ಎಂಟು ಮಂದಿ ಚಿರಂಜೀವಿಗಳನ್ನು ನಿತ್ಯ ಸ್ಮರಿಸಿದರೆ ದೀರ್ಘಾಯುಷ್ಯ!

By Contributor Asianet  |  First Published Feb 11, 2022, 3:40 PM IST

ಎಂಟು ಮಂದಿ ಚಿರಂಜೀವಿಗಳು ಇದ್ದಾರೆ ಎಂದು ಪುರಾಣ ಸಾರುತ್ತದೆ. ಅವರೆಲ್ಲ ಯಾರ್ಯಾರು? ಈಗಲೂ ಇದ್ದಾರೆಯೇ? ಅವರನ್ನು ಸ್ಮರಿಸಿದರೆ ದೀರ್ಘಾಯುಷ್ಯ ನಿಜವೇ?


ಅಶ್ವತ್ಥಾಮ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣ
ಕೃಪಾಃ ಪರಶುರಾಮಾಶ್ಚ ಸಪ್ತೇ ಚಿರಂಜೀವಿನಃ
ಸಪ್ತೇತಾಂ ಸಂಸ್ಮರೇನ್ನಿತ್ಯಂ ಮಾರ್ಕಂಡೇಮತಾಷ್ಟಮಮ್
ಜೀವೇದ್ವರ್ಷತಂ ಸೋಪಿ ಸರ್ವವ್ಯಾಧಿವಿವರ್ಜಿತ

ಇದು ಎಂಟು ಮಂದಿ ಚಿರಂಜೀವಿಗಳನ್ನು ನಿತ್ಯ ಸ್ಮರಿಸಿದರೆ ನಿಮಗೆ ದೀರ್ಘಾಯುಷ್ಯ (Long Life) ಹಾಗೂ ಉತ್ತಮ ಆರೋಗ್ಯ (Health) ಖಾತ್ರಿ ಎಂದು ಹೇಳುವ ಮಂತ್ರ. ಈ ಎಂಟೂ ಮಂದಿ ಯುಗಯುಗಗಳ ಕಾಲದಿಂದಲೂ ಈಗಲೂ ಬದುಕಿದ್ದಾರೆ ಎಂದು ಹೇಳಲಾಗುತ್ತದೆ.

Tap to resize

Latest Videos

undefined

ಬಲಿ (Bali)
ಇವನು ಪಾತಾಳಲೋಕದ ಅಧಿಪತಿ. ಕೃತಯುಗದಲ್ಲಿ ಮೂರು ಲೋಕಗಳನ್ನೂ ತನ್ನ ಪರಾಕ್ರಮದಿಂದ ಆಳಿದ. ಇವನ ಪರಾಕ್ರಮ ಕಂಡು ದೇವತೆಗಳು ದಿಕ್ಕೆಟ್ಟು, ಮಹಾವಿಷ್ಣುವಿನಲ್ಲಿ ಮೊರೆಯಿಟ್ಟರು. ಮಹಾವಿಷ್ಣು ವಾಮನಾವತಾರ ತಾಳಿ, ಯಜ್ಞ ಮಾಡುತ್ತಿದ್ದ ಬಲಿಯ ಬಳಿಗೆ ಬಂದು, ಮೂರು ಹೆಜ್ಜೆ ದಾನ ಬೇಡಿ, ಎರಡು ಹೆಜ್ಜೆಗಳಲ್ಲಿ ಸ್ವರ್ಗ ಮರ್ತ್ಯ ಪಾತಾಳಗಳನ್ನು ಅಳೆದು, ಮೂರನೇ ಹೆಜ್ಜೆಯನ್ನು ಬಲಿಯ ತಲೆ ಮೇಲಿಟ್ಟು ಪಾತಾಳಕ್ಕೆ ತಳ್ಳಿದನೆಂದು ಕತೆ. ಬಲಿಯ ಭಕ್ತಿ, ಕೆಚ್ಚು, ತಪಸ್ಸಿಗೆ ಮೆಚ್ಚಿ ಚಿರಂಜೀವಿತ್ವದ ವರವನ್ನು ನೀಡುತ್ತಾನೆ ಮಹಾವಿಷ್ಣು. ಈಗಲೂ ದೀಪಾವಳಿಯ ಸಂದರ್ಭದಲ್ಲಿ ಬಲಿಪಾಡ್ಯದಂದು ಬಲಿ ಭೂಮಿಗೆ ಭೇಟಿ ನೀಡಿ ಮರಳುತ್ತಾನೆ ಎಂಬ ಕತೆಯಿದೆ.

Mythology: ಶ್ರೀಕೃಷ್ಣ ಶಿವನೊಡನೆ ಯುದ್ಧ ಮಾಡಿದ್ದೇಕೆ?

