
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಡಿ.25): ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಇಂದು ರಾತ್ರಿ ಚಿಕ್ಕಮಗಳೂರು ನಗರದಲ್ಲಿ ದತ್ತ ಮಾಲೆ ಧರಿಸಿ, ವಿಶೇಷ ಪೂಜೆ, ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಬೆಂಗಳೂರಿನಿಂದ ಆಗಮಿಸಿದ ಅವರು, ನೇರವಾಗಿ ನಗರದ ಕಾಮಧೇನು ಗಣಪತಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ಸಾಂಪ್ರದಾಯಿಕ ಕೇಸರಿ ಪಂಚೆ ಧರಿಸಿ ನಂತರ ಶಾಸ್ತ್ರೋಕ್ತವಾಗಿ ದತ್ತ ಮಾಲೆ ಧಾರಣೆ ಮಾಡಿದರು. ದೇವಸ್ಥಾನದ ಪ್ರಧಾನ ಅರ್ಚಕ ರಘು ಅವಧಾನಿ ಅವರು ಅಶೋಕ್ ಅವರಿಗೆ ಮಾಲೆ ತೊಡಿಸಿದರು.
ದತ್ತ ಭಕ್ತರೊಂದಿಗೆ ಭಜನೆ :
ಕೆಲವು ನಿಮಿಷಗಳ ಕಾಲ ವಿಶ್ವಹಿಂದೂ ಪರಿಷತ್-ಬಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರುಗಳ ಜೊತೆ ಅಶೋಕ್ ಅವರು ದತ್ತಾತ್ರೇಯರ ಭಜನೆ ಮಾಡಿದರು. ಈ ವೇಳೆ ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಮಾಜಿ ಶಾಸಕ ಸಿ.ಟಿ.ರವಿ, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ಹಿರಿಯ ಮುಖಂಡ ಕೋಟೆ ರಂಗನಾಥ್, ಪುಷ್ಪರಾಜ್, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ.ವೆಂಕಟೇಶ್ ಇತರರು ಹಾಜರಿದ್ದರು.
ಮೊಟ್ಟ ಮೊದಲ ಬಾರಿಗೆ ದತ್ತಮಾಲೆ ಧರಿಸಿದ ವಿಪಕ್ಷ ನಾಯಕ ಆರ್. ಅಶೋಕ್: ಭರ್ಜರಿ ಸ್ಟೆಪ್ಸ್ ಹಾಕಿದ ಶೋಭಾ ಕರಂದ್ಲಾಜೆ!
ದತ್ತಾತ್ರೇಯರಲ್ಲಿ ಸಂಕಲ್ಪ :
ಅಯೋಧ್ಯೆ ಮಾದರಿಯಲ್ಲಿ ದತ್ತ ಪೀಠದ ವಿಚಾರದಲ್ಲೂ ತೀರ್ಮಾನ ಆಗಬೇಕು ಎನ್ನುವುದು ನಮ್ಮ ಬಯಕೆ. ಇದಕ್ಕಾಗಿ ದತ್ತಾತ್ರೇಯರಲ್ಲಿ ಸಂಕಲ್ಪ ಮಾಡುತ್ತೇವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದರು. ಇಂದು ( ಭಾನುವಾರ) ರಾತ್ರಿ ನಗರದ ಕಾಮಧೇನು ಗಣಪತಿ ದೇವಸ್ಥಾನದಲ್ಲಿ ದತ್ತಮಾಲೆ ಧರಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೊದಲ ಬಾರಿಗೆ ದತ್ತಮಾಲೆ ಧರಿಸಿದ್ದೇನೆ. ಮುಂದಿನ 24 ಗಂಟೆಗಳ ಕಾಲ ವ್ರತಾಚರಣೆ ಮಾಡಬೇಕಿದೆ. ನಮ್ಮ ಭಾರತೀಯ ಸಂಸ್ಕೃತಿ, ದತ್ತಾತ್ರೇಯರ ಸಂಸ್ಕೃತಿಯನ್ನು ಪಾಲನೆ ಮಾಡುತ್ತೇನೆ ಎಂದು ತಿಳಿಸಿದರು.
ಶ್ರೀರಂಗಪಟ್ಟಣ, ಮಥುರ, ಕಾಶಿ ಇವೆಲ್ಲವೂ ನಮ್ಮ ಕಣ್ಣಮುಂದಿವೆ. ದತ್ತಪೀಠ ಸಹ ಅದೇ ರೀತಿ ಪೂಜ್ಯ ಭಾವನೆ ಇರುವ ಶ್ರದ್ಧಾ ಪೀಠ. ಅಲ್ಲಿ ಕೆಲವು ಅಕ್ರಮಣಗಳು ನಡೆದಿರುವುದನ್ನು ಗಮನಿಸಿದ್ದೇವೆ. ಹಿಂದೆಯೂ ನಮ್ಮ ಸರ್ಕಾರ ಇದ್ದಾಗ ಅಲ್ಲಿ ಹಿಂದೂ ಪದ್ಧತಿಗಳ ಪ್ರಕಾರ ಪೂಜೆ, ಅರ್ಚಕರ ನೇಮಕ ಇಂತಹ ಎಲ್ಲಾ ವಿಚಾರದಲ್ಲೂ ಸ್ಪಷ್ಟವಾದ ನಿಲುವುಗಳನ್ನು ತೆಗೆದುಕೊಂಡು ಅದನ್ನು ಧಾರ್ಮಿಕ ಸ್ಥಳವಾಗಿಸಲು ಕ್ರಮ ಕೈಗೊಂಡಿದ್ದೇವೆ ಎಂದರು.
