತಿರುತ್ತಾರೆ. ಆಗ ಎಲ್ಲರ ಕೈನಲ್ಲೂ ಖರ್ಜೂರ ಮತ್ತು ನೀರು ಸಿದ್ಧವಾಗಿರುತ್ತದೆ. ‘ಅಲ್ಲಾ ಹೋ ಅಕ್ಬರ್‌’ ಎಂಬ ಪವಿತ್ರ ಸಾಲು ಕೇಳಿ ಬರುತ್ತಿದ್ದಂತೆಯೇ ಆ ದಿನದ ಉಪವಾಸವನ್ನು ಮುರಿಯುತ್ತಾರೆ.

Vijayapura: ರಂಜಾನ್ ಹಿನ್ನಲೆ ಪ್ರಯುಕ್ತ ಗುಮ್ಮಟನಗರಿಯಲ್ಲಿ ನಂದಿನಿ ಹಾಲಿಗೆ ಹೆಚ್ಚಿದ ಬೇಡಿಕೆ!

ಪಾವಿತ್ರ್ಯ ಕಾಪಾಡಲು ರಂಜಾನ್‌ ಮಾಸ

ಇಸ್ಲಾಂ ಧರ್ಮದ ಪ್ರವರ್ತಕ ಪ್ರವಾದಿ ಮಹಮ್ಮದರು ಕೆಡುಕಿನಿಂದ ಸಮಾಜವನ್ನು ಮುಕ್ತಗೊಳಿಸಲು ತಮ್ಮದೇ ಆದ ತತ್ವಾದರ್ಶಗಳ ತಳಹದಿಯ ಮೇಲೆ ಇಸ್ಲಾಂ ಧರ್ಮವನ್ನು ಸ್ಥಾಪಿಸಿದರು. ಈ ಸಮಾಜದ ಪಾವಿತ್ರ್ಯತೆಯನ್ನು ಕಾಪಾಡಲು ಸೂಕ್ತ ವ್ಯಕ್ತಿತ್ವವನ್ನು, ವ್ಯಕ್ತಿಗಳನ್ನು ನಿರ್ಮಿಸಲು ‘ರಂಜಾನ್‌’ ಎಂಬ ಈ ಪವಿತ್ರ ತಿಂಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದೊಂದು ರೀತಿ ಪಾಪ ಕಳೆದು ಪುಣ್ಯ ಗಳಿಸಲು ತರಬೇತುಗೊಳಿಸುವ ಒಂದು ತಿಂಗಳ ಕಾರ್ಯಾಗಾರ. ಇಲ್ಲಿ ಉಪವಾಸವೇ ಬ್ರಹ್ಮಾಸ್ತ್ರ. ಇದರಿಂದ ಏನನ್ನು ಬೇಕಾದರೂ ಗೆಲ್ಲಬಹುದು.

ಉಪವಾಸ ವ್ರತಾನುಷ್ಠಾನಕ್ಕೆ ಅಲ್ಲಾಹು ಆಯ್ಕೆ ಮಾಡಿರುವ ಈ ತಿಂಗಳಿಗೆ ‘ರಂಜಾನ್‌’ ಹೆಸರು ಬಂದಿರುವುದು ಕೂಡ ಬಹು ಅರ್ಥಪೂರ್ಣವಾಗಿದೆ. ಅರಬ್ಬರು ತಿಂಗಳುಗಳಿಗೆ ಹೆಸರು ಇಡುತ್ತಿದ್ದ ವೇಳೆ ಕಠಿಣ ತಾಪವಿತ್ತಂತೆ. ಹಾಗಾಗಿ ರಮಜಾನ್‌ ಅರ್ಥಾತ್‌ ಕಠಿಣ ಎಂಬ ಅನ್ವರ್ಥನಾಮವನ್ನು ಈ ತಿಂಗಳಿಗೆ ಇರಿಸಿದರೆಂದು ಹೇಳಲಾಗುತ್ತದೆ. ಇದಕ್ಕೆ ‘ದಹನ’ ಎಂಬ ಅರ್ಥವೂ ಉಂಟು. ಪಾಪ ಕರ್ಮಗಳನ್ನು ದಹಿಸಿ ಬಿಡುವ ತಿಂಗಳು ಎಂಬ ಅರ್ಥದಲ್ಲಿ ಈ ಹೆಸರನ್ನು ಇಡಲಾಗಿದೆಯೆಂಬ ಅಭಿಪ್ರಾಯವೂ ಇದೆ. ಒಟ್ಟಿನಲ್ಲಿ ಇದು ಸಾರ್ಥಕ ಕಾರ್ಯದ ಪುಣ್ಯ ಮಾಸ.