ಹನುಮಂತ (Hanuman)
ಇದಂತೂ ಎಲ್ಲರಿಗೂ ತಿಳಿದ ವಿಷಯವೇ. ಪ್ರತಿ ಯುಗದಲ್ಲೂ ಹನುಮಂತನಿಗೆ ನಾನಾ ಸ್ವರೂಪಗಳಲ್ಲಿ ಮಹಾವಿಷ್ಣುವು ಕಾಣಿಸಿಕೊಳ್ಳುತ್ತಾನೆ. ದೇವತೆಗಳ ಆಶೀರ್ವಾದದಿಂದ ಹನುಮ ಚಿರಂಜೀವಿ. ಯಮನು ಅವನನ್ನು ಕೊಂಡೊಯ್ಯಲಾರ. ತ್ರೇತಾಯುಗದ ಶ್ರೀರಾಮನೇ ದ್ವಾಪರಯುಗದಲ್ಲಿ ಶ್ರೀಕೃಷ್ಣನಾಗಿ ಅವತರಿಸಿ ದರ್ಶನ ನೀಡುತ್ತಾನೆ. ಕಲಿಯುಗದಲ್ಲಿಯೂ ಕಾಣಿಸಿಕೊಳ್ಳುವ ಭರವಸೆ ನೀಡುತ್ತಾನೆ. ದ್ವಾಪರಯುಗದಲ್ಲಿ ಹನುಮಂತ ಹಿಮಾಲಯದ ಕದಳಿವನದಲ್ಲಿದ್ದ. ಅಲ್ಲಿ ಭೀಮಸೇನ ಆತನನ್ನು ಭೇಟಿ ಮಾಡಿದ ಕತೆಯಿದೆ. ನಂತರ ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನ ರಥದ ಧ್ವಜದಲ್ಲಿದ್ದ. ಕಲಿಯುಗದಲ್ಲಿ ಅವನ ದರ್ಶನ ದುರ್ಲಭ. ಆದರೆ ಇದ್ದಾನೆಂಬುದಂತೂ ಖಚಿತ.

ಅಶ್ವತ್ಥಾಮ (Ashwatthama)
ಅಶ್ವತ್ಥಾಮ ಮಾಡಿದ ಕುಕೃತ್ಯಕ್ಕಾಗಿ ಅವನಿಗೆ ಶಿಕ್ಷೆಯ ರೂಪದಲ್ಲಿ ಚಿರಂಜೀವಿತ್ವ ಲಭ್ಯವಾಗಿದೆ. ಕುರುಕ್ಷೇತ್ರ ಯುದ್ಧ ಮುಗಿದ ಬಳಿಕ. ಸೇಡಿಗಾಗಿ, ನಿದ್ರೆಯಲ್ಲಿದ್ದ ಪಾಂಡವರ ಮಕ್ಕಳ ತಲೆಕಡಿದುದು, ನಂತರ ಬ್ರಹ್ಮಾಸ್ತ್ರ ಪ್ರಯೋಗ ಮಾಡಿ ಅದನ್ನು ಉಪಶಮನ ಮಾಡಲು ಗೊತ್ತಿಲ್ಲದೆ, ಅದು ಉತ್ತರೆಯ ಮಗನನ್ನು ಬಲಿ ತೆಗೆದುಕೊಳ್ಳುವಂತೆ ಮಾಡಿದ್ದು- ಇವೆಲ್ಲ ಅವನ ಪಾಪಕೃತ್ಯಗಳು. ಯುಗಾಂತರಗಳವರೆಗೂ ಅವನು ತನ್ನ ಕೃತ್ಯಗಳಿಗಾಗಿ ಪಶ್ಚಾತ್ತಾಪ ಪಡುತ್ತಾ ಇರಬೇಕು; ಈ ಕಲ್ಪ ಮುಗಿದು ಮುಂದಿನ ಕಲ್ಪದಲ್ಲಿ ಅವನು ಸಪ್ತರ್ಷಿಗಳಲ್ಲಿ ಒಬ್ಬನಾಗುತ್ತಾನೆ. ಇದು ಅವನ ವಿಧಿ. ಸಾವಿರಾರು ಬ್ರಾಹ್ಮಣರಿಗೆ ಭೋಜನ ಹಾಕಿದರೆ ಇವನೂ ಬಂದು ಉಂಡು ಹೋಗುತ್ತಾನೆ ಎಂಬ ದಂತಕತೆಯಿದೆ. ಹಿಂದೆ, ನಾರಣಪ್ಪನೆಂಬ ಬ್ರಾಹ್ಮಣ, ಅಂಥದೊಂದು ಬ್ರಾಹ್ಮಣಭೋಜನಕ್ಕೆ ಹೋಗಿದ್ದ. ಅಲ್ಲಿ ಒಬ್ಬ ಹಠಮಾರಿ ಬಾಲಕನಿಗೆ ಯಾರೋ "ದುರ್ಯೋಧನನಷ್ಟು ಕೆಟ್ಟ ಹಠಮಾರಿ'' ಎಂಧು ಗದರಿದರು. ಇದನ್ನು ಕೇಳಿಸಿಕೊಂಡ ಒಬ್ಬ ಬ್ರಾಹ್ಮಣ ಅಲ್ಲಿಂದ ಕಣ್ಣೀರು ಹಾಕುತ್ತಾ ಹೊರನಡೆದ. ನಾರಣಪ್ಪನಿಗೆ ಅನುಮಾನ ಬಂದು ಅವನನ್ನು ಹಿಂಬಾಲಿಸಿದ. ಆಪ್ತಮಿತ್ರ ದುರ್ಯೋಧನನನ್ನು ಟೀಕಿಸಿದ್ದಕ್ಕೆ ದುಃಖಿಸಿದ ಅಶ್ವತ್ಥಾಮನೇ ಅವನು ಎಂಬುದು ನಾರಣಪ್ಪನ ಎಣಿಕೆಯಾಗಿತ್ತು. ಅವನ ಎಣಿಕೆ ಸುಳ್ಳಾಗಲಿಲ್ಲ. ಅವನೇ ಮುಂದೆ ಮಹಾಭಾರತದ ಸಂಪೂರ್ಣ ಕತೆಯನ್ನು ನಾರಣಪ್ಪನಿಗೆ ಹೇಳಿ, ನಾರಣಪ್ಪ ಅದನ್ನು ಬರೆದು ಕವಿ ಕುಮಾರವ್ಯಾಸ ಎನಿಸಿದ.

