Mysuru Dasara 2022: ಅದ್ಧೂರಿ ಜಂಬೂಸವಾರಿಗೆ ಲಕ್ಷಾಂತರ ಜನ ಸಾಕ್ಷಿ

By Govindaraj SFirst Published Oct 6, 2022, 8:05 AM IST
Highlights

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ, ಬುಧವಾರ ಅದ್ಧೂರಿಯಾಗಿ ನೆರವೇರಿತು. ಮಧ್ಯಾಹ್ನ ಅರಮನೆ ಆವರಣದಿಂದ ಆರಂಭವಾದ ಜಂಬೂಸವಾರಿ, 5 ಕಿ.ಮೀ.ಗಳಷ್ಟುದೂರ ಸಾಗಿ, ಸಂಜೆ ಬನ್ನಿಮಂಟಪ ತಲುಪಿತು.

ಅಂಶಿ ಪ್ರಸನ್ನಕುಮಾರ್‌

ಮೈಸೂರು (ಅ.06): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ, ಬುಧವಾರ ಅದ್ಧೂರಿಯಾಗಿ ನೆರವೇರಿತು. ಮಧ್ಯಾಹ್ನ ಅರಮನೆ ಆವರಣದಿಂದ ಆರಂಭವಾದ ಜಂಬೂಸವಾರಿ, 5 ಕಿ.ಮೀ.ಗಳಷ್ಟುದೂರ ಸಾಗಿ, ಸಂಜೆ ಬನ್ನಿಮಂಟಪ ತಲುಪಿತು. ಗಜರಾಜ ‘ಅಭಿಮನ್ಯು’ ಸತತ ಮೂರನೇ ಬಾರಿಗೆ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದ. ರಸ್ತೆಯ ಇಕ್ಕೆಡೆಗಳಲ್ಲಿ ಸೇರಿದ್ದ ಅಪಾರ ಜನಸ್ತೋಮ ಮೆರವಣಿಗೆಯನ್ನು ಕಣ್ತುಂಬಿಕೊಂಡಿತು. ಬಳಿಕ, ಸಂಜೆ ಬನ್ನಿಮಂಟಪದಲ್ಲಿ ನಡೆದ ಆಕರ್ಷಕ ಪಂಜಿನ ಕವಾಯತಿನೊಂದಿಗೆ 10 ದಿನಗಳ ಅದ್ದೂರಿ ದಸರಾಕ್ಕೆ ತೆರೆ ಬಿತ್ತು.

ಸಿಎಂರಿಂದ ಚಾಲನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಧ್ಯಾಹ್ನ 2.36 ರಿಂದ 2.50ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಉತ್ತರದ ‘ಬಲರಾಮ’ ದ್ವಾರದಲ್ಲಿ ನಂದಿ ಧ್ವಜ ಪೂಜೆ ನೆರವೇರಿಸುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಿದರು. ನಾಡಿನ ಕಲೆ, ಸಂಸ್ಕೃತಿ, ಪರಂಪರೆ, ಪ್ರಗತಿಯನ್ನು ಪ್ರತಿಬಿಂಬಿಸುವ 65 ಜಾನಪದ ಕಲಾ ತಂಡಗಳು, 47 ಸ್ತಬ್ಧಚಿತ್ರಗಳು ಒಂದರ ಹಿಂದೆ ಒಂದರಂತೆ ಸಾಗಿದವು. ಕಲಾತಂಡದವರು ಉತ್ಸಾಹದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡು ತಮ್ಮ ಪ್ರದರ್ಶನದ ಮೂಲಕ ಮೆರುಗು ತುಂಬಿದರು.

ನಂದಿಪೂಜೆಯೊಂದಿಗೆ ವಿಜಯದಶಮಿ ಮೆರವಣಿಗೆಗೆ ಮುನ್ನುಡಿ: ಜಂಬೂಸವಾರಿಯಲ್ಲಿ 47 ಸ್ತಬ್ಧಚಿತ್ರಗಳ ಮೆರವಣಿಗೆ

ಬಳಿಕ, ಸಂಜೆ 5.37ಕ್ಕೆ, 22 ನಿಮಿಷ ವಿಳಂಬವಾಗಿ, 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ವಿಗ್ರಹ ಹೊತ್ತು ‘ಅಭಿಮನ್ಯು’ ತನ್ನ ಸಂಗಾತಿಗಳಾದ ‘ಕಾವೇರಿ’ ಮತ್ತು ‘ಚೈತ್ರಾ’ ಜೊತೆ ವಿಶೇಷ ವೇದಿಕೆಯತ್ತ ಆಗಮಿಸಿದ. ಈ ವೇಳೆ, ಸಿಎಂ ಬೊಮ್ಮಾಯಿ ಅವರು ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುತ್ತಿದ್ದಂತೆ 21 ಸುತ್ತು ಕುಶಾಲ ತೋಪುಗಳನ್ನು ಸಿಡಿಸಿ, ರಾಷ್ಟ್ರಗೀತೆ ನುಡಿಸಲಾಯಿತು. ವಿಶೇಷ ವೇದಿಕೆಯಲ್ಲಿ ಮುಖ್ಯಮಂತ್ರಿಗಳ ಜೊತೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ಕುಮಾರ್‌, ಮೇಯರ್‌ ಶಿವಕುಮಾರ್‌, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌, ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ ಇದ್ದರು.

