Ugadi 2022: ಶುಭ ನುಡಿಯಲಿ ಶುಭಕೃತ್‌ ಸಂವತ್ಸರ

Published : Apr 02, 2022, 03:02 PM IST
Ugadi 2022: ಶುಭ ನುಡಿಯಲಿ ಶುಭಕೃತ್‌ ಸಂವತ್ಸರ

ಸಾರಾಂಶ

ಬೇವು-ಬೆಲ್ಲವನ್ನು ತಿನ್ನುವುದು ಜೀವನ ಪಾಠಕ್ಕೆ ಸಾಂಕೇತಿಕವಾಗಿ ಮಾತ್ರವಲ್ಲ, ಅದು ದೇಹದ ಆರೋಗ್ಯಕ್ಕೂ ಕೊಂಡಿಯಾಗಿದೆ. ಬೇವು ದೇಹದೊಳಗಣ ಅನಾರೋಗ್ಯಕರ ಅಂಶಗಳನ್ನು, ವಿಷವನ್ನು ನಿವಾರಿಸಲು ದಿನೌಷಧಿ. 

ತೇಜಸ್ವಿನೀ ಹೆಗಡೆ

‘ಅಜ್ಜಿ ನಂಗೆ ಬೆಲ್ಲ ಜಾಸ್ತಿ ಬೇಕು... ಕಹಿ ಕಡಿಮೆ ಕೊಡು..’ ಪ್ರತಿ ಯುಗಾದಿಯಂದೂ ನಾವು ಮಕ್ಕಳು ಬೇವು-ಬೆಲ್ಲ ತಿನ್ನುವ ಸಮಯದಲ್ಲಿ ಅಜ್ಜಿಯನ್ನು ಕಾಡುವುದು ಹೀಗೇ ಆಗಿರುತ್ತಿತ್ತು. ಬಾಯೆಲ್ಲ ಒಗರಾಗಿ, ನಾಲಿಗೆಗೆ ಅಪ್ರಿಯವಾಗುವ ಬೇವು ನಮಗೆ ಸದಾ ಬೇಡವಾಗಿರುತ್ತಿತ್ತು. ಮನಸ್ಸಿಗೆ ಅಹಿತ, ದೇಹಕ್ಕೆ ಹಿತವಾಗಿರುವುದು ಯಾರಿಗೆ ಸುಲಭದಲ್ಲಿ ಬೇಕೆನ್ನಿಸುತ್ತದೆ? ಅದರಲ್ಲೂ ಮಕ್ಕಳಾದ ನಮಗಂತೂ ದೊಡ್ಡ ದೊಡ್ಡ ಬೆಲ್ಲದ ತುಂಡನ್ನು ಆರಿಸಿ ಮೆಲ್ಲುವುದೆಂದರೆ ಪರಮ ಖುಶಿಯ ಸಂಗತಿ. ಅದೇನೋ ಎಂತೋ ಸಾಮಾನ್ಯ ದಿನಗಳಲ್ಲೂ ಬೇಕೆನಿಸಿದಾಗೆಲ್ಲ ಬೆಲ್ಲವನ್ನು ತಿನ್ನಬಹುದಾಗಿದ್ದರೂ ಯುಗಾದಿಯ ದಿನದಂದೇ ಬೇವಿನ ನಡುವೆ ಹುದುಗಿ ಅಡಗಿರುವ ಬೆಲ್ಲದ ತುಣುಕುಗಳನ್ನು ಆಯ್ದು ತಿನ್ನುವುದರಲ್ಲಿ ಒಂದು ರೀತಿ ಬೇರೆಯೇ ತೃಪ್ತಿ ಇರುತ್ತಿತ್ತು.

ಯಾರಿಗೆ ಎಷ್ಟುದೊಡ್ಡ ತುಂಡುಗಳು ಸಿಕ್ಕಿವೆಯೋ, ಯಾರ ಕೈಯೊಳಗೆ ಹೆಚ್ಚು ಬೆಲ್ಲದ ತುಣುಕುಗಳಿರುತ್ತವೆಯೋ ಅವರಿಗೆ ಆ ವರ್ಷದ ದೊಡ್ಡ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳು ಸಿಗುತ್ತವೆ ಎನ್ನುವುದು ನಮ್ಮ ಬಲವಾದ ನಂಬಿಕೆಯಾಗಿತ್ತು. ನನ್ನ ಶಾಲೆಯ ಮೇಷ್ಟೊ್ರಬ್ಬರು ಹೇಳುತ್ತಿದ್ದ ಮಾತೊಂದು ಆಗಾಗ ನೆನಪಾಗುತ್ತಿರುತ್ತದೆ. ‘ಕಷ್ಟ-ಸುಖ ಎರಡೂ ಬದುಕಲ್ಲಿ ಬರುವಂಥದ್ದೇ ಮಕ್ಳೇ. ಎರಡನ್ನೂ ಸ್ವೀಕರಿಸುವ ಮನಸ್ಸು ಇರಬೇಕು ನಿಜ. ಆದರೆ ರಾಶಿ ಕಷ್ಟಬಂದಾಗ ಹಿಂದೆ ಅನುಭವಿಸಿದ ಹಲವು ಸಂತಸದ ಕ್ಷಣಗಳನ್ನು ಮೆಲುಕು ಹಾಕುತ್ತಿರಬೇಕು. ಇದರಿಂದ ಇಂದಿನ ಸಂಕಷ್ಟಗಳು ಹೆಚ್ಚು ಬಾಧಿಸವು. ಅದೇ ಸಂಕೇತವಾಗಿ ನಾವು ಸ್ವಲ್ಪ ಕಹಿಬೇವಿನ ಪುಡಿ ಮೆತ್ತಿರುವ ಬೆಲ್ಲದ ತುಂಡನ್ನೇ ಹೆಚ್ಚು ತಿನ್ನೋಣ’ ಎಂದೇ ಹೇಳುತ್ತಿದ್ದರು.

