ಶ್ರಾವಣ ಮಾಸದಲ್ಲಿ ರುದ್ರಾಭಿಷೇಕವನ್ನು ಮಾಡಿಸಿದರೆ ವಿಶೇಷ ಫಲ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಶ್ರಾವಣ ಸೋಮವಾರ, ಶಿವರಾತ್ರಿ, ಮತ್ತು ನಾಗರ ಪಂಚಮಿಯ ದಿನಗಳು ರುದ್ರಾಭಿಷೇಕವನ್ನು ಮಾಡಿಸಲು ಅತ್ಯಂತ ಪ್ರಶಸ್ತವಾದ ದಿನಗಳೆಂದು ಹೇಳಲಾಗುತ್ತದೆ. ಧನಸಂಪತ್ತು ವೃದ್ಧಿಸಲು ಮತ್ತು ವ್ಯಾಪಾರದಲ್ಲಿ ಲಾಭವನ್ನು ಗಳಿಸಲು ರುದ್ರಾಭಿಷೇಕದ ಬಗ್ಗೆ ತಿಳಿಯೋಣ..
ಪರಶಿವನ ಕೃಪೆ ಪಡೆಯಲು ಶ್ರಾವಣ ಮಾಸ ಶ್ರೇಷ್ಠವೆಂದು ಹೇಳಲಾಗುತ್ತದೆ. ಶ್ರಾವಣ ಮಾಸದಲ್ಲಿ ಸೋಮವಾರ ವ್ರತವನ್ನು ಕೈಗೊಳ್ಳುವುದು ಮತ್ತು ರುದ್ರಾಭಿಷೇಕವನ್ನು ಮಾಡಿಸುವುದರಿಂದ ಪುಣ್ಯ ಲಭಿಸುವುದಲ್ಲದೆ, ಸಮಸ್ಯೆಗಳು ನಿವಾರಣೆಯಾಗಿ ಸುಖ-ಸಮೃದ್ಧಿ ನೆಲೆಸುತ್ತದೆ. ಹಾಗಾದರೆ ರುದ್ರಾಭಿಷೇಕದ ಮಹತ್ವದ ಬಗ್ಗೆ ತಿಳಿಯೋಣ.
ರುದ್ರಾಭಿಷೇಕದಿಂದ ಆಗುವ ಲಾಭಗಳು
ವಿಧಿ-ವಿಧಾನಗಳಿಂದ ರುದ್ರಾಭಿಷೇಕವನ್ನು ಮಾಡಿಸಿದಲ್ಲಿ ಶಿವನ ಕೃಪೆ ಬಹುಬೇಗ ಪ್ರಾಪ್ತವಾಗುತ್ತದೆ. ಅಶುಭ ಗ್ರಹಗಳು ಶುಭಫಲವನ್ನು ನೀಡುತ್ತವೆ. ಜ್ಯೋತಿಷ್ಯದ ಅನುಸಾರ ರುದ್ರಾಭಿಷೇಕದ ಮಂತ್ರವು ಶಿವನನ್ನು ಪ್ರಸನ್ನಗೊಳಿಸುವ ಅದ್ಭುತ ಮಂತ್ರವೆಂದು ಹೇಳಲಾಗುತ್ತದೆ. ಇದರಿಂದ ಪರಶಿವನ ಅನುಗ್ರಹ ಬೇಗ ಪ್ರಾಪ್ತವಾಗುತ್ತದೆ. ಅಷ್ಟೇ ಅಲ್ಲದೆ ಶನಿದೋಷ ನಿವಾರಣೆಗೆ ಸಹ ರುದ್ರಾಭಿಷೇಕವನ್ನು ಮಾಡಿಸಲಾಗುತ್ತದೆ.
