Indian Mythology: ಪರಶುರಾಮ ಏಕೆ ಗಣೇಶನ ಹಲ್ಲು ಮುರಿದ?

By Kannadaprabha News  |  First Published Jul 24, 2023, 11:55 AM IST

ಪುರಾಣಗಳ ಬಗ್ಗೆ ಬಗದೆಷ್ಟೂ ಮಾಹಿತಿ ಸಿಕ್ತಾ ಹೋಗುತ್ತೆ. ಪ್ರತಿಯೊಂದಕ್ಕೂ ತನ್ನದೇ ಆದ ಮಹತ್ವವಿದೆ. ಒಳ್ಳೇ ಕೆಲಸಕ್ಕೂ ಮುನ್ನ ಪೂಜಿಸುವ ಗಣೇಶ ಏಕದಂತನಾಗಿದ್ದು ಹೇಗೆ? 


- ಮಹಾಬಲ ಸೀತಾಳಭಾವಿ

ನಮಗೆಲ್ಲ ಗೊತ್ತಿರುವಂತೆ ಗಣೇಶನಿಗಿರುವುದು ಒಂದೇ ದಂತ. ಇನ್ನೊಂದು ದಂತ ಮುರಿದು ಹೋಗಿದೆ. ಹೀಗಾಗಿಯೇ ಅವನು ಏಕದಂತ. ಆ ದಂತ ಮುರಿದಿದ್ದು ಏಕೆಂಬುದಕ್ಕೆ ನಮಗೊಂದು ಕತೆ ಗೊತ್ತಿದೆ. ಅದೇನು? ವ್ಯಾಸ ಮಹರ್ಷಿಗಳು ಮಹಾಭಾರತವನ್ನು ಹೇಳುತ್ತಾ ಹೋದಂತೆ ಗಣೇಶ ಅದೇ ವೇಗದಲ್ಲಿ ಅದನ್ನು ಬರೆಯುತ್ತಿದ್ದನಂತೆ. ವ್ಯಾಸರು ಮಧ್ಯದಲ್ಲಿ ನಿಲ್ಲಿಸಬಾರದು, ಗಣೇಶನೂ ಬರೆಯುವುದನ್ನು ನಿಲ್ಲಿಸಬಾರದೆಂಬುದು ಅವರ ನಡುವೆ ಆಗಿದ್ದ ಒಪ್ಪಂದ. ಆದರೆ ಬರೆಯುತ್ತಾ ಬರೆಯುತ್ತಾ ಅದೇನಾಯಿತೋ ಗೊತ್ತಿಲ್ಲ, ಗಣೇಶನ ಲೇಖನಿ ಮುರಿದು ಹೋಯಿತಂತೆ. ಆದರೆ ಬರೆಯುವುದನ್ನು ನಿಲ್ಲಿಸಬಾರದಲ್ಲ. ಹೀಗಾಗಿ ಅವನು ತನ್ನ ಒಂದು ದಂತವನ್ನೇ ಮುರಿದು ಅದರಲ್ಲಿ ಮಹಾಭಾರತವನ್ನು ಬರೆದನಂತೆ. ಆದ್ದರಿಂದ ಅವನು ಏಕದಂತನಾದ ಎಂಬ ಕತೆಯನ್ನು ನಾವು ಕೇಳಿದ್ದೇವೆ.
ಆದರೆ ಬ್ರಹ್ಮಾಂಡ ಪುರಾಣದ ಪ್ರಕಾರ ಗಣೇಶನ ಒಂದು ಹಲ್ಲನ್ನು ಮುರಿದಿದ್ದು ಭಾರ್ಗವ ಪರಶುರಾಮ. ಇದು ಬೇರೆಯದೇ ದೊಡ್ಡ ಕತೆ.