ಬೇವು-ಬೆಲ್ಲವನ್ನು ತಿನ್ನುವುದು ಜೀವನ ಪಾಠಕ್ಕೆ ಸಾಂಕೇತಿಕವಾಗಿ ಮಾತ್ರವಲ್ಲ, ಅದು ದೇಹದ ಆರೋಗ್ಯಕ್ಕೂ ಕೊಂಡಿಯಾಗಿದೆ. ಬೇವು ದೇಹದೊಳಗಣ ಅನಾರೋಗ್ಯಕರ ಅಂಶಗಳನ್ನು, ವಿಷವನ್ನು ನಿವಾರಿಸಲು ದಿನೌಷಧಿ. ಆದರೆ ಕಹಿ ಬೇವಿನಲ್ಲಿ ವಾತದ ದೋಷವೂ ಇರುವುದರಿಂದ ಈ ಸಮಸ್ಯೆಗೆ ರಾಮಬಾಣವಾಗಿ ಸಿಹಿಯಾದ ಬೆಲ್ಲವನ್ನೂ ಬೆರಸಿ ನೀಡಲಾಗುತ್ತದೆ. ಇದರ ಜೊತೆಗೇ ಹಲವರು ತುಸು ಜೀರಿಗೆ ಹಾಗೂ ಓಮ ಕಾಳನ್ನೂ ಬೆರೆಸುತ್ತಾರೆ. ಇದು ಉಷ್ಣ ಪಿತ್ತಗಳ ನಿವಾರಣೆಗೆ ಸಹಕಾರಿ. ಇದನ್ನೇ ಈಗ ನಾವು ನಮ್ಮ ಮಕ್ಕಳಿಗೂ ಹೇಳುತ್ತಿರುತ್ತೇವೆ. ಆದರೆ ಯುಗಾದಿಯ ದಿನ ಅವರೂ ಬೆಲ್ಲವನ್ನು ಹೆಚ್ಚು ಆಯುವುದು, ಅದಕ್ಕಾಗಿ ಹಠ ಹಿಡಿಯುವುದನ್ನೆಲ್ಲ ನೋಡುವಾಗ ನಮ್ಮ ಬಾಲ್ಯ ನೆನಪಾಗಿ ನಗು ಮೂಡುತ್ತದೆ. ಇದೊಂಥರ ಚಕ್ರದಂತೇ. ಎಲ್ಲವೂ ಒಂದಲ್ಲ ಒಂದು ರೂಪದಲ್ಲಿ ಪ್ರತಿ ಯುಗಾದಿಯಲ್ಲೂ ನಡೆಯುತ್ತಿರುತ್ತದೆ. ಅದಕ್ಕಾಗಿಯೇ ಕಾಲವನ್ನು ಚಕ್ರಕ್ಕೆ ಹೋಲಿಸಿದ್ದು. ಶಂಕರಾಚಾರ್ಯರು ಇದೇ ಅರ್ಥದಲ್ಲೇ ತಮ್ಮ ‘ಮೋಹ ಮುದ್ಗರಂ’ ಸ್ತೋತ್ರದಲ್ಲಿ ‘ಪುನರಪಿ ಜನನಂ ಪುನರಪಿ ಮರಣಂ ಪುನರಪಿ ಜನನೀಜಠರೇ ಶಯನಮ್‌’ ಎಂದು ಹೇಳಿದ್ದಾರೆ. ಹಾಗೆ ನೋಡಿದರೆ ಹುಟ್ಟು-ಸಾವು ಮಾತ್ರವಲ್ಲ... ಅವುಗಳ ನಡುವಿನ ಬದುಕಿನಲ್ಲೂ ಮಾನವ ಪ್ರತಿ ವರುಷ ಅದದೇ ಅನುಭವಗಳನ್ನು ಮತ್ತೆಮತ್ತೆ ಅನುಭವಿಸುತ್ತಲೇ ಇರುತ್ತಾನೆ. ಇದಕ್ಕೆ ಆದಿ ಅಂತ್ಯಗಳನ್ನು ಹುಡುಕುವುದು ಸಾಧ್ಯವಿಲ್ಲ.

ಪುನರಪಿ ಜನನಂ ಪುನರಪಿ ಮರಣಂ ಚಕ್ರ
ಗತಿಯೊಳಗೆ ದಿನಾ ಬೆಳಕಿಗೆ ಎದ್ದು
ಕತ್ತಲೆಗೆ ಬಿದ್ದು ಸುತ್ತುತ್ತಲೇ ಇರುವ
ಈ ಭವ ಭವದ ಮಧ್ಯೆ ಪ್ರಭವ
ನಾಮ ಸಂವತ್ಸರದಲ್ಲಿ ನಿಂತಿರುವ ಈ ನನಗೆ
ಯಾವುದು ಮೊದಲು, ಯಾವುದು ಕೊನೆ?