ರಂಜಾನ್‌ಗೆ ಮತ್ತೂ ಒಂದು ಮಹತ್ವದೆ. ಅದೆಂದರೆ ಜಗತ್ತಿನ ಮುಂದೆ ಮುಸ್ಲಿಂ ಸಮುದಾಯದ ಕೀರ್ತಿಯನ್ನು ಎತ್ತಿ ಹಿಡಿದ ಇತಿಹಾಸ ಪ್ರಸಿದ್ಧ ಬದ್‌್ರ ಯುದ್ಧ ನಡೆದದ್ದು ಈ ಮಾಸದಲ್ಲೇ. ಈ ತಿಂಗಳ ಸತ್ಕರ್ಮಕ್ಕೆ ಯಥೇಚ್ಚ ಪ್ರತಿಫಲಗಳನ್ನು ನೀಡಲು ಅಲ್ಲಾಹನು ವಾಗ್ದಾನ ಮಾಡಿದ್ದಾನೆಂಬುದು ಇಸ್ಲಾಂ ಧರ್ಮದ ನಂಬಿಕೆ. ಈ ಒಂದು ನಿರ್ದಿಷ್ಟಉಪವಾಸ ವ್ರತದ ಕಾಲದಲ್ಲಿ ಈ ಧರ್ಮದಲ್ಲಿ ನಂಬಿಕೆಯುಳ್ಳವರಾರೂ ಕಾನೂನು ಬಾಹಿರವಾದ ಯಾವುದೇ ರೀತಿಯ ಚಟುವಟಿಕೆಗಳಲ್ಲಿ ಭಾಗವಸುವಂತಿಲ್ಲ.

ರಂಜಾನ್‌ ದಾನದ ಹಬ್ಬವೂ ಹೌದು

ರಂಜಾನ್‌ ದಾನದ ಹಬ್ಬವೂ ಹೌದು. ರಂಜಾನ್‌ ಆಚರಣೆಯ ಸಂದರ್ಭದಲ್ಲಿ ಇರುವವರು ಇಲ್ಲದವರಿಗೆ ಸಾಕಷ್ಟುದಾನ-ಧರ್ಮ ಮಾಡುತ್ತಾರೆ. ಹಣವಂತರಾದ ಶ್ರೀಮಂತ ಮುಸ್ಲಿಮರು ಇಂತಿಷ್ಟುಮೊತ್ತದ ಹಣವನ್ನು ಬಡವರಿಗೆ ಅಂದು ದಾನ ಕೊಡುವಂತೆ ಪ್ರವಾದಿ ಮಹಮ್ಮದರೇ ಆಜ್ಞಾಪಿಸಿದ್ದಾರೆ. ಇದನ್ನು ಸದಾಕಾ ಉಲ್‌ ಫಿತರ್‌ (ಫಿತ್ರ್) ಎನ್ನುತ್ತಾರೆ. ಈ ಹಣ ಧಾನ್ಯದ ಬೆಲೆಯ ಮೇಲೆ ಅವಲಂಬಿಸಿರುತ್ತದೆ. ಈ ಹಣದ ಬಹುಭಾಗವನ್ನು ಹಬ್ಬದ ದಿನ ಬಡವರಿಗಾಗಿ ಖರ್ಚು ಮಾಡಲಾಗುವುದು. ಉಳಿದುದನ್ನು ಇತರೆ ಕಷ್ಟಕಾಲದಲ್ಲಿ ಬಡವರ ಸಹಾಯಕ್ಕೆ ಬಳಸಲಾಗುತ್ತದೆ.

