ದತ್ತಜಯಂತಿ ಪ್ರಯುಕ್ತ ಮೊದಲ ದಿನವಾದ ಇಂದು ಅನುಸೂಯ ಜಯಂತಿಯನ್ನ ಒಂದೂವರೆ ಸಾವಿರಕ್ಕೂ ಅಧಿಕ ಮಹಿಳೆಯರು ಸಂಭ್ರಮದಿಂದ ಆಚರಿಸಿದ್ರು. ನಗರದ ಬೋಳರಾಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮಹಿಳೆಯರು ನಗರದ ಐಜಿ ರಸ್ತೆಯ ಮೂಲಕ ಕಾಮಧೇನು ಗಣಪತಿ ದೇವಾಲಯದವರೆಗೂ ಸಂಕೀರ್ತನಾ ಯಾತ್ರೆ ಕೈಗೊಂಡ್ರು.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಡಿ.24): ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿರೋ ವಿವಾದಿತ ಇನಾಂ ದತ್ತಾತ್ರೆಯ ಪೀಠದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರೋ ದತ್ತಜಯಂತಿಗಿಂದು ಸಂಭ್ರಮದ ಚಾಲನೆ ದೊರಕಿದೆ. ಮೊದಲನೇ ದಿನವಾದ ಇಂದು(ಭಾನುವಾರ) ಅನುಸುಯಾ ಜಯಂತಿಯ ಪ್ರಯುಕ್ತ ಚಿಕ್ಕಮಗಳೂರು ನಗರದಲ್ಲಿ ಸಂಕೀರ್ತನಾ ಯಾತ್ರೆ ಕೈಗೊಂಡ ಸಾವಿರಕ್ಕೂ ಅಧಿಕ ಮಹಿಳೆಯರು ನಗರದಲ್ಲಿ ಬೃಹತ್ ಪಾದಯಾತ್ರೆ ನಡೆಸಿ ದತ್ತಪೀಠಕ್ಕೆ ತೆರಳಿ ಬಿಗಿ ಪೋಲಿಸ್ ಭದ್ರತೆಯಲ್ಲೇ ದತ್ತಪಾದುಕೆಯ ದರ್ಶನ ಪಡೆದು, ಅನುಸೂಯಾ ದೇವಿಗೆ ಪೂಜೆ, ಹೋಮ, ಹವನ ನಡೆಸಿದ್ರು.
undefined
ಕಾಫಿನಾಡಿನಲ್ಲಿ ದತ್ತಜಯಂತಿ ಸಂಭ್ರಮ :
ಹಿಂದೂ-ಮುಸ್ಲಿಮರ ಧಾರ್ಮಿಕ ಭಾವೈಕ್ಯತಾ ಕೇಂದ್ರವಾಗಿರೋ ಚಿಕ್ಕಮಗಳೂರಿನ ಬಾಬಾಬುಡನ್ಗಿರಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ದತ್ತಜಯಂತಿ ಸಂಭ್ರಮ. ದತ್ತಜಯಂತಿ ಪ್ರಯುಕ್ತ ಮೊದಲ ದಿನವಾದ ಇಂದು ಅನುಸೂಯ ಜಯಂತಿಯನ್ನ ಒಂದೂವರೆ ಸಾವಿರಕ್ಕೂ ಅಧಿಕ ಮಹಿಳೆಯರು ಸಂಭ್ರಮದಿಂದ ಆಚರಿಸಿದ್ರು. ನಗರದ ಬೋಳರಾಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮಹಿಳೆಯರು ನಗರದ ಐಜಿ ರಸ್ತೆಯ ಮೂಲಕ ಕಾಮಧೇನು ಗಣಪತಿ ದೇವಾಲಯದವರೆಗೂ ಸಂಕೀರ್ತನಾ ಯಾತ್ರೆ ಕೈಗೊಂಡ್ರು. ಮೆರವಣಿಗೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಸಿಟಿ ರವಿ ಸೇರಿದಂತೆ ಹಲವರು ಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಅನುಸೂಯಾದೇವಿ ಫೋಟೋ ಹಿಡಿದು ಸಾಗಿದ ಶೋಭಾ ಕರಂದ್ಲಾಜೆ, ದತ್ತಪೀಠಕ್ಕೆ ಆಗಮಿಸಿ ದತ್ತ ಪಾದುಕೆ ದರ್ಶನ ಪಡೆದರು. ಇದೆ ವೇಳೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಮಹಿಳೆಯರು ಸರತಿ ಸಾಲಿನಲ್ಲಿ ನಿಂತು ಪಾದುಕೆ ದರ್ಶನ ಪಡೆಯುವ ಮೂಲಕ ದತ್ತಾತ್ರೇನ ಕೃಪೆಗೆ ಪಾತ್ರರಾದರು. ಇದೇ ವೇಳೆ ದತ್ತ ಪೀಠದ ಹೋಮ ಮಂಟಪದಲ್ಲಿ ಹೋಮ ಅವನ ನಡೆಸುವ ಮೂಲಕ ಅನುಸೂಯ ದೇವಿ ಪ್ರಾರ್ಥಿಸಿದ್ರು. ಇದೇ ವೇಳೆ ಮಾತನಾಡಿದ ಸಂಸದ ಶೋಭಾ ಕರಂದ್ಲಾಜೆ ದತ್ತಪೀಠ ಸಂಪೂರ್ಣ ಹಿಂದುಗಳ ಪೀಠ ಆಗುವವರೆಗೂ ವಿರಮಿಸಲ್ಲ. ಈ ಹೋರಾಟ ಅಂತಿಮ ಘಟ್ಟದವರೆಗೂ ನಡೆಯುತ್ತೆ ಎಂದು ಘೋಷಣೆ ಮಾಡಿದ್ರು.