ಎಂದು ನಮ್ಮ ರಾಷ್ಟ್ರಕವಿ ಜಿ.ಎಸ್‌.ಶಿವರುದ್ರಪ್ಪನವರು ತಮ್ಮ ಕವಿತೆಯೊಂದರಲ್ಲಿ ಪ್ರಶ್ನಿಸಿದ್ದಾರೆ. ಪ್ರಭವ ನಾಮ ಸಂವತ್ಸರದಲ್ಲಿ ಆರಂಭವಾಗುವ ಯುಗಾದಿ ಮುಂದಿನ ಅರವತ್ತು ಸಂವತ್ಸರಗಳವರೆಗೂ ತಿರುತಿರುಗಿ, ಸುತ್ತು ಹಾಕಿ ಕ್ಷಯ ನಾಮ ಸಂವತ್ಸರದಲ್ಲಿ ಕೊನೆಗೊಂಡು ಮತ್ತೆ ಪ್ರಭವದಿಂದಲೇ ಹೊಸ ಚಕ್ರವನ್ನು ಆರಂಭಿಸುತ್ತದೆ. ಪ್ರತಿ ಸಂವತ್ಸರವೂ ಹೊಸತೇ. ಆದರೆ ಈ ಹೊಸತು ಕಾಣುವುದು ನಾವು ಕಾಣುವ ನೋಟದಲ್ಲಿ, ಬದುಕುವ ರೀತಿಯಲ್ಲಿ, ಆಡುವ ಮಾತಿನಲ್ಲಿ. ಈ ‘ಹೊಸತು’ ಎನ್ನುವುದು ಹುಟ್ಟುವುದು, ಬೆಳೆಯುವುದು, ವಿಸ್ತಾರಗೊಳ್ಳುವುದು ಮನುಜನ ಮನಸಿನೊಳಗೆ! ಈ ಪದದ ಮಹಾತ್ಮೆಯೇ ಅಂಥದ್ದು. ವರುಷ ಉಳಿದೆಲ್ಲ ಹಬ್ಬಗಳಿಗೆ ನಾಂದಿಯಾಗಿರುವ ‘ಯುಗಾದಿ’ ಹಬ್ಬದಿಂದಲೇ ಹಳತು ತನ್ನ ಪೊರೆ ಕಳಚಿ ಹಾಕಿ ಹೊಸತನ್ನು ಹೊದ್ದುಕೊಂಡು ಹೊಳಪುಗೊಳ್ಳುವುದು.

ಯುಗದ ನೊಗವ ಹೊತ್ತ ಯುಗಾದಿ
ವರ್ಷಾದಿಯ ತಿಳಿನಗೆಯ ಮೊಗವೆ
ಶುಭ ಯುಗಾದಿ ಕರೆವ ಸೊಗವೆ
ಋುತುಗಳ ಗಣನಾಯಕ
ಶರಣೆನ್ನುವೆ ಶುಭದಾಯಕ ( ಕೆ.ಎಸ್‌. ನಿಸಾರ್‌ ಅಹಮದ್‌)

ಯುಗಾದಿ ಎಂದರೆ ಯುಗದ ಆರಂಭ ಎಂದರ್ಥ. ಯುಗ ಎನ್ನುವ ಶಬ್ದಕ್ಕೆ ನೊಗ, ಜೋಡಿಯ ಪದಾರ್ಥ, ಕಾಲ ವಿಶೇಷ - ಹೀಗೆ ಮೂರು ಪ್ರಸಿದ್ಧ ಅರ್ಥಗಳಿವೆ ಎನ್ನಲಾಗಿದೆ. ಸಂವತ್ಸರ ಎಂದರೆ ವರ್ಷ. ಋುತುಗಳು ಬದಲಾಗುವ ಸಮಯ. ಋುತುಗಳ ರಾಜನಾದ ವಸಂತನು ಬರುವ ಕಾಲಕ್ಕೇ ಹೊಸ ಸಂವತ್ಸರದ ಆರಂಭವೂ ಆಗುವುದು. ಪ್ರಪಂಚದಲ್ಲಿ ಯಾವುದಾದರೂ ಒಂದು ದಿನವನ್ನು ಹೊಸ ವರುಷದ ಆರಂಭವಾಗಿ ಆಚರಿಸಲ್ಪಡುತ್ತದೆ. ಇರಾನಿಗರು ಸರಿಸುಮಾರು ವಸಂತ ಮಾಸದ ಸಮಯದಲ್ಲೇ ಹೊಸವರುಷದ ಆರಂಭವನ್ನು ‘ನೌರೋಜ್‌’ ಎಂಬ ಹೆಸರಿನಡಿಯಲ್ಲಿ ಆಚರಿಸುತ್ತಾರೆ. ಸದ್ಯ ಜಗತ್ತಿನಾದ್ಯಂತ ಇಂಗ್ಲೀಷ್‌ ಪದ್ಧತಿಯ ಪ್ರಕಾರ (ವ್ಯಾವಹಾರಿಕವಾಗಿ) ಜನವರಿ ಒಂದನ್ನೇ ಹೊಸ ವರುಷವನ್ನಾಗಿ ಆಚರಿಸುತ್ತಿದ್ದರೂ, ನಮ್ಮ ಮಹರ್ಷಿಗಳು ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣಗಳೆಂಬ ಐದು ಅಂಗಗಳನ್ನು ಆಧರಿಸಿ ದಿನಗಣೆಯ ಲೆಕ್ಕಾಚಾರಕ್ಕಾಗಿ ಪಂಚಾಂಗವನ್ನು ರಚಸಿದ್ದಾರೆ. 