ಇದನ್ನು ಓದಿ: ನೆನಪಿಡಿ, ಈ 6 ವಸ್ತುಗಳನ್ನು ಶಿವಲಿಂಗಕ್ಕೆ ಅರ್ಪಿಸಬಾರದು
ರುದ್ರಾಭಿಷೇಕಕ್ಕೆ ಅದರದ್ದೇ ಆದ ಮಹತ್ವವಿದೆ. ರುದ್ರಾಭಿಷೇಕವನ್ನು ಮಾಡುವುದರಿಂದ ಜನ್ಮಗಳ ಪಾಪಗಳಿಂದ ಮುಕ್ತಿ ಹೊಂದಬಹುದೆಂದು ಪುರಾಣದ ಉಲ್ಲೇಖಗಳಿಂದ ತಿಳಿಯಬಹುದಾಗಿದೆ. ನಕಾರಾತ್ಮಕತೆ ದೂರವಾಗಿ ಸಕಾರಾತ್ಮಕ ಶಕ್ತಿಯು ಹೆಚ್ಚುತ್ತದೆ. ಶತ್ರುಗಳ ಪ್ರಭಾವ ಕಡಿಮೆಯಾಗುವುದಲ್ಲದೇ, ಪ್ರೇತ ಬಾಧೆಗಳಿಂದ ಮುಕ್ತಿಹೊಂದಬಹುದಾಗಿದೆ. ವಿದ್ಯಾಪ್ರಾಪ್ತಿಗೆ, ಹಣಕಾಸಿನ ಸ್ಥಿತಿ ಸುಧಾರಣೆಯಾಗಿ ಆರ್ಥಿಕವಾಗಿ ಅಭಿವೃದ್ಧಿಹೊಂದಲು, ವಿವಾಹ ವಿಳಂಬವಾಗುತ್ತಿದ್ದರೆ ಇನ್ನೂ ಮುಂತಾದ ಅನೇಕ ಸಮಸ್ಯೆಗಳಿಗೆ ರುದ್ರಾಭಿಷೇಕದಿಂದ ಉತ್ತಮ ಫಲವನ್ನು ಪಡೆಯಬಹುದಾಗಿದೆ. ಅಷ್ಟೇ ಅಲ್ಲದೇ ಸಂತಾನ ಸಮಸ್ಯೆಗೆ, ಸಾಲಗಳಿಂದ ಮುಕ್ತಿ ಪಡೆಯಲು, ರೋಗ ಶಮನಕ್ಕೆ, ಮನೆಯಲ್ಲಿ ನೆಮ್ಮದಿ ನೆಲೆಸಲು ರುದ್ರಾಭಿಷೇಕವನ್ನು ಮಾಡುವುದರಿಂದ ಒಳಿತಾಗುತ್ತದೆ. ರುದ್ರಾಭಿಷೇಕದಲ್ಲಿ ಅನೇಕ ವಿಧಗಳಿವೆ. ಸಮಸ್ಯೆಯ ಪರಿಹಾರಕ್ಕೆ ಸೂಕ್ತವಾದ ಪದಾರ್ಥಗಳಿಂದ ಅಭಿಷೇಕ ಮಾಡಿಸಿದಲ್ಲಿ ಉತ್ತಮ ಫಲವನ್ನು ಹೊಂದಬಹುದಾಗಿದೆ.
ಇದನ್ನು ಓದಿ: ಶ್ರಾವಣದ ಮಾಸದಲ್ಲಿ ನೆಡುವ ಈ ಐದು ಸಸ್ಯಗಳಿಂದ ಬರಲಿದೆ ಅದೃಷ್ಟ..!
ರುದ್ರಾಭಿಷೇಕವನ್ನು ಯಾವಾಗ ಮಾಡಬೇಕು?
ಹಿಂದೂ ಧರ್ಮಗ್ರಂಥಗಳ ಅನುಸಾರ ಶ್ರಾವಣದಲ್ಲಿ ಮಾಡುವ ರುದ್ರಾಭಿಷೇಕ ವಿಶೇಷ ಫಲವನ್ನು ನೀಡುತ್ತದೆ. ಅದರಲ್ಲೂ ವಿಶೇಷವಾಗಿ ಶ್ರಾವಣ ಮಾಸದ ಸೋಮವಾರಗಳಂದು ಮಾಡುವ ರುದ್ರಾಭಿಷೇಕದಿಂದ ಇಷ್ಟಾರ್ಥಗಳು ಪೂರ್ತಿಯಾಗುವುದಲ್ಲದೆ, ಸಕಲ ಕಷ್ಟಗಳು ನಾಶವಾಗಿ ಪುಣ್ಯ ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಮಹಾಶಿವರಾತ್ರಿ ಮತ್ತು ನಾಗರ ಪಂಚಮಿಯ ದಿನಗಳಂದು ಮಾಡಿಸುವ ರುದ್ರಾಭಿಷೇಕವು ವಿಶೇಷ ಫಲವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.
ಯಾವ ಮನೋಭಿಲಾಷೆ ಪೂರ್ತಿಗೊಳ್ಳಲು ಯಾವ ವಸ್ತುವಿನಿಂದ ರುದ್ರಾಭಿಷೇಕ ಮಾಡಬೇಕು?
- ಜಲಾಭಿಷೇಕವನ್ನು ಮಾಡುವುದರಿಂದ ಶಿವನ ಕೃಪೆ ಪ್ರಾಪ್ತವಾಗುವುದಲ್ಲದೆ, ಧನ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.
- ಮನೆ ಅಥವಾ ಆಸ್ತಿಗೆ ಸಂಬಂಧಿಸಿದಂತೆ ಲಾಭವನ್ನು ಪಡೆಯಬೇಕೆಂದಿದ್ದರೆ ಮೊಸರಿನಿಂದ ರುದ್ರಾಭಿಷೇಕವನ್ನು ಮಾಡಬೇಕು.
- ಜೇನು ತುಪ್ಪ ಮತ್ತು ತುಪ್ಪದಿಂದ ರುದ್ರಾಭಿಷೇಕವನ್ನು ಮಾಡಿಸಿದಲ್ಲಿ ಹಣ ಮತ್ತು ಸಂಪತ್ತು ವೃದ್ಧಿಸುತ್ತದೆ.