ವೇದವ್ಯಾಸ (Vedavyasa)
ವೇದವ್ಯಾಸರು ಒಬ್ಬರೇ ಅನ್ನುತ್ತಾರೆ. ಹಲವು ಮಂದಿ ವ್ಯಾಸರಿದ್ದಾರೆ ಎಂದೂ ಹೇಳುತ್ತಾರೆ. ವೇದಗಳನ್ನು ವಿಂಗಡಿಸಿದವರು, ಮಹಾಭಾರತ- ಭಾಗವತಗಳನ್ನು ಬರೆದವರು ಪರಾಶರಪುತ್ರರಾದ ವ್ಯಾಸರು. ಇವರನ್ನು ಕೃಷ್ಣದ್ವೈಪಾಯನರೆಂದೂ ಹೇಳುತ್ತಾರೆ. ಹಿಮಾಲಯದ ಬದರಿಕಾಶ್ರಮ ಇವರ ನೆಚ್ಚಿನ ತಪಸ್ಸಿನ ಜಾಗ.

Best Dads: ಅಪ್ಪ ಅಂದ್ರೆ ಹೀಗಿರಬೇಕು ಅನ್ನಿಸಿಕೊಳ್ಳೋ ರಾಶಿಯವರಿವರು!

ಕೃಪಾಚಾರ್ಯ (Krupacharya)
ಕೃಪಾಚಾರ್ಯರು ದ್ರೋಣರ ಹೆಂಡತಿ ಕೃಪಿಯ ಅಣ್ಣ. ಶರಧನ್ವರೆಂಬ ಋಷಿಯ ಮಕ್ಕಳು ಇವರಿಬ್ಬರೂ. ಇವರಿಗೆ ಚಿರಂಜೀವತ್ವ ಯಾಕೆ ಲಭ್ಯವಾಯಿತು ಎಂಬುದು ಸ್ಪಷ್ಟವಿಲ್ಲ. ಬಹುಶಃ ಅಶ್ವತ್ಥಾಮನ ಜೊತೆಗೆ ಸೇರಿ, ನಿದ್ರಿಸುತ್ತಿದ್ದ ಉಪಪಾಂಡವರ ತಲೆ ಕಡಿದುದರಿಂದ ಶಿಕ್ಷೆಯ ರೂಪದಲ್ಲಿ ಚಿರಂಜೀವತ್ವ ಬಂದಿರಬೇಕು. ಈ ಪಾಪಪ್ರಜ್ಞೆಯೊಂದಿಗೆ ಅವರು ಸುದೀರ್ಘಕಾಲ ನರಳಬೇಕು. ಮುಂದಿನ ಕಲ್ಪದಲ್ಲಿ ಅವರು ಸಪ್ತರ್ಷಿಗಳಲ್ಲಿ ಒಬ್ಬರಾಗುತ್ತಾರೆ ಎಂದು ಪುರಾಣದಲ್ಲಿ ಹೇಳಲಾಗಿದೆ.