ದತ್ತ ಜಯಂತಿ: ಇಂದು ಕಾಫಿನಾಡು ಚಿಕ್ಕಮಗಳೂರು ಕೇಸರಿಮಯ; ಬಿಗಿ ಪೊಲೀಸ್ ಬಂದೋಬಸ್ತ್!
ಡ್ರೋಣ್ ಕಣ್ಗಾವಲು, ಪೊಲೀಸ್ ಬಿಗಿಭದ್ರತೆ
ಇನ್ನು ಚಿಕ್ಕಮಗಳೂರು ನಗರದಲ್ಲಿ ನಡೆದ ಸಂಕೀರ್ತನ ಯಾತ್ರೆಗೆ ಹೆಜ್ಜೆ ಹೆಜ್ಜೆಗೂ ಪೊಲೀಸರು ದತ್ತ ಭಕ್ತರೊಂದಿಗೆ ಹೆಜ್ಜೆ ಹಾಕಿ ಭದ್ರತೆ ನೀಡಿದರು. ನಗರದ ಪ್ರಮುಖ ರಸ್ತೆಗಳ ಮಾರ್ಗದುದ್ದಕ್ಕೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಾವಿರಾರು ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ರು. ಡ್ರೋಣ್ ಕಣ್ಗಾವಲು, ಪೊಲೀಸ್ ಬಿಗಿಭದ್ರತೆ ನಡುವೆ ಮಹಿಳೆಯರು ದತ್ತಪೀಠದಲ್ಲಿ ಪಾದುಕೆ ದರ್ಶನ, ಹೋಮ ಹವನದಲ್ಲಿ ಭಾಗಿಯಾಗಿದರು.
ಶ್ರೀರಾಮ ಸೇನೆ ಮುಖಂಡರಿಗೆ ನಿಷೇಧ :
ಡಿಸೆಂಬರ್ 26ರಂದು ನಡೆಯೋ ದತ್ತ ಜಯಂತಿ ವೇಳೆ ಚಿಕ್ಕಮಗಳೂರು ತಾಲೂಕಿನ ನಾಗೇನಹಳ್ಳಿ ದರ್ಗಾದಲ್ಲಿ ದತ್ತ ಜಯಂತಿ ಮಾಡಿಯೇ ಮಾಡಿಯೇ ತೀರುತ್ತೇವೆ ಎಂದು ಘೋಷಣೆ ಮಾಡಿರುವ ಶ್ರೀರಾಮ ಸೇನೆ ಮುಖಂಡರಿಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನಿಷೇಧ ಏರಿದೆ. ಇಂದಿನಿಂದ ಮುಂದಿನ ತಿಂಗಳು 5ರವರೆಗೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹಾಗೂ ರಾಜ್ಯ ಅಧ್ಯಕ್ಷ ಗಂಗಾಧರ್ ಕುಲಕರ್ಣಿಗೆ ಚಿಕ್ಕಮಗಳೂರು ಜಿಲ್ಲೆ, ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಮುನ್ನೆಚ್ಚರಿ ಕಾರ್ಯಕ್ರಮವಾಗಿ 144 ಸೆಕ್ಷನ್ ಹೇರಲಾಗಿದ್ದು, ಶ್ರೀರಾಮ ಸೇನೆ ಮುಖಂಡರ ಕಾಫಿ ನಾಡಿನ ಎಂಟ್ರಿಗೆ ಪೊಲೀಸ್ ಇಲಾಖೆ ಬ್ರೇಕ್ ಹಾಕಿದ್ದು ಪೊಲೀಸ್ ಇಲಾಖೆ ಜಿಲ್ಲೆಯಾದ್ಯಂತ ಹದ್ದಿನ ಕಣ್ಣಿಟ್ಟಿದ್ದು ತೀವ್ರ ನಿಗಾ ವಹಿಸಿದೆ. ಇದೆ ವೇಳೆ ಯಾತ್ರೆಯಲ್ಲಿ ಪಾಲ್ಗೊಂಡ ಬಿಜೆಪಿ ನಾಯಕ ಸಿಟಿ ರವಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಸಂಪೂರ್ಣ ಹಿಂದುಗಳ ಪೀಠ ಆಗೋವರೆಗೂ ಹೋರಾಟ ನಿಲ್ಲಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಒಟ್ಟಾರೆ ನಾಳೆ ನಡೆಯುವ ಅದ್ದೂರಿ ಶೋಭಾ ಯಾತ್ರೆಗೆ ಕ್ಷಣಗಣನೆ ಆರಂಭವಾಗಿದ್ದು ಚಿಕ್ಕಮಗಳೂರು ನಗರ ಸಂಪೂರ್ಣ ಕೇಸರಿಮಯವಾಗಿದೆ. ಹೆಜ್ಜೆ ಹೆಜ್ಜೆಗೂ ಪೊಲೀಸರ ಸರ್ಪಗಾವಲು ನಿಗಾ ವಹಿಸಿದ್ದು, ರಾಜ್ಯದ ವಿವಿಧ ಭಾಗಗಳಿಂದ ಭಾಗವಹಿಸೋ 25,000ಕ್ಕೂ ಹೆಚ್ಚು ದತ್ತ ಭಕ್ತರು ಚಿಕ್ಕಮಗಳೂರು ನಗರದಲ್ಲಿ ನಡೆಯುವ ಬೃಹತ್ ಶೋಭ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.