- ರೋಗಗಳಿಂದ ಮುಕ್ತಿ ಪಡೆಯಲು ದರ್ಬೆ ಸಹಿತ ಜಲದಿಂದ ರುದ್ರಾಭಿಷೇಕವನ್ನು ಮಾಡಿಸಬೇಕೆಂದು ಹೇಳಲಾಗುತ್ತದೆ.
- ಹಸುವಿನ ಹಾಲಿನಿಂದ ರುದ್ರಾಭಿಷೇಕವನ್ನು ಮಾಡಿಸುವುದರಿಂದ ಪುತ್ರಸಂತಾನದ ಬಯಕೆ ಈಡೇರುತ್ತದೆ ಎಂದು ಹೇಳಲಾಗುತ್ತದೆ.
- ಶತ್ರುಗಳಿಂದ ಮುಕ್ತಿ ಪಡೆಯಲು ಎಳ್ಳೆಣ್ಣೆಯಿಂದ ರುದ್ರಾಭಿಷೇಕವನ್ನು ಮಾಡಿಸಬೇಕೆಂದು ಹೇಳಲಾಗುತ್ತದೆ.
- ಜ್ಯೋತಿಷ್ಯದ ಪ್ರಕಾರ ಶಿಕ್ಷಣದಲ್ಲಿ ಪ್ರಗತಿಯನ್ನು ಸಾಧಿಸಲು ಹಾಲಿಗೆ ಸಕ್ಕರೆಯನ್ನು ಸೇರಿಸಿ ರುದ್ರಾಭಿಷೇಕವನ್ನು ಮಾಡಿದರೆ ಉತ್ತಮವೆಂದು ಹೇಳಲಾಗುತ್ತದೆ.
- ಧನಪ್ರಾಪ್ತಿ ಮತ್ತು ಸಾಲದಿಂದ ಮುಕ್ತಿ ಪಡೆಯಲು ರುದ್ರಾಭಿಷೇಕವನ್ನು ಕಬ್ಬಿನ ರಸದಿಂದ ಮಾಡಿದರೆ ಒಳ್ಳೆಯದೆಂದು ಹೇಳಲಾಗುತ್ತದೆ.
ಇದನ್ನು ಓದಿ: ಭಯಾನಕ ಸ್ವಪ್ನಗಳು ಬಿದ್ದರೆ, ಬೀಳುತ್ತಿದ್ದರೆ ಹೀಗೆ ಮಾಡಿ!!
ರುದ್ರಾಭಿಷೇಕದ ವಿಧಾನ
ಪ್ರಥಮ ಪೂಜಕ ಗಣೇಶನನ್ನು ಮೊದಲು ಪೂಜಿಸಬೇಕು. ನಂತರ ರುದ್ರಾಭಿಷೇಕಕ್ಕೆ ಸಂಕಲ್ಪವನ್ನು ಮಾಡಿಕೊಳ್ಳಬೇಕು. ವಿಧಾನದಂತೆ ಶಿವ-ಪಾರ್ವತಿ ಮತ್ತು ಎಲ್ಲ ದೇವತೆಗಳ ಹಾಗೂ ನವಗ್ರಹಗಳ ಪೂಜೆ ಮಾಡಬೇಕು. ಬಳಿಕ ರುದ್ರಾಭಿಷೇಕವನ್ನು ಮಾಡುತ್ತಿರುವ ಉದ್ದೇಶವನ್ನು ಹೇಳಲಾಗುತ್ತದೆ ಜೊತೆಗೆ ರುದ್ರಾಭಿಷೇಕದ ಪ್ರಕ್ರಿಯೆಗಳು ಆರಂಭವಾಗುತ್ತದೆ. ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳಿತು ಪೂಜೆ ಸಲ್ಲಿಸಬೇಕು. ಗಂಗಾಜಲದಿಂದ ಶಿವನಿಗೆ ಅಭಿಷೇಕವನ್ನು ಮಾಡಬೇಕು. ನಂತರ ವಿಧಿವತ್ತಾದ ರುದ್ರಾಭಿಷೇಕವನ್ನು ಮಾಡಬೇಕು. ಕೊನೆಯಲ್ಲಿ ನೈವೇದ್ಯವನ್ನು ಅರ್ಪಿಸಿ ಆರತಿಯನ್ನು ಮಾಡಲಾಗುತ್ತದೆ. ಮುಖ್ಯವಾಗಿ ರುದ್ರಾಭಿಷೇಕವನ್ನು ಸರಿಯಾದ ವಿಧಿ-ವಿಧಾನಗಳಿಂದ ನೇರವೇರಿಸುವ ವಿದ್ವಾನ್ ಪುರೋಹಿತರಿಂದ ಮಾಡಿಸಿದರೆ ಪುಣ್ಯ ಫಲಪ್ರಾಪ್ತಿಯಾಗುತ್ತದೆ.