Tap to resize

Latest Videos

ಜಮದಗ್ನಿ ಮತ್ತು ರೇಣುಕೆ ಮಗ ಪರಶುರಾಮ. ಅವನು ತಪಸ್ಸಿಗೆ ಹೋದಾಗ ಹಳೆಯ ಸೇಡಿನಿಂದ ಕಾರ್ತವೀರ್ಯಾರ್ಜುನನ ಮಗ ಶೂರಸೇನನು ಜಮದಗ್ನಿಯ ತಲೆ ಕಡಿದು ಕೊಲ್ಲುತ್ತಾನೆ. ಮರಳಿ ಬಂದು ಅದನ್ನು ನೋಡಿದಾಗ ಸಿಟ್ಟಿಗೆದ್ದ ಪರಶುರಾಮನು ಭೂಮಂಡಲದಲ್ಲಿರುವ ಎಲ್ಲಾ ಕ್ಷತ್ರಿಯರನ್ನೂ ಸಾಯಿಸುತ್ತೇನೆಂದು ಪ್ರತಿಜ್ಞೆ ಮಾಡಿ ಪರಿಕ್ರಮಕ್ಕೆ ಹೊರಡುತ್ತಾನೆ. ಹಾಗೆ ಅವನು ಎಲ್ಲೆಡೆ ಸುತ್ತಿ, ತಪ್ಪು ಮಾಡಿದ ಕ್ಷತ್ರಿಯರನ್ನೆಲ್ಲ ತನ್ನ ಕೊಡಲಿಯಿಂದ ಕೊಂದ ಮೇಲೆ ಪರಶುರಾಮನಿಗೆ ತನ್ನ ಆರಾಧ್ಯ ದೈವನಾದ ಈಶ್ವರನನ್ನು ನೋಡಿ ಒಂದು ಉದ್ದಂಡ ನಮಸ್ಕಾರ ಮಾಡಿ ಬರಬೇಕು ಅನ್ನಿಸುತ್ತದೆ. ಅಂತೆಯೇ ಅವನು ಕೈಲಾಸಕ್ಕೆ ಹೋದ. ಅಲ್ಲಿ ನಂದೀಶ್ವರ, ಮಹಾಕಾಲ, ಭೈರವ, ರುದ್ರಗಣಗಳು, ಭೂತ, ಪ್ರೇತ, ಪಿಶಾಚಗಣಗಳ ಬಳಿಕ ಅವನಿಗೆ ಗಣೇಶ ಎದುರಾದ. ಈ ಗಣೇಶ ಸ್ವಲ್ಪ ಕಿಲಾಡಿ. ಅವನು ಪರಶುರಾಮನನ್ನು ಸುಲಭಕ್ಕೆ ಒಳಗೆ ಬಿಡಲು ಒಪ್ಪಲಿಲ್ಲ. ಹಿಂದೆ ಅವನು ಈಶ್ವರನಿಗೇ ಪಾರ್ವತಿಯನ್ನು ನೋಡಲು ಒಳಗೆ ಬಿಡದೆ ತಲೆ ಕಡಿಸಿಕೊಂಡಿದ್ದನಲ್ಲವೇ?

Benefits Of Aarti: ನಾವೇಕೆ ದೇವರಿಗೆ ಆರತಿ ಮಾಡುತ್ತೇವೆ?

ವಾಸ್ತವವಾಗಿ ಆ ಸಮಯದಲ್ಲಿ ಈಶ್ವರನು ಪಾರ್ವತಿಯ ಜೊತೆ ಏಕಾಂತದಲ್ಲಿದ್ದ. ಹೀಗಾಗಿ ಈಗ ಒಳಗೆ ಬಿಡಲು ಸಾಧ್ಯವಿಲ್ಲ, ಸ್ವಲ್ಪ ಸಮಯ ಆದ ಮೇಲೆ ನೋಡೋಣ ಎಂದು ಗಣೇಶ ಹೇಳಿದ್ದ. ಆದರೆ ಪರಶುರಾಮ ಸಿಟ್ಟಿನ ಅಪರಾವತಾರ. ಅವನಿಗೆ ಮಹಾನ್ ಆತುರ. ಹೀಗಾಗಿ ಇದ್ದಕ್ಕಿದ್ದಂತೆ ಗಣೇಶನ ಮೇಲೆ ತನ್ನ ಅಸ್ತ್ರವಾದ ಕೊಡಲಿ ಎತ್ತಿಬಿಟ್ಟ. ಗಣೇಶ ಸುಮ್ಮನಿದ್ದಾನೆಯೇ? ಅವನು ತನ್ನ ಸೊಂಡಿಲು ಎತ್ತಿ, ಪರಶುರಾಮನಿಗೆ ಅಸಂಖ್ಯ ಸುತ್ತು ಹಾಕಿ ಬಂಧಿಸಿಬಿಟ್ಟ. ಅಲ್ಲಿ ಪರಶುರಾಮನಿಗೆ ಸಪ್ತ ದ್ವೀಪಗಳು, ಸಪ್ತ ಪರ್ವತಗಳು, ಸಪ್ತ ಸಮುದ್ರಗಳು, ಸಪ್ತ ಲೋಕಗಳಾದ ಭೂಲೋಕ, ಭುವರ್‌ಲೋಕ, ಸ್ವರ್ಲೋಕ, ಜನೋಲೋಕ, ತಪೋಲೋಕ, ಧ್ರುವಲೋಕ, ಗೌರಿಲೋಕಗಳೆಲ್ಲದರ ದರ್ಶನವಾಯಿತು. ಕೊನೆಗೆ ಅಲ್ಲೇ ವೈಕುಂಠವನ್ನೂ ಗಣೇಶ ತೋರಿಸಿಬಿಟ್ಟ.

