Udupi: ಹುಲಿ ಬಂತು ಹುಲಿ ಓಡಿ ಓಡಿ ಓಡಿ: ದೈವದೊಂದಿಗೆ ಭಕ್ತರ ಆಟ!

By Govindaraj S  |  First Published May 15, 2022, 3:32 PM IST

ಜನರ ನಂಬಿಕೆಗಳು ಅದೆಷ್ಟು ವಿಚಿತ್ರ ಆಗಿರುತ್ತೆ ಅಲ್ವಾ? ಈಗ ನಾವು ಹೇಳ ಹೊರಟಿರುವುದು ವಿಚಿತ್ರ ನಂಬಿಕೆಯೊಂದಿಗೆ ತಳಕು ಹಾಕಿಕೊಂಡಿರುವ ಕುತೂಹಲಕಾರಿ ಆಚರಣೆಯೊಂದರ ಬಗ್ಗೆ. ತುಳುನಾಡ ಭೂಮಿ ಉಡುಪಿಯಲ್ಲಿ ಬಗೆಬಗೆಯ ದೈವ ದೇವರುಗಳ ಆರಾಧನೆಯಿದೆ. 


ವರದಿ: ಶಶಿಧರ ಮಾಸ್ತಿಬೈಲು, ಏಷಿಯಾನೆಟ್ ಸುವರ್ಣ ನ್ಯೂಸ್, ಉಡುಪಿ

ಉಡುಪಿ: (ಮೇ.15): ಜನರ ನಂಬಿಕೆಗಳು ಅದೆಷ್ಟು ವಿಚಿತ್ರ ಆಗಿರುತ್ತೆ ಅಲ್ವಾ? ಈಗ ನಾವು ಹೇಳ ಹೊರಟಿರುವುದು ವಿಚಿತ್ರ ನಂಬಿಕೆಯೊಂದಿಗೆ ತಳಕು ಹಾಕಿಕೊಂಡಿರುವ ಕುತೂಹಲಕಾರಿ ಆಚರಣೆಯೊಂದರ ಬಗ್ಗೆ. ತುಳುನಾಡ ಭೂಮಿ ಉಡುಪಿಯಲ್ಲಿ ಬಗೆಬಗೆಯ ದೈವ ದೇವರುಗಳ ಆರಾಧನೆಯಿದೆ. ದೈವದೊಂದಿಗೆ ಭಕ್ತರು ಆಟವಾಡುವ ಹುಲಿ ದೇವರ ಆರಾಧನೆಯ ಒಂದು ಕೌತುಕದ ಆಚರಣೆಗೆ ಪಿಲಿಕೋಲ (Pilikola). ಅಂದರೆ ಕನ್ನಡದಲ್ಲಿ ಹುಲಿಕೋಲ (Hulikola) ಎನ್ನುತ್ತಾರೆ.

Tap to resize

Latest Videos

ಉಡುಪಿಯ (Udupi) ಕಾಪು (Kapu) ತಾಲೂಕಿನ ಹಳೇ ಮಾರಿಗುಡಿಯಲ್ಲಿ ಈ ಅಪರೂಪದ ಆಚರಣೆ (Ritual) ನಡೆಯುತ್ತೆ. ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಪಿಲಿಕೋಲವೆಂದರೆ ನಿಗೂಢ ಆಚರಣೆ. ದಿಕ್ಕಾಪಾಲಾಗಿ ಓಡುವ ಭಕ್ತರು (Devotees), ಅವರ ಬೊಬ್ಬೆ ಗಲಾಟೆ ನೋಡಿದರೆ ಯಾವುದೋ ಕಾಡು ಪ್ರಾಣಿ ದಾಳಿ ಮಾಡಿರಬೇಕು ಅನ್ನುವಂತಹಾ ದೃಶ್ಯ. ಅವರ ಹಿಂದೇನೇ ಬರುವ ಪಿಲಿಭೂತದ ನರ್ತಕ. ಗಾಂಭಿರ್ಯ ಮತ್ತು ಕೋರೈಸುವ ಕಣ್ಣುಗಳೊಂದಿಗೆ ಈ ಭೂತನರ್ತಕ ಬರುತ್ತಿದ್ದರೆ, ಜನ ದಿಕ್ಕಾಪಾಲಾಗಿ ಓಡಲೇಬೇಕು!

Pramod Madhwaraj ಕುಟುಂಬದಿಂದ ಉಡುಪಿ ಕಾಂಗ್ರೆಸ್ ಎರಡು ತಲೆಮಾರು ಬಲಿ!

