ಮಾಂಗಲ್ಯಧಾರಣೆ ಮಹತ್ವ, ಪ್ರಯೋಜನಗಳು!

By Suvarna News  |  First Published Aug 9, 2021, 5:11 PM IST

ವಿವಾಹಿತ ಮಹಿಳೆಯರು ಧರಿಸುವ ಮಂಗಳಸೂತ್ರಕ್ಕೆ ಹಿಂದೂ ಸಂಪ್ರದಾಯದಲ್ಲಿ ಹೆಚ್ಚು ಮಹತ್ವವಿದೆ. ಮಂಗಳ ಸೂತ್ರವನ್ನು ಧರಿಸಿದ ಮಹಿಳೆಯರು ಮನೆಗೆ ಸಮೃದ್ಧಿ ಮತ್ತು ಖುಷಿಯನ್ನು ತರುತ್ತಾರೆ ಎಂದು ಹೇಳಲಾಗುತ್ತದೆ. ಮಂಗಳ ಸೂತ್ರವನ್ನು ಅಥವಾ ಮಾಂಗಲ್ಯವನ್ನು ಧರಿಸುವುದರಿಂದ ಅನೇಕ ಪ್ರಯೋಜನಗಳಿವೆ ಅವುಗಳ ಬಗ್ಗೆ ತಿಳಿಯೋಣ....
 
 


ಸನಾತನ ಸಂಸ್ಕೃತಿ ಮತ್ತು ಹಿಂದೂ ಸಂಪ್ರದಾಯದ ಸಂಸ್ಕಾರಗಳಲ್ಲಿ ವಿವಾಹವು ಒಂದು. ವಿವಾಹ ಸಮಯದಲ್ಲಿ ಪತಿ ಪತ್ನಿಯಾಗುವವಳಿಗೆ ಹಾಕುವ ಮಾಂಗಲ್ಯಕ್ಕೆ ವಿಶೇಷ ಮಹತ್ವವಿದೆ. ಮಾಂಗಲ್ಯವು ಸ್ತ್ರೀಗೆ ಸೌಭಾಗ್ಯ, ಮುತ್ತೈದೆಯ ಸಂಕೇತ. ಮಂಗಳಸೂತ್ರವನ್ನು ಶಿವ ಮತ್ತು ಶಕ್ತಿಯ ಐಕ್ಯತೆಯ ಪ್ರತೀಕವೆಂದು ಹೇಳುತ್ತಾರೆ.
ಧಾರ್ಮಿಕ ನಂಬಿಕೆಯ ಪ್ರಕಾರ ಕರಿಮಣಿ ಅಥವಾ ಮಂಗಳಸೂತ್ರವನ್ನು ಧರಿಸುವುದರಿಂದ ಪತಿ-ಪತ್ನಿಯರಲ್ಲಿ ಅನ್ಯೋನ್ಯ ಬಾಂಧವ್ಯ ಏರ್ಪಡುತ್ತದೆ. ವಿವಾಹಿತೆ ಯಾವಾಗಲೂ ಮಾಂಗಲ್ಯ ಧರಿಸಿರುವುದರಿಂದ ಆಕೆಯ ಪತಿಯ ಆರೋಗ್ಯ, ಆಯುಷ್ಯ ಮತ್ತು ಸಂಸಾರದ ಏಳಿಗೆಗೆ ಉತ್ತಮ ಎಂಬುದು ಧಾರ್ಮಿಕ ನಂಬಿಕೆ.
ಮಂಗಳಸೂತ್ರವನ್ನು ಧರಿಸಿಯೇ ಇರುವುದರಿಂದ ಸ್ತ್ರೀಯಲ್ಲಿರುವ ಶಿವ ಸದಾ ಜಾಗೃತವಾಗಿರುತ್ತದೆ. ವೈವಾಹಿಕ ಜೀವನಕ್ಕೆ ಯಾವುದೇ ಕೆಟ್ಟ ದೃಷ್ಟಿ ಬೀಳದಂತೆ ಕರಿಮಣಿ ಕಾಪಾಡುತ್ತದೆ.

