Temple Special: ಈ ದೇವಾಲಯದಲ್ಲಿ ಶಿವನಿಗೆ ಹಾಲು ನೀಡಿ ಮಜ್ಜಿಗೆ ಪ್ರಸಾದ ಪಡೆಯಿರಿ!

By Suvarna News  |  First Published Feb 23, 2022, 12:35 PM IST

ಸಾಮಾನ್ಯವಾಗಿ ಶಿವಭಕ್ತರು ತಮ್ಮ ನೆಚ್ಚಿನ ದೇವರ ಪೂಜೆಗೆ ಹಾಲನ್ನು ಅಭಿಷೇಕ ಮಾಡಿಸುವುದು ವಾಡಿಕೆ. ಹೀಗೆ ಅಭಿಷೇಕ ಮಾಡಿದ ಹಾಲನ್ನು ಕೊಂಚವೂ ವ್ಯರ್ಥ ಮಾಡದೆ ಸರಿಯಾದ ರೀತಿಯಲ್ಲಿ ಬಳಸಿ ಮಾದರಿಯಾಗಿದೆ ಬೆಂಗಳೂರಿನ ಈ ದೇವಾಲಯ. 


ಸಾಮಾನ್ಯವಾಗಿ ಮಹಾಶಿವರಾತ್ರಿ(Shivratri) ಬಂದರೆ ಭಾರತದಾದ್ಯಂತ ಎಲ್ಲ ಶಿವ ದೇವಾಲಯ(temple)ಗಳಲ್ಲಿ ಶಿವನಿಗೆ ಕ್ಷೀರಾಭಿಷೇಕ ಮಾಡಲಾಗುತ್ತದೆ. ಭಕ್ತರು ತಮ್ಮ ನೆಚ್ಚಿನ ದೇವರನ್ನು ಮೆಚ್ಚಿಸಲು ಹಾಲ(milk)ನ್ನು ದೇವಾಲಯಕ್ಕೆ ತೆಗೆದುಕೊಂಡು ಹೋಗಿ ಕೊಡುತ್ತಾರೆ. ಈ ಸಂದರ್ಭದಲ್ಲಿ ಒಂದು ವರ್ಗ ಮಕ್ಕಳು ಪೋಷಕಾಂಶ ಕೊರತೆಯಿಂದ ಒದ್ದಾಡುವಾಗ ದೇವರ ಮೂರ್ತಿಗೆ ಸಾವಿರಾರು ಲೀಟರ್ ಹಾಲು, ಜೇನು ಎಲ್ಲವನ್ನೂ ಅಭಿಷೇಕವೆಂದು ಸುರಿದು ವ್ಯರ್ಥ ಮಾಡಲಾಗುತ್ತಿದೆ ಎಂದು ತಮ್ಮ ಖಂಡನೆ ದಾಖಲಿಸುತ್ತಾರೆ. ಇತ್ತ ಭಕ್ತರು ಇವರ ಮನಸ್ಥಿತಿಗೆ ವಿರೋಧ ವ್ಯಕ್ತಪಡಿಸುತ್ತಾರೆ. 
ಇತ್ತ ಭಕ್ತರಿಗೂ ಬೇಜಾರಾಗಬಾರದು, ಅತ್ತ ಹಾಲೂ ವ್ಯರ್ಥವಾಗಬಾರದು- ಹಾಗೊಂದು ಸುಲಭ ಉಪಾಯ ಕಂಡುಕೊಂಡು ಮಾದರಿಯಾಗಿದೆ ಬೆಂಗಳೂರಿನ ಈ ದೇವಾಲಯ. 

ಗಂಗಾಧರೇಶ್ವರ ದೇವಾಲಯ
ಬೆಂಗಳೂರಿ(Bengaluru)ನ ಟಿ ದಾಸರಹಳ್ಳಿಯಲ್ಲಿರುವ ಗಂಗಾಧರೇಶ್ವರ ದೇವಾಲಯವು ಈ ಸಮಸ್ಯೆಗೊಂದು ಚೆಂದದ ಪರಿಹಾರ ಕಂಡುಕೊಂಡಿದೆ. ಇಲ್ಲಿ ಭಕ್ತರು ಶಿವನಿಗಾಗಿ ಪ್ರೀತಿಯಿಂದ ಹಾಲು ತಂದರೆ, ದೇವಾಲಯವು ಭಕ್ತರಿಗೆ ಪ್ರಸಾದದ ರೂಪದಲ್ಲಿ ಮಜ್ಜಿಗೆ(buttermilk) ಕೊಡುತ್ತದೆ. ಈ ಮೂಲಕ ದೇವಾಲಯಕ್ಕೆ ಭಕ್ತರಿಂದ ಅಭಿಷೇಕಕ್ಕಾಗಿ ಬರುವ ಹಾಲು ವ್ಯರ್ಥವಾಗದಂತೆ ಕಾಪಾಡಿಕೊಳ್ಳಲಾಗುತ್ತಿದೆ. 