ವಿಭೀಷಣ (Vibhishana)
ಬ್ರಹ್ಮನನ್ನು ತಪಸ್ಸು ಮಾಡಿ ಒಲಿಸಿಕೊಂಡು ತಮಗೆ ಯಾರಿಂದಲೂ ಸಾವು ಬರಬಾರದು ಎಂದು ರಾವಣ ವರ ಕೇಳಿದ. ನಿದ್ರೆ ಕೊಡುವಂತೆ ಕುಂಭಕರ್ಣ ಕೇಳಿದ. ಅವರ ತಮ್ಮ ವಿಭೀಷಣ, ದೈವಭಕ್ತಿ ತನ್ನಲ್ಲಿ ಸದಾ ಇರಲೆಂದ. ವಿಭೀಷಣನಿಗೆ ಒಲಿದ ಬ್ರಹ್ಮ, ನೀನು ಚಿರಂಜೀವಿಯಾಗು ಎಂದು ಹರಸಿದ. ಮುಂದೆ ರಾವಣ ಸತ್ತ ಬಳಿಕ ವಿಭೀಷಣನಿಗೆ ಲಂಕೆಯ ಪಟ್ಟವನ್ನು ರಾಮ ಕಟ್ಟಿದ. ಮುಂದೆ ದ್ವಾಪರಯುಗದಲ್ಲಿ, ರಾಜಸೂಯದ ದಿಗ್ವಿಜಯಕ್ಕಾಗಿ ದಕ್ಷಿಣ ದಿಕ್ಕಿಗೆ ಬಂದ ಸಹದೇವನಿಗೆ ವಿಭೀಷಣ ಭೇಟಿಯಾಗಿ, ಕಪ್ಪಕಾಣಿಗಳನ್ನು ನೀಡಿ ಸಂತುಷ್ಟಪಡಿಸಿದ ಕತೆಯಿದೆ.

ಮಾರ್ಕಂಡೇಯ (Markandeya)
ಮೃಕಂಡು ಮುನಿಯ ಮಗ, ಅಲ್ಪಾಯುಷಿಯಾದ ಮಾರ್ಕಂಡೇಯ, ತನ್ನ ಆಯುಷ್ಯ ಮುಗಿದ ದಿನ ಶಿವಾಲಯ ಹೊಕ್ಕು ಶಿವನನ್ನು ಪೂಜಿಸುತ್ತ ಕುಳಿತುಬಿಡುತ್ತಾನೆ. ಆತನನ್ನು ಎಳೆದೊಯ್ಯಲು ಬಂದ ಯಮದೂತರು ಶಿವಾಲಯ ಪ್ರವೇಶಿಸಲಾಗದೆ ಆತನಿಗೆ ಉರುಳು ಹಾಕಿ ಎಳೆದೊಯ್ಯಲು ಮುಂದಾದಾಗ ಶಿವಗಣಗಳು ತಡೆಯುತ್ತವೆ. ಘನಘೋರ ಯುದ್ಧವಾಗಿ, ಯಮ- ಶಿವ ಕೂಡ ಬಂದು ಹೊಡೆದಾಡುತ್ತಾರೆ. ಶಿವ ಪ್ರಭಾವದ ಮುಂದೆ ಯಮ ನಿಷ್ಕ್ರಿಯನಾಗುತ್ತಾನೆ. ಮಾರ್ಕಂಡೇಯ ಭಕ್ತಿಗೆ ಮೆಚ್ಚಿ ಶಿವ ಆತನನ್ನು ಚಿರಂಜೀವಿಯಾಗೆಂದು ಹರಸುತ್ತಾನೆ.

ಪರಶುರಾಮ (Parashuram)
ಪರಶುರಾಮರು ಮಹಾವಿಷ್ಣುವಿನ (Mahavishunu) ಆರನೇ ಅವತಾರ. ಇವರು ಉದ್ಠಟರಾದ ಕ್ಷತ್ರಿಯರನ್ನು ನಾಶ ಮಾಡಲು ಭೂಮಿಯನ್ನು ಇಪ್ಪತ್ತೊಂದು ಬಾರಿ ಪ್ರದಕ್ಷಿಣೆ ಬಂದರಂತೆ. ತಮ್ಮ ಕೊಡಲಿಯಿಂದಲೇ ದುಷ್ಟ ಕ್ಷತ್ರಿಯರ ಸಂಹಾರ ಮಾಡಿದರು. ಹಿಮಾಲಯದಲ್ಲಿ ಇಂದಿಗೂ ತಪಸ್ಸು ಮಾಡುತ್ತ ಇದ್ದಾರೆ ಎಂಬುದು ಕತೆ. ರಾಮಾಯಣದಲ್ಲಿ ಇವರು ಶ್ರೀರಾಮನನ್ನು ಎದುರುಗೊಂಡ ಕತೆ, ಮಹಾಭಾರತದಲ್ಲಿ ಭೀಷ್ಮನ ಜೊತೆ ಯುದ್ಧ ಮಾಡಿದ ಕತೆ ಇದೆ.

click me!