ಇವನು ಅಂತಿತಾ ಹುಲಿರಾಯನಲ್ಲ. ಕರಾವಳಿಯ ಜನರು ಶೃದ್ಧಾ ಭಕ್ತಿಯಿಂದ ಪೂಜಿಸುವ ಚಂಡಿಕಾ ದೇವಿಯ ವಾಹನವಾದ ಹುಲಿ ದೇವರು. ಕರಾವಳಿಯಲ್ಲಿ ಹಲವು ಬಗೆಯ ಭೂತಾರಾಧನೆಗಳಿವೆ. ಆದರೆ ಹುಲಿಕೋಲದಂತಹಾ ಆಚರಣೆಗಳು ಬೇರೆಲ್ಲೂ ಕಾಣಸಿಗಲ್ಲ. ಹುಲಿ ವೇಷದಲ್ಲಿರುವ ಈ ಆವೇಶಧಾರಿಯು ಯಾರನ್ನಾದರೂ ಸ್ಪರ್ಶಿಸಿದರೆ, ಮತ್ತೆರಡು ವರ್ಷದೊಳಗೆ ಆತ ಅಸುನೀಗುತ್ತಾನೆ ಅನ್ನೋದು ಹಿರೀಕರ ನಂಬಿಕೆ. ಹಾಗಾಗಿ ಇಷ್ಟದೇವರಾದರೂ ಹುಲಿ ದೇವರನ್ನು ಕಂಡರೆ ಜನ ಈ ರೀತಿ ದಿಕ್ಕಾಪಾಲಾಗಿ ಓಡಾತ್ತಾರೆ.

ಭಯದ ಹೊರತಾಗಿಯೂ ಈ ಪಿಲಿಕೋಲಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗುವುದಿಲ್ಲ. ಭೂತ ನರ್ತಕನಿಗೆ ಎದುರು ಬದುರಾಗಿ ಓಡಾಡುತ್ತಾ, ಆತನನ್ನು ಕೆರಳಿಸುತ್ತಾ ಜನ ಊರೆಲ್ಲಾ ಸುತ್ತುತ್ತಾರೆ. ಹುಲಿ ಆವೇಷದಾರಿಯೂ ಅಟ್ಟಾಡಿಸಿಕೊಂಡು ಬರುತ್ತಾನೆ. ಹೀಗೆ ಮುಟ್ಟಿಸಿಕೊಂಡವರು ಅಹಂಕಾರದಿಂದ ವರ್ತಿಸಿದರೆ ಅವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಅನ್ನುತ್ತೆ ತುಳುವರ ನಂಬಿಕೆ. ಆದರೆ ಭಕ್ತಿಯಿಂದ ಸನ್ನಿಧಾನದಲ್ಲಿ ಪ್ರಾಯಶ್ಚಿತ್ತ ಮಾಡಿಕೊಂಡು, ಪ್ರಾರ್ಥಿಸಿದರೆ ಏನೂ ಆಗಲ್ಲ ಅನ್ನೋದು ಜನರ ವಿಶ್ವಾಸ.

ರಾಷ್ಟ್ರೀಯ ಹೆದ್ದಾರಿಯಲ್ಲೂ ಹುಲಿ ವೇಷಧಾರಿಯ ಸಂಚಾರ ಸಾಗುತ್ತೆ. ಸುರಕ್ಷಿತ ಸ್ಥಳಗಳಲ್ಲಿ ನಿಂತು ಜನ ಈ ದೈವ ಸಂಚಾರವನ್ನು ಕಾಣುತ್ತಾರೆ. ಈ ಕ್ಷೇತ್ರದಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಪಿಲಿಕೋಲ ಧಾರ್ಮಿಕ ಮತ್ತು ಜನಪದ ಆಚರಣೆಗಳ ಜೀವಂತ ಉದಾಹರಣೆಯಾಗಿದೆ. ಆಚರಣೆಯ ಮೂಲಕ ತುಳುನಾಡಿನ ಸಂಸ್ಕೃತಿ ಸಂಪ್ರದಾಯ ನಂಬಿಕೆ ನಡವಳಿಕೆ ಸಹಿತವಾಗಿ ಸತ್ಯದ ದರ್ಶನವಾಗುತ್ತಿದೆ. 

Udupi: ಇವನೆಂಥಾ ಕಳ್ಳ ಮಾರಾಯ್ರೇ: ಎಂಟು ಲಕ್ಷ ಕದ್ದವ ಒಂದು ಲಕ್ಷ ಯಾಕೆ ಬಿಟ್ಟು ಹೋದ?

ದೇವರು ಮತ್ತು ಭಕ್ತರು ಬೆರೆತು ಆಡುವ ಆಟ ಇದು! ಅಹಂಕಾರವನ್ನು ಹೋಗಲಾಡಿಸಿ ಭಕ್ತಿಯನ್ನು ಪ್ರೇರೇಪಿಸುವ ಆಚರಣೆಯಾಗಿದೆ. ಭೀತಿಯ ನೆರಳಲ್ಲೇ ನಂಬಿಕೆ ಅರಳಿರುವುದರಿಂದ ಪಿಲಿಕೋಲದ ಬಗ್ಗೆ ಇಂದಿಗೂ ವಿಶೇಷ ಆಕರ್ಷಣೆ ಇದೆ. ತನಗಿಂತ ಯಾರೂ ಮಿಗಿಲಿಲ್ಲ ಎಂಬ ಅಹಂಕಾರ ಮನುಷ್ಯರಿಗೆ ಬಾರದಿರಲಿ ಎಂಬ ಸಂದೇಶದ ಜೊತೆಗೆ ಕಾಡುಪ್ರಾಣಿಗಳಲ್ಲೂ ದೇವರನ್ನು ಕಾಣುವ ಕರಾವಳಿಗರ ವಿಶಿಷ್ಟ ಜನಪದಕ್ಕೆ ಈ ಪಿಲಿಕೋಲ ಸಾಕ್ಷಿ.

click me!