Latest Videos

undefined

Maha Shivratri: ರಾಶಿಯನುಸಾರ ಶಿವರಾತ್ರಿಯಂದು ಈ ಮಂತ್ರಗಳನ್ನು ಜಪಿಸಿದರೆ ಫಲಸಿದ್ಧಿ..

ಈ ಗಂಗಾಧರೇಶ್ವರ ದೇವಾಲಯವು ಬೆಂಗಳೂರಿನ ಪ್ರಸಿದ್ಧ ಶಿವ ದೇಗುಲಗಳಲ್ಲೊಂದಾಗಿದ್ದು, ಇಲ್ಲಿ ಪ್ರತಿ ಸೋಮವಾರ 500 ಲೀಟರ್‌ನಷ್ಟು ಹಾಲು ಭಕ್ತರಿಂದ ಸಂಗ್ರಹವಾಗುತ್ತದೆ. ಇನ್ನು ಹಬ್ಬಗಳ ಸಂದರ್ಭದಲ್ಲಿ ಭಕ್ತರು ನೀಡುವ ಹಾಲು ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಂಗ್ರಹವಾಗುತ್ತದೆ. ಅದರಲ್ಲೂ ಮಹಾಶಿವರಾತ್ರಿಯ ವಿಷಯಕ್ಕೆ ಬಂದರೆ ಸಾವಿರಾರು ಲೀಟರ್ ಹಾಲು ದೇವಾಲಯಕ್ಕೆ ಅಭಿಷೇಕಕ್ಕಾಗಿ ಬರುತ್ತದೆ. ಇಷ್ಟೊಂದು ಮಟ್ಟದ ಹಾಲನ್ನು ವ್ಯರ್ಥ ಮಾಡಲು ಮನಸ್ಸು ಬಾರದೆ ದೇವಾಲಯದ ಆಡಳಿತ ಮಂಡಳಿಯು ಅದನ್ನು ಅತ್ಯುತ್ತಮ ಸ್ವಚ್ಛತೆಯಲ್ಲಿ ಕಾಪಾಡಿ ಹೆಪ್ಪು ಹಾಕುತ್ತದೆ. ಹೀಗೆ ಮಜ್ಜಿಗೆಯಾದ ಹಾಲನ್ನು ದೇವಾಲಯಕ್ಕೆ ಬರುವ ಭಕ್ತರಿಗೆ ಪ್ರಸಾದದ ರೂಪದಲ್ಲಿ ನೀಡುತ್ತದೆ. ಅಲ್ಲಿಗೆ ಹಾಲೂ ವ್ಯರ್ಥವಾಗುವುದಿಲ್ಲ, ಭಕ್ತರ ಶ್ರದ್ಧೆಗೂ ಧಕ್ಕೆಯಾಗುವುದಿಲ್ಲ. ಜೊತೆಗೆ, ಭಕ್ತರ ಬಾಯಾರಿಕೆ ನೀಗುವ ಜೊತೆಗೆ, ದೇಹಕ್ಕೆ ಪೋಷಣೆಯೂ ಆಗುತ್ತದೆ.

ಗುಣಮಟ್ಟಕ್ಕೆ ಪ್ರಾಮುಖ್ಯತೆ
ಹಾಲನ್ನು ಮಜ್ಜಿಗೆಯಾಗಿಸುವ ಕಾರಣದಿಂದ ಈ ದೇವಾಲಯದಲ್ಲಿ ಅದಕ್ಕೆ ಪೂಜೆಯ ಸಂದರ್ಭದಲ್ಲಿ ಕುಂಕುಮ, ಹೂವುಗಳು ಮಿಶ್ರಣವಾಗದಂತೆ ಎಚ್ಚರ ವಹಿಸಲಾಗುತ್ತದೆ. ಅರ್ಚಕರು ಸಂಪೂರ್ಣ ಸ್ವಚ್ಛವಾದ ಲಿಂಗಕ್ಕೆ ಹಾಲಿನ ಅಭಿಷೇಕ ಮಾಡಿ ಅದನ್ನು ಸಂಗ್ರಹಿಸಿದ ಬಳಿಕವೇ ಉಳಿದ ಪದಾರ್ಥಗಳನ್ನು ಅಭಿಷೇಕಕ್ಕೆ ಹಾಕುತ್ತಾರೆ. ಮಂಗಳವಾರದಂದು ಯಾರೇ ದೇವಾಲಯಕ್ಕೆ ಭೇಟಿ ನೀಡಿದರೂ ಅವರಿಗೆ ಮಜ್ಜಿಗೆ ನೀಡಲಾಗುತ್ತದೆ. ಮಜ್ಜಿಗೆಯ ಗುಣಮಟ್ಟ ಪರಿಶೀಲನೆ ಬಳಿಕವೇ ಅದನ್ನು ಪ್ರಸಾದವಾಗಿ ನೀಡುವುದು ವಿಶೇಷ. 