ತಿರುಪತಿ, ಕಾಶಿ, ಮಥುರ ರೀತಿ ದತ್ತಪಿಠ ಸಹ ಹಿಂದೂಗಳಿಗೆ ಪವಿತ್ರ ಸ್ಥಳ. ಆ ಭಾವನೆಯನ್ನ ಮಟ್ಟ ಹಾಕುವ ಪ್ರಯತ್ನವನ್ನ ಕೆಲವು ಹಿತಾಸಕ್ತಿಗಳು ಮಾಡುತ್ತಿವೆ. ಈಗಾಗಲೆ ನ್ಯಾಯಾಲಯದ ಎಲ್ಲಾ ತೀರ್ಪುಗಳು ಸಹ ದತ್ತಪೀಠವೇ ಬೇರೆ, ದರ್ಗಾವೇ ಬೇರೆ ಎಂದು ಸ್ಪಷ್ಟವಾಗಿ ಹೇಳಿವೆ. ನಮ್ಮ ಉದ್ದೇಶ ಇರುವುದು ಹಾಲಿ ನ್ಯಾಯಾಧೀಶರನ್ನು ನೇಮಕ ಮಾಡಿ ಈ ವಿಚಾರವನ್ನು ಬಗೆಹರಿಸಬೇಕು ಎನ್ನುವುದು ಎಂದರು.
ಹಿಂದೂಗಳ ಭಾವನೆಯನ್ನ ಕೆರಳಿಸುವ ಕೆಲಸವನ್ನು ಯಾರೂ ಮಾಡಬಾರದು :
ದತ್ತಪೀಠಕ್ಕಾಗಿ ಲಕ್ಷಾಂತರ ಕಾರ್ಯಕರ್ತರು ಹೋರಾಟ ನಡೆಸುತ್ತಿದ್ದಾರೆ. ಹಿಂದೂಗಳ ಭಾವನೆಯನ್ನ ಕೆರಳಿಸುವ ಕೆಲಸವನ್ನು ಯಾರೂ ಮಾಡಬಾರದು ಇದು ಹಿಂದೂಸ್ಥಾನ. ಅದು ಹಿಂದೂಸ್ಥಾನವಾಗಿಯೇ ಉಳಿಯಬೇಕು ಎಂದರು.
ದತ್ತಪೀಠದ ಬಗ್ಗೆ ಕರ್ನಾಟಕ ಸೇರಿದಂತೆ ಇಡೀ ದೇಶದ ಜನರಲ್ಲಿ ಒಂದು ಗೌರವ ಭಾವನೆ ಇದೆ. ಅದನ್ನು ಎತ್ತಿ ಹಿಡಿಯುವ ಕೆಲಸವನ್ನು ಈ ಸರ್ಕಾರವೂ ಮಾಡಬೇಕು ಎಂದರು.
ಚಿಕ್ಕಮಗಳೂರು: ದತ್ತ ಜಯಂತಿ ಅಂಗವಾಗಿ ಸಂಕೀರ್ತನಾ ಯಾತ್ರೆ, ದತ್ತಪೀಠದಲ್ಲಿ ಅನುಸೂಯಾ ಜಯಂತಿ..!
ಈ ಬಾರಿ ದತ್ತ ಜಯಂತಿಗೆ ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರು ಬರಲಿದ್ದಾರೆ. ದೊಡ್ಡಬಳ್ಳಾಪುರದ ಶಾಸಕ, ಯುವಮೋರ್ಚಾ ಅಧ್ಯಕ್ಷರೂ ಆದ ಸುರೇಶ್ ನಮ್ಮ ಜೊತೆ ಬಂದಿದ್ದಾರೆ ಎಂದರು.
ಸೋಮವಾರ ಚಿಕ್ಕಮಗಳೂರು ನಗರದಲ್ಲಿ ನಡೆಯುವ ಶೋಭಾಯಾತೆಯಲ್ಲಿ ಭಾಗವಹಿಸಿ ಬೆಳಗ್ಗೆ ದತ್ತಪೀಠದಲ್ಲಿ ನಡೆಯುವ ಹೋಮದ ಪೂರ್ಣಾಹುತಿಯಲ್ಲೂ ಪಾಲ್ಗೊಳ್ಳುತ್ತೇನೆ ಎಂದರು.
ಮುಂದಿನ ಬಾರಿ ದತ್ತಪೀಠಕ್ಕೆ ಬರುವಾಗ ಪೀಠಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಬಗೆಹರಿದು ಹಿಂದೂಗಳ ಭಾವನೆಗೆ ಯಾವುದೇ ರೀತಿ ಚ್ಯುತಿ ಬರದ ಹಾಗೆ ಕಾರ್ಯಕ್ರಮಗಳು ನಡೆಯಬೇಕು. ಸಂತೋಷದಿಂದ ಎಲ್ಲರೂ ಭಾಗವಹಿಸುವಂತಾಗಲಿ ಎಂದು ದತ್ತಾತ್ರೇಯರಲ್ಲಿ ನಾವು ಈ ಬಾರಿ ಸಂಕಲ್ಪ ಮಾಡುತ್ತೇವೆ ಎಂದರು.