ಹೀಗಾಗಿ ನಮಗೆ ಪ್ರತಿಯೊಂದು ಶುಭ ಕಾರ್ಯಗಳ ಆರಂಭಕ್ಕೆ, ಹಬ್ಬಗಳ ಆಚರಣೆಗೆ, ಕಾಲಗಣನೆಗೆ ಈ ಪಂಚಾಂಗವೇ ಆಧಾರ. ಹೀಗಾಗಿ ಪ್ರತಿವರುಷ ಯುಗಾದಿಯಂದು ಹೊಸ ಪಂಚಾಂಗವು ಜಾರಿಗೆ ಬರುತ್ತದೆ ಮತ್ತು ಆ ದಿವಸ ಪಂಚಾಂಗ ಶ್ರವಣ ಬಹಳ ಪ್ರಮುಖವಾದದ್ದು. ವಿಶೇಷವಾಗಿ ತಮ್ಮ ಭವಿಷ್ಯದ ಕುರಿತು ತಿಳಿದುಕೊಳ್ಳುವ ಕುತೂಹಲವುಳ್ಳ, ಜ್ಯೋತಿಷ್ಯದಲ್ಲಿ ಆಸಕ್ತಿಯಿರುವ ಯುವಕ/ಯುವತಿಯರಿಗೆ ವಿಶೇಷಾಂಕಗಳಲ್ಲಿ, ಪತ್ರಿಕೆಗಳಲ್ಲಿ ಆ ವರ್ಷದ ರಾಶಿ ಭವಿಷ್ಯ ಓದುವ ಹುಮ್ಮಸ್ಸು ಹೆಚ್ಚು! ನಾವು ಹೈಸ್ಕೂಲಿನಲ್ಲದ್ದಾಗ ರಾಶಿ ಫಲದ ಪುಟವನ್ನು ಓದಲು ನಾ ಮೊದಲು, ತಾ ಮೊದಲು ಎಂದು ಗುದ್ದಾಡಿದ್ದೂ ಇದೆ. ‘ಮಳ್‌ ಮಕ್ಕಳ್ರಾ, ಒಂದೇ ರಾಶಿ ಇರುವವರು ಸಾವಿರಾರು ಜನ ಇರ್ತಾರೆ. ಎಲ್ಲರಿಗೂ ಒಂದೇ ಭವಿಷ್ಯ ಬರ್ದಿರ್ತಾರೆ ಅದ್ರಲ್ಲೆಲ್ಲಾ. ಇದನ್ನೆಲ್ಲ ನಂಬೋದಾ?’ ಎಂದು ದೊಡ್ದವರು ಬೈದರೂ ನಮ್ಮ ಕಿವಿಗೆ ಬೀಳಬೇಕೇ! ‘ಅರೆ, ನನ್ನ ರಾಶಿಯಲ್ಲಿ ಈ ವರ್ಷ ಉತ್ತಮ ಅಂಕ ಗಳಿಸುತ್ತೇನೆ ಎಂದಿದೆ’.

‘ಹೇಯ್‌.. ನಿನ್ನ ರಾಶಿಯಲ್ಲಿ ಚೆನ್ನಾಗಿ ಬೈಸಿಕೊಳ್ಳುವ ಯೋಗ ಇದೆಯಂತೆ ನೋಡು’ ಎಂದು ಪರಸ್ಪರ ಕಿಚಾಯಿಸಿಕೊಂಡು, ಕಿತ್ತಾಡಿಕೊಂಡು ವಿಶೇಷಾಂಕದ ಆ ಹಾಳೆ ಕೈಗೆ ಕಿತ್ತು ಬಂದು ದೊಡ್ಡವರಿಂದ ಚೆನ್ನಾಗಿ ಎಲ್ಲರೂ ಬೈಸಿಕೊಂಡ ಮೇಲೆ ತೆಪ್ಪಗಾಗುತ್ತಿದ್ದೆವು. ರಾಶಿ ಫಲದಲ್ಲಿ ಮುಂದೆ ಬೈಸಿಕೊಳ್ಳುವುದೆಂದು ಬರೆದಿದ್ದರೆ ನಾವು ಅಂದೇ ಪ್ರಸಾದ ಪಡೆದಾಗಿರುತ್ತಿತ್ತು. ಇನ್ನು ಮನೆಯಲ್ಲಿ ಮದುವೆಗೆ ಜಾತಕ ಹೊರಗೆ ಹಾಕಿದ್ದವರು ಇದ್ದರೆ ಅವರು ರಾಶಿ ಫಲಗಳಲ್ಲಿ ಹುಡುಕುವುದು ತಮಗೆ ಮದುವೆಗೆ ಗುರುಬಲ ಆ ವರುಷ ಇದೆಯೋ ಇಲ್ಲವೋ ಎಂಬುದರ ಕುರಿತಾಗಿರುತ್ತದೆ. ಊರಿನಲ್ಲಿ ಕೃಷಿಕರ ಗಮನವೆಲ್ಲ ಆ ವರುಷದ ಮಳೆ, ಬೆಳೆ, ಫಸಲು ಹಾನಿ, ಲಾಭ ಇತ್ಯಾದಿ ವಿಷಯಗಳ ಭವಿಷ್ಯವನ್ನು ತಿಳಿದುಕೊಳ್ಳುವುದರತ್ತ ಸಾಗಿದರೆ, ಹಲವರು ಇದನ್ನು ನಾನು ನಂಬುವುದಿಲ್ಲ ಎನ್ನುತ್ತಲೇ ಕದ್ದು ಕಣ್ಣಾಡಿಸುತ್ತಿರುತ್ತಾರೆ. ಇಂದೂ ಹಲವರು ಹಳೆಯ ಸ್ಮರಣೆಯ ಮೆಲುಕಿನಲ್ಲಿ ಮತ್ತೆ ಕೈ ಪುಟ ತಿರುವಿ ಹಾಕುವುದು ಮೊದಲು ಅದೇ ರಾಶಿ ಫಲದ ಪುಟವನ್ನೇ!