ವೈಜ್ಞಾನಿಕ ಕಾರಣಗಳು
ಮಂಗಳಸೂತ್ರದ ಮಧ್ಯದಲ್ಲಿ “ತಾಳಿ” ಇರುತ್ತದೆ. ಅದು ಗುಂಡಾಗಿದ್ದು ಅದರ ಮೇಲೆ ಯಾವುದೇ ಡಿಸೈನ್ ಇರುವುದಿಲ್ಲ. ಈ ರೀತಿ ಇರುವುದಕ್ಕೂ ಕಾರಣವಿದೆ. ತಾಳಿ ಗುಂಡಾಗಿರುವುದರಿಂದ ಜ್ಞಾನ ಶಕ್ತಿಯನ್ನು ಹೆಚ್ಚಿಸುತ್ತದೆ. ಇದಕ್ಕೆ ಮನಸ್ಸಿನ್ನಾಲ್ಲಾಗುವ ಉದ್ವೇಗ ತರಂಗಗಳನ್ನು ನಿಯಂತ್ರಿಸುವ ಶಕ್ತಿ ಇರುತ್ತದೆ. ಬೇರೆ ಯಾವುದೇ ಆಕಾರಗಳಿಗೆ ಈ ಶಕ್ತಿ ಇರುವುದಿಲ್ಲ. ತಾಳಿಯ ಆಕಾರವು ಸಾತ್ವಿಕ ಗುಣವನ್ನು ವೃದ್ಧಿಸುತ್ತದೆ.   

ಇದನ್ನು ಓದಿ: ರುದ್ರಾಭಿಷೇಕದಿಂದ ವ್ಯಾಪಾರದಲ್ಲಿ ಪ್ರಗತಿ - ಧನಲಾಭ..!

ಕೆಟ್ಟ ದೃಷ್ಟಿಯಿಂದ ರಕ್ಷಣೆ
ವಿವಾಹದ ಸಮಯದಲ್ಲಿ ಮಧುಮಗಳ ಮೇಲೆ ಎಲ್ಲರ ದೃಷ್ಟಿ ನೆಟ್ಟಿರುತ್ತದೆ. ಇದರಿಂದ ಕೆಟ್ಟ ಕಣ್ಣು ಬೀಳುವ ಸಾಧ್ಯತೆ ಹೆಚ್ಚಿರುತ್ತದೆ. ಈ ಸಂದರ್ಭದಲ್ಲಿ ಮಂಗಳಸೂತ್ರದಲ್ಲಿರುವ ಕರಿಮಣಿಯು ಅಶುಭ ಶಕ್ತಿ ಅಂದರೆ ಕೆಟ್ಟ ಶಕ್ತಿಗಳಿಂದ ರಕ್ಷಣೆ ನೀಡುತ್ತದೆ. ಹಾಗಾಗಿ ನಕಾರಾತ್ಮಕ ಶಕ್ತಿಯನ್ನು ತಡೆಯುತ್ತದೆ. ಅಷ್ಟೇ ಅಲ್ಲದೆ ತಾಳಿಯನ್ನು ಅಥವಾ ಕರಿಮಣಿಯನ್ನು ಧರಿಸಿದ್ದರೆ ಅದು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.


ಮೂರು ಗಂಟಿನ ನಂಟು
ಆಯುರ್ವೇದದ ಪ್ರಕಾರ ಮಂಗಳಸೂತ್ರದಲ್ಲಿರುವ ತಾಳಿಯ ಗುಂಡಗಿನ ಆಕಾರವು ಅನೇಕ ಪ್ರಯೋಜನಗಳನ್ನು ಒದಗಿಸುತ್ತದೆ. ಹೃದಯದ ಆರೋಗ್ಯವನ್ನು ಮತ್ತು ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುವಲ್ಲಿ ಹೆಚ್ಚು ಸಹಾಯಕವಾಗಿರುತ್ತದೆ. ಅಷ್ಟೇ ಅಲ್ಲದೆ ಮಂಗಳಸೂತ್ರದಲ್ಲಿ ಕಟ್ಟುವ ಮೂರು ಗಂಟು ವೈವಾಹಿಕ ಜೀವನದ ಮುಖ್ಯವಾದ ಮೂರು ಅಂಶಗಳನ್ನು ಹೇಳುತ್ತದೆ. ಮೊದಲನೇ ಗಂಟು ಪತಿ-ಪತ್ನಿ ಪರಸ್ಪರ ಗೌರವ ಮತ್ತು ಪ್ರೇಮವನ್ನು ತಿಳಿಸುತ್ತದೆ. ಎರಡನೇ ಗಂಟು ತಂದೆ-ತಾಯಿ ಸಮಾನರಿಗೆ ಗೌರವ ಮತ್ತು ಪ್ರೀತಿಯನ್ನು ತೋರಿಸಬೇಕೆಂದು. ಮೂರನೇ ಗಂಟು ಭಗವಂತನ ಸ್ಮರಣೆ ಮತ್ತು ಭಕ್ತಿ, ಶ್ರದ್ಧೆಗಳಿರಬೇಕೆಂದು ತಿಳಿಸುತ್ತದೆ.