ಪ್ರತಿ ವರ್ಷ Eid al-Fitr ದಿನಾಂಕ ಬದಲಾಗುವುದೇಕೆ?

ಕುರಾನ್‌ ಕಂಠಪಾಠ ಸ್ಪರ್ಧೆ

ಜಗತ್ತಿನ ಜನತೆಗೆ ಸನ್ಮಾರ್ಗದ ದಾರಿದೀವಿಗೆ ತೋರಿಸುವ ಮೂಲಕ ಕತ್ತಲು ಕವಿದ ಮನುಷ್ಯನ ಬಾಳಿನಲ್ಲಿ ಜ್ಞಾನದ ಪ್ರಭೆ ಚೆಲ್ಲುವ ರಂಜಾನ್‌ ಹಬ್ಬದ ಸಂದರ್ಭದಲ್ಲಿ ದೇಶ ದೇಶಗಳಲ್ಲಿ ಧಾರ್ಮಿಕ ಸೇವಾ ಸ್ಪರ್ಧೆಗಳನ್ನು ನಡೆಸುವುದೂ ಉಂಟು. ಇಂಥ ಸ್ಪರ್ಧೆಗಳಲ್ಲಿ ಕಳೆದ ಹತ್ತು ವರ್ಷಗಳಿಂದ ದುಬೈನಲ್ಲಿ ನಡೆಯುತ್ತಿರುವ ಕುರಾನ್‌ ಅವಾರ್ಡ್‌ ಕಾರ್ಯಕ್ರಮ ಬಹುಮುಖ್ಯವಾದದ್ದು. ಈ ಸ್ಪರ್ಧೆ ದುಬೈ ದೊರೆಯ ನೇತೃತ್ವದಲ್ಲಿಯೇ ನಡೆಯುತ್ತದೆ. ಈ ಸ್ಪರ್ಧೆಯಲ್ಲಿ ಪ್ರತಿವರ್ಷ ಸುಮಾರು 75ಕ್ಕೂ ಹೆಚ್ಚು ರಾಷ್ಟ್ರಗಳು ಭಾಗವಹಿಸುತ್ತವೆ.

ಪ್ರತಿ ದೇಶದ ಓರ್ವ ಸ್ಪರ್ಧಾಳು, ಅವರ ಜೊತೆಗೆ ಗುರುಗಳು ಅಥವಾ ಪೋಷಕರು ಇರುತ್ತಾರೆ. ಇವರುಗಳ ಖರ್ಚು ವೆಚ್ಚಗಳನ್ನೆಲ್ಲಾ ದುಬೈ ಸರ್ಕಾರವೇ ಭರಿಸುತ್ತದೆ. ಈ ಸ್ಪರ್ಧೆಯ ವಿಜೇತರಿಗೆ ಹತ್ತು ಸ್ಥಾನದವರೆಗೂ ಭಾರಿ ಬಹುಮಾನವಿದ್ದು, ಪ್ರಥಮ ಬಹುಮಾನ 90 ಲಕ್ಷ ರುಪಾಯಿ. ಕುರಾನ್‌ ಕಂಠಪಾಠ ಮಾಡುವವರ ಸಂಖ್ಯೆ ಬೆಳೆಯಬೇಕೆಂಬುದು ಈ ಸ್ಪರ್ಧೆಯ ಸದಾಶಯವಾಗಿದೆ.

ಒಟ್ಟಾರೆ ರಂಜಾನ್‌ ಜಗತ್ತಿನ ಆಕರ್ಷಣೆಯ ಸಾತ್ವಿಕ ಭಾವದ ಹಬ್ಬ. ಹಾಗೆಯೇ ಉಪವಾಸದ ಮಹತ್ವವನ್ನು ಜಗತ್ತಿಗೇ ಸಾರುವ ಪತ್ರ ಮಾಸವೂ ಹೌದು. ಇಂಥ ‘ರಂಜಾನ್‌’ ಎಲ್ಲರಿಗೂ ಒಳಿತನ್ನುಂಟು ಮಾಡಲಿ.

- ಬನ್ನೂರು ಕೆ. ರಾಜು

click me!