ಯುಗಾದಿ ಸಮೀಪ ಬರುತ್ತಿರುವಂತೆಯೇ ಉಪ್ಪಿನಕಾಯಿ ಹಾಕುವುದರಲ್ಲಿ ಪರಿಣಿತರಾದವರು ವಿಚಾರಿಸುವುದು ಅಪ್ಪೆಮಿಡಿಗಳಿಗಾಗಿ. ಅಲ್ಲದೇ, ಇದೇ ಸಮಯದಲ್ಲಿ ಸಿಗುವ ವರ್ಷದ ಹೊಸ ಫಲ ಮಾವಿನಕಾಯಿಯ ನೆನೆದು ಬಾಯಿ ನೀರೂರದಿರುವುದೇ! ಯುಗಾದಿಯಂದು ಬೇವು-ಬೆಲ್ಲದ ಸೇವನೆ ಎಷ್ಟುಮುಖ್ಯವೋ ಅದು ಊಟಕ್ಕೆ ಮಾವಿನಕಾಯಿಯ ಚಿತ್ರಾನ್ನವೋ, ಗೊಜ್ಜು, ಅಪ್ಪೆಹುಳಿಯನ್ನೋ ಮೆಲ್ಲುವುದೂ ಅಷ್ಟೇ ಅತ್ಯಗತ್ಯ. ಮಾವಿನಕಾಯಿ ಸಿಗದವರು ಹುಣಸೇಹಣ್ಣು ಮತ್ತು ಬೆಲ್ಲ ಹಾಕಿಯಾದರೂ ಪದಾರ್ಥ ಮಾಡುವುದಿದೆ. ಮೈತುಂಬ ಹೂ ಬಿಟ್ಟುಕೊಂಡು, ಅಲ್ಲಲ್ಲಿ ಪುಟ್ಟಕಾಯಿ ಗೊಂಚಲಿನೊಂದಿಗೆ ನಳನಳಿಸುವ ಮಾವಿನ ಮರದ ಎಳೇ ಹಸಿರು ಎಲೆಗಳ ತೋರಣವನ್ನು ಮನೆಯ ಬಾಗಿಲಿಗೆ, ದೇವರ ಕೋಣೆಯ ಎರಡೂ ಬದಿಗೆ ಸಿಂಗರಿಸುವುದನ್ನು ನೋಡಲು ಕಣ್ಣಿಗೆ ಹಬ್ಬ, ಮನಸ್ಸಿಗೆ ತಂಪು. ಸಕುಟುಂಬ ಪರಿವಾರದೊಂದಿಗೆ ಪಾಯಸವನ್ನೋ, ಹೋಳಿಗೆಯನ್ನೋ ಉಣ್ಣುತ್ತಾ, ವಿನೋದವನ್ನಾಡುತ್ತಾ, ಹುಸಿಮುನಿಸಿನ ಜಟಾಪಟಿ ಮಾಡಿಕೊಳ್ಳುತ್ತಾ ವರುಷದ ಆರಂಭವನ್ನು ಆಚರಿಸುವುದೇ ಒಂದು ದೊಡ್ಡ ಸಂಭ್ರಮ. ಇಷ್ಟಕ್ಕೂ ಹಬ್ಬ ಎಂದರೆ ಇದೇ ಅಲ್ಲವೇ? ಹಳೆಯದರ ಸಿಹಿ-ಕಹಿ ನೆನಪುಗಳ ಜೊತೆಗೆ ಹೊಸ ಕನಸುಗಳನ್ನು, ಆಶಯಗಳನ್ನು ಕಟ್ಟಿಕೊಳ್ಳಲು ಸಿಗುವ ಒಂದು ಸುಂದರ ಸೇತುವೆ!

ಯುಗಾದಿಗಿರುವ ಹಲವು ನಾಮಗಳು: ದೇವನೊಬ್ಬ ನಾಮ ಹಲವು ಇದ್ದಂತೇ ಈ ಹಬ್ಬಕ್ಕೆ ನಮ್ಮ ವಿವಿಧ ರಾಜ್ಯಗಳಲ್ಲಿ ವಿಭಿನ್ನ ಹೆಸರುಗಳಿವೆ. ಮಹಾರಾಷ್ಟ್ರದಲ್ಲಿ ‘ಗುಡಿ ಪಾಡ್ವ’, ಸಿಂಧಿಗಳಲ್ಲಿ ‘ಚೇಟಿ ಚಾಂದ್‌’, ಅಸ್ಸಾಮಿನಲ್ಲಿ(ಸೌರಮಾನ ಪದ್ಧತಿಯ ಪ್ರಕಾರ) ಆಚರಿಸುವ ‘ಬಿಹು’, ಕೇರಳದಲ್ಲಿ ‘ವಿಷು’ - ಹೀಗೆ ಭಿನ್ನ ಹೆಸರುಗಳುಳ್ಳ, ತಮ್ಮದೇ ಆದ ಪ್ರಾದೇಶಿಕ ಆಚರಣೆಗಳಿಂದ ವೈವಿಧ್ಯಮಯವಾದ ಹಬ್ಬವೂ ಇದಾಗಿದೆ. ಆದರೆ ಯುಗಾದಿಯನ್ನು ಹೆಚ್ಚಾಗಿ ಕರ್ನಾಟಕ ,ಆಂಧ್ರ ಮತ್ತು ಮಹಾರಾಷ್ಟ್ರಗಳಲ್ಲಿ ಆಚರಿಸುತ್ತಾರೆ. ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವದ ದಿವಸ ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ, ಹೂವಿನ ಹಾರವನ್ನು ಏರಿಸಿ ‘ಗುಡಿ’ ಎಂದು ಮೂಲೆಯಲ್ಲಿ ಇರಿಸುವರು. ಇದು ಹೊಸ ವರುಷದ ಆಗಮನಕ್ಕೆ ಬಾವುಟವನ್ನು ಹಾರಿಸುವುದರ ಸಂಕೇತವೆನ್ನಲಾಗುತ್ತದೆ.

