ಹಲ್ಲಿಯಿಂದ ತಿಳಿಯಬಹುದು ಭವಿಷ್ಯ...ಹಲ್ಲಿಗೆ ಸಂಬಂಧಿಸಿದ ಶುಭ-ಅಶುಭ ವಿಚಾರಗಳು

By Suvarna News  |  First Published Jan 18, 2021, 4:00 PM IST

ಶಾಸ್ತ್ರಗಳಲ್ಲಿ ಉಲ್ಲೇಖಿಸಲಾದ ಅನೇಕ ವಿಚಾರಗಳಿಂದ ನಮ್ಮ ಭವಿಷ್ಯದ ವಿಚಾರಗಳನ್ನು ತಿಳಿಯಲಾಗುತ್ತದೆ. ಶರೀರದ ಮೇಲೆ ಅಕಸ್ಮಾತ್ ಹಲ್ಲಿ ಬಿದ್ದರೆ ಅದಕ್ಕೆ ಗೌಳಿ ಪತನ, ಪಲ್ಲಿ ಶಕುನ ಎಂದೆಲ್ಲ ಕರೆಯುತ್ತಾರೆ. ಇದರಿಂದ ಭವಿಷ್ಯದಲ್ಲಿ ಶುಭ ಅಥವಾ ಅಶುಭ ಸಂಭವಿಸಲಿದೆ ಎಂದು ತಿಳಿಯಬಹುದಾಗಿದೆ. ಅಷ್ಟೇ ಅಲ್ಲದೆ ಮನೆಯಲ್ಲಿ ಹಲ್ಲಿಯನ್ನು ಕಂಡರೆ, ವಿವಿಧ ಸಮಯದಲ್ಲಿ ಹಲ್ಲಿಯು ಕಾಣಿಸುವುದು ಯಾವ ಸಂಕೇತವನ್ನು ಸೂಚಿಸುತ್ತದೆ? ಎಂಬುದನ್ನು ತಿಳಿಯೋಣ...


ಸಾಮಾನ್ಯವಾಗಿ ಹಲ್ಲಿ (ಪಲ್ಲಿ)ಗಳು ಮನೆಯ ಗೋಡೆ, ಬಾಗಿಲ ಬಳಿ ಕಾಣಸಿಗುತ್ತವೆ. ಹಲ್ಲಿಗಳನ್ನು ಕಂಡ ಕೂಡಲೆ ಭಯದಿಂದ ಅದನ್ನು ಓಡಿಸಲು ಮುಂದಾಗುತ್ತೇವೆ. ಶಾಸ್ತ್ರಗಳಲ್ಲಿ ಹಲ್ಲಿಯನ್ನು ಲಕ್ಷ್ಮೀಯ ಸ್ವರೂಪವೆಂದು ಹೇಳಲಾಗುತ್ತದೆ. ಹಾಗಾಗಿ ಹಲ್ಲಿಯನ್ನು ಹೆದರಿಸುವುದು, ಅದಕ್ಕೆ ತೊಂದರೆ ಮಾಡುವುದು ಒಳ್ಳೆಯದಲ್ಲವೆಂದು ಹೇಳಲಾಗುತ್ತದೆ.

ಹಲ್ಲಿಯು ಶರೀರದ ಮೇಲೆ ಬಿದ್ದರೆ ಅದನ್ನು ಶಕುನವೆಂದು ಹೇಳಲಾಗುತ್ತದೆ. ಶರೀರದ ಯಾವ ಭಾಗದ ಮೇಲೆ ಬಿದ್ದಿದೆ ಎಂಬುದರ ಆಧಾರದ ಮೇಲೆ ಶುಭ ಅಥವಾ ಅಶುಭ ಶಕುನವೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಮನೆಯಲ್ಲಿ ಹಲ್ಲಿಯ ಇರುವಿಕೆ ಮತ್ತು ಹಲ್ಲಿಯನ್ನು ಅಕಸ್ಮಾತ್ ನೋಡಿದ ಸಮಯವು ಸಹ ಭವಿಷ್ಯದಲ್ಲಿ ಆಗುವ ಶುಭ ಮತ್ತು ಅಶುಭ ವಿಚಾರಗಳ ಬಗ್ಗೆ ಸಂಕೇತವನ್ನು ನೀಡುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ. 

ಇದನ್ನು ಓದಿ: ಈ ರಾಶಿಯವರುವಿವಾಹವಾದರೆ ಮಹಾಯುದ್ಧವೇ ಸರಿ; ನಿಮ್ಮ ರಾಶಿ ಸೇರಿದ್ಯಾ? 

