ಚಿಕ್ಕಮಗಳೂರು: ಕಾಶ್ಮೀರದ ಗಡಿ ಭಾಗದ ಶಾರದಾ ದೇಗುಲಕ್ಕೆ ಮೂರ್ತಿ ಹಸ್ತಾಂತರ

By Girish Goudar  |  First Published Oct 5, 2022, 9:30 PM IST

ವಿಜಯದಶಮಿಯದ ದಿನವಾದ ಇಂದು  ಮೂರ್ತಿ ಹಸ್ತಾಂತರ, ಪಂಚಲೋಹದ ಮೂರ್ತಿಯನ್ನು ಹಸ್ತಾಂತರ ಮಾಡಿದ ಜಗದ್ಗುರು ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಅ.05): ಕಾಶ್ಮೀರದ ಗಡಿ ಭಾಗದ ತ್ರಿತ್ವಾಲ್‌ನಲ್ಲಿ ಶಾರದಾದೇವಿ ದೇಗುಲ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಶೃಂಗೇರಿಯ ಶಾರದೆ ಸನ್ನಿಧಿಯಿಂದ ವಿಜಯದಶಮಿಯ ದಿನ ಇಂದು(ಬುಧವಾರ)  ಪಂಚಲೋಹದ ಮೂರ್ತಿ ಹಸ್ತಾಂತರ ಕಾರ್ಯ ನಡೆದಿದೆ. ಕಾಶ್ಮೀರದ ಸೇವ್ ಶಾರದಾ ಸಮಿತಿಯವರು ಶೃಂಗೇರಿಗೆ ಬಂದು ಪಂಚಲೋಹ ವಿಗ್ರಹ ಪಡೆದಿದ್ದಾರೆ. ಪಂಚಲೋಹದ ಮೂರ್ತಿಗೆ ಶೃಂಗೇರಿ ಜಗದ್ಗುರು ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ ಪೂಜೆಯನ್ನು ನೆರವೇರಿಸಿ ಹಸ್ತಾಂತರ ಮಾಡಿದ್ದಾರೆ.

Tap to resize

Latest Videos

ವಿಗ್ರಹಕ್ಕೆ ವಿಶೇಷ ಪೂಜೆ ನೆರವೇರಿಸಿ ಹಸ್ತಾಂತರ

ವಿಜಯದಶಮಿಯ ಶುಭ ದಿನವಾದ ಇಂದು ಪಂಚಲೋಹದಿಂದ ನಿರ್ಮಾಣ ಮಾಡಲಾಗಿರುವ ದೇವಿಯ ವಿಗ್ರಹವನ್ನು ಶೃಂಗೇರಿಯಲ್ಲಿ ವಿಶೇಷವಾಗಿ ಪೂಜೆ ಸಲ್ಲಿಸಿದ ಬಳಿಕ ಕಾಶ್ಮೀರದ ಸೇವ್ ಶಾರದಾ ಸಮಿತಿಯವರಿಗೆ ಹಸ್ತಾಂತರ ಮಾಡಲಾಯಿತು. ಸಮಿತಿಯ ಸದಸ್ಯರು ನಿನ್ನೆಯೇ ಶ್ರೀಮಠದಲ್ಲಿ ವಾಸ್ತವ್ಯ ಹೂಡಿ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಇಂದು ವಿಜಯದಶಮಿಯ ಶುಭ ದಿನವಾದ ಹಿನ್ನೆಲೆಯಲ್ಲಿ ಜಗದ್ಗುರುಗಳು ಪಂಚಲೋಹದ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಹಸ್ತಾಂತರ ಮಾಡಿದ್ರು.ಅಂತೆಯೇ ಉಭಯ ಜಗದ್ಗುರುಗಳ ಸಾನಿಧ್ಯದಲ್ಲಿ ಕೆತ್ತನೆ ಮಾಡಿರುವ ದೇವಿಯ ವಿಗ್ರಹದ ಹಸ್ತಾಂತರ ಕಾರ್ಯವು ಅತ್ಯಂತ ಅದ್ಧೂರಿಯಾಗಿ ನಡೆಯಿತು. ಈ ಕುರಿತು ಮಾಹಿತಿ ನೀಡಿದ ಸಮಿತಿ ಮುಖ್ಯಸ್ಥ ರವೀಂದ್ರ ಪಂಡಿತ್  ಸಮಿತಿಯ 12 ಮಂದಿ ಶೃಂಗೇರಿಗೆ  ಆಗಮಿಸಿ ಪಂಚಲೋಹ ಮೂರ್ತಿಯನ್ನು ಪಡೆದಿದ್ದೇವೆ.ದೇಗುಲ ನಿರ್ಮಾಣಕ್ಕೆ ₹ 1.5 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಈವರೆಗೆ ₹1 ಕೋಟಿ ಖರ್ಚಾಗಿದೆ. ಗರ್ಭಗುಡಿ 12X12 ವಿಸ್ತೀರ್ಣ ಇದೆ. ದೇಗುಲಕ್ಕೆ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಬಾಗಿಲುಗಳು ಇವೆ. ಚಾವಣಿ, ನೆಲಹಾಸು, ಅಲಂಕಾರ ಕಾಮಗಾರಿಗಳು ಬಾಕಿ ಇದೆ ಎಂಬುದಾಗಿ ಮಾಹಿತಿ ನೀಡಿದರು. 

ಚಿತ್ರದುರ್ಗದಲ್ಲಿ ಶರಣ‌ ಸಂಸ್ಕೃತಿ ಉತ್ಸವ: ರಾಜವಂಶಸ್ಥರಿಂದ ಪ್ರಭಾರ ಪೀಠಾಧ್ಯಕ್ಷರಿಗೆ ಭಕ್ತಿ ಸಮರ್ಪಣೆ

ದೇಗುಲಕ್ಕೆ ಸಾಗುವ ಹಾದಿ ಹದಗೆಟ್ಟಿದ್ದು ರಸ್ತೆ ನಿರ್ಮಾಣಕ್ಕೆ ಜಮ್ಮು-ಕಾಶ್ಮೀರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿದ್ದರೂ  ಈವರೆಗೆ ಕಾಮಗಾರಿಗೆ ಕ್ರಮ ವಹಿಸಿಲ್ಲ ಎಂದರು. 2021 ಡಿಸೆಂಬರ್ 2ರಂದು ದೇಗುಲ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿತ್ತು. 2023ರ ನವರಾತ್ರಿಗೆ ಉದ್ಘಾಟನೆ ನೆರವೇರಿಸಲು ಉದ್ದೇಶಿಸಿದ್ದೇವೆ ಎಂದರು.
 

click me!