ವಿಶಿಷ್ಟ ನಾಗಾರಾಧನೆ ಕಾಣುವ ಕುತ್ಯಾರಿನ ನಾಗಬನ; ಹರಕೆ ಹೊತ್ರೆ ಈಡೇರಿತೆಂದೇ ಲೆಕ್ಕ

By Suvarna NewsFirst Published May 20, 2023, 1:29 PM IST
Highlights

ಈ ಬನದಲ್ಲಿ ನಾಗನ ಕಲ್ಲುಗಳ ಜೊತೆ ಅದೆಷ್ಟೋ ಮಡಕೆಗಳಿವೆ. ಇದು ಈ ಬನದ ವಿಶಿಷ್ಟ ಹರಕೆ. ಇದಕ್ಕೆ ಮುರಿ ಅಂತಾ ಕರೀತಾರೆ. ಎಂತಹಾ ಸಂಕಷ್ಟ ಎದುರಾದರೂ ಮುರಿ ಹರಕೆ ಹೇಳಿಕೊಂಡರೆ ಪರಿಹಾರ ಶತಸಿದ್ಧ ಎನ್ನುವ ನಂಬಿಕೆ ಇಲ್ಲಿನ ಭಕ್ತರದ್ದಾಗಿದೆ.

ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ನಾಗಾರಾಧನೆಗೆ ಮಹತ್ವದ ಸ್ಥಾನವಿದೆ. ಇಲ್ಲಿನ ಎಲ್ಲಾ ಕುಟುಂಬಗಳಿಗೂ ಮೂಲನಾಗ ದೇವರ ಆರಾಧನೆ ಕಡ್ಡಾಯವಾಗಿದೆ . ಎಲ್ಲಾ ಕಡೆ ವೈದಿಕರ ಮೂಲಕ ನಾಗನ ಪೂಜೆ ಮಾಡಿಸೋದು ಪದ್ದತಿ. ಆದರೆ ಉಡುಪಿ ಜಿಲ್ಲೆಯ ಕುತ್ಯಾರಿನಲ್ಲಿ ಹಿಂದುಳಿದ ಮೊಗೇರ ಜನಾಂಗದವರೇ ನಡೆಸುವ ಒಂದು ವಿಶೇಷ ನಾಗಾರಾಧನೆ ಪದ್ದತಿ ಕಾಣಸಿಗುತ್ತದೆ . ತುಳುನಾಡಿನ ಮೂಲಜನಾಂಗದವರಾದ ಇವರು ನಡೆಸುವ ಈ ಜನಪದೀಯ ನಾಗಪೂಜೆ ವಿಶಿಷ್ಟವಾಗಿದೆ.

ಇದು ಉಡುಪಿ ಜಿಲ್ಲೆಯ ಕುತ್ಯಾರಿನಲ್ಲಿ ಮೊಗೇರ ಸಮಾಜದವರು ಆರಾಧಿಸುವ ಒಂದು ನಾಗಬನ. ಪ್ರಕೃತಿಯ ಪೂಜೆ ನಾಗಾರಾಧನೆಯ ಉದ್ದೇಶವಾಗಿದೆ. ದಟ್ಟ ಕಾಡಿನ ನಡುವೆ ಇರುವ ಈ ನಾಗಶಿಲೆಗಳನ್ನು ನೋಡಿದೊಡನೆ ಒಮ್ಮೆ ರೋಮಾಂಚನವಾಗುತ್ತದೆ. ಭಕ್ತಿಯ ಜೊತೆಗೆ ಈ ಆರಾಧನೆಯಲ್ಲಿ ಒಂದಿಷ್ಟು ನಿಗೂಢತೆಯೂ ಅಡಗಿದೆ. ಸಾಮಾನ್ಯವಾಗಿ ನಾಗರ ಪಂಚಮಿಯಂದು ಎಲ್ಲೆಡೆ ನಾಗನನ್ನು ಪೂಜಿಸಲಾಗುತ್ತೆ. ಆದರೆ ಇಲ್ಲಿರುವ ನಾಗಬನಕ್ಕೆ ವರ್ಷದ ವೃಷಭ ಮಾಸದಲ್ಲಿ ನಾಗನಿಗೆ ಪೂಜೆ ನಡೆಯುತ್ತದೆ. ನಾಗರ ಪಂಚಮಿಯ ದಿನ ಇಲ್ಲಿ ಯಾವುದೇ ಪೂಜೆ ನಡೆಯುವುದಿಲ್ಲ. 