ಯುಗಾದಿಯೊಳಗಣ ಸೂರ್ಯ-ಚಂದ್ರರು: ಯುಗಾದಿಯಲ್ಲಿ ಮುಖ್ಯವಾಗಿ ಎರಡು ಪ್ರಬೇಧಗಳು. ಚಂದ್ರನ ಚಲನೆಯನ್ನಾಧರಿಸಿ, ದಿನಗಣನೆ ಮಾಡುವುದನ್ನು ಚಾಂದ್ರಮಾನ ಯುಗಾದಿಯೆಂದೂ, ಸೂರ್ಯನ ಚಲನೆಯನ್ನಾಧರಿಸಿ ದಿನಗಣನೆ ಮಾಡುವುದನ್ನು ಸೌರಮಾನ ಯುಗಾದಿಯೆಂದೂ ಕರೆಯುತ್ತಾರೆ. ಕರ್ನಾಟಕದಲ್ಲಿ ಕೇರಳದ ಗಡಿಭಾಗವನ್ನು ಹೊರತುಪಡಿಸಿ ಬಹುತೇಕ ಎಲ್ಲೆಡೆ ಚಾಂದ್ರಮಾನ ಪದ್ಧತಿಯೇ ಮೊದಲಿನಿಂದಲೂ ರೂಢಿಯಲ್ಲಿದೆ. ಚಾಂದ್ರಮಾನ ಯುಗಾದಿ ಬರುವುದು ಚೈತ್ರಶುಕ್ಲದ ಪಾಡ್ಯ(ಪ್ರಥಮ)ದಂದು. ಮೇಷರಾಶಿಯ ಸಂಕ್ರಮಣದಂದು ಸೌರಮಾನ

ಯುಗಾದಿಯನ್ನು ಆಚರಿಸಲಾಗುತ್ತದೆ. ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪಥ ಬದಲಿಸುವುದಕ್ಕೇ ಸಂಕ್ರಾಂತಿ ಅಥವಾ ಸಂಕ್ರಮಣ ಎನ್ನುತ್ತಾರೆ. ಸೌರಮಾನ ಯುಗಾದಿ ಸರಿಸುಮಾರು ಎಪ್ರಿಲ್‌ 14 ಅಥವಾ 15ರಂದು ಕಾಣಿಸಿಕೊಳ್ಳುವುದು. ಜ್ಯೋತಿಷ್ಯದ ಪ್ರಕಾರ ಮೊದಲ ನಕ್ಷತ್ರ ಅಶ್ವಿನಿ ಮತ್ತು ರಾಶಿ ಮೇಷ. ಈ ಸಮಯದಲ್ಲಿ ಭೂಮಿಯಲ್ಲಿ ಸಸ್ಯಗಳಲ್ಲಿ ಚಿಗುರು ಕಾಣುತ್ತವೆ. ಶಿಶಿರ ಋುತುವಿನಲ್ಲಿ ಒಣಗಿದ ಉದುರಿದ ಎಲೆಗಳಿಂದ ಬೋಳಾದ ಮರಗಳೆಲ್ಲಾ ವಸಂತನ ಸ್ಪರ್ಶದಿಂದ ಹೊಸಹುಟ್ಟನ್ನು ಪಡೆಯುತ್ತವೆ. ಪುಟ್ಟಶಿಶುವು ಮನೆಗೆ ಆಗಮಿಸಿದಾಗ ಮನೆಯ ಸದಸ್ಯರಿಗೆಲ್ಲ ಖುಶೀಯೋ ಖುಶಿ. 

ಆ ಮಗುವಿನ ಎಳೆಯ ಚರ್ಮದ ಸ್ಪರ್ಶ, ಅದರ ಮುಗ್ಧ, ಸ್ನಿಗ್ಧ ನೋಟ, ಪುಟಿವ ಜೀವಂತಿಕೆಯ ಚೆಲುವು ಎಲ್ಲವೂ ಕಣ್ಣಿಗೆ ಹಬ್ಬ. ಅದರಿಂದ ನಮ್ಮ ಮನಸಿಗೂ ಏನೋ ಆನಂತ, ಉಲ್ಲಾಸ. ದೇಹಕ್ಕಾದ ಆಲಸ್ಯ, ಆಯಾಸ ಎಲ್ಲವೂ ಮಾಯವಾಗುವುದು. ಇದೇ ಅನುಭವ ಉಂಟಾಗುತ್ತದೆ ಹಸಿರೆಲೆಯನ್ನುಟ್ಟ, ಎಳೆಯ ಚಿಗುರಿನಿಂದ ಅಲಂಕಾರಗೊಂಡ ಪ್ರಕೃತಿಯನ್ನು ಕಂಡಾಗ. ಪ್ರಕೃತಿ ಹೇಗೆ ತನಗೆ ಹಳತಾಗಿರುವುದನ್ನೆಲ್ಲ ಕೆಡವಿಕೊಂಡು ಹೊಸತನ್ನು ತೊಟ್ಟು ಫಲ ನೀಡುವುದೋ ಅಂತೆಯೇ ನಾವೂ ಹಳೆಯ ವೈಷಮ್ಯ, ಮನಕೆ ಭಾರವಾಗುವ ಭಾವಗಳನ್ನೆಲ್ಲ ಆದಷ್ಟುಮರೆತು, ಹೊಸ ಆಲೋಚನೆ, ಚಿಂತನೆಗೆ ತೊಡಗಬೇಕು ಎಂಬ ಸುಂದರ ಸಂದೇಶವನ್ನು ನೀಡುತ್ತದೆ ಯುಗಾದಿ.