Mahashivratri : ಈ ಶಿವರಾತ್ರಿಗೆ ಜ್ಯೋತಿರ್ಲಿಂಗಗಳ ದರ್ಶನ ಪಡೆದು ಪುನೀತರಾಗಿರಿ..

ಭಕ್ತರು ಮಜ್ಜಿಗೆಯನ್ನು ಅಲ್ಲಿಯೇ ಸೇವಿಸಬಹುದು ಇಲ್ಲವೇ ಮನೆಗೆ ಕೊಂಡೊಯ್ಯಬಹುದು. ಆದರೆ, ಮನೆಗೆ ತೆಗೆದುಕೊಂಡು ಹೋಗಲು ಪ್ಲ್ಯಾಸ್ಟಿಕ್ ಬಾಟಲ್‌ಗಳನ್ನು ಬಳಸಲು ದೇವಾಲಯ ಅನುಮತಿಸುವುದಿಲ್ಲ. ಪ್ಲ್ಯಾಸ್ಟಿಕ್ ಕಸ ಹೆಚ್ಚುವ ಜೊತೆಗೆ ಮಜ್ಜಿಗೆಯ ಗುಣಮಟ್ಟ ಹಾಳಾಗುತ್ತದೆ ಎಂಬ ಯೋಚನೆ ದೇವಾಲಯದ್ದು.  

ಈಶ್ವರಾನಂದ ಸ್ವಾಮೀಜಿಯ ಚಿಂತನೆ
ಹೀಗೆ ಹಾಲನ್ನು ಮಜ್ಜಿಗೆ ಮಾಡಿ ಪ್ರಸಾದವಾಗಿ ಹಂಚುವ ಚಿಂತನೆಯು ದೇವಾಲಯದ ಮುಖ್ಯಸ್ಥರಾದ ಈಶ್ವರಾನಂದ ಸ್ವಾಮೀಜಿಯದು. ಭಾರತದ ಲಕ್ಷಾಂತರ ಮಕ್ಕಳು ಹಾಲು ಸಿಗದೆ ಪೋಷಕಾಂಶ ಕೊರತೆಯಿಂದ ಬಳಲುತ್ತಿರುವಾಗ ಯಾವ ದೇವಾಲಯದಲ್ಲೂ ಅಭಿಷೇಕಕ್ಕಾಗಿ ಬರುವ ಹಾಲು ವ್ಯರ್ಥವಾಗಬಾರದು ಎಂಬುದು ಅವರ ಯೋಚನೆ. ಇದಕ್ಕಾಗಿ ಮಾದರಿ ದಾರಿಯನ್ನು ತಮ್ಮ ದೇವಾಲಯದಿಂದಲೇ ಆರಂಭಿಸಬೇಕು ಎಂದು ಯೋಜಿಸಿದ ಅವರು ಈ ಮಜ್ಜಿಗೆ ಪ್ರಸಾದದ ಪರಿಹಾರ ಕಂಡುಕೊಂಡಿದ್ದಾರೆ. ಕೇವಲ ಇದೊಂದು ದೇವಾಲಯದಲ್ಲಿ ಸಾವಿರಾರು ಲೀಟರ್ ಹಾಲು ವಾರಕ್ಕೆ ಸಂಗ್ರಹವಾಗುತ್ತದೆ ಎಂದರೆ, ಭಾರತದಾದ್ಯಂತ ಇರುವ ದೇವಾಲಯಗಳಲ್ಲಿ ಸಂಗ್ರಹವಾಗುವ ಆಹಾರ ಪದಾರ್ಥಗಳೆಲ್ಲವೂ ಬಳಕೆಯಾದರೆ ಎಷ್ಟೊಂದು ಜನರ ಹಸಿವು ನೀಗುತ್ತದೆಯಲ್ಲವೇ?
 

click me!