ದೀಪಾವಳಿಯ ರಾತ್ರಿ ಹಲ್ಲಿ ಕಂಡರೆ
ದೀಪಾವಳಿ ಹಬ್ಬದ ದಿನ ರಾತ್ರಿ ಮನೆಯಲ್ಲಿ ಹಲ್ಲಿಯು ಕಾಣಿಸಿದರೆ ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಹೀಗೆ ಹಲ್ಲಿ ಕಾಣಿಸುವುದರಿಂದ ಮುಂದಿನ ಜೀವನದಲ್ಲಿ ಸುಖ-ಸಮೃದ್ಧಿ ವೃದ್ಧಿಸುವುದಲ್ಲದೆ, ಆರ್ಥಿಕ ಸಂಕಷ್ಟಗಳು ದೂರಾಗಿ ಲಕ್ಷ್ಮೀ ಕೃಪೆ ಲಭಿಸುತ್ತದೆ ಎಂಬ ಸಂಕೇತವನ್ನು ಸೂಚಿಸುತ್ತದೆ.



ಹಲ್ಲಿಗಳು ಜಗಳವಾಡುವುದನ್ನು ನೋಡಿದರೆ
ಹಲ್ಲಿಗಳು ಪರಸ್ಪರ ಜಗಳವಾಡುವುದು ಅಶುಭದ ಸಂಕೇತವಾಗಿದೆ. ಹಲ್ಲಿಗಳ ಜಗಳವನ್ನು ನೋಡುವುದು ಅಶುಭವೆಂದು, ಇದು ಮನೆಯ ಸದಸ್ಯರಿಗೆ ಎದುರಾಗುವ ಸಮಸ್ಯೆಯನ್ನು ಮತ್ತು ಪರಸ್ಪರ ಮನಸ್ತಾಪವಾಗುವ ಸಂಕೇತವನ್ನು ಸೂಚಿಸುತ್ತದೆ. ಹಾಗಾಗಿ ಇಂಥ ಸಂದರ್ಭದಲ್ಲಿ ಮನೆಯಲ್ಲಿ ಆದಷ್ಟು ಜಗಳ ಮನಸ್ತಾಪಗಳಾಗದಂತೆ ನೋಡಿಕೊಳ್ಳುವುದು ಉತ್ತಮ.

ಇದನ್ನು ಓದಿ: 2021ರಲ್ಲಿ ಧನ ಸಮೃದ್ಧಿಯಾಗಲು ರಾಶಿಯನುಸಾರ ಹೀಗೆ ಮಾಡಿ..! 

ಹಲ್ಲಿಗಳು ಕೂಡುವುದನ್ನು ನೋಡಿದರೆ
ಹಲ್ಲಿಗಳ ಸಮಾಗಮವು ಅಕಸ್ಮಾತ್ ಕಣ್ಣಿಗೆ ಬಿದ್ದರೆ ಅದನ್ನು ಶುಭ ಶಕುನವೆಂದು ಹೇಳಲಾಗುತ್ತದೆ. ಇದರಿಂದ ಶುಭ ವಾರ್ತೆಯನ್ನು ಕೇಳಬಹುದು, ಬಂಧು-ಮಿತ್ರರ ಭೇಟಿಯಾಗಬಹುದು, ಒಟ್ಟಾರೆ ಹಲ್ಲಿಗಳು ಕೂಡುವುದು ಅಕಸ್ಮಾತ್ ಕಂಡರೆ ಶುಭವೆಂದು ಹೇಳಲಾಗುತ್ತದೆ.

ಲಕ್ಷ್ಮೀ ಸ್ವರೂಪ
ಮನೆಯಲ್ಲಿ ಗೋಡೆಯ ಮೇಲೆ, ಕಿಟಕಿಯ ಬಳಿ, ಬಾಗಿಲ ಸಂದಿಯಲ್ಲಿ ಹಲ್ಲಿಗಳಿರುತ್ತವೆ. ಅವು ಯಾವಾಗಲು ಅಲ್ಲೇ ಇದ್ದರು ನಾವದನ್ನು ಗಮನಿಸಿರುವುದಿಲ್ಲ. ಯಾವಾಗಲೋ ಒಮ್ಮೆ ನಮ್ಮ ಕಣ್ಣಿಗೆ ಬೀಳುತ್ತದೆ. ಹೀಗೆ ಕಂಡಾಗ ಲಕ್ಷ್ಮೀ ಸ್ವರೂಪವಾದ ಅದಕ್ಕೆ ನಮಸ್ಕರಿಸಿ, ಮನೋಕಾಮನೆಯನ್ನು ಈಡೇರಿಸುವಂತೆ ಮನಸ್ಸಿನಲ್ಲಿಯೆ ಕೇಳಿಕೊಂಡರೆ, ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆ ಇದೆ. ಶಾಸ್ತ್ರಗಳ ಪ್ರಕಾರ ಹಲ್ಲಿಯನ್ನು ಪೂಜಿಸುವುದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರಾಗುತ್ತವೆ ಎಂದು ಹೇಳಲಾಗುತ್ತದೆ.