ಒಳಿತು ಕೆಡುಕೋ ಏನು ಬಂದರೂ
ಇರಲಿ ಎಲ್ಲಕು ಸ್ವಾಗತ
ಸ್ಪರ್ಧೆಯಿಲ್ಲದ ಶ್ರದ್ಧೆಯೊಂದೇ
ಸ್ಫೂರ್ತಿಯಾಗಲಿ ಸಂತತ. (ಜಿ.ಎಸ್‌. ಶಿವರುದ್ರಪ್ಪ)

ಕಹಿಯ ಕಳೆದು ಸಿಹಿಯ ತರಲಿ ಹೊಸ ಯುಗಾದಿ: ಕಳೆದ ವರುಷದ ಪ್ಲವ ನಾಮ ಸಂವತ್ಸರವು ಕಳೆದು ಶುಭಕೃತ್‌ ವರ್ಷವು ಆರಂಭವಾಗುತ್ತಲಿದೆ. ಶುಭಕೃತ್‌ ಎಂದರೆ ಶುಭವನ್ನು ತರುವಂತಹದು. ಹೆಸರಲ್ಲೇ ಮಂಗಲಕರವಿರುವುದು ಹೆಚ್ಚು ಸಮಾಧಾನಕರ. ಆದರೆ ಇಂದು ಜಗತ್ತಿನಲ್ಲಾಗುತ್ತಿರುವ ಮಹತ್ತರ ಬದಲಾವಣೆಗಳು ನಮ್ಮ ಮೇಲೆ ಪರಿಣಾಮ ಬೀರುತ್ತಿವೆ. ಯುದ್ಧ ಭೀತಿ, ಮಹಾಮಾರಿ ಭೀತಿ ಹಬ್ಬಗಳ ಸಂಭ್ರಮವನ್ನೆಲ್ಲ ನುಂಗಿ ಹಾಕುತ್ತಿವೆ. ಒಂದು ಸಣ್ಣ ನಿಲುಗಡೆಗೂ ಸಹನೆ ತೋರದೇ ಓಡಿಸುವ, ಮಾನಸಿಕವಾಗಿ ದಣಿಸುವ ನಮ್ಮ ಜೀವನ ಶೈಲಿ ಹಬ್ಬಗಳ ಆಚರಣೆಯ ಹಿಂದಿನ ಮಹತ್ವ, ಉದ್ದೇಶಗಳನ್ನೆಲ್ಲಾ ಹಿನ್ನೆಲೆಗೆ ಸರಿಸಿ, ಕೇವಲ ಆ ಕ್ಷಣದ ಆಡಂಬರ ಗದ್ದಲವನ್ನಷ್ಟೇ ಮುನ್ನೆಲೆಗೆ ತರುತ್ತಿರುವುದರಿಂದ ಹಬ್ಬಗಳಾಚರಣೆಯ ಕುರಿತು ಒಂದು ನಿರುತ್ಸಾಹವನ್ನು ಹುಟ್ಟುಹಾಕುತ್ತಿದೆಯೇನೋ ಎಂದೆನ್ನಿಸತೊಡಗಿದೆ. 

ಹೊಸ ವರುಷ ಎಂದರೆ ಕೇವಲ ಜನವರಿ ಒಂದು ಮತ್ತು ಅದು ಒಂದು ಕೇಕ್‌ ಕಟ್‌ ಮಾಡಿ ಪಾರ್ಟಿ ಮಾಡುವುದರೊಂದಿಗೆ ಕೊನೆಗೊಂಡು ಬಿಡುವಂಥದ್ದು ಎನ್ನುವ ವಾತಾವರಣ ಸೃಷ್ಟಿಯಾಗುತ್ತಿದೆ. ನಮ್ಮ ಹಿರಿಯರು ಹಬ್ಬವನ್ನು ಏಕೆ ಮತ್ತು ಹೇಗೆ ಆಚರಿಸುತ್ತಿದ್ದರು, ಬದುಕನ್ನು ಜೀವಿಸಲು, ಅನುಭವಿಸಲು ಇಂತಹ ಅರ್ಥಪೂರ್ಣ ಆಚರಣೆಗಳು ಹಿಂದಿಗಿಂತ ಇಂದು ಯಾಕೆ ಅತ್ಯಗತ್ಯ ಎಂಬುದನೆಲ್ಲ ಚಿಂತಿಸುವ ತುರ್ತು ಎಂದಿಗಿಂತ ಇಂದೇ ಹೆಚ್ಚಾಗಿದೆ. ಹಿಂದಿಯಲ್ಲೊಂದು ಒಳ್ಳೆಯ ಹಾಡಿದೆ. ಅದರ ಭಾವಾನುವಾದ ಹೀಗಿದೆ, ‘ನಾವು ಕಾಣದ ಖುಶಿಯ ಬಯಕೆಯಲ್ಲಿ ಇರುವ ಸಂತಸವನ್ನೇ ಕಳೆದುಕೊಂಡೆವು/ ಬದುಕಿನ ಹುಡುಕಾಟದಲ್ಲಿ ಜೀವಿಸುವುದರಿಂದಲೇ ದೂರವಾದೆವು’ ಇದು ಎಷ್ಟುಸತ್ಯ ಅಲ್ಲವೇ? ಸಂತಸ, ನೆಮ್ಮದಿ ಎನ್ನುವುದು ಎಲ್ಲೋ ಇರುವಂಥದ್ದೇ? 