ಇದನ್ನು ಓದಿ: ನೆನಪಿಡಿ, ಈ 6 ವಸ್ತುಗಳನ್ನು ಶಿವಲಿಂಗಕ್ಕೆ ಅರ್ಪಿಸಬಾರದು

ಪತಿ-ಪತ್ನಿಯ ಸ್ನೇಹದ ಸಂಕೇತ
ಶಾಸ್ತ್ರಗಳ ಪ್ರಕಾರ ಸ್ವರ್ಣವನ್ನು ಧರಿಸುವುದರಿಂದ ಶರೀರ ಶುದ್ಧವಾಗುತ್ತದೆ. ಅಷ್ಟೇ ಅಲ್ಲದೆ ಸ್ನಾನದ ಸಮಯದಲ್ಲಿ ಬಂಗಾರವನ್ನು ಸ್ಪರ್ಶಿಸಿದ ನೀರು ಮೈಮೇಲೆ ಬೀಳುವುದರಿಂದ ಪಾಪಗಳಿಂದ ಮುಕ್ತಿ ದೊರೆಯುತ್ತದೆ.

ಮಾಂಗಲ್ಯದಲ್ಲಿರುವ ಕರಿಮಣಿ
ಮಂಗಳಸೂತ್ರದಲ್ಲಿರುವ ಕರಿಮಣಿಯು ಪತಿ-ಪತ್ನಿಗೆ ತಗುಲುವ ಕೆಟ್ಟ ದೃಷ್ಟಿಯಿಂದ ರಕ್ಷಣೆಯನ್ನು ನೀಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ಅನುಸಾರ ಮಾಂಗಲ್ಯದಲ್ಲಿರುವ ಬಂಗಾರದ ಅಂಶವು ಗುರುಗ್ರಹದ ಸಕಾರಾತ್ಮಕ ಅಂಶಗಳ ವಾಹಕವಾಗಿದೆ. ಇದರಿಂದ ವೈವಾಹಿಕ ಜೀವನವು ಸುಖವಾಗಿರುವುದಲ್ಲದೆ, ಕುಟುಂಬದಲ್ಲಿ ಖುಷಿ ನೆಲೆಸಿರುತ್ತದೆ.
ಅಷ್ಟೇ ಅಲ್ಲದೆ ಕರಿಮಣಿಯ ಬಣ್ಣವು ಕಪ್ಪು, ಇದು ಶನಿಗ್ರಹವನ್ನು ಪ್ರತಿನಿಧಿಸುತ್ತದೆ. ಗುರು ಮತ್ತು ಶನಿಯ ಕೃಪೆಯಿಂದ ವೈವಾಹಿಕ ಜೀವನದಲ್ಲಿ ಎದುರಾಗುವ ಕಷ್ಟಗಳು ನಿವಾರಣೆಯಾಗುತ್ತವೆ. ಇದರಿಂದ ಇಬ್ಬರಲ್ಲಿ ಪ್ರೇಮ ಹಸಿರಾಗಿರುತ್ತದೆ. ಕರಿಮಣಿಯು ರಾಹು, ಕೇತು ಮತ್ತು ಶನಿ ಗ್ರಹದ ದುಷ್ಪ್ರಭಾವದಿಂದ ರಕ್ಷಣೆಯನ್ನು ನೀಡುತ್ತದೆ.

ಇದನ್ನು ಓದಿ: ಶ್ರಾವಣದ ಮಾಸದಲ್ಲಿ ನೆಡುವ ಈ ಐದು ಸಸ್ಯಗಳಿಂದ ಬರಲಿದೆ ಅದೃಷ್ಟ..!

ಶಂಕರಾಚಾರ್ಯರ ಸೌಂದರ್ಯ ಲಹರಿ
ಮಂಗಳ ಸೂತ್ರದ ಮಹತ್ವವನ್ನು ಆದಿಗುರು ಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿಯಲ್ಲಿ ತಿಳಿಸಲಾಗಿದೆ. ಮಾಂಗಲ್ಯವನ್ನು ಧರಿಸುವುದರಿಂದ ಮಾನಸಿಕ ಮತ್ತು ದೈಹಿಕ ಸ್ವಾಸ್ಥ್ಯ ಉತ್ತಮವಾಗಿರುತ್ತದೆ. 

click me!