ಹೊಸ ಮನೆಯಲ್ಲಿ ಸತ್ತಹಲ್ಲಿ ಕಂಡರೆ
ಹೊಸ ಮನೆಯನ್ನು ಪ್ರವೇಶಿಸುವ ಸಂದರ್ಭದಲ್ಲಿ ಸತ್ತ ಹಲ್ಲಿಯನ್ನು ಅಥವಾ  ಮಣ್ಣಿನ ಮೇಲಿರುವ ಹಲ್ಲಿಯನ್ನು ಕಂಡರೆ ಅಶುಭದ ಸಂಕೇತವೆಂದು ಹೇಳಲಾಗುತ್ತದೆ. ಮನೆಯ ಯಜಮಾನನ ಆರೋಗ್ಯವು ಹದಗೆಡುವ ಸೂಚನೆಯಾಗಿದೆ ಎಂದು ಹೇಳಲಾಗುತ್ತದೆ. ಹಾಗಾಗಿ ಹೊಸ ಮನೆಯನ್ನು ಪ್ರವೇಶಿಸುವ ಮೊದಲು ಈ ಬಗ್ಗೆ ಗಮನಹರಿಸುವುದು ಉತ್ತಮ.

ಇದನ್ನು ಓದಿ: 2021ರ ಸುಖ-ಸಮೃದ್ಧಿಗಾಗಿ ಗ್ರಹದೋಷ ನಿವಾರಣಾ ಮಂತ್ರಗಳು! 

ಕನಸಿನಲ್ಲಿ ಕಂಡರೆ
ಕನಸಿನಲ್ಲಿ ಹಲ್ಲಿಯು ಕೀಟಗಳನ್ನು ತಿನ್ನುತ್ತಿರುವಂತೆ ಅಥವಾ ದಾಳಿ ಮಾಡುತ್ತಿರುವಂತೆ ಕಂಡರೆ ಅದು ಅಶುಭವೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಹಲ್ಲಿಯನ್ನು ಹೊಡೆಯುತ್ತಿರುವಂತೆ, ಹಲ್ಲಿಯನ್ನು ನೋಡಿ ಹೆದರಿದಂತೆ ಕನಸು ಬಿದ್ದರೆ ಅಶುಭದ ಸಂಕೇತವೆಂದು ಹೇಳಲಾಗುತ್ತದೆ. ಈ ಎಲ್ಲ ಸಂಕೇತಗಳು ಭವಿಷ್ಯದಲ್ಲಿ ನಡೆಯುವ ಅಶುಭವನ್ನು ಸೂಚಿಸುತ್ತವೆಂದು ಹೇಳಲಾಗುತ್ತದೆ.

ಕನಸಿನಲ್ಲಿ ನೀವು ಹಲ್ಲಿಯನ್ನು ಹಿಡಿದಂತೆ, ಹಲ್ಲಿಯು ನಿಮ್ಮನ್ನು ನೋಡಿ ಹೆದರಿದಂತೆ ಕಂಡರೆ ಇದು ಶುಭದ ಸಂಕೇತವಾಗಿದೆ ಎಂದು ಹೇಳಲಾಗುತ್ತದೆ. ಸದ್ಯದಲ್ಲಿಯೇ ಶುಭವಾರ್ತೆಯು ಸಿಗುತ್ತದೆ ಎಂಬ ಅರ್ಥವನ್ನು ನೀಡುತ್ತದೆ. ಉತ್ತಮವಾದದ್ದು ನಡೆಯಲಿದೆ ಎಂದು ಸಹ ಹೇಳಬಹುದಾಗಿದೆ.

ದೇವರ ಕೋಣೆಯಲ್ಲಿ ಹಲ್ಲಿಯನ್ನು ಕಂಡರೆ
ಹಲ್ಲಿಯನ್ನು ಲಕ್ಷ್ಮೀ ಸ್ವರೂಪವೆಂದು ಹೇಳಲಾಗುತ್ತದೆ. ಹಾಗಾಗಿ ದೇವರ ಮನೆಯಲ್ಲಿ ಹಲ್ಲಿಯು ಕಾಣಿಸಿದರೆ ಶುಭ ಸೂಚನೆಯೆಂದು ಹೇಳಲಾಗುತ್ತದೆ. ದರಿದ್ರ ದೂರವಾಗಿ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ.

Tap to resize

Latest Videos

click me!