Latest Videos

ಇಲ್ಲಿ ನಾಗನಿಗೆ ಪೂಜೆ ನಡೆಸುವವರು ಹಿಂದುಳಿದ ಮೊಗೇರ ಸಮಾಜದವರೇ ಹೊರತು ವೈದಿಕರಲ್ಲ. ಇಲ್ಲಿಗೆ ಯಾರೇ ಬಂದರೂ ಇವರ ಮೂಲಕವೇ ಪೂಜೆ ನಡೆಯಬೇಕು. ವರ್ಷದಲ್ಲೊಮ್ಮೆ ಮಾತ್ರ ಈ ಬನಕ್ಕೆ ಪ್ರವೇಶ. ದೇವರಿಗೆ ಯಾವುದೇ ಜಾತಿ ಬೇಧಗಳಿಲ್ಲ, ಅವನ ಮುಂದೆ ಎಲ್ಲರೂ ಸಮಾನರು ಅನ್ನೋದು ಈ ಆರಾಧನೆಯಿಂದ ಅರಿವಾಗುತ್ತೆ.

ಆದಿಪುರುಷ್ ಪ್ರಚಾರದ ವೇಳೆ ಪ್ರಭಾಸ್ 10 ಲಕ್ಷ ನೀಡಿದ ದೇವಸ್ಥಾನದ ವಿಶೇಷತೆ ಏನು?

ಪುರಾತನ ಸಂಪ್ರದಾಯದಂತೆ ಮೂಲೊಟ್ಟು ಗುತ್ತು ಮನೆತನದವರು ಭಕ್ತಿಯಿಂದ ಕೊಡುವ ಎಲೆ ಅಡಿಕೆ, ಹಾಗೂ ಭತ್ತವನ್ನು ಅಲ್ಲಿನ ಗುರಿಕಾರರು ನಾಗಬನಕ್ಕೆ ತರುತ್ತಾರೆ. ನಾಗ ಬನಕ್ಕೆ ಪ್ರವೇಶ ಮಾಡುವ ಮೊದಲು ಯಾವುದೇ ವಿಷಕಾರಿ ಹಾವುಗಳು ಮತ್ತು ವಿಷಜಂತುಗಳು ತೊಂದರೆ ಮಾಡಬಾರದೆಂದು ಕೈಮುಗಿದು ಪ್ರಾರ್ಥಿಸಿ ಪ್ರವೇಶ ಮಾಡುತ್ತಾರೆ. ನಂತರ ಯಾವುದೇ ಪರಿಕರಗಳಿಲ್ಲದೆ ಕೈಯಲ್ಲಿಯೇ ಸ್ವಚ್ಚ ಮಾಡಿ ಪೂಜೆಯನ್ನು ಮಾಡಲಾಗುತ್ತದೆ. 

ಈ ಬನದಲ್ಲಿ ನಾಗನ ಕಲ್ಲುಗಳ ಜೊತೆ ಅದೆಷ್ಟೋ ಮಡಕೆಗಳಿವೆ. ಇದು ಈ ಬನದ ವಿಶಿಷ್ಟ ಹರಕೆ. ಇದಕ್ಕೆ ಮುರಿ ಅಂತಾ ಕರೀತಾರೆ. ಎಂತಹಾ ಸಂಕಷ್ಟ ಎದುರಾದರೂ ಮುರಿ ಹರಕೆ ಹೇಳಿಕೊಂಡರೆ ಪರಿಹಾರ ಶತಸಿದ್ಧ ಎನ್ನುವ ನಂಬಿಕೆ ಇಲ್ಲಿನ ಭಕ್ತರದ್ದಾಗಿದೆ. ಭಕ್ತರು ಈ ನಾಗಬನಕ್ಕೆ ಬಂದು ತಮ್ಮ ಸಂಕಷ್ಟಗಳನ್ನು ಹೇಳಿಕೊಂಡು ಪ್ರಾರ್ಥನೆ ಸಲ್ಲಿಸಿ ಹೋಗುತ್ತಾರೆ. 