ನಾವು ಆ ಕ್ಷಣ ಬಯಸಿದ್ದು ಸಿಕ್ಕಿದರೆ ಮಾತ್ರ ಅದು ಶಾಶ್ವತ ನೆಮ್ಮದಿಯೇ? ಒಂದೇ ರೀತಿಯ ಬೆರಳುಗಳಿಲ್ಲದ ಅಂಗೈಯಿಂದ ನಾವು ಸಾಧಿಸುವ ಕಾರ್ಯಗಳು ಅನೇಕ! ಹೀಗಿರುವಾಗ ವಿವಿಧ ಮನೋಭಾವದ, ಸ್ವಭಾವದ ಕುಟುಂಬಸ್ಥರೆಲ್ಲ ಕೂಡಿ ಸದ್ಭಾವನೆಯಿಂದ ಒಂದು ಹಬ್ಬವನ್ನು ಒಟ್ಟಾಗಿ ಆಚರಿಸಿ ಪಡೆವ ಉಲ್ಲಾಸ, ನೆಮ್ಮದಿ, ಸಾರ್ಥಕ್ಯವನ್ನು ಅಳೆಯಲಾಗುವುದೇ! ಹಬ್ಬದ ತಯಾರಿಯಲ್ಲಿ ಪರಸ್ಪರ ಸಹಕಾರ, ಸಲಹೆ, ಹೊಂದಾಣಿಕೆ, ಏಕ ಭಾವದಲ್ಲಿ ಕೇವಲ ಒಳಿತನ್ನೇ ಪ್ರಾರ್ಥಿಸುವ, ಶುಭವನ್ನು ಹಾರಿಸುವ ಮನೋಭಾವ - ಇವೆಲ್ಲವೂ ಮುಂದಿನ ಬದುಕಿಗೆ ಬಹಳ ಸಹಕಾರಿ. ಮನೆ-ಮನಗಳಲ್ಲಿ ಒಂದು ಧನಾತ್ಮಕತೆಯನ್ನು ತುಂಬಿಕೊಳ್ಳುವುದು ಅತ್ಯಗತ್ಯ. ಅದಕ್ಕಾಗಿಯೇ ಹಿರಿಯರು ಹಬ್ಬಗಳನ್ನು ಒಟ್ಟಾಗಿ ಆಚರಿಸುವುದಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ.

ದಿನಂಪ್ರತಿ ಹಾಕುವ ಸಾದಾ ರಂಗೋಲಿಗೇ ಅದೊಂದು ದಿನ ಅನೇಕ ಬಣ್ಣಗಳನ್ನು ತುಂಬಿ ಇನ್ನಷ್ಟುಚಂದಗಾಣಿಸಿದ ದಿವಸ ಬಿಡಿಸಿದವಳ ಮತ್ತು ಅದನ್ನು ನೋಡಿ ಮೆಚ್ಚುವವರ ಮೊಗದಲ್ಲಿ ಒಂದು ಕಿರುನಗು ಮೂಡದಿಹುದೇ? ಪ್ರತಿ ದಿವಸ ಊಟಕ್ಕೆ ತಯಾರಿಸುವ ಅದೇ ಮಾಮೂಲಿ ಅಡುಗೆಗಳ ನಡುವೆ ಎರಡು ಬಗೆ ವಿಶೇಷ ಭಕ್ಷವನ್ನು ತಯಾರಿಸಿ ಒಟ್ಟಿಗೆ ಕುಳಿತು ತಿನ್ನುವಾಗ ಸಿಗುವ ಆನಂದವನ್ನು ಸೆರೆಹಿಡಿಯಬಹುದೇ? ಹೂ ಬಿಡಲು ಕಾತರಿಸುವ ಸಸಿಗೆ ಒಂದು ಪುಟ್ಟಮಳೆಯ ನೆಪವೇ ಸಾಕು. ಅದೇ ರೀತಿ ಹೊಸ ವರ್ಷದ

ಆರಂಭವಿದು ಪ್ರಫುಲ್ಲ ಮನಸಿನಿಂದ ಸ್ವಾಗತಿಸಿ, ಸಂಭ್ರಮಿಸೋಣ ಎಂಬ ಭಾವವೊಂದೇ ಸಾಕು. ಮನದಲ್ಲಿ ನವಚೈತ್ಯನ್ಯ ತುಂಬಿಕೊಂಡರೆ ದೇಹದಲ್ಲೂ ಹೊಸತರ ಹುರುಪು ಮೂಡಿಬಿಡುವುದು. ಹಬ್ಬಗಳೆಂದರೆ ಸಾರ್ವತ್ರಿಕವಾಗಿ, ಸಾಮೂಹಿಕವಾಗಿ ಆಚರಿಸುವಂಥವು. ವ್ರತಗಳೋ ವೈಯಕ್ತಿಕ ಆಚರಣೆಗೆ ಸೀಮಿತ. ಯುಗಾದಿ ಹಬ್ಬದ ಆಚರಣೆ ದೇಶದ ವಿವಿಧೆಡೆ ಭಿನ್ನವಾಗಿಯೇ ಇದ್ದರೂ ಅವುಗಳು ಹೊರಹೊಮ್ಮಿಸುವ ಧನಾತ್ಮಕ ಭಾವಗಳು ಏಕರೀತಿಯಲ್ಲಿರುತ್ತವೆ. ಹೀಗಾಗಿ ಬೇವು-ಬೆಲ್ಲ ತಿನ್ನುತ್ತಾ, ನಮ್ಮೆಲ್ಲರ ಜೀವನ ಯಾನಕ್ಕೆ ಉಸಿರಾಗಿರುವ ಪ್ರಕೃತಿಗೆ ಶಿರಬಾಗುತ್ತಾ, ಶುಭಕೃತ್‌ ಜಗತ್ತಿಗೆ ಸನ್ಮಂಗಲವನ್ನುಂಟು ಮಾಡಲಿ, ಚಂದ್ರನ ಶೀತಲತೆಯನ್ನು ಮನದೊಳಗೆ ತುಂಬಿ, ಸೂರ್ಯದ ತೇಜಸ್ಸನ್ನು ಬದುಕಲ್ಲಿ ಬೀರಲಿ, ಕುದಿವ ಕೊಪ್ಪರಿಗೆಯಂತಾಗಿರುವ ಜಗತ್ತು ಶಾಂತವಾಗಲಿ ಎಂದು ಹಾರೈಸೋಣ.

ಹೆಜ್ಜೆಗೊಂದು ಹೊಸ ಯುಗಾದಿ-
ಚೆಲುವು ನಮ್ಮ ಜೀವನ!
ನಮ್ಮ ಹಾದಿಯೋ ಅನಾದಿ,
ಪಯಣವೆಲ್ಲ ಪಾವನ. (ಕೆ.ಎಸ್‌.ನರಸಿಂಹಸ್ವಾಮಿ)

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