ಮೆರವಣಿಗೆ ಚಾಮರಾಜ ವೃತ್ತ. ಕೃಷ್ಣರಾಜ ವೃತ್ತ, ಸಯ್ಯಾಜಿರಾವ್‌ ರಸ್ತೆ, ಆರ್ಯುವೇದ ಕಾಲೇಜು ವೃತ್ತ, ಹೈವೇ ವೃತ್ತದ ಮೂಲಕ ಐದು ಕಿ.ಮೀ.ದೂರ ಕ್ರಮಿಸಿ, ಬನ್ನಿಮಂಟಪ ತಲುಪಿತು. ಅರಮನೆ ಆವರಣದಲ್ಲಿ ಮಾತ್ರವಲ್ಲದೇ ದೇಶ- ವಿದೇಶಗಳಿಂದ ಬಂದಿದ್ದ ಲಕ್ಷಾಂತರ ಮಂದಿ ಮೆರವಣಿಗೆ ಸಾಗಿದ ಇಕ್ಕೆಲಗಳಲ್ಲಿ ನಿಂತು ಜಂಬೂಸವಾರಿಯನ್ನು ಕಣ್ತುಂಬಿಕೊಂಡರು. ಮೆರವಣಿಗೆ ಬಂದೋಬಸ್ತ್‌ಗೆ ನಾಲ್ಕು ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು.

ರಾಜ್ಯಪಾಲರು ಗೈರು: ಸಂಜೆ, ಬನ್ನಿಮಂಟಪದಲ್ಲಿ ಪಂಜಿನ ಕವಾಯಿತು ನಡೆಯಿತು. ಇತ್ತೀಚೆಗೆ ಕೋವಿಡ್‌ನಿಂದ ಗುಣಮುಖರಾಗಿರುವ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋತ್‌ ಗೈರಾಗಿದ್ದರು. ಸಂಪ್ರದಾಯದ ಪ್ರಕಾರ ಅವರು ಮುಖ್ಯ ಅತಿಥಿಯಾಗಿ ಪೆರೇಡ್‌ ವೀಕ್ಷಿಸಿ, ಗೌರವ ವಂದನೆ ಸ್ವೀಕರಿಸಬೇಕಿತ್ತು. ಅವರ ಅನುಪಸ್ಥಿತಿಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಗೌರವ ವಂದನೆ ಸ್ವೀಕರಿಸಿದರು. ಇದರೊಂದಿಗೆ ಕಳೆದ ಹತ್ತು ದಿನಗಳಿಂದ ನಡೆಯುತ್ತಿದ್ದ ದಸರಾ ಮಹೋತ್ಸವ ಸಂಪನ್ನಗೊಂಡಿತು.

ರಾಜ್ಯ ಸುಭಿಕ್ಷವಾಗಿರಲೆಂದು ಪ್ರಾರ್ಥನೆ ಮಾಡಿದ್ದೇನೆ: ಈ ಮಧ್ಯೆ, ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಸಿಎಂ, ಕಳೆದ ಎರಡು ವರ್ಷಗಳಿಂದ ಕೊರೋನಾ ಕಾರಣದಿಂದ ದಸರಾ ಹಬ್ಬವನ್ನು ಸರಳವಾಗಿ ಆಚರಿಸಲಾಗಿತ್ತು. ಆದರೆ, ಈ ಬಾರಿ ಸಂಕಷ್ಟನಿವಾರಣೆ ಆಗಿರುವುದರಿಂದ ಅದ್ಧೂರಿಯಾಗಿ ದಸರಾ ಆಚರಿಸಲಾಗುತ್ತಿದೆ. ಈ ವರ್ಷ ರಾಜ್ಯದಲ್ಲಿ ಸಾಕಷ್ಟುಮಳೆಯಾಗಿದೆ. ಮುಂದಿನ ದಿನಗಳಲ್ಲಿಯೂ ಮಳೆ, ಬೆಳೆಯಾಗಿ, ರಾಜ್ಯ ಸುಭಿಕ್ಷವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದರು.