ಆದರೆ ಪರಶುರಾಮ ಸಾಮಾನ್ಯನಲ್ಲ. ಅವನ ಬಳಿ ಸ್ವತಃ ಪರಮೇಶ್ವರನೇ ಕೊಟ್ಟ ಕೊಡಲಿಯಿತ್ತು. ಹೀಗಾಗಿ ಸೊಂಡಿಲಿನ ಬಂಧನದ ನಡುವೆಯೇ ಹೇಗೋ ಕೊಸರಾಡಿಕೊಂಡು ಅವನು ಕೊಡಲಿಯಿಂದ ಗಣೇಶನ ಒಂದು ದಂತಕ್ಕೆ ಬಲವಾದ ಏಟು ಹಾಕಿದ. ಅದು ಟಕ್ಕೆಂದು ಮುರಿದು ಹೋಯಿತು! ಆಗ ಕೈಲಾಸದ ಅಚ್ಚ ಬಿಳಿಯ ಹಿಮ ಪರ್ವತಗಳ ಕಣಿವೆಗಳಲ್ಲಿ ಹೊಳೆಯಂತೆ ಕಡುಕೆಂಪು ರಕ್ತ ಹರಿಯಿತು.

ಕೂಡಲೇ ಅಣ್ಣ ಕಾರ್ತಿಕೇಯ ಓಡಿಬಂದು ಗಣೇಶನ ಸ್ಥಿತಿ ನೋಡಿ ಈಶ್ವರ ಮತ್ತು ಪಾರ್ವತಿಗೆ ದೂರು ಹೇಳಿದ. ಅವರು ಆಘಾತದಿಂದ ಹೊರಗೆ ಓಡಿ ಬಂದರು. ಗಣೇಶನನ್ನು ನೋಡಿದಾಕ್ಷಣ ಪಾರ್ವತಿಯ ದುಃಖದ ಕಟ್ಟೆ ಒಡೆಯಿತು. ಅವಳು ಪರಶುರಾಮನನ್ನು ಕೂಡಲೇ ಕೊಂದು ಹಾಕಿ ಎಂದು ಈಶ್ವರನಿಗೆ ಹೇಳುವವಳಿದ್ದಳು. ಆದರೆ ಎಷ್ಟೆಂದರೂ  ಲೋಕಮಾತೆಯಲ್ಲವೇ? ಪರಶುರಾಮನಿಗೆ, 'ನೀನು ಬ್ರಹ್ಮ ವಂಶದಲ್ಲಿ ಹುಟ್ಟಿದವನು. ನಿನ್ನ ತಂದೆ ಜಮದಗ್ನಿ ಮಹಾನ್ ತಪಸ್ವಿ. ತಾಯಿ ರೇಣುಕೆ ಲಕ್ಷ್ಮಿಯ ಒಂದು ಅಂಶ. ಅಂತಹ ಶ್ರೇಷ್ಠ ವಂಶದಲ್ಲಿ ಹುಟ್ಟಿದ ನಿನ್ನಂತಹವನು ನನ್ನ ಮಗನಿಗೆ ಹೀಗೆ ಮಾಡಲು ಸಾಧ್ಯವೇ? ನಿನ್ನ ಗುರು ಸ್ವತಃ ಪರಮೇಶ್ವರ. ಇದೇನಾ ನೀನು ಪರಮೇಶ್ವರನಿಗೆ ನೀಡಿದ ಗುರುದಕ್ಷಿಣೆ? ಮನಸ್ಸು ಮಾಡಿದ್ದರೆ ಗಣೇಶನಿಗೆ ನಿನ್ನನ್ನು ಕೊಲ್ಲುವುದು ದೊಡ್ಡ ಕೆಲಸವಾಗಿರಲಿಲ್ಲ. ಆದರೆ ಅವನು ನಿನ್ನೊಂದಿಗೆ ಕೇವಲ ಆಟವಾಡುತ್ತಿದ್ದ. ಅದನ್ನು ಅರ್ಥ ಮಾಡಿಕೊಳ್ಳದೆ ನೀನು ಬೇಕಂತಲೇ ಅವನ ದಂತ ಮುರಿದುಬಿಟ್ಟೆ. ಇಡೀ ವಿಶ್ವದಲ್ಲಿ ಮೊದಲ ಪೂಜೆ ಪಡೆಯುವ ಅವನಿಗೆ ನೀನು ಸಲ್ಲಿಸುವ ಗೌರವ ಇದೇನಾ?' ಎಂದು ಬೈದಳು.

