8 ದಶಕ ಬಳಿಕ ಮುತ್ತು ಮಾರಿಯಮ್ಮನ್ ದೇವಾಲಯಕ್ಕೆ ದಲಿತರ ಪ್ರವೇಶ; ಕನಸೊಂದು ನನಸಾಗಿದೆ ಎಂದ ಭಕ್ತರು!

By Suvarna News  |  First Published Feb 1, 2023, 4:43 PM IST

ಇದೊಂದು ಐತಿಹಾಸಿಕ ಘಟನೆಯೇ ಸರಿ. 200ಕ್ಕೂ ಹೆಚ್ಚು ದಲಿತರು ತಮಿಳುನಾಡು ದೇವಾಲಯವನ್ನು ಪ್ರವೇಶಿಸಲು ಇದ್ದ 'ನಿಷೇಧ'ವನ್ನು ಉಲ್ಲಂಘಿಸಿದ್ದಾರೆ. ಈ ಮೂಲಕ ಅವರು ಹಿಂದೆಂದೂ ಅನುಭವಿಸದ ಸ್ವಾತಂತ್ರ್ಯದ ಗಾಳಿಯನ್ನು ಉಸಿರಾಡಿದ್ದಾರೆ. 


ಸುಮಾರು 8 ದಶಕಗಳು ಅಂದರೆ ಹತ್ತಿರತ್ತಿರ 80 ವರ್ಷಗಳಿಂದ ಈ ಜನರಿಗೆ ತಿರುವಣ್ಣಾಮಲೈನಲ್ಲಿ ದೇವಸ್ಥಾನ ಪ್ರವೇಶವಿರಲಿಲ್ಲ. ದೇವಸ್ಥಾನದ ಹೊರಗೆ ನಿಂತು ಕೈ ಮುಗಿದು ಪ್ರಾರ್ಥಿಸಿ ತೆರಳುತ್ತಿದ್ದರು. ದೇವಾಲಯದೊಳಗೆ ಹೇಗಿರಬಹುದು ಎಂಬ ಕಲ್ಪನೆಯಲ್ಲೇ ತೃಪ್ತಿ ಹೊಂದುತ್ತಿದ್ದರು. ಆದರೆ ಇದೀಗ, 200ಕ್ಕೂ ಹೆಚ್ಚು ದಲಿತರು ತಮಿಳುನಾಡು ದೇವಾಲಯವನ್ನು ಪ್ರವೇಶಿಸಲು ಹೇರಲಾಗಿದ್ದ 'ನಿಷೇಧ'ವನ್ನು ಉಲ್ಲಂಘಿಸಿದ್ದಾರೆ.
ಹೌದು, ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಇನ್ನೂ ಉಸಿರಾಡುತ್ತಿದ್ದ ಈ ಜಾತಿಪದ್ಧತಿಯ ಅನಿಷ್ಠಕ್ಕೆ ಕೊನೆ ಹಾಡಲು ಜಿಲ್ಲಾಡಳಿತ ನೆರವು ನೀಡಿದೆ. ತಿರುವಣ್ಣಾಮಲೈನ ತಂದರಂಪಟ್ಟುನಲ್ಲಿರುವ ಮುತ್ತು ಮಾರಿಯಮ್ಮನ್ ದೇವಸ್ಥಾನವು ಹಿಂದೂ ಧಾರ್ಮಿಕ ಮತ್ತು ದತ್ತಿ ಮಂಡಳಿಯ ಅಡಿಯಲ್ಲಿ ಬರುತ್ತದೆ, ಇಲ್ಲಿ ವಾರ್ಷಿಕವಾಗಿ ಪೊಂಗಲ್ ಸಮಯದಲ್ಲಿ 12 ದಿನಗಳ ಉತ್ಸವವನ್ನು ನಡೆಸಲಾಗುತ್ತದೆ.

ಆದರೆ, ಕಳೆದ 80 ವರ್ಷಗಳಿಂದ ದಲಿತ ಕುಟುಂಬಗಳಿಗೆ ದೇವಾಲಯ ಪ್ರವೇಶ ನೀಡಿಲ್ಲ, ಈ ವರ್ಷ ಸಮುದಾಯದ ಪ್ರತಿನಿಧಿಗಳು ಗ್ರಾಮದ ಮುಖಂಡರಲ್ಲಿ ಅನುಮತಿ ಪಡೆದು ಒಂದು ದಿನ ಉತ್ಸವದಲ್ಲಿ ಭಾಗವಹಿಸಲು ಮತ್ತು ದೇವಾಲಯಕ್ಕೆ ಪ್ರವೇಶಕ್ಕೆ ಅವಕಾಶ ನೀಡುವಂತೆ ಕೋರಿದರು.

Tap to resize

Latest Videos

Snowfall in Kedarnath: ಹಿಮದ ಹೊದಿಕೆ ಹೊದ್ದು ಕಣ್ಣಿಗೆ ಹಬ್ಬವಾದ ಕೇದಾರನಾಥ

ಪೊಲೀಸರು ದಲಿತರನ್ನು ದೇವಸ್ಥಾನದ ಕಡೆಗೆ ಕರೆದೊಯ್ದಿದ್ದರಿಂದ  ತಮಿಳುನಾಡಿನ ಪರಿಶಿಷ್ಟ ಜಾತಿಯ ಸಮುದಾಯವು ರೋಮಾಂಚನಗೊಂಡಿತು. ಮಹಿಳೆಯರು ದೇವರಿಗೆ ಹಾರ, ಉರುವಲು ಮತ್ತು ಪೊಂಗಲ್ ತಯಾರಿಸಲು ಪದಾರ್ಥಗಳನ್ನು ಹೊತ್ತೊಯ್ದರು. ಈ ಸಂದರ್ಭದಲ್ಲಿ ಇವರೆಲ್ಲರ ಸಂತಸಕ್ಕೆ ಪಾರವೇ ಇರಲಿಲ್ಲ.