ಮಾವುತರಿಗೆ ಶೋಭಾರಿಂದ ಉಪಾಹಾರದ ವ್ಯವಸ್ಥೆ: ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಅವರು ಮಂಗಳವಾರ ಆನೆಗಳ ಮಾವುತರು, ಕಾವಾಡಿಗಳು ಮತ್ತು ಅವರ ಕುಟುಂಬ ವರ್ಗದವರಿಗೆ ಅರಮನೆ ಆವರಣದಲ್ಲಿ ಬೆಳಗಿನ ಉಪಾಹಾರದ ವ್ಯವಸ್ಥೆ ಮಾಡಿದ್ದರು. ಅರ್ಜುನ ಸೇರಿದಂತೆ ಗಜಪಡೆಗಳಿಗೆ ಬೆಲ್ಲ, ಕಬ್ಬು ತಿನ್ನಿಸಿದರು. ನಂತರ ಮಾವುತರಿಗೆ ಹೋಳಿಗೆ, ಇಡ್ಲಿ, ವಡೆ, ಮಸಾಲೆ ದೋಸೆ, ಸಿಹಿ ಪೊಂಗಲ್‌ ಮತ್ತು ಹಣ್ಣುಗಳನ್ನು ನೀಡಿದರು. ಶೋಭಾ ಕರಂದ್ಲಾಜೆ ಅವರು ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆಯಿಂದಲೂ ಅರಮನೆ ಮಾವುತರು, ಕಾವಾಡಿಗಳು ಮತ್ತು ಕುಟುಂಬ ವರ್ಗದವರಿಗೆ ದಸರಾ ನಂತರ ಊಟೋಪಚಾರದ ವ್ಯವಸ್ಥೆ ಮಾಡುವ ಸಂಪ್ರದಾಯವನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಜಂಬೂಸವಾರಿಗೆ ಹೊರರಾಜ್ಯಗಳ ರಂಗು: ಜಂಬೂಸವಾರಿಯಲ್ಲಿ ಉತ್ತರ ಮತ್ತು ದಕ್ಷಿಣ ಭಾರತದ ಹಲವು ರಾಜ್ಯಗಳ ಕಲಾತಂಡಗಳು ಭಾಗವಹಿಸಿ ಮೆರಗು ನೀಡಿದವು. ರಾಜಸ್ಥಾನದ ಚಕ್ರಿ ಮತ್ತು ಗೂಮರ್‌ ನೃತ್ಯ, ಪಶ್ಚಿಮ ಬಂಗಳಾದ ಪುರ್ಲಿಯಾ ಚಾವ ನೃತ್ಯ ಹಾಗೂ ಪಂಜಾಬ್‌ ರಾಜ್ಯದ ಕಲಾತಂಡವು ನೃತ್ಯ ಪ್ರದರ್ಶನ, ಜಮ್ಮುಕಾಶ್ಮೀರದ ಡೋಂಗ್ರಿ ನೃತ್ಯ, ತಮಿಳುನಾಡಿದ ತಪ್ಪೆಟಂ ನೃತ್ಯ ಹೆಚ್ಚು ಆಕರ್ಷಕವಾಗಿತ್ತು.

Mysuru Dasara 2022: ಅಂಬಾರಿಗೆ 2ನೇ ಬಾರಿ ಸಿಎಂ ಬೊಮ್ಮಾಯಿ ಪುಷ್ಪಾರ್ಚನೆ!

ಕಲಾವಿದರ ಜೊತೆ ಹೆಜ್ಜೆ ಹಾಕಿದ ಉಸ್ತುವಾರಿ ಸಚಿವ: ಜಂಬೂಸವಾರಿಯಲ್ಲಿ ಸಾಗಿದ ಕಲಾತಂಡಗಳ ಕಲಾವಿದರನ್ನು ಹುರಿದುಂಬಿಸಲು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಅವರು ಕಲಾವಿದರೊಂದಿಗೆ ಹೆಜ್ಜೆ ಹಾಕಿದರು. ಮೊದಲಿಗೆ ತಮಟೆ ಕಲಾವಿದರೊಂದಿಗೆ ಕನ್ನಡದ ಬಾವುಟ ಹಿಡಿದು ಹೆಜ್ಜೆ ಹಾಕಿ ಸ್ವಲ್ಪ ದೂರ ಸಾಗಿದರು. ನಂತರ ಬಂದ ಸೋಮನ ಕುಣಿತಕ್ಕೆ ಅವರೂ ಸಹ ಕುಣಿದು ಕಲಾ ತಂಡಗಳ ಕಲಾವಿದರನ್ನು ಸಂತೋಷಪಡಿಸಿದರು.

ಪುನೀತ್‌ ಪ್ರತಿಮೆಗೆ ಕರತಾಡನ: ಜಂಬೂಸವಾರಿಯಲ್ಲಿ ಸಾಗಿ ಬಂದ ಚಾಮರಾಜನಗರ ಜಿಲ್ಲೆಯ ಸ್ತಬ್ಧಚಿತ್ರದಲ್ಲಿ ವನ್ಯಧಾಮ, ಮಹದೇಶ್ವರ ವಿಗ್ರಹದ ಜೊತೆಗೆ ಪುನೀತ್‌ ರಾಜ್‌ಕುಮಾರ್‌ ಅವರ ಪ್ರತಿಮೆ ಇದ್ದುದು ವಿಶೇಷ. ಈ ಸ್ತಬ್ಧ ಚಿತ್ರ ಅರಮನೆ ಎದುರು ಬಂದಾಗ ಸುದೀರ್ಘ ಕರತಾಡನ ಕೇಳಿ ಬಂತು.

click me!