Hindu Ritual: ಪ್ರತಿ ನಿತ್ಯ ಸಂಧ್ಯಾವಂದನೆ ಮಾಡುವುದ್ರಿಂದ ಇದೆ ಎಷ್ಟೊಂದು ಲಾಭ!

ಪರಶುರಾಮನಿಗೆ ನಾಚಿಕೆಯಾಯಿತು. ಅವನು ಈಶ್ವರ ಮತ್ತು ಪಾರ್ವತಿಯ ಕಾಲಿಗೆ ಬಿದ್ದು ಕ್ಷಮೆ ಕೇಳಿದ. ಅದೇ ವೇಳೆ, ಇದನ್ನೆಲ್ಲ ವೈಕುಂಠದಲ್ಲಿ ಕುಳಿತು ನೋಡುತ್ತಿದ್ದ ಮಹಾವಿಷ್ಣುವಿಗೆ ಪರಿಸ್ಥಿತಿಯ ಗಂಭೀರತೆಯ ಅರಿವಾಯಿತು. ಜಗತ್ತಿಗೇ ತಂದೆ ತಾಯಿಯಾದ ಈಶ್ವರ ಪಾರ್ವತಿ ಯಾವುದೇ ಕಾರಣಕ್ಕೂ ಈ ವಿಷಯವನ್ನು ಇನ್ನಷ್ಟು ಬೆಳೆಸಿ ಪರಶುರಾಮನನ್ನು ಕೊಲ್ಲಬಾರದು ಎಂದು ಅವನು ಕೂಡ ಪರಿಪರಿಯಾಗಿ ಬೇಡಿಕೊಂಡ. ಪಾರ್ವತಿಯ ಬಳಿ 'ಆಗಿದ್ದೆಲ್ಲ ಆಗಿಹೋಯಿತು. ಒಂದು ದಂತ ಮುರಿದರೂ ಗಣೇಶನ ಖ್ಯಾತಿಯೇನೂ ಕಡಿಮೆಯಾಗುವುದಿಲ್ಲ. ಅವನು ಇನ್ನುಮುಂದೆ ಏಕದಂತ ಎಂದು ಎಲ್ಲೆಡೆ ಪೂಜೆ ಪಡೆಯುತ್ತಾನೆ,' ಎಂದು ವಿಷ್ಣು ಸಮಾಧಾನ ಮಾಡಿದ. ಪಾರ್ವತಿ ಒಪ್ಪಿದಳು. ಅಷ್ಟರಲ್ಲಿ ಪರಶುರಾಮನು ಗಣೇಶನ ಬಳಿಯೂ ಕ್ಷಮೆ ಕೇಳಿದ. ಎಂಬಲ್ಲಿಗೆ ಪ್ರಕರಣ ಸುಖಾಂತ್ಯವಾಯಿತು.
ಗಣೇಶ ಶಾಶ್ವತವಾಗಿ ಏಕದಂತನಾದ.

click me!