ಒಂದು ವರ್ಷದ ಅವಧಿಯಲ್ಲಿ ಹರಕೆ ಸಲ್ಲಿಸಿದವರ ಸಂಕಷ್ಟ ದೂರವಾದರೆ  ಮುರಿ ಸೇವೆ, ಅಥವಾ ಶಿಲೆ ಕಲ್ಲಿನ ನಾಗನ ಬಿಂಬವನ್ನು ಸಲ್ಲಿಸುತ್ತಾರೆ. ಮುರಿ ಎಂದರೆ ನಾಗನ ಹೆಡೆಯನ್ನು ಹೊಂದಿರುವ ಮಡಕೆ. ಈ ಹರಕೆ ಹೊತ್ತವರು ಶ್ರದ್ಧಾ ಭಕ್ತಿಗಳಿಂದ ತಲೆಯಲ್ಲಿ ಮಡಿಕೆ ಹೊತ್ತು ತರುತ್ತಾರೆ. ಹಾಗೂಹರಕೆಯ ಶಿಲೆ ಕಲ್ಲಿನ ನಾಗನ ಬಿಂಬವನ್ನೂಕೂಡ ತಲೆಯಲ್ಲಿಯೇ ಹೊತ್ತು ತರುತ್ತಾರೆ. ಈ ಮಡಕೆಯನ್ನು  ಒಂದು ಕುಂಬಾರ ಮನೆತನದವರು  ಮಾತ್ರ ತಯಾರಿಸುತ್ತಾರೆ. ಇದರ ತಯಾರಿಕೆಗೂ ಕೆಲವೊಂದು ನಿಯಮ ನಿಷ್ಠೆಗಳಿವೆ. 

ಮಡಕೆಯನ್ನು ತಯಾರಿಸಿದ ಕುಂಬಾರ ಕೆಲವು ವಿಧಿ ವಿಧಾನಗಳನ್ನು ನೆರವೇರಿಸಿ ಹರಕೆ ಹೊತ್ತವರ ತಲೆಗಿಡುತ್ತಾರೆ. ಬಳಿಕ ನಾಗಬನಕ್ಕೆ ತಂದು ಮುರಿಯನ್ನು ನಾಗನ ಕಲ್ಲಿನ ಸಮೀಪ ಇಟ್ಟು ಪೂಜಿಸಲಾಗುತ್ತದೆ . ಶಿಲೆ ಕಲ್ಲಿನ ನಾಗನ ಬಿಂಬವನ್ನೂ ಇದೇ ರೀತಿ ಸಮರ್ಪಿಸಲಾಗುತ್ತದೆ. ಇಲ್ಲಿ ಮುರಿ ಸೇವೆ ಹಾಗೂ ಶಿಲೆ ಕಲ್ಲಿನ ನಾಗ ಬಿಂಬವನ್ನು  ಒಪ್ಪಿಸಿ ಅದೆಷ್ಟೋ ಜನರ ಕಾಯಿಲೆಗಳು ವಾಸಿಯಾಗಿವೆ. ಸಂಕಷ್ಟಗಳು ದೂರವಾಗಿವೆ. 

ಹೆಜ್ಜೆ ಹೆಜ್ಜೆಗೂ ಜ್ಯೋತಿಷಿ ಸಲಹೆ ಕೇಳೋ ಡಿಕೆಶಿ ಶನಿವಾರವೇಕೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ?

ಇಂದಿನ ದಿನಗಳಲ್ಲಿ ಪ್ರಾಕೃತಿಕ ಬನಗಳೇ ಮಾಯವಾಗಿವೆ. ನಾಗ ಮತ್ತು ಪ್ರಕೃತಿಯ ಸಂಯೋಗದ ವಿಶಿಷ್ಟ ಆರಾಧನಾ ತಾಣ ಬನ. ಸದ್ಯ ಕಾಂಕ್ರೀಟೀಕರಣದಿಂದ ಬನಗಳು ಕಾಣದಾಗಿವೆ. ಈ ಸಂದರ್ಭದಲ್ಲಿ ಪ್ರಕೃತಿಯ ಮಡಿಲಲ್ಲಿರುವ ಈ ಕುತ್ಯಾರಿನ ನಾಗಬನದ ವಿಶಿಷ್ಟ ರೀತಿಯ ಹರಕೆ ಮತ್ತು ಆರಾಧನಾ ಪದ್ಧತಿ ವಿಶೇಷವಾಗಿದೆ. ಹಾಗೂ ಇಲ್ಲಿಗೆ ಹೋಗುವ ಮಾರ್ಗದ ವಿಷಯ ಬಂದಾಗ ತುಂಬಾ ದುಸ್ತರವಾಗಿದೆ ಹಾಗೂ ನೀರಿನ ಸಮಸ್ಯೆ ತುಂಬಾನೇ ಇದೆ.. ಇದನ್ನು ಆದಷ್ಟು ಬೇಗ ಸರಕಾರ ಹಾಗೂ ಜನಪ್ರತಿನಿದಿನಗಳು ಸರಿಪಡಿಸಿದಲ್ಲಿ ಇಲ್ಲಿಗೆ ಬರುವ ಭಕ್ತರು ಹಾಗೂ ಇಲ್ಲಿನ ನಿವಾಸಿಗಳಿಗೆ ತುಂಬಾ ಸಹಕಾರಿಯಾಗಲಿದೆ ಎಂಬುದು ಭಕ್ತರ ಆಶಯ.

click me!