ಈ ಬಗ್ಗೆ ಮಾತನಾಡಿದ ಯುವತಿಯೊಬ್ಬರು, 'ಇಂದು ಕನಸೊಂದು ನನಸಾಗಿದೆ. ನಾನು ಈ ದೇವಾಲಯದೊಳಗಿನ ದೇವಿಯನ್ನು ನೋಡಿರಲಿಲ್ಲ. ನಮಗೆ ಹೊರಗೆ ನಿಂತು ಪೂಜೆ ಮಾಡಲು ಮಾತ್ರ ಅವಕಾಶ ನೀಡಲಾಗಿತ್ತು, ಆದರೆ ಇಂದು ದೇವಿಯ ದರ್ಶನದಿಂದ ಸಂತಸವಾಗಿದೆ' ಎಂದಿದ್ದಾರೆ. 
ಮತ್ತೊಬ್ಬ ಗರ್ಭಿಣಿಯು, 'ನನಗೆ ಮಗು ಹುಟ್ಟಿದಂತೆ ಸಂತಸವಾಗುತ್ತಿದೆ' ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. 
ಕಾಲೇಜು ವಿದ್ಯಾರ್ಥಿನಿಯೊಬ್ಬರು ಮಾತನಾಡಿ, 'ನಾನು ಇಲ್ಲಿಯೇ ಹುಟ್ಟಿ ಬೆಳೆದಿದ್ದೇನೆ. ಆದರೆ ಎಂದೂ ಒಳಗೆ ಬಿಟ್ಟಿರಲಿಲ್ಲ. ಈ ಸಮಾನತೆ ಪ್ರತಿದಿನ ಮುಂದುವರಿಯಬೇಕು' ಎಂದಿದ್ದಾರೆ. 

ಪಾಲಕ-ಶಿಕ್ಷಕರ ಸಂಘದ ಸಭೆಯಲ್ಲಿ ಈ ಅಸಮಾನತೆಯ ವಿಷಯ ಬೆಳಕಿಗೆ ಬಂದಿದ್ದು, ನಂತರ ಜಿಲ್ಲಾಡಳಿತವು ಈ ಪ್ರದೇಶದಲ್ಲಿ ಸತತ ಶಾಂತಿ ಸಭೆಗಳನ್ನು ನಡೆಸಿ ಸುಗಮ ಪ್ರವೇಶಕ್ಕೆ ದಾರಿ ಮಾಡಿಕೊಟ್ಟಿತು. 

ಜಿಲ್ಲಾ ಎಸ್ಪಿ ಡಾ.ಕೆ.ಕಾರ್ತಿಕೇಯನ್ ಮಾತನಾಡಿ, 'ನಾವು ಸುಗಮ ಪ್ರವೇಶಕ್ಕಾಗಿ ಹಲವು ಸುತ್ತಿನ ಮಾತುಕತೆ ನಡೆಸಿದ್ದೇವೆ. ನಮ್ಮ ಶಾಂತಿ ಮಾತುಕತೆ ಮುಂದುವರಿಯುತ್ತದೆ, ಆದ್ದರಿಂದ ಇದು ಪರಿಶಿಷ್ಟ ಜಾತಿಗಳ ಸಾಂಕೇತಿಕ ಪ್ರವೇಶವಾಗಿ ನಿಲ್ಲುವುದಿಲ್ಲ' ಎಂದಿದ್ದಾರೆ. 

Importance of Rangoli: ರಂಗೋಲಿ ಹಾಕಿದ್ರೆ ಗ್ರಹದೋಷಗಳೆಲ್ಲ ಹೋಗುತ್ತೆ, ಆದ್ರೆ ಈ ವಿಷ್ಯ ಕಾಳಜಿ ವಹಿಸಿ

ಜಿಲ್ಲಾಡಳಿತದ ಈ ಕ್ರಮಕ್ಕೆ ಪ್ರಬಲ ಸಮುದಾಯಗಳ 750ಕ್ಕೂ ಹೆಚ್ಚು ಜನರು ಪ್ರತಿಭಟಿಸುತ್ತಿದ್ದರು ಮತ್ತು ದೇವಾಲಯವನ್ನು ಮುಚ್ಚುವಂತೆ ಒತ್ತಾಯಿಸುತ್ತಿದ್ದರು.  ಆದರೆ, ಇವರನ್ನು ನಿಯಂತ್ರಿಸಲು 400 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸ್ಥಳೀಯ ಸಲೂನ್‌ಗಳು ಮತ್ತು ಫುಡ್ ಜಾಯಿಂಟ್‌ಗಳಲ್ಲಿ ಇನ್ನೂ ಅಸ್ಪೃಶ್ಯತೆ ಇದೆ ಎಂದು ನಿವಾಸಿಯೊಬ್ಬರು ಆರೋಪಿಸಿದ್ದಾರೆ. ಈ ಬಗ್ಗೆ ಕೂಡಾ ಗಮನ ಹರಿಸಿ, ಸಮಾನತೆ ಕಾಪಾಡುವುದಾಗಿ ಎಸ್ಪಿ ಭರವಸೆ ನೀಡಿದ್ದಾರೆ. 

 

click me!